ಮಾನಸಿಕ ಆಹಾರ
ಬಾಯಿಚಪಲ ತೀರಿಸಲು ತಿನ್ನುವಂತೆ, ಮನಸ್ಸು ಕೂಡ ಹೊಸದನ್ನು ನೋಡಲು, ಕೇಳಲು, ಅನುಭವಿಸಲು ಹಂಬಲಿಸುವುದು. ದೈಹಿಕ ಆಹಾರದ ಗುಣ (ಸಾತ್ವಿಕ, ಇತ್ಯಾದಿ), ತಿಂದ ಕೂಡಲೆ ನಮ್ಮ ಅರಿವಿಗೆ (acidity, ಹೊಟ್ಟೆಭಾರ, ಬೇಧಿ) ಬರುವುದು. ಆದರೆ ಮಾನಸಿಕ ಆಹಾರದ ಗುಣ ಸ್ವೀಕರಿಸುವಾಗ ನಮ್ಮ ಅರಿವಿಗೆ ಬರುವುದು ಕಷ್ಟ. ಮಾನಸಿಕ ತ್ವರಿತ ಆಹಾರವನ್ನು ಮೊದಲು ನಿರ್ಲಕ್ಷಿಸಿದರೆ, ಸ್ವಲ್ಪ ಸಮಯದ ಬಳಿಕ ಆ ಅಭ್ಯಾಸ ಚಿತ್ತದಲ್ಲಿ ಸಣ್ಣ ಮನೆಮಾಡಿ, ಮುಂದೆ ಸಂಸ್ಕಾರ ಸ್ವಭಾವವಾಗಿ (ಕೋಪ, ಖಿನ್ನತೆ, ಚಿಂತೆ), ವ್ಯಕ್ತಿತ್ವವೇ ಆಗುವುದು. ಹೊಟ್ಟೆಯ ಆಹಾರ ಬಾಯಿರುಚಿ ಬೆಳೆಸಿದರೆ, ಮನಸ್ಸಿನ ಆಹಾರ ನಮ್ಮ ಅಭಿರುಚಿಯನ್ನು ಬೆಳೆಸುವುದು. ಹಾಗಾಗಿ ಮನಸ್ಸಿನ ಆಹಾರದ ಬಗ್ಗೆ ನಾವು ಮತ್ತಷ್ಟು ಜಾಗೃತರಾಗಬೇಕು.
• ತಕ್ಷಣ ಸಿಗುವ, ಒಂದೇ ರೀತಿಯ ಮಾಹಿತಿ, ಮನರಂಜನೆ, ಹೊಟ್ಟೆ ತುಂಬಿದರೂ ಪೋಷಕಾಂಶ ಸಿಗದ ತಾಮಸಿಕ ಆಹಾರದಂತೆ. ವಿವೇಚನೆ ಬೆಳೆಸದ ಮಾಹಿತಿಯಿಂದ, ಸಂತೃಪ್ತಿ ಕೊಡದ ಮನರಂಜನೆಯಿಂದ ಏನು ಪ್ರಯೋಜನ? ಮನಸ್ಸಿಗೆ ತಕ್ಷಣ ರುಚಿ ತೋರಿಸಿ, ಆಳವಾದ ಗಮನ, ಚಿಂತನೆ ಮತ್ತು ಆತ್ಮಪರಿಶೀಲನೆಗೆ ಅವಕಾಶ ಕೊಡದ ಅನುಭವವನ್ನು ಮಾನಸಿಕ ತ್ವರಿತ ಆಹಾರ ಎನ್ನಬಹುದು.
• ಅನೇಕ ಮೂಲಗಳಿಂದ (influencer post, public opinion, forwards) ಬರುವ ಅದೇ ರೀತಿಯ ಮಾಹಿತಿಯಿಂದ, ಬೇಕಾದ ಕಡೆ ಮಾನವನ ತಾರ್ಕಿಕ ಶಕ್ತಿ ಕಡಿಮೆಯಾಗುತ್ತಿದೆ. ಇತರರು ಹೇಳಿದ್ದನ್ನು ಪ್ರಶ್ನಿಸದೆ ಒಪ್ಪುವ ಮನಸ್ಥಿತಿ ಬೆಳೆದು, ಕುರಿಮಂದೆಯಂತೆ ಮಂಕಾಗಿ (majority consensus) ಬದುಕುವುದನ್ನು ನೀವೂ ನೋಡಿರಬಹುದು. ಇದರ ಪರಿಣಾಮ ಮನಸ್ಸು ಮೊಂಡಾಗುವುದು.
