ಈಗ ದಾಳಿಂಬೆ ಹಣ್ಣಿನ ಸೀಸನ್, ಎಲ್ಲಾ ಹಣ್ಣು-ತರಕಾರಿ ಅಂಗಡಿಗಳಲ್ಲಿ, ಬೀದಿಬದಿ ಹಣ್ಣು ವ್ಯಾಪಾರಿಗಳಲ್ಲಿ ಯತೇಚ್ಛ ದಾಳಿಂಬೆ ಹಣ್ಣು ಮಾರಾಟಕ್ಕೆ ಬಂದಿದೆ. ಬೆಲೆಯೂ ೧೦೦-೧೫೦/ ಕೆಜಿಗೆ ಇರುವುದರಿಂದ ಎಲ್ಲರೂ ಆರೋಗ್ಯಕ್ಕೆ ಉತ್ತಮವಾದ ಈ ಹಣ್ಣನ್ನು ಈಗಲೇ ಖರೀದಿಸಿ ಸವಿಯುವುದು ಉತ್ತಮ.
ದಾಳಿಂಬೆ ಇಂದು ತೋಟಗಾರಿಕಾ ಹಣ್ಣಿನ ಬೆಳೆಗಳಲ್ಲಿ ಅಧಿಕ ಆದಾಯ ತಂದು ಕೊಡುವ ಬೆಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯಿಂದ ಮೊದಲ್ಗೊಂಡು ನೆರೆಯ ಬಳ್ಳಾರಿ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಚಾಮರಾಜನಗರ,ಕೊಳ್ಳೇಗಾಲ ತನಕ ಬೆಳೆ ಪ್ರದೇಶ ವಿಸ್ತಾರವಾಗುತ್ತಿದೆ. ಹೊಸ ಹೊಸ ಬೆಳೆಗಾರರು, ಹೆಚ್ಚು ಹೆಚ್ಚು ಬೆಳೆ ಪ್ರದೇಶಗಳು ಸೇರ್ಪಡೆಯಾಗುತ್ತಿದ್ದು, ಇವರೆಲ್ಲರಿಗೂ ಗಣನೀಯ ಪ್ರಮಾಣದಲ್ಲಿ ನೆಡು ಸಾಮಾಗ್ರಿಯ ಅವಶ್ಯಕತೆ ಇರುತ್ತದೆ.
ದಾಳಿಂಬೆಯನ್ನು ಅಧಿಕ ಪ್ರಮಾಣದಲ್ಲಿ ಗೆಲ್ಲು ತುಂಡುಗಳಿಗೆ ಬೇರು ಬರಿಸುವ ಗೂಟಿ ಕಸಿ ವಿಧಾನದಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ. ಇತ್ತೀಚೆಗೆ ಅಂಗಾಶ ಕಸಿಯ ಮೂಲಕವೂ ಸಸ್ಯಾಭಿವೃದ್ದಿ ಮಾಡಲು ಪಾರಂಭಿಸಲಾಗಿದ್ದು, ೯೯% ಹೆಚ್ಚಿನ ಬೆಳೆಗಾರರು ಈವರೆಗೂ ಗೂಟಿ ಸಸ್ಯಗಳನ್ನೇ ಬಳಕೆ ಮಾಡುತ್ತಿದ್ದಾರೆ. ಎಲ್ಲಾ ಕಡೆಯ ಎಲ್ಲಾ ದಾಳಿಂಬೆ ಸಸ್ಯದಿಂದ ಸಸ್ಯೋತ್ಪಾದನೆ ಮಾಡಲಾಗುತ್ತಿಲ್ಲ. ಆರೋಗ್ಯವಂತ ಸಸಿಗಳೇ ದಾಳಿಂಬೆ ಕೃಷಿಯ ಮೂಲವಾದ ಕಾರಣ ಇಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಬಾರದು. ದಾಳಿಂಬೆಗೆ ಸಸ್ಯ ಮೂಲದಿಂದ ಬರುವ ವೈರಾಣು ಹಾಗೂ ದುಂಡಾಣು ಮತ್ತು ಸೊರಗು ರೋಗ ಮುಕ್ತವಾದ ಹೊಲದಿಂದ ಮಾತ್ರವೇ ಸಸ್ಯಾಭಿವೃದ್ದಿ ಮಾಡಲು ಸಾಧ್ಯ. ಇದಕ್ಕೆ ರೋಗ ಮುಕ್ತ ಪ್ರಮಾಣೀಕರಣ ವ್ಯವಸ್ಥೆ ಇದ್ದು, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ತಜ್ಞರು ಅಥವಾ ರಾಜ್ಯ ಕೃಷಿ ವಿಶ್ವ ವಿಧ್ಯಾನಿಲಯದ ತಜ್ಞರು ನಿರಂತರವಾಗಿ ಪರಿವೀಕ್ಷಣೆ ನಡೆಸಿ, ಅವರಿಂದ ಪ್ರಮಾಣಿತವಾದಾಗ ಮಾತ್ರ ಅಲ್ಲಿ ಸಸ್ಯಾಭಿವೃದ್ಧಿ ಮಾಡಿ ಮಾರಾಟ ಮಾಡಬಹುದು. ಈ ರೀತಿ ಪ್ರಮಾಣಿಕೃತವಾದ ಕೆಲವು ಸಸ್ಯೋತ್ಪಾದನಾ ನರ್ಸರಿಗಳು ನಮ್ಮ ರಾಜ್ಯದಲ್ಲಿ ಇದ್ದು ಇವರಿಂದ ಮಾತ್ರ ರೋಗ ಮುಕ್ತ ಸಸ್ಯಗಳನ್ನು ಪಡೆಯಲು ಸಾಧ್ಯ.
