೨೦೨೦ರ ಆಸುಪಾಸಿನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡು ಪ್ರಪಂಚದಾದ್ಯಂತ ಆಗಿದ್ದ ಅಲ್ಲೋಲ ಕಲ್ಲೋಲ ಇನ್ನೂ ಸರಿಯಾಗಿಲ್ಲ. ಅದರ ನಡುವೆಯೇ ಇನ್ನೊಂದು ಭೀಕರ, ಪ್ರಪಂಚಕ್ಕೇ ಮಾರಕವಾಗಬಲ್ಲ ಹಂಟಾ ವೈರಸ್ ಕಾಡಲಿದೆ ಎನ್ನುವ ಸುದ್ದಿ ಎಲ್ಲರನ್ನೂ ಭಯಭೀತರನ್ನಾಗಿಸಿದೆ. ಇನ್ನೂ ಮದ್ದು, ಲಸಿಕೆಯನ್ನು ಕಂಡು ಹಿಡಿಯಲಾಗಿರದ ಈ ಹಂಟಾ ವೈರಸ್ (Hantavirus) ಮಾನವನಿಂದ ಮಾನವನಿಗೆ ನೇರವಾಗಿ ಹರಡುವುದು ಅಪರೂಪ ಎನ್ನುವುದೇ ಒಂದು ಚೂರು ನೆಮ್ಮದಿಯ ಸಂಗತಿ. ಇದು ಹರಡುವುದು ಇಲಿ ಅಥವಾ ಹೆಗ್ಗಣಗಳ ಲಾಲಾರಸ (ಜೊಲ್ಲು), ಮೂತ್ರ ಮತ್ತು ಮಲದಿಂದ ಮಾತ್ರ. ಆದರೆ ಈ ಹೆಗ್ಗಣಗಳ ಲಾಲಾರಸ, ಮಲಮೂತ್ರಗಳು ಒಣಗಿದಾಗ ಅದರಲ್ಲಿ ಬೆಳೆದ ವೈರಸ್ ಗಳು ಧೂಳಿನ ರೂಪದಲ್ಲಿ ಗಾಳಿಯ ಮೂಲಕ ಹರಡಬಹುದು ಎನ್ನುವುದೇ ಆತಂಕಕಾರಿ ಸಂಗತಿ.
ಹಕ್ಕಿ ಜ್ವರ, ಹಂದಿ ಜ್ವರ, ಇಲಿ ಜ್ವರ, ಬಾವಲಿ ಜ್ವರ ಹೀಗೆ ಹತ್ತು ಹಲವಾರು ಕಾಯಿಲೆಗಳು ಈಗೀಗ ಮಾನವನನ್ನು ಆಕ್ರಮಿಸುತ್ತಿದೆ. ತಂತ್ರಜ್ಞಾನ, ವಿಜ್ಞಾನ ಮೊದಲಾದ ಸಂಗತಿಗಳಲ್ಲಿ ಮಾನವ ಎಷ್ಟು ಮುಂದುವರಿದಿದ್ದಾನೋ ಅಷ್ಟೇ ಈ ಕಾಯಿಲೆಗಳು ಮಾನವನ್ನು ಜ್ಞಾನಕ್ಕೆ ಸವಾಲೊಡ್ಡಿ ಹಿಂಡಿ ಹಿಪ್ಪೆ ಮಾಡುತ್ತಿವೆ. ಹೊಸದಾಗಿ ಮದ್ದು ಅಥವಾ ಲಸಿಕೆ ಕಂಡು ಹಿಡಿಯುವಂತೆ ಮಾಡುತ್ತಿವೆ. ಈ ಸಾಲಿಗೆ ಈಗ ಸೇರಿಕೊಳ್ಳುತ್ತಿದೆ ಹಂಟಾ ವೈರಸ್. ಸದ್ಯಕ್ಕೆ ಇನ್ನೂ ಪ್ರಾಥಮಿಕ ಹಂತದ ಸುದ್ದಿಯಲ್ಲೇ ಇರುವ ಇದು ಕಂಡು ಬಂದಿರುವುದು ಅರ್ಜೆಂಟೀನಾದಿಂದ ಅಂಟಾರ್ಟಿಕಾಗೆ ಹೊರಟ ಒಂದು ಐಷಾರಾಮಿ ಹಡಗಿನ ಪ್ರಯಾಣಿಗರಲ್ಲಿ. ಈ ಹಡಗಿನಲ್ಲಿದ್ದ ೮ ಮಂದಿಗೆ ಹಂಟಾ ವೈರಸ್ ಬಾಧಿಸಿದೆ ಮತ್ತು ಅದರಲ್ಲಿ ಮೂರು ಮಂದಿ ಈಗಾಗಲೇ ಮೃತ ಪಟ್ಟಿದ್ದಾರೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ. ಈ ಹಡಗಿನಲ್ಲಿ ಭಾರತೀಯರೂ ಇದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಅವರಿಗೆ ಹಂಟಾ ವೈರಸ್ ಭಾಧಿಸಿದೇ ಎನ್ನುವ ಬಗ್ಗೆ ಇನ್ನೂ ಮಾಹಿತಿ ಇಲ್ಲ.
