ಹಿಂದಿನ ಸಂಚಿಕೆಗಳಲ್ಲಿ ನೀವು ಮೊದಲ ವಿಮಾನ ಹಾರಿಸಿದ್ದು ಯಾರು? ಯಾವಾಗ? ಮತ್ತು ಮೊದಲ ವಾಣಿಜ್ಯ ವಿಮಾನದ ಪ್ರಯಾಣದ ದರ ಎಷ್ಟು ಇತ್ತು? ಮೊದಲ ಪ್ರಯಾಣಿಕ ಯಾರು? ಟಿಕೆಟ್ ಯಾಕೆ ಹರಾಜು ಮಾಡಲಾಯಿತು? ಎಂಬ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುವಿರಿ. ಆದರೆ ನಿಮಗೆ ಗೊತ್ತೇ ಮೊದಲ ವಿಮಾನ ಹಾರಿಸಿದ ರೈಟ್ ಸಹೋದರರು ಯಾವ ಪ್ರದೇಶದಲ್ಲಿ ತಮ್ಮ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದರು? ಬನ್ನಿ ತಿಳಿದುಕೊಳ್ಳುವ…

ಮಾನವನ ಹಾರುವ ಕನಸು ನನಸಾದ ತಾಣ: ‘ಕಿಟ್ಟಿಹಾಕ್ ಕಿಲ್ ಡೆವಿಲ್ ಹಿಲ್’ 

ಮಾನವನಿಗೆ ಆಕಾಶದಲ್ಲಿ ಹಕ್ಕಿಯಂತೆ ಹಾರಬೇಕು ಎಂಬ ಹಂಬಲ ಶತಶತಮಾನಗಳಿಂದಲೂ ಇತ್ತು. ಆ ಅಸಾಧ್ಯವೆನಿಸಿದ ಕನಸನ್ನು ನನಸಾಗಿಸಿ, ಜಗತ್ತಿನ ಸಾರಿಗೆ ಇತಿಹಾಸದ ಹಾದಿಯನ್ನೇ ಬದಲಿಸಿದ ಅದ್ಭುತ ಚಾರಿತ್ರಿಕ ತಾಣವೇ ಅಮೆರಿಕದ 'ಕಿಟ್ಟಿಹಾಕ್ ಕಿಲ್ ಡೆವಿಲ್ ಹಿಲ್' (Kitty Hawk Kill Devil Hill). ವಿಮಾನ ಯಾನದ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಜಾಗ ಇಂದು ಪ್ರಪಂಚದಾದ್ಯಂತದ ಪ್ರವಾಸಿಗರು ಮತ್ತು ಇತಿಹಾಸ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ.

ನಿಮಗೆ ಈಗಾಗಲೇ ತಿಳಿದಿರುವಂತೆ ೧೯೦೩ರ ಡಿಸೆಂಬರ್ ೧೭ರಂದು ಆರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರು ಮೊದಲ ಬಾರಿಗೆ ಯಶಸ್ವಿಯಾಗಿ ವಿಮಾನ ಹಾರಿಸಿ ಪ್ರಪಂಚದ ವಿಮಾನ ಯಾನ ಇತಿಹಾಸದಲ್ಲಿ ಸುವರ್ಣ ಮೈಲಿಗಲ್ಲು ಸೃಷ್ಟಿಸಿದ್ದು ಇದೇ ಮಣ್ಣಿನಲ್ಲಿ. ಪ್ರಯೋಗಗಳಿಗೆ ಈ ಜಾಗವನ್ನು ಅವರು ಸುಮ್ಮನೆ ಆಯ್ಕೆ ಮಾಡಿರಲಿಲ್ಲ. ಎತ್ತರವಾದ 'ಕಿಲ್ ಡೆವಿಲ್ ಹಿಲ್' ಗುಡ್ಡದ ಪ್ರಶಾಂತ ವಾತಾವರಣ, ಹಾರಾಟಕ್ಕೆ ಪೂರಕವಾಗಿ ನಿರಂತರವಾಗಿ ಬೀಸುವ ಗಾಳಿ ಹಾಗೂ ಸುತ್ತಲೂ ಮರಳಿನಿಂದ ಆವೃತವಾಗಿರುವ ಪ್ರದೇಶವಾಗಿದ್ದರಿಂದ, ಒಂದು ವೇಳೆ ಪ್ರಯೋಗದ ವೇಳೆ ಅಪಘಾತ ಸಂಭವಿಸಿದರೂ ಪ್ರಾಣಾಪಾಯವಾಗದಂತೆ ನಿಭಾಯಿಸಲು ಈ ಜಾಗ ಅವರಿಗೆ ಅತ್ಯಂತ ಸೂಕ್ತವಾಗಿ ಕಂಡುಬಂದಿತ್ತು.

