ಭಾರತ ದೇಶ ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ಇಡೀ ಪ್ರಪಂಚಕ್ಕೆ ಅಗತ್ಯವಾದ ಬಹುತೇಕ ವಸ್ತುಗಳು ಭಾರತದಲ್ಲೇ ಸಿಗುತ್ತಿದ್ದವು. ವಿಜಯನಗರ ಸಾಮ್ರಾಜ್ಯವನ್ನು, ವಿಶೇಷವಾಗಿ ಕೃಷ್ಣದೇವರಾಯರ ಕಾಲವನ್ನು ‘ಸುವರ್ಣಯುಗ’ ಎಂದೇ ಕರೆಯುತ್ತಾರೆ. ಆಗ ರಸ್ತೆಗಳ ಉಭಯ ಪಾರ್ಶ್ವಗಳಲ್ಲಿ ವಜ್ರ-ವೈಡೂರ್ಯಗಳನ್ನು ಪೇರಿಸಿ ಅಳೆದು (ತೂಕ ಮಾಡಿ) ಮಾರುತ್ತಿದ್ದರು ಎಂಬ ‘ಅಂತೆಕಂತೆ’ಗಳು ನಮಗೆಲ್ಲಾ ಪರಿಚಿತವಾಗಿವೆ. ಆದರೆ ಇವು ಕೇವಲ ಜನಪ್ರಿಯ ಕಥೆಗಳಲ್ಲ, ವಾಸ್ತವದ ದಾಖಲೆಗಳು. ಇಂತಹ ಸಂಗತಿಯನ್ನು ತಿಳಿದ ನಂತರ ಆಂಗ್ಲರು, ಡಚ್ಚರು, ಪೋರ್ಚುಗೀಸರು ಎಲ್ಲರೂ ವ್ಯಾಪಾರದ ಸೋಗಿನಲ್ಲಿ ಭಾರತಕ್ಕೆ ಬಂದು ದೇಶವನ್ನು ಲೂಟಿ ಮಾಡಿದರು. ನಮ್ಮ ಸ್ವಾತಂತ್ರ್ಯವನ್ನು ಕಿತ್ತರು. ಇನ್ನೂರಕ್ಕೂ ಅಧಿಕ ವರ್ಷಗಳ ಕಾಲ ನಾವು ಪರಕೀಯರ ಆಡಳಿತದಲ್ಲಿ ನರಳುವಂತೆ ಮಾಡಿದರು. ಶ್ರೀಮಂತ ರಾಷ್ಟ್ರವಾಗಿದ್ದ ಭಾರತದಿಂದ ಹಡಗುಗಟ್ಟಲೆ ಸಂಪತ್ತನ್ನು ತಮ್ಮ ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. 

ವಿಜಯನಗರ ಸಾಮ್ರಾಜ್ಯ ವೈಭವದ ನೈಜವಾದ ಚಿತ್ರಣವನ್ನು ನೀಡಿದವರು ವಿದೇಶಿ ಪ್ರವಾಸಿಗರು. ಅಂತಹವರಲ್ಲಿ ಒಬ್ಬರು ‘ಡೊಮಿಂಗೋ ಪಯಸ್’ (Domingo Paes). ಪೋರ್ಚುಗಲ್‌ನಿಂದ ಬಂದ ಈ ವ್ಯಕ್ತಿ ವಾಸ್ಕೋ ಡ ಗಾಮಾ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ನಂತರದ ಕಾಲದಲ್ಲಿ ಭಾರತಕ್ಕೆ ಬಂದನು. ಕುದುರೆ ವ್ಯಾಪಾರ

ಮದ್ರಾಸ್.jpg

ಸುಮಾರು ೧೫೨೦ರಲ್ಲಿ ಪಯಸ್ ಗೋವಾದಿಂದ ಪ್ರಯಾಣ ಆರಂಭಿಸಿ, ಭಟ್ಕಳದ ಮಾರ್ಗವಾಗಿ ವಿಜಯನಗರದ ರಾಜಧಾನಿ ಹಂಪಿಗೆ ಬಂದನು. ಅಲ್ಲಿ ಹಲವು ದಿನಗಳವರೆಗೆ ತಂಗಿದ ಅವನು ಸಾಮ್ರಾಜ್ಯದ ಬಗ್ಗೆ ವಿವರವಾದ ದಾಖಲೆಗಳನ್ನು ಬರೆದುಕೊಂಡನು. ಆ ಸಮಯದಲ್ಲಿ ಹಂಪಿ ಲಕ್ಷಾಂತರ ಜನರನ್ನು ಹೊಂದಿದ್ದ, ವಾಣಿಜ್ಯ, ಕಲೆ ಮತ್ತು ಸಂಸ್ಕೃತಿಯಿಂದ ತುಂಬಿ ಹರಿದು ಹೋಗುತ್ತಿದ್ದ ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾಗಿತ್ತು.

