ನಿಮ್ಮ ಹಸುವಿನ ಶರೀರ ಸದೃಢತೆಯನ್ನು ಅವಲಂಭಿಸಿ ಆ ಹಸು ವರ್ಷಕ್ಕೊಂದು ಕರು ಹಾಕಲು ಸಮರ್ಥವಾಗಿದೆ ಎಂದು ತಿಳಿಯಬಹುದು. ಹೈನುಗಾರಿಕೆಯಲ್ಲಿ ಅಧಿಕ ಹಾಲಿನ ಉತ್ಪಾದನೆ ಪ್ರಥಮ ಗುರಿ. ಇದಕ್ಕೆ ಪೂರಕವಾದುದು ಹೈನು ರಾಸುಗಳ ಶರೀರ ಸದೃಢತೆ. ವರ್ಷಕ್ಕೊಂದು ಕರು ಹಾಕುವ ಹಸುವಿನಿಂದ ಅಧಿಕ ಹಾಲಿನ ಉತ್ಪಾದನೆಯಾಗುತ್ತದೆ. ಈ ಸಂತಾನೋತ್ಪತ್ತಿಗೆ ಧಕ್ಕೆ ತರುವ ಕಾರಣಗಳಲ್ಲಿ ಒಂದು ಶಾರೀರಿಕ ಸದೃಢತೆ. ವರ್ಷಕ್ಕೊಮ್ಮೆ ಕರು ಹಾಕಬೇಕಾದರೆ ಹಸು ಕರು ಹಾಕಿದ ೭೦-೮೦ ದಿನದೊಳಗೆ, ಎಮ್ಮೆ ೪೭-೫೦ ದಿನದೊಳಗೆ ಮತ್ತೆ ಗರ್ಭ ಧರಿಸಬೇಕು.

ಕರು ಹಾಕಿದ ಪಶುವಿಗೆ ದಿನದಲ್ಲಿ ನಾವು ತಿನ್ನಿಸುವ ಹುಲ್ಲು ಮತ್ತು ಪಶು ಆಹಾರ ಅದು ಆರೋಗ್ಯವಾಗಿರಲು, ಹೆಚ್ಚು ಹಾಲು ಉತ್ಪಾದಿಸಲು ಮತ್ತು ಬೇಗ ಬೆದೆಗೆ ಬರಲು ಸಾಕಾಗುವುದಿಲ್ಲ. ಆದ್ದರಿಂದ ಕರು ಹಾಕಿದ ಮೇಲೆ ಹಸು ಮತ್ತೆ ಬೇಗ ಬೆದೆಗೆ ಬರಬೇಕಾದರೆ ಗಬ್ಬವಿದ್ದ ಕೊನೆಯ ೨ ತಿಂಗಳಲ್ಲಿ ಕೊಬ್ಬು ಹಿಡಿಯಬೇಕು. ಕರು ಹಾಕಿದ ನಂತರ ಬೇಗ ಬೆದೆಗೆ ಬರಲು ಗರ್ಭಕೋಶ ಮತ್ತೆ ಪುನಃ ಮೊದಲಿನ ಸ್ಥಿತಿಗೆ ಬರಲು ಶರೀರ ಕ್ಷೀಣವಾಗಬಾರದು. ಅಂದರೆ ಶರೀರದ ಮಾಂಸ ಕಡಿಮೆಯಾಗಬಾರದು. ಶರೀರದಲ್ಲಿ ಮಾಂಸ ಕೂಡಬೇಕು. ಶರೀರದಲ್ಲಿ ಕೊಬ್ಬು, ಹೊಟ್ಟೆ ಭಾಗದ ಕರುಳಿನ ಮೇಲೆ, ಮಾಂಸ ಪದರಗಳ ಮಧ್ಯೆ, ಚರ್ಮದ ಅಡಿಯಲ್ಲಿ ಸೇರಿರುತ್ತದೆ. ಶರೀರದ ಚರ್ಮದ ಕೆಳಗೆ ಸೇರುವ ಕೊಬ್ಬು ಮತ್ತು ಕರುಳಿನ ಮೇಲೆ ಸೇರುವ ಕೊಬ್ಬಿಗೆ ಅವಿನಾಭಾವ ಸಂಬಂಧವಿದೆ. ಕರು ಹಾಕಿದ ನಂತರ ೩೫-೫೦ ದಿನಗಳವರೆಗೆ ಹಾಲಿನ ಇಳುವರಿ ಹೆಚ್ಚು ಇರುತ್ತದೆ. ನಂತರ ಪ್ರತೀ ವಾರಕ್ಕೆ ೨.೫%ದಷ್ಟು ಕಡಿಮೆಯಾಗುತ್ತಾ ಬರುತ್ತದೆ. ಇದೇ ಸಮಯದಲ್ಲಿ ತೂಕವೂ ಸಹ ಕಡಿಮೆಯಾಗಲಾರಂಭಿಸುತ್ತದೆ. ತೂಕ ಕಡಿಮೆಯಾಗುವುದೆಂದರೆ ಮಾಂಸ ಕರಗಿ ಹಾಲು ಉತ್ಪಾದನೆಗೆ ವ್ಯಯವಾಗುವುದು. ಪೋಷಣೆ ಕಡಿಮೆಯಾದರೆ ದಿನೇ ದಿನೇ ಶರೀರ ಕ್ಷೀಣವಾಗುತ್ತದೆ. ಹೀಗೆ ಬಹುಕಾಲ ಶರೀರ ಕ್ಷೀಣವಾದರೆ ಹಸು ಬೆದೆಗೆ ಬರುವುದಿಲ್ಲ. ಬಂದರೂ ಗುರುತಿಸಲು ಸಾಧ್ಯವಾಗುವುದಿಲ್ಲ. ಮೂಕಬೆದೆ ಇರುತ್ತದೆ. ಗುರುತಿಸಿ ಗರ್ಭಧಾರಣೆ ಮಾಡಿಸಿದರೂ ಗಬ್ಬ ನಿಲ್ಲುವುದಿಲ್ಲ.