ಇಲ್ಲಿನ ಪ್ರಮುಖ ಆಕರ್ಷಣೆಗಳು ಮತ್ತು ನೋಡಲೇಬೇಕಾದ ಜಾಗಗಳ ಬಗ್ಗೆ ಹೇಳುವುದಾದರೆ 

ಕಿಲ್ಲ್ ಹಿಲ್.jpg

ಅರವತ್ತು ಅಡಿ ಎತ್ತರದ ಗ್ರಾನೈಟ್ ಸ್ಮಾರಕ : ಕಿಲ್ ಡೆವಿಲ್ ಹಿಲ್ ಗುಡ್ಡದ ಮೇಲೆ ರೈಟ್ ಸಹೋದರರ ಅಪ್ರತಿಮ ಸಾಧನೆಯ ಗೌರವಾರ್ಥವಾಗಿ ೬೦ ಅಡಿ ಎತ್ತರದ ಭವ್ಯವಾದ ಗ್ರಾನೈಟ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಮಾರಕದ ಬಳಿ ನಿಂತರೆ ಇಡೀ ಜಾಗದ ಸುತ್ತಮುತ್ತಲಿನ ಅದ್ಭುತವಾದ ನೀಳ ನೋಟ (Panoramic View) ಕಣ್ಣಿಗೆ ಕಟ್ಟಿದಂತೆ ಕಾಣುತ್ತದೆ.

monument.jpg

ರೈಟ್ ಬ್ರದರ್ಸ್ ನ್ಯಾಷನಲ್ ಮೆಮೋರಿಯಲ್: ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ 'ರೈಟ್ ಬ್ರದರ್ಸ್ ನ್ಯಾಷನಲ್ ಮೆಮೋರಿಯಲ್'. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ರೈಟ್ ಸಹೋದರರು ನಡೆಸಿದ ಪ್ರತಿಯೊಂದು ಪ್ರಯೋಗದ ಸವಿಸ್ತಾರವಾದ ವಿವರಗಳನ್ನು ತಿಳಿದುಕೊಳ್ಳಬಹುದು. ಅವರು ವಿವಿಧ ಹಂತಗಳಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಿದ ವಿಮಾನಗಳ ಮಾದರಿಗಳು (Models) ಮತ್ತು ಜಗತ್ತಿನ ಪ್ರಥಮ ಯಶಸ್ವಿ ಹಾರಾಟ ನಡೆದ ನಿಖರವಾದ ಜಾಗವನ್ನು ಇಲ್ಲಿ ಕಣ್ಣಾರೆ ಕಂಡು ಆ ರೋಮಾಂಚನವನ್ನು ಅನುಭವಿಸಬಹುದು.

ಸ್ಯಾಂಡ್ ಡ್ಯೂನ್ಸ್ ಸಾಹಸ ಕ್ರೀಡೆಗಳ ತವರೂರು:  ನೀವು ಸಾಹಸ ಕ್ರೀಡೆಗಳ ಪ್ರಿಯರಾಗಿದ್ದರೆ, ಈ ಜಾಗ ನಿಮಗೆ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿನ ವಿಶಾಲವಾದ ಮರಳು ದಿಬ್ಬಗಳಲ್ಲಿ (Sand Dunes) ಪ್ರವಾಸಿಗರಿಗಾಗಿ ರೋಮಾಂಚನಕಾರಿ ಕ್ರೀಡೆಗಳ ವ್ಯವಸ್ಥೆ ಇದೆ.