ಹಂಟಾ ವೈರಸ್ ಮೊತ್ತ ಮೊದಲು ಅಧಿಕೃತವಾಗಿ ಪತ್ತೆಯಾದದ್ದು ೧೯೭೬ರಲ್ಲಿ. ಆದರೆ ಅದಕ್ಕೂ ಮೊದಲು ೧೯೫೦ರ ದಶಕದಲ್ಲಿ ಕೊರಿಯಾ ಯುದ್ಧದ ಸಮಯದಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ವಿಚಿತ್ರವಾದ ಜ್ವರ ಹಾಗೂ ರಕ್ರಸ್ರಾವದಿಂದ ಬಳಲಿದ್ದರು. ಆದ ಇದನ್ನು ‘ಕೊರಿಯನ್ ಹೆಮರಾಜಿಕ್ ಫೀವರ್’ ಎಂದು ಕರೆಯಲಾಗಿತ್ತು. ಇದುವೇ ಹಂಟಾ ವೈರಸ್ ಎನ್ನುವುದು ಧೃಢ ಪಡದಿದ್ದರೂ ನಂತರ ೧೯೭೬ರಲ್ಲಿ ದಕ್ಷಿಣ ಕೊರಿಯಾದ ವಿಜ್ಞಾನಿ ಡಾ. ಹೋ ವಾಂಗ್ ಲೀ ಈ ವೈರಸ್ ಅನ್ನು ಮೊತ್ತಮೊದಲ ಬಾರಿಗೆ ಪತ್ತೆ ಹಚ್ಚಿದರು. ದಕ್ಷಿಣ ಕೊರಿಯಾದಲ್ಲಿ ಹರಿಯುವ ಹಂಟಾನ್ ಎಂಬ ನದಿಯ ತಟದ ಬಳಿ ಪತ್ತೆ ಹಚ್ಚಲಾದ ಇಲಿಗಳಲ್ಲಿ ಮೊತ್ತ ಮೊದಲ ಬಾರಿಗೆ ಈ ವೈರಸ್ ಕಂಡು ಬಂದ ಕಾರಣ ಇದಕ್ಕೆ ಹಂಟಾ ವೈರಸ್ ಎಂದು ಕರೆಯಲಾಯಿತು.

