ಶೈಕ್ಷಣಿಕ ಪೈಪೋಟಿಯ ಇಂದಿನ ದಿನಗಳಲ್ಲಿ ಕಡೆಗಣನೆಗೆ ಒಳಗಾಗುತ್ತಿದ್ದ ರಾಜ್ಯ ಪಠ್ಯಕ್ರಮ (ಸ್ಟೇಟ್ ಸಿಲಬಸ್), ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ-೨೦೨೬) ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಗಟ್ಟಿಯಾಗಿ ಸಾರಿದೆ. ಕಳೆದ ಕೆಲವು ವರ್ಷಗಳಿಂದ ಸಿಬಿಎಸ್‌ಇ ಮತ್ತು ಐ ಸಿ ಎಸ್‌ ಇಯಂಥ ಸುಧಾರಿತ ಪಠ್ಯಕ್ರಮಗಳಲ್ಲಿ ಓದಿದ ವಿದ್ಯಾರ್ಥಿಗಳೇ ಜೆಇಇ, ನೀಟ್ ಹಾಗೂ ಸಿಇಟಿಯಲ್ಲಿ ಪಾರಮ್ಯ ಸಾಧಿಸುತ್ತಿದ್ದರು. ಆದರೆ, ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಫಲಿತಾಂಶವು ಹೊಸದೊಂದು ಆಶಾವಾದಕ್ಕೆ ನಾಂದಿ ಹಾಡಿದೆ. ಕಳೆದ ಬಾರಿ ಎಂಜಿನಿಯರಿಂಗ್ ವಿಭಾಗದ ಅಗ್ರ ೧೦ ಬ್ಯಾಂಕುಗಳಲ್ಲಿ ೩ ಪ್ರಮುಖ ಸ್ಥಾನಗಳು ಸೇರಿ ಒಟ್ಟು ಏಳು ಸ್ಥಾನಗಳನ್ನು ಸಿ ಬಿ ಎಸ್‌ ಇ ವಿದ್ಯಾರ್ಥಿಗಳು ಬಾಚಿಕೊಂಡಿದ್ದರು. ಆದರೆ, ಈ ಬಾರಿ ಇಡೀ ಚಿತ್ರಣವೇ ಬದಲಾಗಿದ್ದು, ಟಾಪ್ 10ರಲ್ಲಿ ಬರೋಬ್ಬರಿ 9 ಸ್ಥಾನಗಳನ್ನು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳೇ ಮುಡಿಗೇರಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಮಾತ್ರವಲ್ಲದೆ ಕೃಷಿ, ಪಶುಸಂಗೋಪನೆ, ಬಿಎಸ್ಸಿ ನರ್ಸಿಂಗ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿಭಾಗಗಳ ಮೊದಲ 3 ಸ್ಥಾನಗಳೂ ರಾಜ್ಯದ ಪ್ರತಿಭೆಗಳ ಪಾಲಾಗಿರುವುದು ಸಾಮಾನ್ಯ ಪಠ್ಯಕ್ರಮದ ಶಕ್ತಿಯನ್ನು ಸಾಬೀತುಪಡಿಸಿದೆ.