ಡ್ಯೂನ್ ಗ್ಲೈಡಿಂಗ್ (Dune Gliding), ಸ್ಯಾಂಡ್ ಬೋರ್ಡಿಂಗ್ (Sand Boarding) ವಿಶೇಷವೆಂದರೆ, ಈ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರಿಗಾಗಿ ಅಲ್ಲಿ ಪ್ರತ್ಯೇಕವಾಗಿ ತರಬೇತಿ ಕೂಡ ಲಭ್ಯವಿದೆ. ಹಾಗಾಗಿ ಹೊಸಬರು ಕೂಡ ಯಾವುದೇ ಭಯವಿಲ್ಲದೆ ಇಲ್ಲಿ ಸಾಹಸದ ಮಜಾ ಸವಿಯಬಹುದು.

ಕರೋವ ಕಡಲತೀರದ ರಸ್ತೆಗಳಿಲ್ಲದ ವಿಶಿಷ್ಟ ಪ್ರಪಂಚ: ನಗರದ ಜಂಜಾಟದಿಂದ ದೂರವಿರುವ ಅತ್ಯಂತ ಶಾಂತವಾದ ಮತ್ತು ವಿಭಿನ್ನವಾದ ಕಡಲತೀರವೇ ಕರೋವ (Corolla). ಇದು ಸಂಪೂರ್ಣವಾಗಿ ಮರಳಿನಿಂದ ಆವೃತವಾಗಿದ್ದು, ಇಲ್ಲಿ ಯಾವುದೇ ರೀತಿಯ ಆಧುನಿಕ ಡಾಂಬರು ಅಥವಾ ಕಾಂಕ್ರೀಟ್ ರಸ್ತೆಗಳಿಲ್ಲ!

ಹಾಗಾಗಿ ಇಲ್ಲಿ ಪ್ರಯಾಣಿಸುವುದೇ ಒಂದು ವಿಶಿಷ್ಟ ಅನುಭವ. ರಸ್ತೆಗಳಿಲ್ಲದ ಕಾರಣ 'ಆಫ್ ರೋಡಿಂಗ್' (Off-Roading) ಶೈಲಿಯಲ್ಲಿ ಕೇವಲ 'ಫೋರ್ ವೀಲ್ ಡ್ರೈವ್' (4-Wheel Drive) ವಾಹನಗಳಲ್ಲೇ ಇಲ್ಲಿ ಚಲಿಸಬೇಕಾಗುತ್ತದೆ. ಮರಳಿನ ಮೇಲೆ ಗಾಡಿ ಓಡಿಸುವ ಈ ಸವಾರಿ ಪ್ರವಾಸಿಗರಲ್ಲಿ ಅಡ್ರಿನಾಲಿನ್ ಹೆಚ್ಚಿಸುವುದಂತೂ ಖಂಡಿತ.

ಸ್ಪಾನಿಶ್.jpg

ಕರೋವ ಕಡಲತೀರದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಶತಮಾನಗಳಿಂದಲೂ ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿರುವ 'ಸ್ಪ್ಯಾನಿಷ್ ಮಸ್ಟಾಂಗ್ಸ್' (Spanish Mustangs) ಎಂಬ ಕಾಡು ಕುದುರೆಗಳು. ದಷ್ಟಪುಷ್ಟವಾದ, ವಿಭಿನ್ನ ತಳಿಯ ಈ ಕುದುರೆಗಳು ಸಮುದ್ರದ ತೀರದಲ್ಲಿ ಹಾಗೂ ಅಲೆಗಳ ನಡುವೆ ರಾಜಗಾಂಭೀರ್ಯದಿಂದ ಅಡ್ಡಾಡುತ್ತಿರುವುದನ್ನು ನೋಡುವುದು ಕಣ್ಣಿಗೆ ಹಬ್ಬ.

