ವಿಶೇಷವಾಗಿ ಸಣ್ಣ ಮಕ್ಕಳು ತಮಗೇನಾದರೂ ಬೇಕೆನಿಸಿದಾಗ, ಅಷ್ಟು ಸುಲಭದಲ್ಲಿ ಹೆತ್ತವರು ಕೊಡಿಸದೇ ಇದ್ದಾಗ ರಚ್ಚೆ ಹಿಡಿಯುತ್ತಾರೆ. ಅಂದರೆ ವಿಪರೀತ ಹಠ ಮಾಡುತ್ತಾರೆ. ಅಳುತ್ತಾರೆ, ಊಟ ಬಿಡುತ್ತಾರೆ, ಕೂತಲ್ಲೇ ಕೂತು, ಮಲಗಿದ್ದಲ್ಲೇ ಮಲಗಿ ಬಿಡುತ್ತಾರೆ. ರಚ್ಚೆ ಹಿಡಿಯುವ ಮಕ್ಕಳನ್ನು ಸಂಭಾಳಿಸುವಲ್ಲಿ ಹೆತ್ತವರಿಗೆ ಸಾಕೋ ಸಾಕಾಗುತ್ತದೆ. ಹೀಗೆ ರಚ್ಚೆ ಹಿಡಿಯುವುದರಿಂದ ಅವರ ಬೇಡಿಕೆಗಳು ಈಡೇರುವ ಸಾಧ್ಯತೆಯೂ ಇದೆ. ಆದರೆ ಈ ರೀತಿ ರಚ್ಚೆಯನ್ನು ಹಿಡಿದು ತಿನ್ನುವಂತಹ ತಿಂಡಿಯಾದರೂ ಏನಪ್ಪಾ ಎಂದು ನೀವು ಆಲೋಚನೆ ಮಾಡುತ್ತಿರಬಹುದು.  

ಇದು ರೇಚ್ತಾ ಅಥವಾ ರೆಚ್ಚಾ (Rechta) ಎಂಬ ಅಲ್ಜೀರಿಯಾ ದೇಶದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ತಿಂಡಿ. ಇದು ನೂಡಲ್ಸ್ ಹೊಂದಿರುವ ಖಾದ್ಯವಾಗಿದೆ. ಇದು ವಿಶೇಷವಾಗಿ ಅಲ್ಜೀರಿಯಾದ ರಾಜಧಾನಿ ಅಲ್ಜಿಯರ್ಸ್‌ ನ ಪ್ರಸಿದ್ಧ ಸಾಂಪ್ರದಾಯಿಕ  ಶೈಲಿಯ ಖಾದ್ಯವಾಗಿದ್ದು, ಆಫ್ರಿಕಾ ಖಂಡದ ಅತ್ಯುತ್ತಮ ಖಾದ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಾಮಾನ್ಯ ನೂಡಲ್ಸ್ ನಂತೆ ಕಂಡರೂ ಇದರ ತಯಾರಿಕೆಯಲ್ಲಿ ಭಿನ್ನತೆ ಇದೆ. 

ಇದರ ತಯಾರಿಕೆ ಹೇಗೆಂದರೆ ರೇಚ್ತಾ ನೂಡಲ್ಸ್ ಅನ್ನು ರವೆ (Semolina), ಮೈದಾ, ಉಪ್ಪು ಮತ್ತು ನೀರನ್ನು ಬಳಸಿ ಮನೆಯಲ್ಲಿಯೇ ಕೈಯಿಂದ ಅತ್ಯಂತ ತೆಳುವಾಗಿ ಮತ್ತು ಅಟ್ಟಿ ಕಟ್ಟುವ ಆಕಾರದಲ್ಲಿ ತಯಾರಿಸಲಾಗುತ್ತದೆ. ನಂತರ ಇದನ್ನು ಹಬೆಯಲ್ಲಿ (Steam) ಬೇಯಿಸಲಾಗುತ್ತದೆ. ಅಲ್ಜೀರಿಯಾ ದೇಶದಲ್ಲಿ ನಮ್ಮಲ್ಲಿ ಮ್ಯಾಗಿ ಮುಂತಾದ ನೂಡಲ್ಸ್ ಸಿಗುತ್ತದೆಯಲ್ಲಾ ಅದೇ ರೀತಿ ರೆಡಿ ಮೇಡ್ ಆಗಿ ಸಿಗುತ್ತದೆಯಂತೆ. 

