ಸಾಂಪ್ರದಾಯಿಕ ಭತ್ತದ ಬೇಸಾಯ ನಮಗೆಲ್ಲಾ ಗೊತ್ತು. ಈ ಬೇಸಾಯ ಕ್ರಮಕ್ಕೆ ನಾವು ಹೊಲವನ್ನು ಉಳುಮೆ ಮಾಡುತ್ತೇವೆ. ನೀರು ನಿಲ್ಲಿಸಿ ಭತ್ತದ ಸಸಿಗಳನ್ನು ತಯಾರು ಮಾಡಿ ನಾಟಿ ಮಾಡುತ್ತೇವೆ. ಯಂತ್ರ ಸಾಧನಗಳನ್ನು ಅವಲಂಭಿಸುತ್ತೇವೆ. ಸದಾ ನೀರು ನಿಲ್ಲಿಸಿ ಬೆಳೆ ಬೆಳೆಸುತ್ತೇವೆ. ನೀರಿನ ಕೊರತೆ ಆದಾಗ ಕೊಳವೆ ಬಾವಿಯ ನೀರನ್ನೂ ಬಳಕೆ ಮಾಡುತ್ತೇವೆ. ಇಷ್ಟು ಶ್ರಮಪಟ್ಟು ಭತ್ತ ಬೆಳೆದು ಅದರಲ್ಲಿ ಪಡೆಯುವ ಇಳುವರಿ ಸರಾಸರಿ ೧೨-೧೩ ಕ್ವಿಂಟಾಲು. ಇದರ ಬದಲಿಗೆ ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿ ರೈತರು ವಿಶಿಷ್ಟ ವಿಧಾನದಲ್ಲಿ ಭತ್ತವನ್ನು ಬೆಳೆಸುವ ಕ್ರಮವನ್ನು ಕಳೆದ ಐದಾರು ವರ್ಷಗಳಿಂದ ಪಾಲಿಸುತ್ತಾ ಬಂದಿದ್ದಾರೆ. ಇದಕ್ಕೆ ಸಗುಣ ಪದ್ದತಿ (Saguna Rice Technique) ಎನ್ನುತ್ತಾರೆ. ಇದಕ್ಕೆ ನೀರು ಬೇಡ. ಹೊಲದ ಉಳುಮೆ ಬೇಕಾಗಿಲ್ಲ. ಒಮ್ಮೆ ಹೊಲದ ಸಿದ್ದತೆ ಮಾಡಿಕೊಂಡರೆ ಅದು ಮುಂದಿನ ವರ್ಷದ ಬೆಳೆಗೂ ಅದೇ. ನಂತರ ಬೆಳೆಯುವ ಬದಲಿ ಬೆಳೆ (ಉದ್ದು, ಹೆಸರು ಇತ್ಯಾದಿ)ಗೂ ಇದೇ ಸ್ಥಳ. ಈ ವಿಧಾನದಲ್ಲಿ ಸಾಕಷ್ಟು ಕೆಲಸಗಾರ ಅವಲಂಬನೆ, ರಸಗೊಬ್ಬರದ ಬಳಕೆ, ಕಳೆ ನಾಶಕದ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಈಗ ಸುಮಾರು ಹತ್ತು ಸಾವಿರಕ್ಕೂ ಅಧಿಕ ರೈತರು ಈ ವಿಧಾನದ ಮೂಲಕ ಭತ್ತ ಬೆಳೆಸುತ್ತಾರಂತೆ.
ಈ ವಿಧಾನವನ್ನು ಚಂದ್ರಶೇಖರ ಬಾಡ್ ಸಾವ್ಲೆ ಇವರು ಪರಿಚಯಿಸಿದ್ದು, ಇವರು ಕೊಂಕಣ್ ವಿದ್ಯಾಪೀಠದಲ್ಲಿ ಪದವಿ ಮುಗಿಸಿ ಕ್ಯಾಲಿಫೋರ್ನಿಯಾದಲ್ಲಿ ಆಹಾರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದವರು. ಇವರ ಈ ವಿಧಾನವನ್ನು ಮಹಾರಾಷ್ಟ್ರದ ಕೃಷಿ ಇಲಾಖೆ ಮೆಚ್ಚಿಕೊಂಡಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಸಹ ಇದನ್ನು ಗಮನಿಸಿ ಬೆಳೆಸಲು ಶಿಫಾರಸು ಮಾಡಿದೆ.