09.jpg

ಶರೀರದಾರ್ಡ್ಯತೆ ಹೆಚ್ಚಿಸಲು ಆರೈಕೆ : ಪ್ರತೀ ರಾಸುವಿಗೆ ಮಾಮೂಲಿ ಕೊಡುವ ಆಹಾರಕ್ಕಿಂತ ಮುಕ್ಕಾಲು ಕಿಲೋಗ್ರಾಂ. ಹೆಚ್ಚುವರಿ ಪಶು ಆಹಾರ ಕೊಡಬೇಕು. ೭ ತಿಂಗಳ ನಂತರ ಕರು ಹಾಕುವ ವರೆಗೂ ದಿನಕ್ಕೆ ೧ ಕಿ.ಗ್ರಾಂ ಹೆಚ್ಚುವರಿ ಕೊಡಬೇಕು, ಗಬ್ಬದಲ್ಲಿ 2 ಕರುಗಳು ಇದ್ದರೆ, ಕ್ರಮವಾಗಿ ೧ ಕಿಲೋ ೨ ಕಿಲೋ ಆಹಾರ ಹೆಚ್ಚು ಕೊಡಬೇಕು. ಈ ಹೆಚ್ಚಿನ ಪೋಷಣೆ ಮುಂದಿನ ಕರಾವಿನಲ್ಲಿ ಹಾಲು ಹೆಚ್ಚಿಸಲು ಹಾಗು ಕರುವಿನ ಬೆಳವಣಿಗೆಗೆ ಸಹಾಯಕ. ಗಬ್ಬದ ಕೊನೆಯ ಎರಡು ತಿಂಗಳ ಹಾಲು ಕೊಡದಿರುವಾಗ ೧೦ ಲೀ. ಹಾಲು ಕೊಡುವ ಹಸುಗಳಿಗೆ ಹಸುರು ಹುಲ್ಲು ಕೊಡದಿದ್ದರೆ ದಿನಕ್ಕೆ ೩.೫ ಕೆ ಜಿ ಪಶು ಆಹಾರ ಮತ್ತು ತಿಂಗಳಿಗೆ ಅರ್ಧ ಕಿಲೋ ಖನಿಜ ಮಿಶ್ರಣ ಕೊಡಬೇಕು. ದಿನಕ್ಕೆ ೫ ಕಿಲೋ ಹಸುರು ಹುಲ್ಲು ಕೊಡುವುದಾದರೆ, ದಿನಕ್ಕೆ ೧.೫ ಕಿಲೋ ಪಶು ಆಹಾರ ಮತ್ತು ತಿಂಗಳಿಗೆ ೧.೫ ಕಿಲೋ ಖನಿಜ ಪೋಷಕ ಕೊಡಬೇಕು. ೧೦ ಲೀ. ಹೆಚ್ಚು ಹಾಲು ಕೊಡುತ್ತಿರುವ ಹಸುಗಳಿಗೆ ಪ್ರತೀ ೧ ಲೀ. ಹೆಚ್ಚುವರಿ ಹಾಲಿಗೆ ದಿನಕ್ಕೆ ೫೦-೧೦0 ಗ್ರಾಂ. ಪಶು ಆಹಾರ ಮತ್ತು ತಿಂಗಳಿಗೆ ೧೦೦ಗ್ರಾಂ. ಖನಿಜ ಮಿಶ್ರಣ ಕೊಡಬೇಕು. ಕೊನೆಯ ತಿಂಗಳು ದಿನಕ್ಕೆ ಅರ್ಧ ಕಿಲೋ ಮೊಳಕೆ ಕಾಳು ಕೊಡುವುದರಿಂದ (ಬೇಯಿಸಿ, ರುಬ್ಬಿ) ಕರು ಹಾಕಿದ ೧/೨ - ೪ ಗಂಟೆಯಲ್ಲಿ ಮಾಸು- ಸತ್ತೆ ಬಿದ್ದು ಹೋಗುತ್ತದೆ.