ಗೆಲ್ಲಿಗೆ ಬೇರು ಬರಿಸುವಿಕೆ: ಇದು ದಾಳಿಂಬೆ ಬೆಳೆಗಾರರಿಗೆಲ್ಲಾ ಸುಲಭವಾದ ವಿಧಾನ ಕೂಡಾ. ಈ ಸಸ್ಯೋತ್ಪಾದನೆಗೆ ಗರಿಷ್ಟ ಒಂದು ವರ್ಷ ಪ್ರಾಯ ಬೆಳೆದ ಗೆಲ್ಲನ್ನು ಮಾತ್ರ ಆಯ್ಕೆ ಮಾಡಬೇಕು. ಇದನ್ನು ತೆರೆದ ವಾತಾವರಣದಲ್ಲಿ ಬೇರು ಬರಿಸಲು ಸಾಧ್ಯವಿಲ್ಲ. ಅದಕ್ಕೆ ಪಾಲಿ ಹೌಸ್ ಬೇಕಾಗುತ್ತದೆ. ಪ್ರತೀ ವರ್ಷ ದಾಳಿಂಬೆ ಸಸಿಯನ್ನು ಪ್ರೂನಿಂಗ್ ಮಾಡಲಾಗುತ್ತದೆ. ಪ್ರೂನಿಂಗ್ ಮಾಡಲು ಬಳಕೆ ಮಾಡಿದ ಕಡ್ಡಿಗಳನ್ನೇ ಬಳಕೆ ಮಾಡಬಹುದು. ಯಾವಾಗ ಬೆಳೆ ಇಲ್ಲದೆ ಸಸಿ ವಿರಾಮದಲ್ಲಿರುತ್ತದೆಯೋ ಆ ಸಮಯದಲ್ಲಿ ಪಡೆದ ಗೆಲ್ಲುಗಳಾಗಿರಬೇಕು. ೬-೮ ತಿಂಗಳು ಬೆಳೆದ, ೦.೬ ರಿಂದ ೧.೨ ಸೆಂ. ಮೀ. ದಪ್ಪದ, ೨೦-೨೫ ಸೆಂ. ಮೀ. ಉದ್ದದ ಗೆಲ್ಲುಗಳಾಗಿರಬೇಕು. ಇದನ್ನು ೫ ನಿಮಿಷ ಕಾಲ ೧ಗ್ರಾಂ ಪ್ರಮಾಣದ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದಿ ಸ್ಟೆರಿಲೈಸ್ ಮಾಡಿ. ನಂತರ ೫೨-೫೩ ಡಿಗ್ರಿ ಉಷ್ಣತೆಯ ಬಿಸಿ ನೀರಿನಲ್ಲಿ ಅದ್ದಿ ಯಾವುದೇ ರೋಗ ಕಾರಕಗಳಿರದಂತೆ ಮಾಡಿಕೊಳ್ಳಿ.