ಸಾಮಾನ್ಯವಾಗಿ ಸಿಇಟಿ ಪರೀಕ್ಷೆಗೆ ಪೂರಕವಾದ ಪ್ರಶ್ನೆಗಳನ್ನು ಎನ್‌ ಸಿ ಇ ಆರ್‌ ಟಿ ಪಠ್ಯಕ್ರಮ ಹಾಗೂ ಶಾಲಾ ಶಿಕ್ಷಣ ಇಲಾಖೆಯು ರಚಿಸಿದರೂ, ಇವುಗಳನ್ನು ನೀರು ಕುಡಿದಂತೆ ಸಲೀಸಾಗಿ ಭೇದಿಸುವ ಚಕ್ಯತೆ ಕೇಂದ್ರೀಯ ಮಂಡಳಿಗಳ ವಿದ್ಯಾರ್ಥಿಗಳಿಗೆ ಸಿದ್ದಿಸಿರುತ್ತದೆ ಎಂಬುದು ಸಾರ್ವತ್ರಿಕ ನಂಬಿಕೆ. ಆ ನಂಬಿಕೆಯನ್ನು ಸುಳ್ಳಾಗಿಸಿ, ರಾಜ್ಯ ಪಠ್ಯಕ್ರಮದ ಜಾಣರೂ ರಾಷ್ಟ್ರೀಯ ಮಟ್ಟದ ಸವಾಲುಗಳಿಗೆ ಸಜ್ಜಾಗಬಲ್ಲರು ಎಂಬುದನ್ನು ಈ ಫಲಿತಾಂಶ ನಿರೂಪಿಸಿದೆ. ಪಿಯು ಹಂತದಲ್ಲಿ ಎನ್‌ ಸಿಇಆರ್‌ಟಿ ಪಠ್ಯಕ್ರಮ ಅಳವಡಿಸಿಕೊಂಡಿರುವುದು ವಿದ್ಯಾರ್ಥಿಗಳಿಗೆ ಪೂರಕವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ, ಈ ಯಶಸ್ಸಿನ ಬೆನ್ನಲ್ಲೇ ನಾವು ವ್ಯವಸ್ಥೆಯ ನೈಜ ಸವಾಲುಗಳ ಕಡೆಗೂ ಕಣ್ಣು ಹಾಯಿಸಬೇಕಿದೆ. ಕೇವಲ ಖಾಸಗಿ ಕಾಲೇಜುಗಳ ಸ್ಟೇಟ್ ಸಿಲಬಸ್ ವಿದ್ಯಾರ್ಥಿಗಳು ಮಾತ್ರವಲ್ಲದೆ, ತಳಮಟ್ಟದ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳೂ ಈ ಮುಂಚೂಣಿಯ ರ್ಯಾಂಕುಗಳ ಕಿರೀಟ ಮುಡಿಯುವಂತಾಗಬೇಕು. ಆಗ ಮಾತ್ರ ಈ ಯಶಸ್ಸಿಗೆ ಸಾರ್ಥಕತೆ ಸಾಧ್ಯ.

ಅದಕ್ಕಾಗಿ, ಎನ್‌ ಸಿ ಇ ಆರ್‌ ಟಿ ಅಳವಡಿಕೆಯ ಜತೆಜತೆಯಲ್ಲೇ ರಾಜ್ಯದ ಶೈಕ್ಷಣಿಕ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಪಡಿಸಬೇಕಾದ ಅನಿವಾರ್ಯತೆ ಸರಕಾರದ ಮುಂದಿದೆ. ರಾಜ್ಯದ ಬಹುತೇಕ ಪದವಿ ಪೂರ್ವ ಸರಕಾರಿ ಕಾಲೇಜುಗಳು ಇಂದಿಗೂ ಉಪನ್ಯಾಸಕರ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು, ಗ್ರಾಮೀಣ ಭಾಗದ ಕಾಲೇಜುಗಳಿಗೆ ಆಧುನಿಕ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳ ಸೌಲಭ್ಯ ಒದಗಿಸುವುದು ಇಂದಿನ ತುರ್ತು ಅಗತ್ಯ. ಖಾಸಗಿ ತರಬೇತಿ ಕೇಂದ್ರಗಳ ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಬಡ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಸಿಗುವಂತಾಗಬೇಕು. ಈ ಬಾರಿಯ ಸಿಇಟಿ ಫಲಿತಾಂಶವು ರಾಜ್ಯ ಪಠ್ಯಕ್ರಮದ ಮೇಲಿನ ಗೌರವವನ್ನು ಮರುಸ್ಥಾಪಿಸಿದೆ ನಿಜ, ಆದರೆ ಈ ಹೆಮ್ಮೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕಾದರೆ ಸರಕಾರವು ಶೈಕ್ಷಣಿಕ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕಠಿಣ ಹೆಜ್ಜೆಗಳನ್ನು ಇಡಲೇಬೇಕಿದೆ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೮-೦೬-೨೦೨೬

ಚಿತ್ರ ಕೃಪೆ: ಮೀಡಿಯಂ ಜಾಲತಾಣ