ಕೆಲವು ಹಸುಗಳು ೭ ತಿಂಗಳ ಗಬ್ಬವಿದ್ದಾಗಲೂ ಹೆಚ್ಚು ಹಾಲು ಕೊಡುತ್ತಿರುತ್ತವೆ. ಆ ಸಮಯದಲ್ಲಿ ಹಸುರು ಮೇವು ಮತ್ತು ಪಶು ಆಹಾರವನ್ನು ಪೂರ್ತಿ ನಿಲ್ಲಿಸಿ, ರಾಸುಗಳಿಗೆ ಕುಡಿಸುವ ನೀರನ್ನು ಕಡಿಮೆ ಮಾಡಬೇಕು. ೩-೪ ದಿನಗಳ ನಂತರ ಬೆಳಿಗ್ಗೆ ಮಾತ್ರ ಹಾಲು ಕರೆಯಬೇಕು. ನಂತರ ದಿನ ಬಿಟ್ಟು ದಿನ ಕರೆಯಬೇಕು.

ಗಬ್ಬವಾದ ಏಳು ತಿಂಗಳಿಗೆ ಹಾಲು ಕರೆಯುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ಕರಾವಿನಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಗಬ್ಬವಾಗುವಿಕೆಯೂ ನಿಧಾನವಾಗುತ್ತದೆ. ಗರ್ಭಾವಧಿಯ ಕೊನೆ ೧ ತಿಂಗಳ ಕಾಲದಲ್ಲಿ ಒಳ್ಳೆಯ ವ್ಯಾಯಾಮ ಮಾಡಿಸುವುದರಿಂದ ರಾಸುಗಳು ಕಡಿಮೆ ನೋವಿನಿಂದ ಕರು ಹಾಕುತ್ತವೆ.

೧. ಪಶು ತುಂಬಾ ಬಡಕಲಾಗಿದ್ದರೆ, ಬೆನ್ನು ಮೂಳೆಯ ಮಧ್ಯದ ತುದಿ ಗರಗಸದ ಹಲ್ಲುಗಳಂತೆ ಪ್ರತೀ ಮೂಳೆ ತುದಿ ಎದ್ದು ಕಾಣುತ್ತದೆ. ಸಾಧಾರಣ ಕೊಬ್ಬಿದ್ದರೆ, ಮೂಳೆಗಳು ಕೈಗೆ ಸಿಗುವುದಿಲ್ಲ. ಉತ್ತಮ ಆಹಾರ ಕೊಟ್ಟಿದ್ದರೆ, ಬೆನ್ನು ಭಾಗ ಸಮತಲವಾಗಿದ್ದು, ಕೊಬ್ಬಿನಲ್ಲಿ ಮೂಳೆ ತುದಿಗಳು ಮುಳುಗಿರುತ್ತವೆ.

