ಈ ‘ಮಾಹಿ’ ನಮ್ಮ ಕ್ರಿಕೆಟ್ ಲೋಕದ ಮಾಹಿ (ಮಹೇಂದ್ರ ಸಿಂಗ್ ಧೋನಿ) ಅಲ್ಲ. ಆದರೆ ಸಿಕ್ಸರ್, ಬೌಂಡರಿಗಳನ್ನು ಇವರೂ ಹೊಡೆಯುತ್ತಾ ಇದ್ದರು. ಆದರೆ ಇವರು ಕ್ರಿಕೆಟ್ ಆಟದ ಮೈದಾನದಲ್ಲಿ ಸಿಕ್ಸರ್ ಸಿಡಿಸಿದ್ದಲ್ಲ, ನಾಟಕದ ರಂಗಭೂಮಿಯಲ್ಲಿ ಹೊಡೆದದ್ದು. ಇವರೇ ನಮ್ಮ ಹಾಸ್ಯ ಚಕ್ರವರ್ತಿ, ರಂಗಭೂಮಿಯ ಖ್ಯಾತ ನಟ ನಿರ್ದೇಶಕರಾಗಿದ್ದ ಮಾಸ್ಟರ್ ಹಿರಣ್ಣಯ್ಯ (ಮಾಹಿ). ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳು ಎಂದಿಗೂ ಇಂದಿಗೂ ಪ್ರಸ್ತುತ ಏಕೆಂದರೆ ಅವರು ನಟಿಸಿದ ‘ಭಷ್ಟಾಚಾರ, ಲಂಚಾವತಾರ’ ಗಳು ಇನ್ನೂ ನಿಂತಿಲ್ಲ. ಅವರು ಬದುಕಿನ ಪಯಣ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದರೂ (ನಿಧನ: ೨ ಮೇ ೨೦೧೯) ಅವರ ಕಲಾ ಸೇವೆ ಅಜರಾಮರ.

ಇಂದಿನ ರಾಜಕಾರಣಿಗಳ, ಅಧಿಕಾರಿ ವರ್ಗದವರ ಭ್ರಷ್ಟಾಚಾರ, ಲಂಚಾವತಾರಗಳು ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಹಿರಣ್ಣಯ್ಯನವರು ನಾಟಕದಲ್ಲಿ ನಟಿಸುತ್ತಿದ್ದಾಗ ಪ್ರಸಕ್ತ ವಿದ್ಯಾಮಾನಗಳ ತುಣುಕುಗಳನ್ನು ಬಳಸಿಕೊಳ್ಳುತ್ತಿದ್ದರು. ಇದರಿಂದಾಗಿ ನಾಟಕವನ್ನು ಎಷ್ಟು ಸಲ ನೋಡಿದರೂ ಹೊಸತರಂತೆ ಅನಿಸುತ್ತಿತ್ತು. ಹಿರಣ್ಣಯ್ಯನವರ ಬಗ್ಗೆ ಅವರ ಆತ್ಮೀಯರಾದ ಸಾಹಿತಿ ಶ್ರೀ ವೈ ವಿ ಗುಂಡೂರಾವ್ ಅವರು ಕಳೆದ ಕೆಲವು ತಿಂಗಳುಗಳ ಹಿಂದೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ಲಂಚಾವತಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾಸ್ಟರ್ ಹಿರಣ್ಣಯ್ಯನವರ ಮನಸ್ಸಿನ ಮಾತುಗಳನ್ನು ಹೇಳಲಾಗಿತ್ತು. ಅದರಲ್ಲಿ ಗುಂಡೂರಾವ್ ಅವರು ಬರೆಯುತ್ತಾರೆ…

ಹಿರಣ್ಣಯ್ಯ-Resized.jpg

“ನೀವೆಲ್ಲ ಮಾಹಿ ಅವರ "ಲಂಚಾವತಾರ” ನಾಟಕ ಅನೇಕ ಬಾರಿ ನೋಡೇ ಇರ್ತೀರಿ. ೧೧,೦೦೦ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡ ನಾಟಕ ಅದು. ಒಮ್ಮೆ ಮಾಹಿ ಅವರನ್ನ ಒಬ್ಬರು ಕೇಳಿದರಂತೆ, “ಹಿರಣ್ಣಯ್ಯನವರೇ, ನೀವು ಇಷ್ಟೊಂದು ಪ್ರಯೋಗಗಳನ್ನು ಮಾಡಿದ್ದೀರಲ್ಲ?! ನಮ್ಮ ದೇಶದಲ್ಲಿ ಈ ಲಂಚ ಅನ್ನೋದು ನಿಂತಿದೆಯೇ?” ಮಾಹಿ ಹೇಳ್ತಾರೆ “ಓಹೋ, ನಿಂತಿದೆ, ಭದ್ರವಾಗಿ ನಿಂತಿದೆ.” ಇದನ್ನೇ ನಾನು ಹೇಳಿದ್ದು ದುರಂತ ಅಂತ. ಇದಕ್ಕೆ ಅಂತ್ಯ ಇಲ್ಲ.

