ಸಂಸತ್ತಿನಲ್ಲಿ ನಕ್ಸಲ್ ಮುಕ್ತ ಭಾರತ ಘೋಷಣೆಯಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಮ್ಯುನಿಸಂ ಮುಕ್ತ ಸರ್ಕಾರವೂ ಆಗಿದೆ, ಅಂದರೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರ ಸದ್ಯಕ್ಕೆ ಆಡಳಿತದಲ್ಲಿಲ್ಲ. ಕೇರಳದಲ್ಲಿ ಎಲ್. ಡಿ. ಎಫ್. ಸರ್ಕಾರದ ಪತನದೊಂದಿಗೆ ಈ ರೀತಿಯಲ್ಲಿ ಆಗಿದೆ. ಹಾಗಾದರೆ ಕಮ್ಯುನಿಸ್ಟ್ ಆಡಳಿತ ಭಾರತದಲ್ಲಿ ಮರೆಯಾಗುತ್ತಿದೆಯೇ?

ಕಾರ್ಪೊರೇಟಿಸಂ, ರಿಲಿಜನಿಸಂ, ನ್ಯಾಷನಲಿಸಂ, ಮಾರ್ಕೆಟಿಸಂ, ಕಂಜ್ಯೂಮರಿಸಂ, ಮೀಡಿಯಾಯಿಸಂಗಳ ಅಬ್ಬರದಲ್ಲಿ ಸಮಾಜವಾದ, ಸಮತಾವಾದ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ. ಕಮ್ಯುನಿಸಂ ಎಂಬುದು ಒಂದು ಸೈದ್ಧಾಂತಿಕ ಹೋರಾಟ. ಎಲ್ಲಾ ರೀತಿಯ ಶೋಷಣೆಯ ವಿರುದ್ಧದ ಬಂಡಾಯದ ಧ್ವನಿ. ಅದರ ಮೂಲ ತಿರುಳೇ ಅನ್ಯಾಯದ ವಿರುದ್ಧದ ಹೋರಾಟ. ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆ ಮತ್ತು ನ್ಯಾಯಯುತ ಹಕ್ಕು ಕೇಳುವುದು. 

ಹಾಗಾದರೆ ಇತ್ತೀಚಿನ ದಿನಗಳಲ್ಲಿ ಕಮ್ಯುನಿಸಮ್ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದು ಏಕೆ. ಜನರ ಶೋಷಣೆ ಕಡಿಮೆಯಾಗುತ್ತಿದೆಯೇ, ಅಮಾಯಕ, ಅಸಹಾಯಕ ಜನರ ಮೇಲಿನ ದೌರ್ಜನ್ಯ ಇಲ್ಲವಾಗುತ್ತಿದೆಯೇ? ಜನಸಾಮಾನ್ಯರ ಅರಿವಿಗೆ ಬರುವಂತೆ ಶೋಷಣೆ ಏನು ಕಡಿಮೆಯಾಗುತ್ತಿಲ್ಲ. ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಅವು ಬೇರೆ ಬೇರೆ ರೂಪದಲ್ಲಿ ಜನರನ್ನು ಬಲಿಪಶು ಮಾಡುತ್ತಲೇ ಇದೆ. ಆದರೆ ಅದರನ್ನು ಗ್ರಹಿಸಲು ಸಾಧ್ಯವಾಗದಂತಹ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ಸಾಮಾನ್ಯ ಜನರನ್ನು ಭಾವನಾತ್ಮಕವಾಗಿ ನಿರ್ವೀರ್ಯಗೊಳಿಸುತ್ತಿದೆ. ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಗುಲಾಮರನ್ನಾಗಿಸಿದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಸಿಗುತ್ತಿಲ್ಲ. ವೇಗ, ಸ್ಪರ್ಧೆ, ಅನಿವಾರ್ಯತೆ, ಕೊಳ್ಳುಬಾಕ ಸಂಸ್ಕೃತಿ ಜನರನ್ನು ಮರುಳು ಮಾಡಿದೆ.

