ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶ ಸರಕಾರ ಗೋವಿನ ಹತ್ಯೆಯನ್ನು ನಿಷೇಧಿಸಿದ್ದು ನಮಗೆಲ್ಲಾ ಗೊತ್ತಿದೆ. ಈ ಪರಿಣಾಮವಾಗಿ ಈಗ ಅಲ್ಲಿ ಹಸುಗಳನ್ನು ಮಾಂಸಕ್ಕಾಗಿ ವಧಿಸುವುದು ನಿಂತಿದೆಯಂತೆ. ಹಸುಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಇರುವ ರಾಜ್ಯಗಳೆಂದರೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ. ಹಸುಗಳನ್ನು ಮಾಂಸಕ್ಕಾಗಿ ಕೊಲ್ಲದೆ ಹಾಗೆ ಉಳಿಸಿದರೆ ಅವುಗಳ ಸಂಖ್ಯೆ ಹೆಚ್ಚುತ್ತದೆ, ಅದೂ ಒಂದು ಅವ್ಯವಸ್ಥೆ ಆಗಿ ಪರಿಣಮಿಸಿದೆ ಎಂಬ ವರದಿಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಉತ್ತರ ಪ್ರದೇಶದ ಅಲೀಘರ್ನಲ್ಲಿ ಕೆಲ ವರ್ಷಗಳ ಹಿಂದೆ ಸುಮಾರು ೫೦೦ ಹಸುಗಳು ರೈತನ ಬೆಳೆ ಇರುವ ಹೊಲದಲ್ಲಿ ಮೇಯುತ್ತಿದ್ದುದನ್ನು ಸ್ಥಳೀಯರು ಹಿಡಿದು ಅದನ್ನು ಸರಕಾರೀ ಶಾಲೆಯಲ್ಲಿ ಕೂಡಿ ಹಾಕಿ ಬೀಗ ಜಡಿದರಂತೆ. ಇದು ಹಸು ಸಾಕುವವರು ಹೊಲದಲ್ಲಿ ಹಸು ಬಿಟ್ಟರೆಂಬ ಕಾರಣಕ್ಕಾಗಿ ಅಲ್ಲವಂತೆ. ಬದಲಿಗೆ ಹಸುಗಳ ಸಂಖ್ಯೆ ಹೆಚ್ಚಳವಾಗಿ ಏನೆಲ್ಲಾ ಅವ್ಯವಸ್ಥೆ ಉಂಟಾಗುತ್ತದೆ ಎಂಬುದರ ಅರಿವು ಸರಕಾರದ ಗಮನಕ್ಕೆ ಬರಲಿ ಎಂಬುದಕ್ಕಂತೆ. ಉತ್ತರ ಪ್ರದೇಶದಲ್ಲಿ ಹಸುಗಳ ವಧೆ ನಿಷೇಧವಾದ ಬಳಿಕ ಗಣನೀಯ ಪ್ರಮಾಣದಲ್ಲಿ ಹಸುಗಳ ಸಂತತಿ ಹೆಚ್ಚಳವಾಗಿದ್ದು, ಎಲ್ಲೆಂದರಲ್ಲಿ ಹಸುಗಳು ಸುತ್ತಾಡುತ್ತಿವೆಯಂತೆ. ಹಸು ಸಾಕಣೆ ಮಾಡುವವರು ಐದು - ಆರು ಕರು ಹಾಕಿದ ನಂತರ ಆ ಹಸು ಕರು ಹಾಕಿದರೂ ಪ್ರಯೋಜನ ಇಲ್ಲ ಎಂದು ಅದನ್ನು ಕಸಾಯಿ ಖಾನೆಯವರಿಗೆ ಮಾರಾಟ ಮಾಡುತ್ತಿದ್ದರಂತೆ. ಹಳೆಯ ಕಾರನ್ನು