ಕಳೆದ ವರ್ಷ ರಾಜ್ಯದ ಕೆಲವು ಪ್ರದೇಶಗಳಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ನಿರಂತರ ಮಳೆಯಾಗಿ ಭಾರೀ ಅನಾಹುತಗಳಾಗಿತ್ತು. ಆ ವರ್ಷ ಹೇಗೂ ಮಳೆಗಾಲವನ್ನು ನಿಭಾಯಿಸಿದ ಜನರಿಗೆ ಈ ವರ್ಷ ಮಳೆಗಾಲ ಶಾಕ್ ನೀಡಿದೆ. ರಾಜ್ಯಾದ್ಯಂತ ಎಲ್ಲಾ ಭಾಗಗಳಲ್ಲೂ ಮಳೆಯ ಕೊರತೆ ಕಂಡು ಬರುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಈ ವರ್ಷದಲ್ಲಿ ಒಂದೇ ಒಂದು ಸರಿಯಾದ ಮಳೆ ಬಾರದ್ದೂ ಇದೆ. ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ. ಮಳೆ ಬಂದರೆ ಬಂತು. ಹೋದರೆ ಹೋಯಿತು. ಕೆಲವು ಕಡೆಗೆ ಮಾತ್ರ ಮಳೆ. ವರ್ಷ ಕಳೆದಂತೆ ಮಳೆಯ ಸ್ಥಿತಿ ಗತಿ ಬದಲಾಗುತ್ತಾ ಬರುತ್ತಿದೆ. ಅಧಿಕ ಮಳೆಯಾಗುವ ಪ್ರದೇಶಗಳೆಂದು ಗುರುತಿಸಲ್ಪಟ್ಟ ಕಡೆಗಳಲ್ಲೂ ಮಳೆ ಹಿಂದಿನಂತೆ ಇಲ್ಲ. ಧಾರಕಾರವಾಗಿ ಮಳೆ ಬಂದರೆ ಪ್ರಯೋಜನ ಇಲ್ಲ. ಮಳೆ ಹಂಚಿಕೆ ಸರಿಯಾಗಿದ್ದರೆನೇ ಸುಭಿಕ್ಷೆ. ವಾತಾವರಣದ ಏರು ಪೇರಿನಿಂದ ಈಗ ಮಳೆ ಹಂಚಿಕೆ ವ್ಯತ್ಯಾಸವಾಗಲಾರಂಬಿಸಿದೆ. ಇದರಿಂದಾಗಿ ಮುಂದಿನ ವರ್ಷದ ಕೃಷಿಯ ಮೇಲೆ ಭಾರೀ ಹೊಡೆತ ಬೀಳಲಿದೆ. ಈ ವರ್ಷ ಕರಾವಳಿ ಮಲೆನಾಡಿನಲ್ಲಿ ಮಳೆ ಬಂದು ಸದ್ಯದಲ್ಲಿ ನೀರಿನ ಕ್ಷಾಮ ಎದುರಾಗಲಿದೆ. ಹೊಳೆಯಲ್ಲಿ ನೀರಿನ ಮಟ್ಟ ಇಳಿದಿದೆ. ಜನರು ವಾಡಿಕೆಯಂತೆ ನವರಾತ್ರಿ ಸಮಯದಲ್ಲಿ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಂದೆರಡು ಮಳೆ ಬಂದರೂ ಜಲಾಶಯಗಳಲ್ಲಿ ಸಂಗ್ರಹದ ಮಟ್ಟ ಏರುವಷ್ಟು ನೀರು ಸಿಗಲಾರದು.