೨. ಪಶು ತುಂಬಾ ಬಡಕಲಾಗಿದ್ದಾಗ ಬೆನ್ನು ಮೂಳೆ ತುದಿಯ ಇಬ್ಬದಿಯ ಕುಳಿ ಎದ್ದು ಕಾಣುತ್ತದೆ. ಎಲುಬುಗಳ ಮಧ್ಯೆ ೧/೨ಕ್ಕೂ ಹೆಚ್ಚು ಅಡಿ ಆಳ ಕಾಣುತ್ತದೆ. ಸಾಧಾರಣ ಕೊಟ್ಟಿದ್ದರೆ, ಗುಳಿ ಕಾಣುವುದಿಲ್ಲ. ತುಂಬಾ ಕೊಟ್ಟಿದ್ದರೆ ಕೊಬ್ಬು ಕಟ್ಟಿ ದುಂಡಾಗಿ ಇರುತ್ತದೆ.

೩. ಪಶು ತುಂಬಾ ಬಡಕಲಾಗಿದ್ದಾಗ ಬೆನ್ನಿನ ಇಬ್ಬದಿ ಮೂಳೆ ತುದಿಯಲ್ಲಿ ಆಳವಾದ ಗುಣಿ ಕಾಣುತ್ತದೆ. ಸಾಧಾರಣ ಕೊಬ್ಬಿದ್ದರೆ, ಮೂಳೆ ತುದಿಗಳು ನುಣುಪಾಗಿ ಮುಚ್ಚಿರುತ್ತದೆ. ಚೆನ್ನಾಗಿ ಕೊಬ್ಬಿದ್ದರೆ ದುಂಡಾಗಿ ಇರುತ್ತದೆ.

೪. ಪಶು ಬಡಕಲಾಗಿದ್ದರೆ ಕಿಬ್ಬೊಟ್ಟೆ ಕುಳಿ ತುಂಬಾ ಆಳವಾಗಿಯೂ. ಸಾಧಾರಣ ಕೊಬ್ಬಿದ್ದರೆ, ಕಿಬ್ಬೊಟ್ಟೆ ತುಂಬಿಯೂ, ಚೆನ್ನಾಗಿ ಕೊಟ್ಟಿದ್ದರೆ ಕಿಬ್ಬೊಟ್ಟೆ ಉಜ್ಜಿಯೂ ಇರುತ್ತದೆ.

೫. ಪಶು ಬಡಕಲಾಗಿದ್ದರೆ, ಕಟ ಮೂಳೆಯ ದೊಡ್ಡ ತುದಿ ಎದ್ದು ಕಾಣುತ್ತದೆ. ಸಾಧಾರಣ ಕೊಟ್ಟಿದ್ದರೆ, ಮೂಳೆ ತುದಿಗಳು ಕಾಣಿಸುವುದಿಲ್ಲ ಚೆನ್ನಾಗಿ ಕೊಬ್ಬಿದ್ದರೆ ಕೊಬ್ಬಿನಲ್ಲಿ ಮುಚ್ಚಲ್ಪಟ್ಟಿರುತ್ತದೆ.

೬. ಪಶು ಬಡಕಲಾಗಿದ್ದರೆ, ಕಟಿ, ವೃಷ್ಣ ಮೂಳೆಗಳ ದೊಡ್ಡ ತುದಿಗಳು ಎದ್ದು ಕಾಣುತ್ತಿರುತ್ತದೆ. ಸಾಧಾರಣ ಕೊಟ್ಟಿದ್ದರೆ ಮೂಳೆ ತುದಿಗಳು ಕಾಣುವುದಿಲ್ಲ. ಚೆನ್ನಾಗಿ ಕೊಚ್ಚಿದ್ದರೆ, ಕೊಬ್ಬಿನಲ್ಲಿ ಮುಚ್ಚಲ್ಪಟ್ಟಿರುತ್ತದೆ.