ಸಾಮಾನ್ಯವಾಗಿ ಈ ನೂಡಲ್ಸ್ ಮೇಲೆ ಮೊಟ್ಟೆ, ಕೋಳಿ, ಕುರಿ, ದನದ ಮಾಂಸ, ಈರುಳ್ಳಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಗರಂ ಮಸಾಲಾ ಮಾದರಿಯ ರೇಸ್ ಎಲ್ ಹನೌತ್ (Ras el hanout) ಮಸಾಲೆಗಳು ಹಾಗೂ ಕಡಲೇ ಕಾಳುಗಳನ್ನು ಬಳಸಿ ಮಾಡಿದ ಖಾದ್ಯಕ್ಕೆ ಬಿಳಿ ಸಾಸ್ ಅನ್ನು ಹಾಕಲಾಗುತ್ತದೆ. ಈ ಮಸಾಲೆಯಲ್ಲಿ ನವಿಲುಕೋಸು (Turnip), ಚೀನೀ ಕಾಯಿ. ಕ್ಯಾರೆಟ್ ಮೊದಲಾದ ತರಕಾರಿಗಳನ್ನು ಮತ್ತು ಜುಕಿನಿ (Zucchini) ಅಥವಾ ಆಲೂಗಡ್ಡೆಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಅಲ್ಜೀರಿಯಾದಲ್ಲಿ ಮದುವೆಗಳು, ಈದ್ ಅಲ್-ಫಿತರ್, ಆಶುರಾ ಮತ್ತು ಪ್ರವಾದಿ ಮೊಹಮ್ಮದರ ಜನ್ಮದಿನದಂತಹ ಪ್ರಮುಖ ಹಬ್ಬ ಹಾಗೂ ಸಾಂಪ್ರದಾಯಿಕ ಆಚರಣೆಗಳ ಸಂದರ್ಭದಲ್ಲಿ ರೇಚ್ತಾವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಅಲ್ಜೀರಿಯಾದ ಹೋಟೇಲುಗಳಲ್ಲಿ ರೇಚ್ತಾಗೆ ವಿಶೇಷ ಸ್ಥಾನವಿದೆ. ಅಲ್ಲಿಯ ಜನರು ಬಾಯಿ ಚಪ್ಪರಿಸುತ್ತಾ ಈ ಖಾದ್ಯವನ್ನು ತಿನ್ನುತ್ತಾರೆ. ಅಲ್ಜೀರಿಯಾ ಹೊರತುಪಡಿಸಿದರೆ ಟ್ಯುನೇಷಿಯಾ ದೇಶದಲ್ಲೂ ರೇಚ್ತಾವನ್ನು (ಚಿತ್ರ ೨) ತಯಾರಿಸುತ್ತಾರೆ. ಬಹಳಷ್ಟು ಮನೆಗಳಲ್ಲಿ ನೂಡಲ್ಸ್ ಗಳನ್ನು ತಾವೇ ಮಾಡಿ ರೇಚ್ತಾವನ್ನು ತಯಾರಿಸುತ್ತಾರೆ.

Rechta_tunisienne.jpg

ಪ್ರಪಂಚದ ಇತರೆಡೆ ಈ ರೇಚ್ತಾ ಖಾದ್ಯ ಇನ್ನೂ ಅಷ್ಟಾಗಿ ಪ್ರಚಾರವಾಗಿಲ್ಲ. ಚೈನೀಸ್ ಖಾದ್ಯಗಳಂತೆ ಇದು ವಿಶ್ವವ್ಯಾಪಿ ಬೆಳೆದಿಲ್ಲ. ಭಾರತದಲ್ಲಿ ಯಾವುದೇ ಹೋಟೇಲ್ ಗಳಲ್ಲಿ ರೇಚ್ತಾ ಸಿಗುವ ಬಗ್ಗೆ ಮಾಹಿತಿ ಇಲ್ಲ. ಆದರೆ ಕೆಲವು ಹೋಟೇಲ್ ಗಳಲ್ಲಿ ಆಫ್ರಿಕನ್ ಫುಡ್ ಫೆಸ್ಟ್ (ಆಹಾರೋತ್ಸವ) ಆಯೋಜಿಸುವಾಗ ಈ ರೇಚ್ತಾ ನೂಡಲ್ಸ್ ಅನ್ನು ವಿಶೇಷ ಬಾಣಸಿಗರಿಂದ ತಯಾರಿಸಿ ಬಡಿಸುತ್ತಾರೆ. ಕೆಲವು ಹೋಟೇಲ್ ಗಳಲ್ಲಿ ಬೇಡಿಕೆಯ ಮೇರೆಗೆ ರೇಚ್ತಾ ತಯಾರಿಸುತ್ತಾರೆ. ಏನೇ ಆಗಲಿ ಆಹಾರ ಪ್ರಿಯರು ಈ ವಿಶೇಷವಾದ ನೂಡಲ್ಸ್ ಅನ್ನು ಸೇವಿಸಲೇ ಬೇಕು. ಅಲ್ಜೀರಿಯಾ ದೇಶಕ್ಕೆ ಎಂದಾದರೂ ಪ್ರವಾಸ ಹೋಗಲು ಅವಕಾಶ ಸಿಕ್ಕರೆ ಅಲ್ಲಿಯ ಹೋಟೇಲ್ ಗಳಲ್ಲಿ ಈ ರೇಚ್ತಾ ನೂಡಲ್ಸ್ ಅನ್ನು ತಿನ್ನಲು ಮರೆಯ ಬೇಡಿ.

(ಆಧಾರ)

ಚಿತ್ರ ಕೃಪೆ: ವೀಕಿಪಿಡಿಯಾ ಮತ್ತು ವೀಕಿಪಿಡಿಯಾ ಕಾಮನ್ಸ್ ತಾಣಗಳು