ಮಳೆಯ ಸಾಮಾನ್ಯ ಗತಿ ಹೇಗಿರುತ್ತದೆಯೆಂದರೆ ಪ್ರಾರಂಭದಲ್ಲಿ ಮುಂಗಾರು ಪೂರ್ವ ಮಳೆ ಬರುತ್ತದೆ. ಆ ನಂತರ ಮುಂಗಾರು ಮಳೆ ಮಾರುತಗಳು ಅರಬೀಸಮುದ್ರದಲ್ಲಿ ಸೃಷ್ಟಿಯಾಗಿ ಸುಮಾರು ಒಂದು ಎರಡು ತಿಂಗಳ ಕಾಲ ಹಿತ ಮಿತವಾಗಿ ಮಳೆಯಾಗುತ್ತಾ ಬರುತ್ತದೆ. ಮುಂಗಾರು ಮಳೆಯ ಮಾರುತಗಳ ವೇಗಕ್ಕನುಗುಣವಾಗಿ ಅದು ಕರಾವಳಿ - ಮಲೆನಾಡು ಬಯಲು ನಾಡಿನ ತನಕ ಮಳೆಯನ್ನು ಸುರಿಸುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ವೇಗ ಕಡಿಮೆಯಾದ ಪರಿಣಾಮ ಮಳೆಯು ಬರೇ ಕರಾವಳಿ ಮಲೆನಾಡಿನವರೆಗೆ ಮಾತ್ರ ಬಿರುಸಾಗಿರುತ್ತದೆ. ಅರೆ ಮಲೆನಾಡಿನಲ್ಲಿ ಅಲ್ಪಸ್ವಲ್ಪವೂ, ಬಯಲು ನಾಡಿಗೆ ಇಲ್ಲವೇ ಇಲ್ಲ ಎಂಬಂತಹ ಸ್ಥಿತಿ ಉಂಟಾಗಿದೆ. ಆದರೆ ಸಣ್ಣ ಮಳೆಯಾದರೂ ಬೆಂಗಳೂರಿಗೆ ಮಾತ್ರ ಪ್ರತೀ ವರ್ಷ ನೆರೆ ಎನ್ನುವಂತಾಗಿದೆ.
ಮಳೆ ಹೆಚ್ಚು ಬಂದ ವರ್ಷ ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಎನ್ನುತ್ತಾರೆ ಹಿರಿಯರು. ಹೆಚ್ಚು ಮಳೆ ಬರುವುದಕ್ಕಿಂತಲೂ ಸಮರ್ಪಕವಾಗಿ ಹಂಚಿಕೆ ಇಲ್ಲದಿದ್ದರೆ ಮಾತ್ರ ನೀರಿನ ಕೊರತೆ ಉಂಟಾಗುತ್ತದೆ. ಹಿಂದೆಲ್ಲಾ ಡಿಸೆಂಬರ್ ತಿಂಗಳ ತನಕವೂ ಮಳೆ ಬರುತ್ತಿತ್ತು. ಆ ರೀತಿಯಲ್ಲಿ ಮಳೆ ಬಂದಾಗ ನೀರಿನ ಬಳಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನೀರಿನ ಲಭ್ಯತೆ ಧೀರ್ಘ ಸಮಯದ ತನಕ ಉಳಿಯುತ್ತದೆ. ಅಕ್ಟೋಬರ್ ತಿಂಗಳಲ್ಲೇ ಮಳೆ ನಿಂತಿತೆಂದಾದರೆ ಕೊರತೆ ಸಹಜವಾಗಿ ಉಂಟಾಗುತ್ತದೆ. ಹಿರಿಯರು ವಿಪರೀತವಾಗಿ ಮಳೆ ಬಂದ ವರ್ಷ ಬೇಸಿಗೆಯಲ್ಲಿ ನೀರಿನ ಕ್ಷಾಮ ಉಂಟಾಗುತ್ತದೆ ಎಂದು ಹೇಳಿದ್ದರಲ್ಲೂ ಯಾವ ತಪ್ಪೂ ಇಲ್ಲ. ಅತಿಯಾಗಿ ಮಳೆ ಬಂದ ವರ್ಷ ಮಣ್ಣು ಕೊಚ್ಚಣೆ ಅಧಿಕವಾಗುತ್ತದೆ. ಭೂಮಿಯಲ್ಲಿ ಒರತೆ ಹೆಚ್ಚಳವಾಗಿ ನೀರಿನ ಮಟ್ಟ ಏರಿಕೆಯಾಗುತ್ತದೆ. ನೀರು ಮಣ್ಣಿನ ಹಗುರ ಕಣಗಳನ್ನು ವಿಭಜಿಸಿ ಅದನ್ನು ತೊಳೆದು ಹೋಗುವಂತೆ ಮಾಡುತ್ತದೆ. ಈ ಕಾರಣದಿಂದ ನೆಲದ ಮೇಲೆ ಮತ್ತು ಅಡಿಯಲ್ಲೂ ನೀರನ್ನು ಹಿಡಿದಿಟ್ಟುಕೊಳ್ಳುವ ಮಣ್ಣಿನ ಕಣಗಳು ಕಡಿಮೆಯಾಗಿ ಮರಳು ಜಾಸ್ತಿಯಾಗಿ ನೀರು ಮತ್ತೂ ತಳಕ್ಕೆ ಇಳಿಯುತ್ತದೆ. ಬೆಳೆ ಇರುವ ಮೇಲು ಮಣ್ಣಿನಲ್ಲೂ ಹೀಗೇ ಆಗುವ ಕಾರಣ ಮಣ್ಣು ಬೇಗ ಒಣಗುತ್ತದೆ. ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.