• ನಿರಂತರ ಮನರಂಜನೆ, ಕ್ಷಣಿಕ ಸಮಾಧಾನಕ್ಕೆ (10min delivery) ಒಗ್ಗಿದ ಮನಸ್ಸು, ಒಂದು ವಿಷಯದ ಆಳಕ್ಕಿಳಿದು ಅರಗುವ ಮೊದಲೇ, ಹೊಸತನ ಬಯಸಿ, ಅದು ಕೂಡಲೆ ಸಿಗದಿದ್ದಾಗ, ಸಂಯಮ ತಪ್ಪಿ ಖಿನ್ನತೆಗೆ ಒಳಗಾಗುವವರನ್ನೂ ನೋಡಿರುವೆವು.
• ಕಠಿಣ ಸವಾಲಿಗೆ ಸಮಯ ಬಳಸಿ ಸರಿಯಾದ ಪರಿಹಾರ ಹುಡುಕುವ ಬದಲು ತಕ್ಷಣ ಸಿಗುವ ಪರಿಹಾರದಲ್ಲೇ ಮನಸ್ಸು ತೃಪ್ತಿಪಟ್ಟರೆ ಮನೋಸ್ಥೈರ್ಯ ಮತ್ತು ಏಕಾಗ್ರತೆ ನಶಿಸುವುದು. ಸುಲಭವಾಗಿ ಸಿಗುವ ಪರಿಹಾರ ನಮಗೆ ಸದಾ ನೆಮ್ಮದಿ ಕೊಡದು.
• ಮೊದಲು ಸತ್ಯದ ಲೇಪನ, ನಂತರ ಭಯ, ದ್ವೇಷ ಅಥವಾ ಆಸೆ ಹುಟ್ಟಿಸುವ ಜಾಹೀರಾತು, ಇಲ್ಲಾ ಸುದ್ದಿಯನ್ನು ನೋಡಿದಾಗ ಅವೇ ನಿಜವೆನ್ನುವ ನಂಬಿಕೆ ಹುಟ್ಟುವುದು. ಉದಾ: ಜೀವನ ಕ್ಷಣಿಕವೆಂದು, ಬೇಜವಾಬ್ದಾರಿಯ, ಕ್ಷಣಿಕ ತೃಪ್ತಿಯೇ ಸಂಸ್ಕಾರವಾದರೆ, ಅತಿರೇಕವಿಲ್ಲದ ವಸ್ತುನಿಷ್ಠತೆ, ಸತ್ಯದ ಸೂಕ್ಷ್ಮತೆಗಳು, ಮತ್ತು ವಿಭಿನ್ನ ದೃಷ್ಟಿಕೋನಗಳು ನಮ್ಮ ಗಮನಕ್ಕೇ ಬಾರದಿರಬಹುದು (blind spots).
• Social media ದಂಥ ಪಿಡುಗುಗಳಿಂದ, ಸದಾ ಇತರರ ಜೀವನ, ಯಶಸ್ಸು, ವೈಫಲ್ಯ, ಅಭಿಪ್ರಾಯಗಳ ಹೋಲಿಕೆಯಿಂದ ‘ನನ್ನ ಅಗತ್ಯವೇನು?’ ಎನ್ನುವ ಸತ್ಯ, ‘ಇತರರು ನನ್ನಲ್ಲಿ ಏನು ನಿರೀಕ್ಷಿಸುವರು?’ ಎನ್ನುವ ಯಕ್ಷ ಪ್ರಶ್ನೆಯಾಗಿ ಬದಲಾಗಬಹುದು.
• ಗಮನ ಸೆಳೆಯಲೆಂದೇ ಇರುವ scrolling ಆ್ಯಪ್ಗಳು ನಮ್ಮ ಆಯ್ಕೆಯಂತೆ ಕಾಣುವ, ಪೂರ್ವ-ಸಂಸ್ಕರಿತ ಮಾನಸಿಕ ಆಹಾರ. ಒಂದು ರೀತಿ ನೋಡಿದರೆ ಇದು ಹಸು ಹಟ್ಟಿಯಲ್ಲಿ ಒಣಹುಲ್ಲು ಮೇಯ್ದಂತೆ, ಎಷ್ಟು ಮೇಯ್ದರೂ ಬಯಲ ಹಸಿಹುಲ್ಲ ವೈವಿಧ್ಯಮಯ, ಪೌಷ್ಟಿಕ, ರುಚಿಗೆ ಸಮವಲ್ಲ. ಬೇಕಾದುದನ್ನು ನಾವೇ ಆರಿಸಿದೆವೆಂದು ಅನಿಸಿದರೂ, ನಮ್ಮ ಹಿಂದಿನ ಆಯ್ಕೆಗಳ ಆಧಾರದ ಮೇಲೆ ಮುಂದಿನ ವಿಷಯವನ್ನು ವ್ಯವಸ್ಥೆಯೇ ನಮ್ಮ ಮುಂದೆ ಇಡುವುದು. ವಿವೇಚನೆಗೆ ಅವಕಾಶವಿಲ್ಲದ ಆಯ್ಕೆ, ನಮ್ಮ ಸ್ವತಂತ್ರ ಆಯ್ಕೆಯಾಗಲು ಸಾಧ್ಯವೇ?!