ಈ ಕುದುರೆಗಳ ವಿಶೇಷತೆ ಮತ್ತು ಮುನ್ನೆಚ್ಚರಿಕೆಗಳು:

* ಸ್ವತಂತ್ರ ಸ್ವಭಾವ: ಇವು ಸಾಮಾನ್ಯ ಸಾಕು ಕುದುರೆಗಳಿಗಿಂತ ಸಂಪೂರ್ಣ ಭಿನ್ನ. ಬಲಿಷ್ಠವಾದ ಈ ಕಾಡು ಕುದುರೆಗಳು ಮಾನವನ ಯಾವುದೇ ಸಂಪರ್ಕವಿಲ್ಲದೇ, ಮರುಭೂಮಿ ಮತ್ತು ಕಾಡುಗಳಲ್ಲಿ ಸ್ವತಂತ್ರವಾಗಿ ಬದುಕಬಲ್ಲ ಅದ್ಭುತ ಸಾಮರ್ಥ್ಯವನ್ನು ಹೊಂದಿವೆ.

* ಗುಂಪಿನಲ್ಲಿ ವಾಸ: ಇವು ಸಾಮಾನ್ಯವಾಗಿ ಒಂಟಿಯಾಗಿ ಓಡಾಡುವುದಿಲ್ಲ, ಯಾವಾಗಲೂ ತಮ್ಮದೇ ಆದ ಹಿಂಡಿನಲ್ಲಿ ಚಲಿಸುತ್ತವೆ.

* ಪ್ರವಾಸಿಗರಿಗೆ ಸೂಚನೆ: ಇವು ಕಾಡು ಕುದುರೆಗಳಾಗಿದ್ದರಿಂದ ಕೆಲವೊಮ್ಮೆ ಕ್ರೂರವಾಗಿ ಅಥವಾ ಆಕ್ರಮಣಕಾರಿಯಾಗಿ ವರ್ತಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರವಾಸಿಗರು ಇವುಗಳ ಬಳಿ ಒಂಟಿಯಾಗಿ ಹೋಗಬಾರದು. ನುರಿತ ಚಾಲಕರಿರುವ ಮತ್ತು ಪ್ರವಾಸಿ ಮಾರ್ಗದರ್ಶಕರಿರುವ (Guided Tour) ಅಧಿಕೃತ ವಾಹನಗಳಲ್ಲೇ ಚಲಿಸುವುದು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಒಳ್ಳೆಯದು.

ಇತಿಹಾಸದ ರೋಮಾಂಚನ, ವಿಮಾನ ಯಾನದ ಉಗಮ ಸ್ಥಾನದ ದರ್ಶನ, ಮರಳು ದಿಬ್ಬಗಳ ಸಾಹಸ ಕ್ರೀಡೆಗಳು ಮತ್ತು ರಸ್ತೆಗಳಿಲ್ಲದ ಕಡಲತೀರದಲ್ಲಿ ಕಾಡು ಕುದುರೆಗಳ ವಿಹಂಗಮ ನೋಟ—ಹೀಗೆ ಹತ್ತಾರು ವೈವಿಧ್ಯತೆಗಳನ್ನು ಒಂದೇ ಸೂರಿನಡಿ ನೀಡುವ 'ಕಿಟ್ಟಿಹಾಕ್ ಕಿಲ್ ಡೆವಿಲ್ ಹಿಲ್' ಮತ್ತು ಕರೋವ ತಾಣಗಳು ಪ್ರತಿಯೊಬ್ಬ ಪ್ರವಾಸ ಪ್ರೇಮಿಯೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಂದರ್ಶಿಸಲೇಬೇಕಾದ ಜಾಗಗಳಾಗಿವೆ. ಹಾಗಾದರೆ ಇನ್ನೇಕೆ ತಡ ಮಾಡುವಿರಿ? ಮೊದಲ ವಿಮಾನ ಹಾರಿದ ಸ್ಥಳಕ್ಕೆ ಹೋಗಲು ತಯಾರಾಗಿ…

(ಆಧಾರ)

ಚಿತ್ರ ಕೃಪೆ: ವೀಕಿ ಕಾಮನ್ಸ್ ಮತ್ತು ವೀಕಿ ಪೀಡಿಯಾ ಜಾಲತಾಣಗಳು