ಮಳೆ ಬರುವುದು, ಹೆಚ್ಚು – ಕಡಿಮೆ ಆಗುವುದು ನಮ್ಮ ಕೈಯಲ್ಲಿ ಇಲ್ಲದ್ದು. ಆದರೆ ನೀರಿನ ಕೊರತೆಯಲ್ಲೂ ಬೆಳೆಯನ್ನು ಉಳಿಸಿಕೊಳ್ಳುವುದು ಮಾತ್ರ ನಮ್ಮಿಂದ ಸಾಧ್ಯವಾಗುವ ವಿಚಾರ. ಈ ವರ್ಷದ ಅಧಿಕ ಮಳೆಯ ಪರಿಣಾಮವಾಗಿ ಹೊಲದಲ್ಲಿ ಮಣ್ಣಿನ ಪ್ರಮಾಣ ಕಡಿಮೆಯಾಗಿ ಮರಳು ಹೆಚ್ಚಳವಾಗಿದ್ದು ಬೇಗ ಬೆಳೆಗಳು ನೀರನ್ನು ಅಪ್ಪೇಕ್ಷಿಸುವ ಸ್ಥಿತಿಯಲ್ಲಿವೆ. ಇದ್ದನ್ನು ಸರಿಪಡಿಸುವ ಬಗ್ಗೆ ರೈತರು ಗಮನಹರಿಸಬೇಕಾಗಿದೆ.
ಮೆಕ್ಕಲು ಮಣ್ಣು ಹಾಕಿ: ಮೆಕ್ಕಲು ಮಣ್ಣು ನಮ್ಮ ಹೊಲದಿಂದ ಮಳೆನೀರಿನ ಮೂಲಕ ಹರಿದು ಹೋಗಿ ಸಮತಟ್ಟು ಜಾಗದಲ್ಲಿ ತಂಗಿದ ಫಲವತ್ತಾದ ಮಣ್ಣು. ನೆಲದಲ್ಲಿ ನೀರಿನ ಅಂಶ ಬೇಗ ಅವೀಕರಣ ಆಗದಂತೆ ತಡೆಯುವಲ್ಲಿ ಇದು ಸಹಕಾರಿ. ಇದನ್ನು ಹೊಲದ ಮೇಲೆ ಹೊದಿಕೆಯಾಗಿ ಹರಡಬಹುದು. ಇದರ ಬದಲಿಗೆ ಸಾವಯವ ತ್ಯಾಜ್ಯಗಳನ್ನೂ ಒಟ್ಟು ಸೇರಿಸಿ ಹಾಕಬಹುದು. ಮೆಕ್ಕಲು ಮಣ್ಣು ಇಲ್ಲದಿದ್ದ ಪಕ್ಷದಲ್ಲಿ ಉತ್ತಮ ಮಣ್ಣನ್ನೂ ಹೊದಿಕೆ ಹಾಕಬಹುದು. ಮಳೆಗಾಲ ಕಳೆದ ತಕ್ಷಣ ಹೊಲದ ಬೆಳೆಗಳ ಬುಡಕ್ಕೆ ಮಣ್ಣು ಏರಿಕೆ ಮಾಡುವುದರಿಂದ ನೆಲದ ತೇವಾಂಶ ಅವೀಕರಣ ಆಗುವುದು ಕಡಿಮೆಯಾಗುತ್ತದೆ. ಇದಕ್ಕೆ ಹೊಳೆ ಹಳ್ಳ, ಕೆರೆ ಮುಂತಾದ ಕಡೆ ತಂಗಿದ ಮೇಲು ಮಣ್ಣನ್ನು ಬಳಕೆ ಮಾಡುವುದು ಉತ್ತಮ. ಈ ಮಣ್ಣು ತುಂಬಾ ಫಲವಾತ್ತಾಗಿರುವ ಕಾರಣ ಬೆಳೆಗಳಿಗೆ ಉತ್ತಮವಾಗಿರುತ್ತದೆ. ಇದರಲ್ಲಿ ಮರಳಿನ ಕಣಗಳು ಕಡಿಮೆ ಇರುವ ಕಾರಣ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಉತ್ತಮವಾಗಿರುತ್ತದೆ. ಸಾಧ್ಯವಾದಷ್ಟು ಮರಳು ಕಡಿಮೆ ಇರುವ ಮಣ್ಣನ್ನು ಬಳಕೆ ಮಾಡಿದರೆ ಒಳ್ಳೆಯದು. ರೈತರು ಕೃಷಿ ಹೊಂಡ ಮುಂತಾದವುಗಳನ್ನು ನಿರ್ಮಿಸುವಾಗ ಅದು ಹೊಲದಲ್ಲಿ ಬಿದ್ದ ಮಳೆ ನೀರಿನೊಂದಿಗೆ ಕೊಚ್ಚಣೆಯಾಗುವ ಮಣ್ಣನ್ನು ತಂಗಿಸುವಂತಹ ಸ್ಥಳದಲ್ಲಿ ಮಾಡಿಕೊಂಡರೆ ಉತ್ತಮ.