ಮಾರಿ, ಅದರಲ್ಲಿ ಬಂದ ಅಲ್ಲ ಸ್ವಲ್ಪ ಹಣದಲ್ಲಿ ಹೊಸ ಕಾರು ಖರೀದಿ ಮಾಡಿದಂತೆ ಈ ವ್ಯವಹಾರ ನಡೆಯುತ್ತಿತ್ತಂತೆ. ಈಗ ಕಸಾಯಿ ಖಾನೆಗಳೇ ಬೀಗ ಹಾಕಿದ ಕಾರಣ ಆ ಹಸುಗಳನ್ನು ಕೊಳ್ಳುವವರಿಲ್ಲ. ನಷ್ಟ ಮಾಡಿಕೊಂಡು ಯಾರೂ ಸಾಕುವವರಿಲ್ಲ. ಅದಕ್ಕಾಗಿ ಜನ ಬೀದಿಯಲ್ಲಿ ಹಸುಗಳನ್ನು ಬಿಡುತ್ತಿದ್ದಾರೆ. ಅವು ಹಳ್ಳಿಗಳು, ಪಟ್ಟಣಗಳು ಜನ ನಿಬಿಡ ಪ್ರದೇಶಗಳು, ರಸ್ತೆ. ರೈಲ್ವೆ ಎಲ್ಲೆಂದರಲ್ಲಿ ಸುತ್ತಾಡುತ್ತಾ ಜನಜೀವನಕ್ಕೆ ಕಿರಿಕಿರಿ ಉಂಟು ಮಾಡುತ್ತಿವೆಯಂತೆ. ಇದಕ್ಕೆ ಪರಿಹಾರ ಬೇಕು ಎಂಬುದು ಕೆಲವು ಮಂದಿಯ ಬೇಡಿಕೆ.
ಒಂದು ಹಸು ತನ್ನ ಜೀವಿತಾವಧಿಯಲ್ಲಿ ಕನಿಷ್ಟ ೫-೬ ಕರುಗಳನ್ನು ಹಾಕುತ್ತದೆ. ಒಬ್ಬ ಒಂದು ಹಸು ಇಟ್ಟುಕೊಂಡರೆ ಐದಾರು ವರ್ಷಗಳಲ್ಲಿ ನಾಲ್ಕೈದು ಹಸುಗಳ ಒಡೆಯನಾಗುತ್ತಾನೆ. ಇದರಲ್ಲಿ ಕೆಲವು ಗಂಡು ಕರುಗಳೂ ಆಗಬಹುದು. ಈಗ ಹೆಣ್ಣು ಕರುವನ್ನೇ ಪಡೆಯುವ ಕೃತಕ ಗರ್ಭಧಾರಣಾ ತಂತ್ರಜ್ಞಾನವೂ ಬಂದಿದೆಯಾದ ಕಾರಣ ಬಹುತೇಕ ಹೆಣ್ಣು ಕರುಗಳೇ ಜನಿಸುತ್ತವೆ. ಒಂದು ಕರು ಸರಿಯಾದ ಸಾಕಾಣಿಕೆಯಲ್ಲಿ ಎರಡನೇ ವರ್ಷಕ್ಕೆ ಮತ್ತೆ ಕರು ಹಾಕುತ್ತದೆ. ಈ ರೀತಿಯಲ್ಲಿ ಹಸುಗಳ ಸಂತಾನಾಭಿವೃದ್ಧಿಯಾಗುತ್ತದೆ. ಇಷ್ಟೆಲ್ಲಾ ಹಸುಗಳು ಮೇಯುವುದಕ್ಕೆ ಎಲ್ಲಿ ಹೋಗಬೇಕು, ಎಷ್ಟು ಆಹಾರ ಬೇಕಾದೀತು, ಇವೆಲ್ಲಾ ಪ್ರಶ್ನೆಗಳು ಸಹಜವಾಗಿ ಬಂದೇ ಬರುತ್ತದೆ. ಹಸುಗಳ ಸಂತಾನ ವೃದ್ಧಿ ಮನುಷ್ಯರಂತೆ ಅಲ್ಲ. ಅದು ತುಂಬಾ ವೇಗ. ಒಬ್ಬ ಮಾನುಷ್ಯನ ಜೀವಿತಾವಧಿಯಲ್ಲಿ ಹಸುಗಳು ಸುಮಾರು ೬ ತಲೆಮಾರನ್ನಾದರೂ ಪೂರೈಸುತ್ತದೆ ಎಂದು ಅಂದಾಜು ಮಾಡಬಹುದು. ಹೀಗಿದ್ದಾಗ ಅವುಗಳ ಸಂತಾನ ಎಷ್ಟು ಹೆಚ್ಚಳವಾಬಹುದು?
