ನಿನ್ನೆ ನನ್ನ ಶಿಕ್ಷಕರೊಬ್ಬರು ನಿಧನರಾದರು ಎಂಬ ಸುದ್ದಿ ಕೇಳಿಬಂತು. ಅವರ ಹೆಸರು O. P. Israyl Ijarail.
ನಾನು GAS ಕಾಲೇಜಿನಲ್ಲಿ PUC ಓದುತ್ತಿದ್ದಾಗ ಅವರು ನಮಗೆ ಕೆಮಿಸ್ಟ್ರಿ ಹೇಳಿಕೊಡುತ್ತಿದ್ದರು.
“ಗ್ಯಾಸ್ ಕಾಲೇಜ್” ಅಂದರೆ ಏನು ಅಂತ ಯೋಚಿಸುತ್ತಿದ್ದೀರಾ?
Government Arts and Science College!
ಶುಷ್ಕವಾದ ವಿಷಯವೆಂದು ಹೆಸರಾದ ರಸಾಯನಶಾಸ್ತ್ರ, ಅವರ ಮಾರ್ಗದರ್ಶನದಲ್ಲಿ ನಮಗೆ ಅಷ್ಟೇನೂ ಕಷ್ಟವೆನಿಸುತ್ತಿರಲಿಲ್ಲ. ಅವರದು ಮೃದು ಸ್ವಭಾವ. ಕ್ಲಿಷ್ಟವಾದ ಸೂತ್ರಗಳನ್ನೂ ಸರಳವಾಗಿ, ಸುಸೂತ್ರವಾಗಿ ಅರ್ಥ ಮಾಡಿಸುತ್ತಿದ್ದರು.
ತೊಂಭತ್ತೆರಡನೇ ವಯಸ್ಸಿನಲ್ಲಿ ಅವರು ನಿಧನರಾದ ಸುದ್ದಿ ಕೇಳಿದಾಗ, ಅವರ ಪಾಠಗಳಿಗಿಂತಲೂ ಅವರ ಸ್ವಭಾವ ಮತ್ತು ಅವರೊಡನೆ ನಡೆದ ಒಂದು ಸಣ್ಣ ಘಟನೆ ಮತ್ತೆ ಮತ್ತೆ ನೆನಪಾಯಿತು.
ಹಳ್ಳಿಯಿಂದ ಕಲಬುರ್ಗಿಗೆ PUC ಓದಲು ಬಂದ ನನಗೆ ಅವರು ಓದಿನ ಜೊತೆ ವ್ಯವಹಾರವನ್ನೂ ಕಲಿಸಿಕೊಟ್ಟ ಮಹಾನುಭಾವರು.
ಒಂದು ದಿನ ಅವರ ಬಳಿ ಒಂದು ಸರ್ಟಿಫಿಕೇಟ್ ಅಟೆಸ್ಟೇಷನ್ ಮಾಡಿಸಿಕೊಳ್ಳುವ ಸಂದರ್ಭ ಬಂತು. ಟ್ರೂ ಕಾಪಿ ತೆಗೆದುಕೊಂಡು ಅವರ ಬಳಿ ಹೋದೆ. ಸಹಿ ಮಾಡಬೇಕೆಂದು ಕೇಳಿಕೊಂಡೆ. ಅವರು ಸರಳವಾಗಿ ಸಹಿ ಮಾಡಿ ಕಾಪಿಯನ್ನು ನನ್ನ ಕೈಗೆ ಕೊಟ್ಟರು. ಹಳ್ಳಿಯಿಂದ ಬಂದ ನನಗೆ ಅವರ ಬಗ್ಗೆ ಅಪಾರ ಗೌರವವಿತ್ತು. ಆದರೆ ಆ ಗೌರವವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದು ಇನ್ನೂ ಗೊತ್ತಿರಲಿಲ್ಲ. ಕಾಪಿ ತೆಗೆದುಕೊಂಡು ಸುಮ್ಮನೆ ಹೊರಡಲು ನಿಂತೆ.
ಆಗ ಮಾಸ್ತರು ನನ್ನ ಬೆನ್ನಿಗೆ ಟಪ… ಟಪ… ಎಂದು ತಟ್ಟಿದರು. ಗಾಬರಿಯಿಂದ ತಿರುಗಿ ನೋಡಿದೆ.
ಅವರು ಹೇಳಿದರು: “ತಮ್ಮ! ಹಿರಿಯರಿಂದ ಏನಾದರೂ ಉಪಯೋಗ ಪಡೆದರೆ ‘ಥ್ಯಾಂಕ್ಯೂ ಸರ್’ ಅಂತ ಹೇಳಬೇಕು.” ಆ ಮಾತು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತದೆ.
“ತಪ್ಪಾಯಿತು ಸರ್… ತುಂಬಾ ಥ್ಯಾಂಕ್ಸ್” ಎಂದು ಪೆಚ್ಚಾಗಿ ಹೇಳಿದೆ.
ಅವರು ನಸು ನಗುತ್ತಾ, “ಪರವಾಗಿಲ್ಲ, ಒಳ್ಳೆಯದಾಗಲಿ. ಹೋಗು” ಎಂದರು.
ಮುಂದೆ ನಾನು ಲೆಕ್ಚರರ್ ಆದೆ. ನಂತರ ಪ್ರಿನ್ಸಿಪಾಲ್ ಆದೆ. ನನ್ನ ಬಳಿ ಸಹಿಗಾಗಿ ಬರುತ್ತಿದ್ದ ವಿದ್ಯಾರ್ಥಿಗಳು “ಥ್ಯಾಂಕ್ಸ್ ಸರ್” ಎಂದರೂ, ಹೇಳದಿದ್ದರೂ, ಕೆಲವೊಮ್ಮೆ ನನಗೆ ಮಾಸ್ತರು ನೆನಪಾಗುತ್ತಿದ್ದರು. ಮನಸ್ಸಿನಲ್ಲೇ ನಗುತ್ತಿದ್ದೆ. ಕೆಲವು ಶಿಕ್ಷಕರು ನಮಗೆ ಪಾಠಗಳನ್ನು ಕಲಿಸುತ್ತಾರೆ. ಕೆಲವರು ಜೀವನದ ಪಾಠಗಳನ್ನೂ ಕಲಿಸುತ್ತಾರೆ. O. P. I. ಮಾಸ್ತರು ಅಂತಹ ಶಿಕ್ಷಕರಾಗಿದ್ದರು.
ನನ್ನಂಥ ಎಷ್ಟೋ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜೊತೆ ಬದುಕಿನ ಸಣ್ಣಪುಟ್ಟ ವ್ಯವಹಾರ ಜ್ಞಾನವನ್ನೂ ಕೊಟ್ಟು, ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡು ಈಗ ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
ಪ್ರತಿಕ್ರಿಯೆ (1)
O P Israyil was our chemistry lecturer in Govt. Science College during 1979-80. He was a very simple and easily approachable person. Unlike other lecturers he never used to bother about student's attendance. He just used to give the attendance register to the students and asked them to mark their attendance. Sad to know about his demise. May his atma attain moksha.
Later he was Director of Collegiate Education I think.