ಲಂಚ ಅನ್ನೋದಕ್ಕೆ definition ಏನು ಗೊತ್ತಾ? ಅವರು ಹೇಳುತ್ತಾರೆ ಕೊಡೋ ಕೈ, ತೊಗೊಳೋ ಕೈ ಗಂಡ-ಹೆಂಡತಿ ಇದ್ದ ಹಾಗೆ. ಅದಕ್ಕೆ ಹುಟ್ಟೋ ಮಗುನೇ ಲಂಚ. ಹೇಗಿದೆ definition ನಾವು ಕೇವಲ ಲಂಚ ಸ್ವೀಕರಿಸುವವರನ್ನು ಮಾತ್ರ ದೂರುತ್ತೇವೆ, ದೂಷಿಸುತ್ತೇವೆ. ಆದರೆ ನಮ್ಮ contribution ಕೂಡ ಇದೆ ಅನ್ನೋದು ಹೊಳೆಯೋದಿಲ್ಲ, ನಮ್ಮ ಮಿದುಳಿಗೆ, ಮನಸ್ಸಿಗೆ. ಇಬ್ಬರೂ ಸೇರಿ ಆ ಮಗುವನ್ನು ಪೋಷಿಸಿ, ಬೆಳೆಸಿದ್ದೇವೆ. ಅದು ಈಗ ಬ್ರಹ್ಮರಾಕ್ಷಸನಾಗಿ ನಮ್ಮನ್ನೇ ತಿನ್ನೋದಕ್ಕೆ ನಿಂತಿದೆ. ಈಗ ತಂದೆ-ತಾಯಿಯಾದ ನಾವೇ ನಮ್ಮ ಸಂತಾನವನ್ನು ನಾಶಪಡಿಸಬೇಕು. ಇಷ್ಟೆಲ್ಲ ಅರ್ಥವನ್ನು ಮಾಹಿ ಅವರು ಬಿಡಿಸಿ ಹೇಳೋದಿಲ್ಲ, ಸೂಕ್ಷ್ಮವಾಗಿ ತಿಳಿಯಾಗಿ, ತಿಳಿಸ್ತಾರೆ. ನಮಗೆಲ್ಲ ಗೊತ್ತು, ಮಾಹಿ ಅವರು ಅವರ ಪ್ರತಿ ಪ್ರದರ್ಶನಕ್ಕೂ ಒಬ್ಬೊಬ್ಬ ರಾಜಕಾರಣಿಯನ್ನು ಕರೆಸಿ, ಮುಂದೆ ಕೂಡಿಸಿ, ಅವರು ಮಾಡಿದ “ಘನ”ಕಾರ್ಯವನ್ನು ವಾಚಾಮಗೋಚರವಾಗಿ ಬಿಚ್ಚಿಟ್ಟಾಗ, ನಾವೇನು ಎಂಜಾಯ್ ಮಾಡಿದ್ದೇ ಮಾಡಿದ್ದು, ಚೆನ್ನಾಗಿ ಉಗೀತಿದ್ದಾರೆ ಅಂತ. ಆದರೆ ಅದರಲ್ಲಿ ಶೇಕಡ ೫೦ ನಮಗೂ ಸೇರಬೇಕು, ಅಲ್ಲವೇ?... ಇದೇ ಮಾಹಿ ಅವರ ಶೈಲಿ. ಒಬ್ಬ ತಂದೆ ಇದ್ದನಂತೆ. ಅವನು ಒಂದು ದಿನ ತನ್ನ ಮಗನ ಶಾಲೆಗೆ ಹೋಗಿ, ಉಪಾಧ್ಯಾಯರ ಹತ್ತಿರ ಹೇಳಿದನಂತೆ - ನೋಡಿ ಸರ್! ನನ್ನ ಮಗ ಏನಾದರೂ, ಯಾವುದಾದರೂ ತಪ್ಪು ಮಾಡಿದರೆ, ಅವನ ಪಕ್ಕದ ಹುಡುಗನನ್ನು ಹೊಡೆದುಬಿಡಿ, ಆಗ ಇವನು ತಿದ್ದಿಕೊಳ್ತಾನೆ. ಇದೇ ಅಲ್ಲವಾ ಮಾಹಿ ಮಾಡುತ್ತಿರುವ ಕೆಲಸ?! ನಾವು ಮಾಡುತ್ತಿರೋ ತಪ್ಪಿಗಾಗಿ, ರಾಜಕಾರಣಿಯನ್ನು ಮುಂದೆ ಕೂಡಿಸಿಕೊಂಡು ಉಗೀತಿರ್ತಾರೆ, ಆದರೆ ಸಮಾಜ ಎನ್ನುವ ಶಾಲೆಯಲ್ಲಿನ ಅಪರಾಧಿಯ ಪಕ್ಕದ ಹುಡುಗ ನಾವೇ. ಇದು ನಮಗೆ ಅರ್ಥವಾದಾಗ ಸಮಾಜ ಸುಧಾರಿಸುತ್ತದೆ ನಮ್ಮಿಂದ. ಇದು ಮಾಹಿ ಅವರ ಸಮಾಜ ತಿದ್ದುವಿಕೆಯ ಪರಿ.