ಹಸುಗಳ ಸಂತಾನ ನಿಯಂತ್ರಣಕ್ಕೆ ಅವುಗಳನ್ನು ವಧೆ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಯಾವುದೇ ಅಭಿಪ್ರಾಯಗಳನ್ನು ನಾವು ವ್ಯಕ್ತಪಡಿಸುವುದಿಲ್ಲ. ಆದರೂ ಹಸುಗಳ ಸಂತಾನ ವೃದ್ದಿ ಹೆಚ್ಚಾದಂತೆ ಅದು ಹೊರೆಯಾಗುವ ಬದಲಿಗೆ ಆಸ್ತಿಯಾಗಿ ಬಳಕೆಯಾಗಬಾರದೇ? ಈ ಬಗ್ಗೆ ಕೆಲವೊಂದು ಅಭಿಪ್ರಾಯಗಳನ್ನು ತಿಳಿಸಲು ಇಚ್ಚಿಸುತ್ತೇವೆ. ನಮ್ಮ ದೇಶದಲ್ಲಿ ಹಸುಗಳಿಗೆ ತಾಯಿಯ ಸ್ಥಾನವನ್ನು ಕಲ್ಪಿಸಲಾಗಿದೆ. ಇದು ಸರಿ. ಏಕೆಂದರೆ ಹಸುಗಳ ಹಾಲನ್ನು ಕುಡಿದು ಬದುಕುವ ನಾವು ಅದನ್ನು ಆಸ್ಥಾನವಲ್ಲದೆ ಬೇರೆ ಸ್ಥಾನದಲ್ಲಿ ಇರಿಸಲು ಸಾಧ್ಯವೇ ಇಲ್ಲ. ಹಸುವನ್ನು ತಾಯಿಯ ಸ್ಥಾನದಲ್ಲಿ ಇಟ್ಟರಷ್ಟೇ ಸಾಲದು. ಅದನ್ನು ಕಾಯಾ-ವಾಚ ಪಾಲಿಸಬೇಕು. ಇತ್ತೀಚಿನ ದಿನಗಳಲ್ಲಿ ಜನತೆ ಹೆಚ್ಚು ಹೆಚ್ಚು ವ್ಯಾವಹಾರಿಕವಾಗುತ್ತಿದ್ದು. ಸ್ವಲ್ಪ ಮಟ್ಟಿಗೆ ಕಟುಕರೇ ಆಗುತ್ತಿದ್ದಾರೆ. ಹಸುವನ್ನು ಬರೇ ವ್ಯಾವಹಾರಿಕ ಜೀವಿಯಾಗಿ ಕಾಣುತ್ತಿದ್ದಾರೆ. ಸ್ಥಳೀಯ ತಳಿಗಳ ಹಸುಗಳಂತೂ ಯಾರಿಗೂ ಬೇಡದಂತಾಗಿದೆ. ಇದು ಬೇರೆ ದೇಶಗಳಲ್ಲಿ ಸರಿ ಇರಬಹುದು. ಆದರೆ ನಮ್ಮ ದೇಶದಲ್ಲಿಯಂತೂ ಹಸುಗಳು ಮತ್ತು ಮಾನವನ ಸಂಬಂಧ ಅವಿನಾಭಾವ. ಹಾಲು ಕುಡಿಯದ ಜನರಿಲ್ಲದಿದ್ದರೂ. ನಮ್ಮಲ್ಲಿ ಹಸು ಸಾಕದ ಕೋಟ್ಯಾಂತರ ಜನರಿದ್ದಾರೆ. ಪ್ರತೀ ಮನೆಯಲ್ಲೂ ಒಂದೊಂದಾದರೂ ಹಸುವನ್ನು ಸಾಕುವುದು ಒಳ್ಳೆಯ ಅಭ್ಯಾಸ. ಇದರಿಂದಾಗಿ ಬೆಳಗ್ಗಿನ ಹೊತ್ತಿನ ಸದುಪಯೋಗವಾಗುತ್ತದೆ. ವ್ಯಾಯಾಮ ಆಗುತ್ತದೆ. ಮನೆಯಲ್ಲಿ ಲಭ್ಯವಾಗುವ ಅಕ್ಕಚ್ಚು. ತರಕಾರಿ ಚೂರುಗಳು, ಹೋತೋಟ ಪ್ರೂನಿಂಗ್ ಮಾಡಿದಾಗ ದೊರೆಯುವ ಹಸಿ ಕುಡಿಗಳೂ ಸಹ ಪಶು ಮೇವಾಗುತ್ತದೆ ಒಂದು ಕುಟುಂಬ ಒಂದು ಹಸುವನ್ನು ಸಾಕಲಾರದಷ್ಟು ಬಡತನದಲ್ಲಿಲ್ಲ ಎಂದುದಂತೂ ಸತ್ಯ.