ತುಂಡು ಮಾಡಿ ಸಿದ್ದಪಡಿಸಿಟ್ಟುಕೊಂಡ ಕಡ್ಡಿಯ ಬುಡವನ್ನು ೩ ರಿಂದ ೫ ನಿಮಿಷ ಕಾಲ ಇಂಡೋಲ್ ಬ್ಯೂಟ್ರಿಕ್ ಎಸಿಡ್ನಲ್ಲಿ (೧ ಲೀ ನೀರಿಗೆ ೨.೫ ರಿಂದ ೫ ಗ್ರಾಂ ತನಕ ಮಿಶ್ರಣ ಮಾಡಿ) ಅದ್ದಿ ಬೇರು ಬರಲು ಪ್ರಚೋದಿಸಬೇಕು. ಇದನ್ನು ನಂತರ ಕೋಕೋ ಪೀಟ್ ತುಂಬಿದ ರೂಟ್ ಟ್ರೈನರ್ ಟ್ರೇಯಲ್ಲಿ ಹಾಕಿ ಪಾಲಿ ಹೌಸ್ ಒಳಗೆ ೪೦-೬೦ ದಿನ ಕಾಲ ಇಟ್ಟಾಗ ಅದರಲ್ಲಿ ಬೇರು ಬಂದು ಚಿಗುರುತ್ತದೆ. ನಂತರ ಅದನ್ನು ಪಾಲಿ ಹೌಸ್ ನಿಂದ ಹೊರಗೆ ತಂದು ೫೦% ನೆರಳಿನಲ್ಲಿ ಇಡಬೇಕು. ನಂತರ ೫೦ ದಿನ ಕಳೆದು ನಾಟಿ ಮಾಡಬಹುದು. ಇಲ್ಲವೇ ದೊಡ್ದ ಪಾಲೀ ಬ್ಯಾಗಿಗೆ ವರ್ಗಾಯಿಸಬೇಕು.
ಕಸಿ ಮಾಡುವಿಕೆ: ಮೃದು ಕಾಂಡ ಕಸಿವಿಧಾನದಂತೆ ದಾಳಿಂಬೆಯನ್ನು ಅದೇ ಜಾತಿಯ ಸಸ್ಯಕ್ಕೆ ಕಸಿ ಮಾಡಬಹುದು. ಕಸಿಗೆ ಬೇರು ಸಸ್ಯವಾಗಿ ಗಣೇಶ್ ಇಲ್ಲವೇ ಭಗವಾ ತಳಿಯ ಸಸಿಯನ್ನು ಬಳಸಬೇಕು. ೧ ರಿಂದ ೧-೧/೨ ವರ್ಷದ ಬೇರು ಸಸ್ಯ ಬೇಕು. ಚಳಿ ಕಳೆದ ಮೇಲೆ ಕಸಿ ಮಾಡಬೇಕು. ೬ ರಿಂದ ೧೨ ತಿಂಗಳು ಪ್ರಾಯದ ಕಸಿ ಕಡ್ಡಿಯನ್ನು ಆಯ್ಕೆ ಮಾಡಬೇಕು. ಬೇರು ಸಸ್ಯದ ಬುಡದಿಂದ ೨೫-೩೦ ಸೆಂ. ಮೀ ಎತ್ತರಕ್ಕೆ ತುಂಡು ಮಾಡಿ ಅದನ್ನು ೧-೧.೫ ಇಂಚು ಸಿಗಿದು, ಆ ಭಾಗಕ್ಕೆ ಕಸಿ ಕಡ್ಡಿಯ ಭಾಗವನ್ನು ವಿ ಆಕಾರದಲ್ಲಿ ಕತ್ತರಿಸಿ ಅದರ ಎಡೆಗೆ ತುರುಕಿ ಆ ಭಾಗವನ್ನು ಕಸಿ ಪಟ್ಟಿಯಿಂದ ಗಾಳಿಯಾಡಂತೆ ಕಟ್ಟಬೇಕು. ಕಸಿ ಕಡ್ಡಿ ತುರುಕಿದ ಭಾಗಕ್ಕೆ ಒಂದು ಕಸಿ ಕೊಟ್ಟೆಯನ್ನು ಮುಚ್ಚಿ ಪಾಲಿ ಹೌಸ್ ನಲ್ಲಿ ೨೫-೩೦ ದಿನ ಇಟ್ಟಾಗ ಕಸಿ ಜೋಡಣೆ ಭಾಗ ಸೇರಿಕೊಳ್ಳುತ್ತದೆ. ಇದನ್ನೂ ಬೆಳೆಗಾರರು ಅವರವರ ಹೊಲದಲ್ಲೇ ಮಾಡಿಕೊಳ್ಳಬಹುದು.