ಹಂಟಾ ವೈರಸ್ ಗಳು ಕೊರೊನಾ ವೈರಸ್ ಗಳಂತೆ ಗಾಳಿಯಲ್ಲಿ ಹರಡುತ್ತವೆ. ಈ ಕಾರಣದಿಂದ ಇದರ ಹರಡುವಿಕೆ ವೇಗ ಪಡೆಯುವ ಸಾಧ್ಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವೈರಸ್ ಹೊಂದಿದ ಇಲಿಗಳ ಮಲ, ಮೂತ್ರ, ಜೊಲ್ಲು ಒಳಗಿದಾಗ ಅವು ಧೂಳಿನ ರೂಪದಲ್ಲಿ ಗಾಳಿಯನ್ನು ಸೇರಿಕೊಳ್ಳುತ್ತವೆ. ಈ ಗಾಳಿಯನ್ನು ಉಸಿರಾಡುವ ಮಾನವನ ದೇಹಕ್ಕೆ ವೈರಾಣುಗಳು ಪ್ರವೇಶ ಪಡೆಯುತ್ತವೆ. ಕೇವಲ ಗಾಳಿಯ ಮೂಲಕ ಮಾತ್ರವಲ್ಲ, ಒಂದು ವೇಳೆ ಮಾನವ ವೈರಸ್ ಹೊಂದಿರುವ ಇಲಿಯ ಜೊಲ್ಲು, ಮಲಮೂತ್ರವನ್ನು ಮುಟ್ಟಿ ನಂತರ ಅದೇ ಕೈಗಳಿಂದ ತನ್ನ ಮೂಗು, ಕಣ್ಣು ಅಥವಾ ಬಾಯಿಯನ್ನು ಸಂಪರ್ಕಿಸಿದರೆ ಸೋಂಕು ಹರಡುತ್ತದೆ. ಇದೇ ರೀತಿ ಇಲಿ ಅಥವಾ ಹೆಗ್ಗಣಗಳು ಮನುಷ್ಯರನ್ನು ಕಚ್ಚಿದರೆ ಹಂಟಾ ವೈರಸ್ ಹರಡುವ ಸಾಧ್ಯತೆ ಇದೆಯಂತೆ.
ಹಂಟಾ ವೈರಸ್ ಸೋಂಕು ತಗುಲಿದರೆ ಮೊದಲಿಗೆ ಆ ವ್ಯಕ್ತಿ ವಿಪರೀತ ಸುಸ್ತು, ಜ್ವರ ಮತ್ತು ಸ್ನಾಯು ಸೆಳೆತಗಳಿಂದ ಬಳಲುತ್ತಾನೆ. ನಂತರ ಸೊಂಟ, ಬೆನ್ನು, ತೊಡೆ ಮತ್ತು ಭುಜಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಬಹುದು. ತಲೆ ನೋವು, ತಲೆ ಸುತ್ತು, ವಾಂತಿ, ಶೀತ, ಹೊಟ್ಟೆ ನೋವು ಮೊದಲಾದ ಸಮಸ್ಯೆಗಳೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಾಲ್ಕರಿಂದ ಹತ್ತು ದಿನಗಳ ನಂತರ ವಿಪರೀತವಾದ ಕೆಮ್ಮು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಪ್ರಮುಖವಾಗಿ ಹಂಟಾ ವೈರಸ್ ಮಾನವರಲ್ಲಿ ಎರಡು ರೀತಿಯ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲದು. ಒಂದು ಶ್ವಾಸಕೋಶ ಸಮಸ್ಯೆ ಮತ್ತೊಂದು ಮೂತ್ರ ಪಿಂಡ (ಕಿಡ್ನಿ) ಸಮಸ್ಯೆ. ಈ ಹಂಟಾ ವೈರಸ್ ಸೋಂಕಿನಿಂದ ಒಬ್ಬ ವ್ಯಕ್ತಿ ಗಂಭೀರವಾದ ಶ್ವಾಸಕೋಶದ ಸಮಸ್ಯೆಗೆ ಅಥವಾ ಮೂತ್ರಪಿಂಡದ ವೈಫಲ್ಯದ ಸಮಸ್ಯೆಗೆ ಗುರಿಯಾಗಿ ಸಾವನ್ನಪ್ಪುವ ಸಾಧ್ಯತೆ ಇದೆ.