ತೇವಾಂಶ ಸಂರಕ್ಷಣೆಗೆ ಕ್ರಮ ಕೈಗೊಳ್ಳಿ: ಮಣ್ಣು ಹಾಕುವುದರಿಂದ ತೇವಾಂಶ ಸಂರಕ್ಷಣೆ ಆಗುತ್ತದೆ. ಕಡಿಮೆ ನೀರಿನ ಉಪಯೋಗ ಮಾಡಿಕೊಂಡು ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ, ಕಾಡಿನ ಬದಿಯಲಿ ದೊರೆಯುವ ಒಣ ತರಗೆಲೆ, ಹಾಗೆಯೇ ಕೆಲವು ಉದ್ದಿಮೆಗಳಲ್ಲಿ ದೊರೆಯುವ ಸಾವಯವ ತ್ಯಾಜ್ಯಗಳನ್ನೂ ಸಹ ಕೃಷಿಗೆ ಬಳಕೆ ಮಾಡಿಕೊಳ್ಳಬಹುದು. ಅಕ್ಕಿ ಗಿರಣಿಗಳಲ್ಲಿ ದೊರೆಯುವ ಸುಟ್ಟ ಬೂದಿ ಸಹ ತೇವಾಂಶ ಸಂರಕ್ಷಣೆಗೆ ಒಳ್ಳೆಯದು. ಮರದ ಮಿಲ್ಲುಗಳಲ್ಲಿ ದೊರೆಯುವ ಗರಗಸದ ಹುಡಿ ಸಹ ತೇವಾಂಶ ಸಂರಕ್ಷಣೆಗೆ ಅನುಕೂಲಕರ. ಅದೇ ರೀತಿಯಲ್ಲಿ ಇನ್ನೂ ಕೆಲವೊಂದು ಉದ್ದಿಮೆಗಳಲ್ಲಿ ದೊರೆಯುವ ಹಾನಿ ರಹಿತ ಸಾವಯವ ತ್ಯಾಜ್ಯಗಳನ್ನು ಬೆಳೆಗಳ ಬುಡಕ್ಕೆ ಹಾಕುವ ಮೂಲಕ ತೇವಾಂಶ ಸಂರಕ್ಷಣೆ ಮಾಡಬಹುದು. ಈ ರೀತಿ ಮಣ್ಣಿಗೆ ಹೊದಿಕೆ ಮಾಡುವುದರಿಂದ ನೀರಿನ ಬಳಕೆಯನ್ನು ೫೦% ದಷ್ಟು ಕಡಿಮೆ ಮಾಡಬಹುದು.