ಗೂಟಿ ವಿಧಾನ: ಭಾರತದಾದ್ಯಂತ ಹೆಚ್ಚಿನ ದಾಳಿಂಬೆ ಬೆಳೆಗಾರರು ಈ ವಿಧಾನವನ್ನೇ ಅನುಸರಿಸುತ್ತಿದ್ದು, ಅನುಭವ ಇದ್ದರೆ ಇದು ಉತ್ತಮ ಕಸಿ ವಿಧಾನ. ದಾಳಿಂಬೆಯ ಗಿಡದ ಮೇಲ್ಮುಖ ಗೆಲ್ಲುಗಳ ದಪ್ಪ ೦.೮ ಸೆಂ. ಮೀ. ನಿಂದ ೧.೫ ಸೆಂ. ಮೀ. ಇರುವ ಗೆಲ್ಲುಗಳಿಗೆ ೧/೨ ಸೆಂ. ಮೀ. ಅಗಲಕ್ಕೆ ಮೇಲೆ ಮತ್ತು ಕೆಳಗೆ ಗಚ್ಚು ಹಾಕಿ ಸಿಪ್ಪೆಯನ್ನು ತೆಗೆಯಿರಿ. ಈ ಭಾಗಕ್ಕೆ ಮೇಲೆ ೨೦೦೦ -೩೦೦೦ ಪಿ ಪಿ ಎಂ ಸಾಂದ್ರತೆಯ ಬೇರು ಬರಿಸುವ ಹಾರ್ಮೋನು ( ಐಬಿಎ) ಹಚ್ಚಿರಿ. ಒಂದು ಪಾಲಿಥೀನ್ ಕಾಗದಕ್ಕೆ (೬ X ೬ ಇಂಚು ಉದ್ದ ಅಗಲ) ಸ್ಟೆರಿಲೈಸ್ ಮಾಡಲಾದ ತೆಂಗಿನ ನಾರಿನ ಹುಡಿ ಹಾಕಿ, ಗಚ್ಚು ತೆಗೆದ ಭಾಗಕ್ಕೆ ಸುತ್ತಲೂ ಬರುವಂತೆ ಇಟ್ಟು, ಕೆಳಗೆ, ಮೇಲೆ ಮತ್ತು ಮಧ್ಯೆ ಬಿಗಿಯಾಗಿ ಕಟ್ಟು ಹಾಕಿರಿ. ಹೀಗೆ ೬ ಇಂಚು ಬಿಟ್ಟು ಮತ್ತೆ ಮತ್ತೊಂದು ಗಚ್ಚು ಹಾಕಿ ಕಸಿ ಮಾಡಬಹುದು. ಗೆಲ್ಲಿನ ಉದ್ದಕ್ಕನುಗುಣವಾಗಿ ೮-೧೦ ತನಕವೂ ಗೂಟಿ ಕಸಿ ಮಾಡಬಹುದು. ವಾರಕ್ಕೆ ಒಮ್ಮೆ ಅಥವಾ ಎರಡು ಭಾರಿ ಪವರ್ ಸ್ಪ್ರೇಯರ್ ಮೂಲಕ ನೀರು ಸಿಂಪಡಿಸುತ್ತಿದ್ದರೆ ೭೫ -೯೦ ದಿನಕ್ಕೆ ಬೇರು ಬರುತ್ತದೆ. ನಂತರ ಗೆಲ್ಲನ್ನು ತುಂಡು ಮಾಡಿ ಪಾಲಿಥೀನ್ ಹಾಳೆ ಬಿಚ್ಚಿ ಅದನ್ನು ಬೇರೆ ಮಾಧ್ಯಮ ತುಂಬಿದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಬೆಳೆಸಬೇಕು. ಅಲ್ಲಿ ಸುಮಾರು ೧-೨ ತಿಂಗಳು ಬೆಳೆದ ಮೇಲೆ ನಾಟಿ ಮಾಡಬಹುದು. ಈ ಕಸಿಗೆ ಜೂನ್ ತಿಂಗಳಿನಿಂದ ಆಗಸ್ಟ್ ತನಕದ ಅವಧಿ ಹೆಚ್ಚು ಸೂಕ್ತ. ನಂತರ ನೀರು ಸ್ಪ್ರೇ ಮಾಡಿ ಮಾಡಬೇಕು.
ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!