ಹಸುಗಳಿಂದ ಕೃಷಿ ಉಳಿಯುತ್ತದೆ. ಭಾರತ ಕೃಷಿ ಪ್ರಧಾನವಾದ ದೇಶ. ಈ ದೇಶದ ಕೃಷಿಕರೆಲ್ಲರೂ ಹಸು ಸಾಕಾಣೆ ಮಾಡುವುದರಿಂದ ಹಸುಗಳ ರಕ್ಷಣೆ ಆಗುತ್ತದೆ. ಹಸುವಿನ ಹೊಟ್ಟೆ ಎಂಬುದು ಅದ್ಭುತ. ಇದು ಕೇವಲ ೪-೫ ಗಂಟೆಯೊಳಗೆ ತಿಂದ ಆಹಾರವನ್ನು ಸಗಣಿ ರೂಪದಲ್ಲಿ ಗೊಬ್ಬರವಾಗಿ ವಾಪಾಸು ಕೊಡುವ ಶಕ್ತಿ ಹೊಂದಿದೆ. ಯಾವುದೇ ಆಧುನಿಕ ತಂತ್ರಜ್ಞಾನದ ಆವಿಷ್ಕಾರದಲ್ಲೂ ಇಷ್ಟು ತ್ವರಿತವಾಗಿ ಗೊಬ್ಬರ ತಯಾರಿಸಿಕೊಡುವ ವ್ಯವಸ್ಥೆ ಬಂದಿಲ್ಲ. ಹಸುಗಳಿಗೆ ಅವುಗಳು ತಿನ್ನುವ ಯಾವುದೇ ವಸ್ತು ಕೊಟ್ಟರೂ ಅದರಲ್ಲಿ ಸ್ವಲ್ಪ ಮಟ್ಟಿನ ಸತ್ವಾಂಶವನ್ನು ತನ್ನ ಶರೀರ ಪೊಷಣೆಗೆ ಬಳಸಿಕೊಂಡು, ಉಳಿದ ಬಹುಪ್ರಮಾಣವನ್ನು ಮರಳಿ ಕೊಡುತ್ತದೆ. ಹಸುವಿನ ಹೊಟ್ಟೆಯೊಳಗೆ ಹೋದ ಆಹಾರ ವಸ್ತುಗಳು ಅದರ ಚಯಾಪಚಯ ಕ್ರಿಯೆಯಲ್ಲಿ ಕೆಲವು ಸೂಕ್ಷ್ಮಾಣು ಜೀವಿಗಳೊಂದಿಗೆ ಬೆರೆತು ಹೊರ ಬರುತ್ತದೆಯಾದ ಕಾರಣ ಇದಕ್ಕೆ ಉತ್ತಮ ಪೋಷಕ ಶಕ್ತಿ ಇದೆ. ಇದನ್ನು ಅರ್ಥಮಾಡಿಕೊಳ್ಳದೆ ಕೃಷಿಕರು ತಮ್ಮ ಹಸುಗಳನ್ನು ಹಾಲು ಕೊಡದ ಸಮಯದಲ್ಲಿ ವಧೆಗೆ ಅಟ್ಟುತ್ತಾರೆ.