ಪಯಸ್‌ನ ಲೇಖನಗಳು ಮೊದಲು ಪೋರ್ಚುಗೀಸ್ ದಾಖಲೆಗಳಲ್ಲಿ ಪ್ರಕಟವಾದವು. ಆತ ರಚಿಸಿದ “Chronica dos reis de Bisnaga” ("Chronicle of the kings of Vijayanagar") ಎಂಬ ಕೃತಿಯಲ್ಲಿ ಈ ದಾಖಲೆಗಳ ಸಮಗ್ರ ವಿವರಗಳು ಕಂಡು ಬರುತ್ತವೆ. ನಂತರ ಬ್ರಿಟಿಷ್ ಇತಿಹಾಸಕಾರ ರಾಬರ್ಟ್ ಸೆವೆಲ್ ಅವರು ೧೯೦೦ರಲ್ಲಿ ‘A Forgotten Empire: Vijayanagar’ ಎಂಬ ಪುಸ್ತಕದಲ್ಲಿ ಇವುಗಳನ್ನು ಸಂಕಲನಗೊಳಿಸಿ ಪ್ರಕಟಿಸಿದರು.

ಪಯಸ್‌ ನ ಮೆಚ್ಚುಗೆಗೆ ಪಾತ್ರವಾದ ವಿಜಯನಗರದ ವಿಶೇಷತೆಗಳು:

* ಹಂಪಿಯನ್ನು ಸುತ್ತುವರಿದಿದ್ದ ಭಾರೀ ಕೋಟೆಗಳು

* ವಜ್ರ, ವೈಡೂರ್ಯ, ಮಸಾಲೆಗಳು, ಜವಳಿ ಮತ್ತು ಇತರ ವಸ್ತುಗಳು ತುಂಬಿದ ದೊಡ್ಡ ಮಾರುಕಟ್ಟೆಗಳು

* ಚಿನ್ನದಿಂದ ಅಲಂಕೃತವಾದ ಕೊಠಡಿಗಳು ಮತ್ತು ದಂತದಿಂದ ಕೆತ್ತಿದ ಸಭಾಂಗಣಗಳು

ಕೃಷ್ಣದೇವರಾಯ.jpeg

ಅವನು ಸಾಮ್ರಾಜ್ಯದ ಸೈನ್ಯ ಬಲದ ಬಗ್ಗೆಯೂ ವಿವರಿಸಿದ್ದಾನೆ. ಕೃಷ್ಣದೇವರಾಯರ ಬಳಿ ಹತ್ತು ಲಕ್ಷಕ್ಕೂ ಹೆಚ್ಚು ಪದಾತಿ ಸೈನ್ಯ ಮತ್ತು ೩೫,೦೦೦ಕ್ಕೂ ಹೆಚ್ಚು ಅಶ್ವದಳ ಇತ್ತು. ೧೫೨೦ರಲ್ಲಿ ಡೆಕ್ಕನ್ ಸುಲ್ತಾನರ ವಿರುದ್ಧ ರಾಯಚೂರು ಯುದ್ಧದಲ್ಲಿ ಕೃಷ್ಣದೇವರಾಯ ಗೆದ್ದ ವಿಷಯವನ್ನೂ ಅವನು ದಾಖಲಿಸಿದ್ದಾನೆ.