ಸಗುಣ ಪದ್ದತಿ ಎಂದರೇನು?: ಇದು ಭತ್ತ ಬೆಳೆಸುವ ಹೊಲದಲ್ಲಿ ನಿರ್ದಿಷ್ಟ ಅಂತರದಲ್ಲಿ ಏರಿ ಸಾಲುಗಳನ್ನು ಮಾಡಿ ಅದರಲ್ಲಿ ಭತ್ತವನ್ನು ಬಿತ್ತುವುದು. ಹೊಲದಲ್ಲಿ ಸಾಲುಗಳನ್ನು ಮಾಡಿ ತೇವಾಂಶ ಕೊಟ್ಟು ಕಳೆನಾಶಕ ಸಿಂಪಡಿಸಿ, ರಸಗೊಬ್ಬರ ಮತ್ತು ಉತ್ತಮ ಮಣ್ಣು ಸೇರಿಸಿ ಬೀಜದ ಉಂಡೆ ಮಾಡಿ ನಿರ್ದಿಷ್ಟ ಅಂತರದಲ್ಲಿ ತೂತು ಮಾಡಿ ಬೀಜ ಹಾಕುವುದು. ನಂತರ ಭತ್ತ ಕಠಾವು ಮಾಡುವಾಗ ಇದನ್ನು ತೆಗೆಯಲಿಕ್ಕಿಲ್ಲ. ಅದೇ ಸಾಲಿನಲ್ಲಿ ನೆಲಕಡ್ಲೆ, ಉದ್ದು, ಹೆಸರು ಇನ್ಯಾವುದೇ ಬೆಳೆಯನ್ನೂ ಬಿತ್ತಿ ಬೆಳೆಸಲಾಗುತ್ತದೆ. ಅದೇ ಏರಿಯನ್ನು ಮುಂದಿನ ವರ್ಷಕ್ಕೂ ಉಳಿಸಿಕೊಂಡು ಅದರಲ್ಲೇ ಬಿತ್ತನೆ ಮಾಡಲಾಗುತ್ತದೆ. SRT ಎಂಬ ಈ ಪದ್ದತಿಯಲ್ಲಿ ನೀರಿನ ಉಳಿತಾಯ, ಬಸಿಯುವಿಕೆ ಸಮಸ್ಯೆ ನಿವಾರಣೆ, ಗೊಬ್ಬರ ಉಳಿತಾಯ ಮತ್ತು ನೀರು ಸಂರಕ್ಷಣೆ ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ೧೨ ಕ್ವಿಂಟಾಲು ಇಳುವರಿ ಬದಲಿಗೆ ೧೫ ಕ್ವಿಂಟಾಲು ಬರುತ್ತದೆ ಎಂಬ ವಿಷಯವನ್ನು ಭತ್ತ ಬೆಳೆಗಾರರು ಕಂಡುಕೊಂಡಿದ್ದಾರೆ. ಸಾಂಪ್ರದಾಯಿಕ ಭತ್ತದ ಕೃಷಿ ವಿಧಾನದಿಂದ ಹೊಸ ವಿಧಾನಕ್ಕೆ ಕೃಷಿಕರು ಬದಲಾಗಬಹುದೇ? ಕಾದು ನೋಡುವ…
(ಮಾಹಿತಿ: ರಾಧಾಕೃಷ್ಣ ಹೊಳ್ಳ)
ಚಿತ್ರ ಕೃಪೆ: ಸಗುಣ ರೈಸ್ ಟೆಕ್ನಿಕ್ ಜಾಲತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!