೭. ಬಡಕಲು ಪಶುವಾಗಿದ್ದಾಗ ಕಟಿ ಮೂಳೆಗಳ ಮಧ್ಯದ ತಗ್ಗು ತುಂಬಾ ಕುಳಿ ಬಿದ್ದಿರುತ್ತದೆ. ಮಾಂಸ ತೆಳುವಾಗಿರುತ್ತದೆ. ಸಾಧಾರಣ ಕೊಬ್ಬಿದ್ದಾಗ ಕುಳಿ ತುಂಬಾ ಮಾಂಸ ಖಂಡಗಳು ಮತ್ತು ಕೊಬ್ಬು ಸೇರಿರುತ್ತದೆ. ಚೆನ್ನಾಗಿ ಕೊಚ್ಚಿದ್ದರೆ, ತುಂಬಾ ಕೊಬ್ಬು ಸೇರಿರುತ್ತದೆ.

೮. ಬಡಕಲು ಪಶುವಿನ ಬಾಲದ ಬುಡದ ಅಡಿಯಲ್ಲಿ ಕಾಣುವ ಕುಳಿ, ಮೂಳೆಯ ತುದಿ ತುಂಬಾ ಎದ್ದು ಕಾಣುತ್ತದೆ. ಆಳವಾದ ಕುಳಿ ಬಿದ್ದಿರುತ್ತದೆ. ಸಾಧಾರಣ ಕೊಟ್ಟಿದ್ದರೆ, ಬಾಲದ ಬುಡದ ಅಡಿಯಲ್ಲಿ ತುಂಬಾ ಕೊಬ್ಬು ಇರುತ್ತದೆ. ತುಂಬಾ ಕೊಬ್ಬಿದ್ದರೆ ಬುಡ ಭಾಗದ ಅಡಿಯಲ್ಲಿ ಕೊಬ್ಬು ಸೇರಿ ಬಾಲದ ಬುಡ ಉಬ್ಬಿರುತ್ತದೆ.

೯. ಹಾಲೂಡುವ ಪಶುಗಳ ಶರೀರದ ದಾರ್ಡ್ಯತೆಯನ್ನು ಗಬ್ಬಾದ ೭ನೇ ತಿಂಗಳ ಕೊನೆಯಲ್ಲಿ. ಗಬ್ಬ ಪೂರ್ಣವಾದಾಗ ಈದ ಮೊದಲ ವಾರದಲ್ಲಿ. ಈದ ೩೦ ದಿನಗಳಿಗೆ, ಬೆದೆಗೆ ಬಂದ ದಿನ ಗಬ್ಬವಾದ ೨-೩ನೇ ತಿಂಗಳು, ಕರು ಹಾಕಿದ ೨೫೧-೩೦೦ ದಿನಗಳಲ್ಲಿ ಗಮನಿಸಬೇಕು.

ಹಾಲೂಡುವ ಪಶು ವರ್ಷಕ್ಕೊಂಡು ಕರು ಹಾಕಬೇಕಾದರೆ ಸಾಧಾರಣ ಮಟ್ಟಿಗೆ ಕೊಬ್ಬುಬೇಕು. ಅಂದರೆ ಮೈಕಟ್ಟು ಉತ್ತಮವಾಗಿರಬೇಕು. ಭಾರೀ ಕೊಬ್ಬಿರಬಾರದು. ಇದನ್ನು ಪಶುಪಾಲನೆ ಮಾಡುವವರು ಗಮನಿಸಿ ಅದಕ್ಕನುಗುಣವಾಗಿ ಪಾಲನೆ ಪೋಷಣೆ ಮಾಡಿದರೆ ವರ್ಷಕ್ಕೊಂದು ಕರು ಪಡೆದು ಹೈನುಗಾರಿಕೆಯನ್ನು ಲಾಭದಲ್ಲಿ ಮುನ್ನಡೆಸಬಹುದು.

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