ಒಂದು ಉದಾಹರಣೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕು. ಅವರ ಒಂದು ಅತ್ಯಂತ ಜನಪ್ರಿಯ ನಾಟಕ "ಭ್ರಷ್ಟಾಚಾರ" ನೀವೆಲ್ಲ ನೋಡಿರ್ತೀರಿ. ಅದರಲ್ಲಿ ಒಂದು ದೃಶ್ಯ. ಪೊಲೀಸ್ ಸ್ಟೇಷನ್ನಿಗೆ ಹೊಸ Sub-Inspector ಬಂದಿರ್ತಾರೆ. ಅವರನ್ನು ಬರಮಾಡಿಕೊಳ್ಳುವ, ಈಗಿರುವವರಿಗೆ ಬೀಳ್ಕೊಡುವ ಸಮಾರಂಭ. Station Location... ನಾಲ್ಕಾರು ಕೈದಿಗಳು ಕಂಬಿ ಎಣಿಸ್ತಿರ್ತಾರೆ... ಮುಂದೆ ಕೆಲವು ಕುರ್ಚಿಗಳು... ಊರಿನ ರಾಜಕಾರಣಿ ಮುಖ್ಯ ಅತಿಥಿ, ಹೊಸದಾಗಿ ಬಂದಿರುವ Inspector, ವರ್ಗವಾಗಿರುವ Inspector, ದಫೇದಾರ್ ಮುರಾರಿ (ಮಾಹಿ) ಮತ್ತು Police Constable-. ಬಂದು “ಮಹನೀಯರೇ ಮತ್ತು ಮಹಿಳೆಯರೇ" ಅಂತಾರೆ... ಆಗ ಪಿ.ಸಿ.೧೧೧, ತಾನು ನಿಂತಿರೋ ಜಾಗದಿಂದ “ಇಲ್ಲಿ ಮಹಿಳೆಯರು ಯಾರೂ ಇಲ್ಲ." ಅದಕ್ಕೆ ದಫೇದಾರ್ ಮುರಾರಿ, "ಮನೇಲಿದ್ದಾರೋ... ನಿನಗ್ಯಾಕೋ ಅದೆಲ್ಲ?... (pause)... ಹಾಗೆ ನೋಡಿದರೆ ಇಲ್ಲಿ, ಕಳ್ಳರು, ಪೊಲೀಸಿನವರು, ರಾಜಕಾರಣಿಗಳು ಇವರನ್ನ ಬಿಟ್ಟರೆ, ಮಹನೀಯರು ತಾನೇ ಎಲ್ಲಿದ್ದಾರೋ? ಅದೆಲ್ಲ ಪದ್ಧತಿ ಗಣೋ... ಮಗನೇ..." ಈ ಮಾತನ್ನು ಎಷ್ಟು ವಿಶ್ಲೇಷಣೆ ಮಾಡಿದರೂ ಅರ್ಥ ತೆರೆದುಕೊಳ್ಳುತ್ತದೆ. ಅವರ ಅನೇಕ ಮಾತುಗಳು ಇದೇ ರೀತಿಯದ್ದು.”

ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡ ಬಳಿಕವೂ ನಮ್ಮ ಜನ ಬದಲಾಗಿಲ್ಲ, ರಾಜಕಾರಣಿಗಳು, ಅಧಿಕಾರಿ ವರ್ಗದವರು ಬದಲಾಗಿಲ್ಲ. ಆದರೆ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಕೆಲಸವನ್ನು ಪ್ರತಿ ನಿತ್ಯ ಮಾಡುತ್ತಾ ಬಂದರು. ನಮ್ಮ ಬದುಕಿನ ಕೊನೆಯ ದಿನಗಳವರೆಗೆ ರಂಗಭೂಮಿಗಾಗಿ ಬದುಕಿ ಬಾಳಿದರು. ಹಿರಣ್ಣಯ್ಯನವರು ಈಗ ನಮ್ಮ ಜೊತೆ ಇಲ್ಲದೇ ಇರಬಹುದು ಆದರೆ ಅವರ ನಾಟಕ, ಸಿನೆಮಾ ಮುಖಾಂತರ ಅವರು ಅಜರಾಮರ.

ಕೃತಜ್ಞತೆಗಳು: ವೈ ಕೆ ಗುಂಡೂರಾವ್

ಚಿತ್ರ ಕೃಪೆ: ವೀಕಿಪೀಡಿಯಾ ಮತ್ತು ನ್ಯೂಸ್ ೧೮ ಕನ್ನಡ ಜಾಲತಾಣಗಳು