ಕೆಲವೆಡೆ ಸಾಂಬಾರು ಸೌತೆ, ಕೆಲವೆಡೆ ಸೌತೆಕಾಯಿ ಮತ್ತು ಕೆಲವೆಡೆ ಮಲಬಾರ್ ಸೌತೆ ಎಂದು ಕರೆಯಲ್ಪಡುವ ಈ ತರಕಾರಿಯ ಸಂಬಾರು ಮಾಡಿದರೆ ಬಹಳ ರುಚಿಕರ. ಸೌತೆ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ ಕೆಲವರು ಮನೆ ಬಳಕೆಗೆ ಬೇಕಾಗುವಷ್ಟು ಬೆಳೆಯುವವರಾದರೆ ಮತ್ತೆ ಕೆಲವರು ಕೃಷಿ ಮಾಡಿ ಮಾರಾಟಕ್ಕೆ ಒಯ್ಯುತ್ತಾರೆ. ಟೊಮೇಟೋ, ಆಲೂಗಡ್ಡೆ ನಂತರ ಅತೀ ಹೆಚ್ಚು ಬಳಕೆಯಾಗುವ ತರಕಾರಿ ಸೌತೆ. ಈ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ.
ಸಾಂಬಾರು ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆಯಾದರೆ ಮತ್ತೊಂದು ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಕೆಲವು ಸ್ಥಳೀಯ ತಳಿಗಳನ್ನು ಕಾಣಬಹುದು.
ಸೌತೆ ಬೇಸಾಯವನ್ನು ಸುಮಾರಾಗಿ ಫೆಬ್ರವರಿ ತಿಂಗಳು ಬಿತ್ತನೆ ಮಾಡಿದರೆ ಒಳ್ಳೆಯದು. ಆ ಸಮಯಕ್ಕೆ ಚಳಿ ಕಡಿಮೆಯಾಗಿರುತ್ತದೆ. ಬಳ್ಳಿ ಬೆಳವಣಿಗೆಗೆ ಇದು ಉತ್ತಮ ಕಾಲ. ಬಿತ್ತನೆ ಮಾಡುವಾಗ ಬೀಜ ಹಾಕುವ ಸ್ಥಳದಲ್ಲಿ ಸುಮಾರು ೧ ಕಿಲೋ ಪ್ರಮಾಣದಷ್ಟು ಕಳಿತ ಸುಮಾರು ೬೦ಕ್ಕೂ ಹೆಚ್ಚು ತೇವಾಂಶ ಹೊಂದಿದ ಕೊಟ್ಟಿಗೆ ಗೊಬ್ಬರವನ್ನು ಹಾಕಿ ನಾಟಿ ನಾಟಿ ಮಾಡಬೇಕು. ಸಸಿಗಳು ಹುಟ್ಟಿದ ಮೇಲೆ ಹೆಚ್ಚು ಸಸಿಗಳನ್ನು ಉಳಿಸದೇ ಒಂದು ಬುಡದಲ್ಲಿ ೧-೨ ಸಸಿಗಳನ್ನು ಮಾತ್ರ ಉಳಿಸಿಕೊಂಡು ಉಳಿದವುಗಳನ್ನು ತೆಗೆಯಬೇಕು. ಸಸಿಗೆ ಸುಮಾರು ೮ ಎಲೆ ಬರುವುದರ ಒಳಗೆ ಬುಡಕ್ಕೆ ಮಣ್ಣು ಏರಿಸಬೇಕು ಮಣ್ಣು ಏರಿಸುವಾಗ ಮತ್ತೆ ಸಸಿಯ ಬುಡ ಭಾಗಕ್ಕೆ ಸಮೀಪ ಇರುವಂತೆ ೩-೪ ಕಿಲೋ ಪ್ರಮಾಣದಷ್ಟಾನ್ನಾದರೂ ಕಳಿತ ಕಾಂಪೋಸ್ಟು ಗೊಬ್ಬರವನ್ನು ಕೊಡಬೇಕು. ಹದ ಕಳಿತ ಗೊಬ್ಬರ ಕೊಡಬಾರದು. ಇದು ಲಭ್ಯವಾಗುವಾಗ ಸಮಯ ಮೀರುತ್ತದೆ.

