ಈಗಷ್ಟೇ ಸೀತಾಫಲ ಮತ್ತು ರಾಮಫಲದ ಸೀಸನ್ ಪ್ರಾರಂಭವಾಗತೊಡಗಿದೆ. ಸೀತಾಫಲ ಮತ್ತು ರಾಮಫಲವು ಚೆನ್ನಾಗಿ ಹಣ್ಣಾದಾಗ ಬಹಳ ಸೊಗಸಾಗಿರುತ್ತದೆ. ಅದ್ಭುತ ರುಚಿ ಮತ್ತು ಸುವಾಸನೆ. ಸ್ವಲ್ಪ ಮಟ್ಟಿಗೆ ಬೀಜದ ತೊಂದರೆ ಹೊರತು ಪಡಿಸಿದರೆ ತಿನ್ನಲು ರುಚಿಕರ. ಸೀತಾಫಲದಲ್ಲಿ ಈಗ ಹೈಬ್ರಿಡ್ ಸೀತಾಫಲ (ಗೋಲ್ಡನ್) ಮಾರುಕಟ್ಟೆಗೆ ಬಂದಿದೆ. ನೋಡಲು ಸೊಗಸಾಗಿ, ದೊಡ್ದ ಗಾತ್ರ ಹೊಂದಿದ್ದರೂ ಒಳ ತಿರುಳು ಅಷ್ಟಾಗಿ ಚೆನ್ನಾಗಿಲ್ಲ. ಮಾಮೂಲು ನಮ್ಮ ಸ್ಥಳೀಯ ಸೀತಾಫಲವೇ ರುಚಿಯಲ್ಲಿ ನಂಬರ್ ಒನ್ ಎನ್ನಬಹುದು.
ಸೀತಾಫಲ ಹಣ್ಣು ರುಚಿಯ ಜೊತೆಗೆ ಪೌಷ್ಟಿಕಾಂಶಗಳಿಗಾಗಿಯೂ ಪ್ರಸಿದ್ಧವಾಗಿದ್ದು, ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಇಷ್ಟಪಡುವ ಹಣ್ಣುಗಳಲ್ಲೊಂದು. ಆದರೆ ಮಧುಮೇಹ (ಸಕ್ಕರೆ ಕಾಯಿಲೆ/ ಡಯಾಬಿಟೀಸ್) ಇರುವವರು ಸೀತಾಫಲ ತಿನ್ನಬಹುದೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತದೆ. ತಜ್ಞರ ಪ್ರಕಾರ, ಸೀತಾಫಲದಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಇರುವುದರಿಂದ ಮಧುಮೇಹಿಗಳು ಇದನ್ನು ಎಚ್ಚರಿಕೆಯಿಂದ ಸೇವಿಸಬೇಕು. ಆದರೆ ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ, ಸರಿಯಾದ ಪ್ರಮಾಣ ಮತ್ತು ಸಮಯದಲ್ಲಿ ಸೇವಿಸಿದರೆ ಇದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.
ಪೌಷ್ಟಿಕಾಂಶಗಳ ದೃಷ್ಟಿಯಿಂದ ನೋಡಿದರೆ, ಸೀತಾಫಲದಲ್ಲಿ ವಿಟಮಿನ್ C, ವಿಟಮಿನ್ A, ಪೊಟ್ಯಾಸಿಯಮ್, ಮೆಗ್ನಿಸಿಯಮ್ ಮತ್ತು ಕಬ್ಬಿಣ ಸಮೃದ್ಧವಾಗಿದೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ. ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತವೆ. ಸೀತಾಫಲದಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಧಾನವಾಗಿ ಏರಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಮುಖ್ಯವಾಗಿದೆ.
ಆದರೆ ಸೀತಾಫಲದಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸ್ವಲ್ಪ ಹೆಚ್ಚಿರುವುದರಿಂದ ನಿಯಂತ್ರಿತ ಸೇವನೆ ಅಗತ್ಯ. ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸುವುದನ್ನು ತಪ್ಪಿಸಿ, ಒಂದು ಸಣ್ಣ ಗಾತ್ರದ ಸೀತಾಫಲವನ್ನು 2 ರಿಂದ 3 ದಿನಗಳಿಗೊಮ್ಮೆ ಮಾತ್ರ ಸೇವಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅದೂ ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಊಟದ ನಂತರ ಸೇವಿಸುವುದು ಸುರಕ್ಷಿತ ಎಂದು ತಜ್ಞರು ಸಲಹೆಯನ್ನೂ ನೀಡುತ್ತಾರೆ. ಹೀಗೆ ಮಾಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ತಕ್ಷಣ ಏರಿಕೆಯಾಗುವುದನ್ನು ತಪ್ಪಿಸಬಹುದು. ಇನ್ನೂ ಒಂದು ಪ್ರಮುಖ ಅಂಶವೆಂದರೆ ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಸೀತಾಫಲ ಸೇವನೆಯಿಂದ ಯಾವುದೇ ಸಮಸ್ಯೆ ಕಾಣಿಸದಿದ್ದರೂ, ಇನ್ನು ಕೆಲವರಲ್ಲಿ ಸಕ್ಕರೆ ಮಟ್ಟ ಏರಿಕೆಯಾಗಬಹುದು. ಆದ್ದರಿಂದ ಸೀತಾಫಲ ಸೇವಿಸುವ ಮೊದಲು ಮತ್ತು ನಂತರ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಒಳಿತು. ಅದು ನಿಯಂತ್ರಣದಲ್ಲಿದ್ದರೆ ಮಾತ್ರ ಮುಂದುವರಿಸಿ ಸೇವಿಸಬಹುದು. ಒಟ್ಟಾರೆಯಾಗಿ ಮಧುಮೇಹಿಗಳು ಸೀತಾಫಲವನ್ನು ಸಂಪೂರ್ಣವಾಗಿ ಬಿಡಬೇಕಾದ ಅಗತ್ಯವಿಲ್ಲ. ಆದರೆ ನಿಯಮಿತ ಪ್ರಮಾಣ, ಸರಿಯಾದ ಸಮಯ ಮತ್ತು ವೈದ್ಯರ ಸಲಹೆಯನ್ನು ಪಾಲಿಸಿಕೊಂಡು ಸೇವಿಸಿದರೆ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಸೀತಾಫಲ ಹಣ್ಣಿನ ರಸವನ್ನು ಮಾಡಿ ಕುಡಿಯುದಕ್ಕಿಂದ ಅದನ್ನು ನೇರವಾಗಿ ಸೇವನೆ ಮಾಡುವುದು ಉತ್ತಮ. ಈಗ ಮಿಲ್ಕ್ ಶೇಕ್, ಐಸ್ ಕ್ರೀಂ ಎಲ್ಲವೂ ಮಾರುಕಟ್ಟೆಗೆ ಬಂದಿದೆ. ಸೀತಾಫಲದಂತೆಯೇ ರುಚಿಕರ ರಾಮಫಲ, ಹನುಮಫಲ, ಲಕ್ಷ್ಮಣ ಫಲ ಎಲ್ಲವೂ ಆರೋಗ್ಯಕ್ಕೆ ಬಹಳ ಉತ್ತಮ. ಆದರೆ ಮಧುಮೇಹಿಗಳು ಮಾತ್ರ ತಮ್ಮ ಬಾಯಿ ರುಚಿಯನ್ನು ನಿಯಂತ್ರಿಸಿದರೆ ಸಾಕು. ಅಲ್ಪ ಪ್ರಮಾಣದಲ್ಲಿ, ವೈದ್ಯರ ಸಲಹೆ ಮೇರೆಗೆ, ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರಿಶೀಲಿಸಿಕೊಂಡು ತಿನ್ನಬಹುದಾಗಿದೆ.
(ಆಧಾರ ಮಾಹಿತಿ)
ಚಿತ್ರ ಕೃಪೆ: ಅಂತರ್ಜಾಲ ತಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!