ಹಂಟಾ ವೈರಸ್ ಸೋಂಕು ಬಾರದಂತೆ ತಡೆಯಲು ನಿರ್ದಿಷ್ಟವಾದ ಯಾವುದೇ ಲಸಿಕೆ ಸದ್ಯಕ್ಕೆ ಲಭ್ಯವಿಲ್ಲ. ಸೋಂಕು ತಗುಲಿದ ಬಳಿಕವೂ ಅದರ ನಿವಾರಣೆಗೆ ಚುಚ್ಚು ಮದ್ದು ಹಾಗೂ ಮಾತ್ರೆಗಳು ಲಭ್ಯವಿಲ್ಲ. ‘ರಿಬಾವಿರಿನ್’ ಎನ್ನುವ ಚುಚ್ಚುಮದ್ದು ತಕ್ಕ ಮಟ್ಟಿಗೆ ಪರಿಣಾಮಕಾರಿ ಎಂದು ಸಾಬೀತಾಗಿದ್ದರೂ ಶ್ವಾಸಕೋಶ ಮತ್ತು ಹೃದಯದ ಸೋಂಕಿಗೆ ಇದು ಪರಿಣಾಮಕಾರಿಯಾಗಿಲ್ಲ. ಪ್ರಾರಂಭದಲ್ಲೇ ಸೋಂಕಿನ ಲಕ್ಷಣಗಳನ್ನು ಗುರುತಿಸಿ, ಪರೀಕ್ಷೆಗಳನ್ನು ನಡೆಸಿ ತಕ್ಷಣ ಚಿಕಿತ್ಸೆ ನೀಡಿದರೆ ಆ ವ್ಯಕ್ತಿ ಗುಣಮುಖರಾಗುವ ಸಾಧ್ಯತೆ ಇದೆ.
೨೦೦೮ರಲ್ಲಿ ಭಾರತದ ತಮಿಳುನಾಡಿನ ಒಂದು ಬುಡಕಟ್ಟು ಜನಾಂಗದಲ್ಲಿ ಈ ಹಂಟಾ ವೈರಸ್ ಪತ್ತೆಯಾಗಿತ್ತು ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ. ಆ ಬುಡಕಟ್ಟು ಜನಾಂಗ ಹಾವು ಮತ್ತು ಇಲಿಗಳನ್ನು ಹಿಡಿಯುತ್ತಿದ್ದುದರಿಂದ ಅವರಿಗೆ ಹಂಟಾ ವೈರಸ್ ತಗುಲಿರಬಹುದೆಂದು ಅಂದಾಜಿಸಲಾಗಿತ್ತು. ಮುಂಬಯಿ ಮತ್ತು ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಹಂಟಾ ವೈರಸ್ ಪತ್ತೆ ಆಗಿತ್ತು. ಆಗ ಈ ಸೋಂಕಿಗೆ ಗುರಿಯಾದವರು ಬಹುತೇಕ ಗೋಡೌನ್ ಗಳಲ್ಲಿ ಕೆಲಸ ಮಾಡುವವರಾಗಿದ್ದರು. ಈ ಹಂಟಾ ವೈರಸ್ ಗೆ ನಿರ್ದಿಷ್ಟವಾದ ಮದ್ದುಗಳು ಇಲ್ಲದೇ ಇರುವುದರಿಂದ ಮುನ್ನೆಚ್ಚರಿಕೆ ತೆಗೆದುಕೊಂಡು ಜೀವನ ಸಾಗಿಸುವುದು ಬಹುಮುಖ್ಯ. ಈ ವೈರಸ್ ಸೋಂಕಿನಿಂದಾಗುವ ಸಾವಿನ ಪ್ರಮಾಣ ಶೇ ೫೦ ರಷ್ಟಿರುವುದರಿಂದ ಜಾಗೃತೆಯಾಗಿರುವುದು ಬಹು ಮುಖ್ಯ. ಇಲಿಗಳ ವಾಸ ತಾಣಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಬೇಕು. ಅವುಗಳ ತ್ಯಾಜ್ಯಗಳನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಚಗೊಳಿಸಬೇಕು. ಇನ್ನೂ ಈ ಹಂಟಾ ವೈರಸ್ ಭಾರತಕ್ಕೆ ಪ್ರವೇಶ ಮಾಡದೇ ಇದ್ದರೂ ನಾವು ಈಗಲೇ ಜಾಗರೂಕರಾಗಿರುವುದು ಉತ್ತಮ.
(ಆಧಾರ)
ಚಿತ್ರ ಕೃಪೆ: ಸಯನ್ಸ್ ನ್ಯೂಸ್ ಮತ್ತು ಎನ್ ಡಿ ಟಿ ವಿ ಜಾಲತಾಣಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!