ಮಣ್ಣು ಏರಿಸಿ ಮತ್ತೆ ೩-೪ ಎಲೆಗಳು ಬಂದ ತಕ್ಷಣ ಬಳ್ಳಿಯ ತುದಿಯನ್ನು ಚಿವುಟಿ ಅಲ್ಲಿಗೆ ಮುಖ್ಯ ಬಳ್ಳಿಯ ಬೆಳವಣಿಗೆಯನ್ನು ನಿಲ್ಲಿಸಬೇಕು. ಆಗ ಕವಲು ಮೊಗ್ಗುಗಳು ಒಡೆಯುತ್ತವೆ. ಕವಲು ಮೊಗ್ಗುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಆಗುವ ಕಾರಣ ಇಳುವರಿ ಹೆಚ್ಚು ಪಡೆಯಲಿಕ್ಕೆ ಸಾಧ್ಯವಾಗುತ್ತದೆ. ಮುಖ್ಯ ಬಳ್ಳಿಯನ್ನು ಉದ್ದಕ್ಕೆ ಬೆಳೆಯಲು ಬಿಟ್ಟಾಗ ಅದು ತುಂಬಾ ಉದ್ದದ ತನಕ ಬೆಳವಣಿಗೆ ಆದ ತರುವಾಯ ಹೂ ಮಿಡಿ ಬಿಡಲು ಪ್ರಾರಂಭವಾಗುತ್ತದೆ. ಕವಲು ಬಳ್ಳಿಗಳಲ್ಲಿ ಸುಮಾರಾಗಿ ೧ ರ ಪ್ರಮಾಣದಲ್ಲಿ ಗಂಡು ಹೆಣ್ಣು ಹೂವುಗಳು ಬಿಡುತ್ತವೆ ಹೆಣ್ಣು ಹೂವುಗಳು ಹೆಚ್ಚು ಬಂದಷ್ಟು ಇಳುವರಿ ಹೆಚ್ಚು ಬರುತ್ತದೆ. ಅವುಗಳೆಲ್ಲದರ ಬೆಳವಣಿಗೆ ಉತ್ತಮವಾಗಿರಬೇಕಾದರೆ ನಿರಂತರವಾಗಿ ಪೋಷಕಾಂಶಗಳನ್ನು ಒದಗಿಸುತ್ತಾ ಇರಬೇಕು. ಸೌತೆ ಬೆಳೆಗೆ ನೆಡುವಾಗ ಮತ್ತು ಮಣ್ಣು ಏರಿಸುವಾಗ ಹಾಕುವ ಗೊಬ್ಬರ ಸಾಕಾಗದು. ನಂತರ ಪ್ರತೀ ವಾರಕ್ಕೊಮ್ಮೆಯಂತೆ ನಿಯಮಿತ ಪ್ರಮಾಣದಲ್ಲಿ ಪೋಷಕಗಳನ್ನು ಒದಗಿಸುತ್ತಾ ಇದ್ದರೆ, ಎಲ್ಲಾ ಕಾಯಿಗಳು ಏಕಪ್ರಕಾರವಾಗಿ ಬೆಳವಣಿಗೆ ಹೊಂದುತ್ತವೆ.