ಹಸುಗಳ ಸಂತಾನ ಹೆಚ್ಚಳವಾಗದಂತೆ ತಡೆಯಲು ಅದನ್ನು ನಿಯಮಿತವಾಗಿ ಗರ್ಭದಾರಣೆ ಮಾಡಿಸಿದರೆ ಸಾಕು. ಈಗ ಹಸುಗಳು ಹಾಲು ಕೊಡಲು ಕರು ಹಾಕಬೇಕೆಂದಿಲ್ಲ. ಕರು ಹಾಕದೆಯೂ ಹಾಲು ಪಡೆಯುವ ತಾಂತ್ರಿಕತೆ ಇದೆ. ಇದನ್ನು ಅನಿವಾರ್ಯ ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು. ಉತ್ತರ ಪ್ರದೇಶದಲ್ಲಿ ಬಹುಷಃ ಗೋ ಹತ್ಯೆ ನಿಷೇಧಿಸಿದ್ದು ಮಾತ್ರ ಇರಬಹುದು. ಗೋ ಹತ್ಯೆ ನಿಷೇಧ ಒಂದರಿಂದಲೇ ಎಲ್ಲವೂ ಪರಿಹಾರವಾಗಲಾರದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅಲ್ಲಿ ತಲೆ ಎತ್ತಿರುವ ಅಪಸ್ವರಕ್ಕೆ ಪೂರ್ವ ತಯಾರಿ ಇಲ್ಲದೆ ಈ ಕಾಯ್ದೆಯನ್ನು ಜಾರಿಗೆ ತಂದಿರುವುದೇ ಕಾರಣ ಇರಬೇಕು. ಗೋ ಹತ್ಯೆ ನೋವು ಮಾಡಬಾರದು ಎಂದಾದರೆ ಹೆಚ್ಚಳವಾಗುವ ಗೋವಿನ ಸಂತತಿಗೆ ಏನು ವ್ಯವಸ್ಥೆ ಎಂಬುದೂ ಬೇಕಲ್ಲವೇ, ಬಹುಷಃ ನಮ್ಮ ಕರ್ನಾಟಕದಂತೆ - ಇಲ್ಲಿಯೂ ಹಸು ಮೇಯುವ ಜಾಗವನ್ನೂ ಜನ ಅತಿಕ್ರಮಣ ಮಾಡಿದ್ದಿರಬಹುದು. ಸರಕಾರ ಓಟಿನ ಆಶೆಗೆ ಅದನ್ನು ಬಡ ಜನರಿಗೆ - ಕೊಟ್ಟಿರಬಹುದು. ಹಸು ಸಂರಕ್ಷಣೆ ಬೇಕೆಂದಾದರೆ ಹಸುಗಳಿಗೆ ಮೇಯಲು ವಿಶಾಲ ಸ್ಥಳಾವಕಾಶ ಬೇಕು. ಇದು ನಮ್ಮನ್ನಾಳಿದ ಬ್ರಿಟೀಷರಿಗೂ ಮನವರಿಕೆಯಾಗಿತ್ತು. ಆದರೆ ನಮಗೆ ಅದು ಮರೆತೇ ಹೋಗಿದೆ ಸರಕಾರ ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ ಅದು ತಪ್ಪಲ್ಲ, ಆದರೆ ಅದಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನೂ ಮಾಡಬೇಕು. ಗೋವುಗಳ ಸಂರಕ್ಷಣೆಗೆ ಕಟಿಬದ್ದರಾಗಿ ನಿಂತವರು, ಸರಕಾರ ಮರೆತಿದ್ದರೆ ಅದನ್ನು ನೆನಪಿಸಿಕೊಡಬೇಕು.
ಮಾಹಿತಿ ಕೃಪೆ: ರಾಧಾಕೃಷ್ಣ ಹೊಳ್ಳ
AI ಅಧಾರಿತ ಚಿತ್ರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!