ಮಹಾನವಮಿ (ದಸರಾ) ಹಬ್ಬದ ಬಗ್ಗೆಯೂ ಆತ ಬಹಳ ಸೊಗಸಾಗಿ ಹಾಗೂ ವಿವರವಾಗಿ ವರ್ಣನೆ ಮಾಡಿದ್ದಾನೆ. ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಸೇನಾ ಪರೇಡ್, ವಿವಿಧ ಆಟಗಳು, ಪ್ರಾಣಿ ಬಲಿಗಳು ಇತ್ಯಾದಿ ನಡೆಯುತ್ತಿತ್ತು. ಹೊಸ ವರ್ಷದ ಸಂದರ್ಭದಲ್ಲಿ ಸಂಪೂರ್ಣ ನಗರವೇ ಹೊಸ ಬಟ್ಟೆಗಳನ್ನು ಧರಿಸಿ ಸಂಗೀತ ಮತ್ತು ಮೆರವಣಿಗೆಯಲ್ಲಿ ಭಾಗವಹಿಸುತ್ತಿತ್ತು.

ಕೃಷ್ಣದೇವರಾಯರನ್ನು ಪಯಸ್ ಬಹಳವಾಗಿ ಹೊಗಳಿದ್ದಾನೆ. ಅವರ ಮಾನಸಿಕ, ದೈಹಿಕ ಶಕ್ತಿ, ರಾಜಕೀಯ ಬುದ್ಧಿವಂತಿಕೆ ಮತ್ತು ಅತಿಥಿ ಸತ್ಕಾರದ ಗುಣಗಳನ್ನು ಹೊಗಳಿದ್ದಾನೆ. ಅಲ್ಲದೆ ಸಾಮ್ರಾಜ್ಯದಲ್ಲಿ ನೆಲೆಸಿದ್ದ ಧಾರ್ಮಿಕ ಸಹಿಷ್ಣುತೆಯನ್ನೂ ಉಲ್ಲೇಖಿಸಿದ್ದಾನೆ. ಹಿಂದೂ ದೇವಾಲಯಗಳ ಪಕ್ಕದಲ್ಲೇ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಮಾರುಕಟ್ಟೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದವು.

ಪಯಸ್‌ನಂತಹ ಪ್ರವಾಸಿಗರ ದಾಖಲೆಗಳು ಇಲ್ಲದಿದ್ದರೆ ವಿಜಯನಗರದ ಅದ್ಭುತ ವೈಭವವು ಇಷ್ಟು ಸ್ಪಷ್ಟವಾಗಿ ನಮಗೆ ತಿಳಿಯುತ್ತಿರಲಿಲ್ಲ. ಸುಮಾರು ಒಂದು ದಶಕದ ನಂತರ ಫೆರ್ನಾವೋ ನುನಿಜ್‌ನಂತಹ ಇತರ ಪೋರ್ಚುಗೀಸ್ ಪ್ರವಾಸಿಗರು ಬಂದು ಇದೇ ದಾಖಲೆಗಳ ಆಧಾರದ ಮೇಲೆ ಹಂಪಿಯನ್ನು ನೋಡಿದರು. ೧೫೬೫ರ ತಾಳಿಕೋಟೆ ಯುದ್ಧಕ್ಕೂ ಮುಂಚೆ ಸಾಮ್ರಾಜ್ಯ ತನ್ನ ಉತ್ತುಂಗದಲ್ಲಿತ್ತು. ಇಷ್ಟೆಲ್ಲಾ ದಾಖಲೆಗಳನ್ನು ನೀಡಿ ವಿಜಯನಗರ ಸಾಮ್ರಾಜ್ವವನ್ನು ವಿಶ್ವ ಪ್ರಸಿದ್ಧಿಗೆ ತಂದ ಪ್ರವಾಸಿ ಡೊಮಿಂಗೋ ಪಯಸ್ ಬಗ್ಗೆ ವೈಯಕ್ತಿಕ ವಿವರಗಳು ಎಲ್ಲೂ ದೊರೆಯುತ್ತಿಲ್ಲ. ಆದರೆ ಆತನು ಬರೆದ ವಿಜಯನಗರದ ಬಗೆಗಿನ ದಾಖಲೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯಲಿವೆ.

(ಆಧಾರ)

ಚಿತ್ರಗಳ ಕೃಪೆ: ಅಮೋಘವರ್ಷಅಕಾಡೆಮಿ, ಮದ್ರಾಸ್ ಕೊರಿಯರ್, ಫೇಸ್ಬುಕ್ ಜಾಲತಾಣಗಳಿಂದ