ಹೂ ಬಿಡುವ ಸಮಯದ ತನಕ ಸಾರಜನಕ-ರಂಜಕ ಗೊಬ್ಬರಗಳನ್ನು ಕೊಡುತ್ತಾ ಹೂ ಬಿಡಲು ಪ್ರಾರಂಭವಾದ ತಕ್ಷಣದಿಂದಲೇ ಪೊಟ್ಯಾಶಿಯಂ ಗೊಬ್ಬರವನ್ನು ಕೊಡಬೇಕು. ಹಾಗೆಂದು ನಿರಂತರವಾಗಿ ಬಡುತ್ತಲೇ ಇರುವ ಕಾರಣ ಮೂರೂ ಪೋಷಕಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೊಡುತ್ತಿರಬೇಕು. ಕಾಯಿಗಳು ಬೆಳವಣಿಗೆ ಪ್ರಾರಂಭವಾಗುವ ಸಮಯದಲ್ಲಿ ಪೊಟಾಶಿಯಂ ಗೊಬ್ಬರ ಹೆಚ್ಚು ಕೊಡುವುದರಿಂದ ಕಾಯಿಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಕಾಯಿಗಳ ಕಾಪಾಡುವ ಶಕ್ತಿ ಹೆಚ್ಚುತ್ತದೆ ೬೦೦-೭೦೦ ಗ್ರಾಂ ಯೂರಿಯಾ. ೫೦೦ ಗ್ರಾಂ ಡಿಎಪಿ ಮತ್ತು ೧ ಕಿಲೋ ಪೊಟ್ಯಾಷ್ ಗೊಬ್ಬರವನ್ನು ೨೦೦ಲೀ. ನೀರಿನಲ್ಲಿ ಕರಗಿಸಿ. ಸಸಿಗಳ ಬುಡಕ್ಕೆ ವಾರಕ್ಕೊಂದಾವರ್ತಿ ಸುಮಾರು ೧-೨ಲೀ ಪ್ರಮಾಣದಷ್ಟು ಹಾಕುತ್ತಾ ಇದ್ದರೆ ಪೋಷಕಗಳು ಪೂರ್ಣ ಪ್ರಮಾಣದಲ್ಲಿ ಸಸ್ಯಗಳಿಗೆ ಲಭ್ಯವಾಗಿ ಎಲ್ಲಾ ಕಾಯಿಗಳೂ ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ. ಕೊನೆ ತನಕವೂ ಏಕ ಪ್ರಕಾರದ ಕಾಯಿಗಳನ್ನು ಪಡೆಯಲು ಪೋಷಕಾಂಶಗಳನ್ನು ನಿರಂತರವಾಗಿ ಪೂರೈಕೆ ಮಾಡುತ್ತಾ ಇರಬೇಕು. ರಾಸಾಯನಿಕ ಗೊಬ್ಬರವನ್ನು ಬಳಸದೇ ಬೆಳೆಯುವವರು ತೀಕ್ಷ್ಣ ಸಾವಯವ ಗೊಬ್ಬರಗಳಾದ ಹರಳು ಹಿಂಡಿ, ಬೇವಿನ ಹಿಂಡಿ, ಹೊಂಗೆ ಹಿಂಡಿ ಅಥವಾ ಇನ್ಯಾವುದಾದರೂ ಹಿಂಡಿ ಗೊಬ್ಬರ ಮತ್ತು ಮರ ಸುಟ್ಟ ಬೂದಿಯನ್ನು ನಿರಂತರವಾಗಿ ಕೊಡುತ್ತಾ ಉತ್ತಮ ಕಾಯಿಗಳನ್ನು ಪಡೆಯಬಹುದು.
ಸೌತೆಯಲ್ಲಿ ಮಳೆಗಾಲ ಬರುವ ತನಕವೂ ಇಳುವರಿಯನ್ನು ಪಡೆಯುತ್ತಾ ಇರಬಹುದು. ಪೋಷಕಗಳ ನಿರಂತರ ಪೂರೈಕೆಯಿಂದ ಬಳ್ಳಿ ಬೇಗ ಒಣಗಲಾರದು. ಹೊಸ ಹೊಸ ಚಿಗುರು ಬರುತ್ತಾ ಕಾಯಿ ಬಿಡುತ್ತಾ ಇರುತ್ತದೆ. ಕಳೆ ನಿಯಂತ್ರಣಕ್ಕೆ ಮಲ್ಚಿಂಗ್ ಶೀಟು ಹಾಕಿ ಬೆಳೆಸುವುದು ಸೂಕ್ತ ನೀರಾವರಿ ಮಾಡುವಾಗ ಮಿಡಿ ಮತ್ತು ಕಾಯಿಗಳಗೆ ನೀರು ತಗಲುವುದರಿಂದ ಕಾಯಿ ಕೊಳೆಯುವಿಕೆ ಹೆಚ್ಚಾಗುತ್ತದೆ. ಇದಕ್ಕೆ ಮಲ್ಚಿಂಗ್ ಶೀಟು ಮತ್ತು ಹನಿ ನೀರಾವರಿ ಸೂಕ್ತ.
ಚಿತ್ರಗಳು ಮತ್ತು ಮಾಹಿತಿ - ರಾಧಾಕೃಷ್ಣ ಹೊಳ್ಳ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!