ಕೊಳವೆ ಬಾವಿ ನೀರನ್ನು ನಂಬಬೇಡಿ. ರೈತರು ಸಾಧ್ಯವಾದಷ್ಟು ಕೊಳವೆ ಬಾವಿಯ ನೀರಿನ ಉಪಯೋಗವನ್ನು ಕಡಿಮೆ ಮಾಡುವುದು ಒಳ್ಳೆಯದು. ಈ ವರ್ಷದ ಅಧಿಕ ಮಳೆಯ ಕಾರಣದಿಂದ ಕೆಲವು ಕೊಳವೆ ಬಾವಿಗಳಲ್ಲಿ ಅಂತರ್ಜಲದಲ್ಲೂ ಕೆಲವು ವ್ಯತ್ಯಾಸಗಳುಂಟಾಗಿ ಕೊಳವೆ ಬಾವಿಯಲ್ಲಿ ಕೆಸರು ನೀರು ಬರಲಾರಂಭಿಸಿದೆ. ಇಂತದ್ದು ಇನ್ನೂ ಹೆಚ್ಚು ಆಗುವ ಕಾರಣ ಸಾಧ್ಯವಾದಷ್ಟು ಕೆರೆ ನೀರಾವರಿಯ ಕಡೆ ಗಮನ ಹರಿಸಿರಿ. ಸ್ಥಳೀಯವಾಗಿ ಹರಿಯುವ ಹೊಳೆ ಹಳ್ಳಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವರೇ ಸ್ಥಳೀಯಾಡಳಿತಕ್ಕೆ ಸಹಕಾರ ಕೊಡಿ. ಇದು ಬಾವಿ ನೀರಿನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ.
ಹನಿ ನೀರಾವರಿ ಅಳವಡಿಸಿಕೊಳ್ಳಿ ; ರೈತರೆಲ್ಲಾ ಹನಿನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡದ್ದೇ ಆದರೆ ಅದೆಷ್ಟೂ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು!. ಇದನ್ನು ಎಲ್ಲಾ ರೈತರೂ ಯೋಚನೆ ಮಾಡಬೇಕಾಗಿದೆ. ಬಹುಷಃ ೧೦೦% ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಲ್ಲಿ ನೀರಿಗೆ ಕೊರತೆ ಉಂಟಾಗಲಾರದು.
ಆಧುನಿಕ ತೇವಾಂಶ ಸಂರಕ್ಷಕಗಳು: ಈಗ ತೇವಾಂಶದ ಆವೀಕರಣ ತಡೆಯುವ ಸಲುವಾಗಿ ಮಲ್ಚಿಂಗ್ ಶೀಟುಗಳು ಬಂದಿವೆ. ಅದರಲ್ಲಿ ಬೇರೆ ಬೇರೆ ತರಾವಳಿಯವುಗಳೂ ಇವೆ. ಧೀರ್ಘಾವಧಿ ಬೆಳೆಗಳಿಗೆ ಎಚ್ ಡಿ ಪಿ ಇ ಶೀಟುಗಳನ್ನು ಹಾಕುವುದರಿಂದ ನೀರಿನ ಬಳಕೆಯಲ್ಲಿ ೫೦% ದಷ್ಟು ಉಳಿತಾಯ ಮಾಡಬಹುದು.
ಇವೆಲ್ಲಾ ಸಲಹೆಗಳು ಬರೇ ನೀರಿನ ಉಳಿತಾಯ ಮಾತ್ರವಲ್ಲದೆ ಬೆಳೆಯಲ್ಲಿ ಇಳುವರಿ ಹೆಚ್ಚಳಕ್ಕೂ, ಮಣ್ಣು ಸಂರಕ್ಷಣೆಗೂ ನೆರವಾಗುವಂತದ್ದು. ಇದರ ಬಳಕೆ ನಮ್ಮ ದೇಶದಲ್ಲಿ ಹೆಚ್ಚಾಗಿ ಪ್ರಚಾರದಲ್ಲಿ ಇಲ್ಲ. ಆದರೆ ವಿದೇಶಗಳಲ್ಲಿ ಅದರಲ್ಲೂ ಇಸ್ರೇಲ್ ನಂತಹ ದೇಶಗಳಲ್ಲಿ ಇದರ ಬಳಕೆಯಿಂದಲೇ ಕೃಷಿ ನಡೆಯುತ್ತಿದೆ. ನಾವು ನೀರಿನ ಮಿತ ಬಳಕೆ ಕಡೆಗೆ ಗಮನ ಹರಿಸುವುದೇ ಆಗಿದ್ದಲ್ಲಿ ಈ ದೃಷ್ಟಿಯಿಂದ ಯೋಚನೆ ಮಾಡಲೇ ಬೇಕಾಗುತ್ತದೆ.
ಮಾಹಿತಿ ಮತ್ತು ಚಿತ್ರ: ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!