• ಜೀರ್ಣಾಂಗದ ಲವಲವಿಕೆಗೆ ಉಪವಾಸ ಮಾಡಿದಂತೆ, ಮನಸ್ಸಿನ ಲವಲವಿಕೆಗೂ ಮೌನ, ಏಕಾಂತವೆಂಬ ಉಪವಾಸದ ಅಗತ್ಯವಿದೆ.
ಹೊಟ್ಟೆಯ ಹಸಿವು ನೀಗಿದಾಗ ನಾವು ಆಹಾರ ಸೇವನೆ ನಿಲ್ಲಿಸುವೆವು. ಹಾಗಾದರೆ ಆಲೋಚನೆ, ಭಾವನೆಗಳೆಂಬ ಮನಸ್ಸಿನ ‘ಆಹಾರದ ಹಸಿವು’ ನೀಗುವುದು ಯಾವಾಗ? ಹೊಟ್ಟೆ ಸಾಕೆಂದರೂ ಮನಸ್ಸೇಕೆ ಇನ್ನೂ ಬೇಕೆನ್ನುವುದು? ಆ ಲೆಕ್ಕದಲ್ಲಿ social media scroll ಮಾಡಿದ ಒಂದು ಗಂಟೆ ನಾನು ಏನು ‘ತಿಂದೆ’ ಎಂದು ಯೋಚಿಸಿದರೆ ನಿಜಕ್ಕೂ ಭಯವಾಗುವುದು. ನೀವೂ ಹೀಗೆಯೇ ವ್ಯರ್ಥ ‘ಆಹಾರ’ ತಿಂದು ಪಶ್ಚಾತ್ತಾಪ ಪಟ್ಟಿದ್ದಿದೆಯೇ? ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಮರುದಿನ ದೇಹ ಬಿಡುವುದು. ಮನಸ್ಸಿಗೆ ಬೇಡವಾದ ಆಹಾರವನ್ನು ವಿಸರ್ಜಿಸುವುದು ಹೇಗೆ? ಆಹಾರದ ಆಯ್ಕೆ ಮಾಡುವ ಮೊದಲು ನಮ್ಮ ಅಗತ್ಯದ ಅರಿವು ಮುಖ್ಯ. ದೈಹಿಕ-ಮಾನಸಿಕ ಬೇಕು-ಬೇಡಗಳ ಸಂಕೇತವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅಗತ್ಯಾನುಸಾರ ಆಹಾರ ಪೂರೈಸಿದಾಗ, ಸಂತೃಪ್ತಿ ಸಿಗುವುದು. ಮನಸ್ಸಿನ ಒತ್ತಡ ಕಳೆಯಲು ಹೊಟ್ಟೆಗೆ junk food ನ ಒತ್ತಡ ಕೊಟ್ಟಾಗ ಹಿತವೆನಿಸದು. ನಾಣ್ನುಡಿಯಂತೆ ಊಟ ಬಲ್ಲವನಿಗೆ ರೋಗವಿಲ್ಲ- ಹಾಗಾಗಿ ದೈಹಿಕ-ಮಾನಸಿಕ ಆಹಾರದ ಮೇಲೆ ಹಿಡಿತ ಸಾಧಿಸಿದಾಗ ಆಹಾರದ ಬಗ್ಗೆ ನಮ್ಮ ದೃಷ್ಟಿ ಹಾಗೂ ವರ್ತನೆ ಪೂರ್ತಿ ಬದಲಾಗುವುದು.
ಕೆಲ ದಿನ, ಹೆಚ್ಚೆಂದರೆ ಕೆಲ ವಾರದಲ್ಲಿ ತೋರುವ ಕೃತಕ ಆಹಾರದ ಬಣ್ಣ, ಪರಿಮಳ, ರುಚಿಯ ಪರಿಣಾಮದ ಮೇಲೆ ಒಳಿತು-ಕೆಡುಕಿನ ನಿರ್ಧಾರ ಮಾಡುವ (food certification) ಮಾನವನ ನೆನಪು ಹಾಗೂ ಪ್ರಜ್ಞೆ ಎಷ್ಟೊಂದು ಕ್ಷಣಿಕ ಎನ್ನುವುದಕ್ಕೆ ಹಿಡಿದ ಕನ್ನಡಿ. ಕೊನೆಗೆ ಜೀವನಶೈಲಿಯ ತೇಪೆ ಹಚ್ಚಿ, ಬಹಳ ಸಮಯದಮೇಲೆ ಕಾಣುವ ಆಹಾರದ ದುಷ್ಪರಿಣಾಮಗಳೊಂದಿಗೆ ಬದುಕುವ ಮಾನವನ ಪರಿಸ್ಥಿತಿ ಶೋಚನೀಯ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!