ನಕ್ಸಲ್ ಮುಕ್ತ ಭಾರತ ಎಂಬುದೇನೋ ಉತ್ತಮ ಬೆಳವಣಿಗೆ. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಹೇಳಬಹುದು. ಏಕೆಂದರೆ ಭಾರತದಂತ ಪ್ರಜಾಪ್ರಭುತ್ವ ದೇಶದಲ್ಲಿ ಹಿಂಸೆಯ ಮುಖಾಂತರ, ಬಂದೂಕಿನ ಮುಖಾಂತರ ಪರಿಹಾರ ಹುಡುಕುವುದು ಅತ್ಯಂತ ಅಮಾನವೀಯ, ಅನಾಗರಿಕ, ಆತಂಕಕಾರಿ ವಿಷಯ. ಅದು ನಿರ್ಮೂಲನೆಯಾಗಿದ್ದು ಒಳ್ಳೆಯದೇ. ಆದರೆ ಅದರೊಂದಿಗೆ ಶೋಷಿತರ ಬಂಡಾಯದ ಧ್ವನಿ ಇಲ್ಲವಾದರೆ ಅದು ಸಾಮಾನ್ಯರ ಪಾಲಿಗೆ ಅತ್ಯಂತ ಅಪಾಯಕಾರಿ ಬೆಳವಣಿಗೆ ಆಗಬಹುದು. ಮತ್ತೆ ಹೊಸ ರೂಪದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಹಿಂಸಾತ್ಮಕವಾದ ಅರ್ಬನ್ ನಕ್ಸಲಿಸಂ ಚಿಗುರೊಡಯದಿದ್ದರೆ ಅಸಹಾಯಕ ಅಮಾಯಕರ ಬದುಕು ಕಷ್ಟವಾಗಬಹುದು.

ಕಮ್ಯುನಿಸ್ಟರ ಕೆಲವು ಬದಲಾಗದ ಹಠಮಾರಿ ಧೋರಣೆಗಳು, ಸೈದ್ಧಾಂತಿಕ ಗುಲಾಮಿತನ, ಆಧುನಿಕತೆಯ ಬೆಳಕಿಗೆ ತೆರೆದುಕೊಳ್ಳದಿರುವುದು, ಎಂದಿನಂತೆ ಎಲ್ಲಾ ಸೈದ್ಧಾಂತಿಕ ವಿಚಾರಗಳ ಜನರಲ್ಲಿನ ಒಂದಷ್ಟುಮಟ್ಟಿಗಿನ ಸ್ವಾರ್ಥ, ಭ್ರಷ್ಟಾಚಾರ, ದುರಹಂಕಾರಗಳು, ವಿರೋಧಿಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸದಿರುವುದು, ಬದಲಾಗುತ್ತಿರುವ ಜನರ ಮಾನಸಿಕತೆಯನ್ನು ಅರಿಯುವಲ್ಲಿ ವಿಫಲವಾಗಿರುವುದು ಮುಂತಾದ ಅನೇಕ ಕಾರಣಗಳಿಂದ ಹಿನ್ನಡೆಯಾಗಿರುವುದು ನಿಜ. 

ಅದು ಹಾಗಾಗದಂತೆ ಕಮ್ಯುನಿಸಂ ಅನ್ನು ಮತ್ತೊಮ್ಮೆ ಪುನರ್ ರಚಿಸ ಬೇಕಾಗಿರುವುದು, ಪುನರುಜ್ಜೀವನಗೊಳಿಸಬೇಕಾಗಿರುವುದು ಭಾರತದ ಜನಸಾಮಾನ್ಯರ ಹಿತದೃಷ್ಟಿಯಿಂದ ಅತ್ಯಾವಶ್ಯಕವೂ ಹೌದು. ಇಲ್ಲದಿದ್ದರೆ ಪ್ರಶ್ನಿಸುವ, ಪ್ರತಿಭಟಿಸುವ ವ್ಯವಸ್ಥೆಯೇ ಇಲ್ಲವಾಗಿ ಶೋಷಣೆ ಮತ್ತಷ್ಟು ಹೆಚ್ಚಾಗಬಹುದು.

ಕಮ್ಯುನಿಸಮ್ ಸಿದ್ದಾಂತದ ಬಗ್ಗೆ ಅರಿವಿಲ್ಲದ, ತಪ್ಪಾಗಿ ಅರ್ಥೈಸಿಕೊಂಡಿರುವ, ವಿರೋಧಿಗಳ ಟೀಕೆಗಳಿಂದ ಬೇಸರಗೊಂಡಿರುವವರಿಗಾಗಿ ಕಮ್ಯುನಿಸಂ ಸಿದ್ದಾಂತದ ಸಾಮಾನ್ಯ ಸರಳ. ಸಂಕ್ಷಿಪ್ತ, ಹೋಲಿಕೆಗಳ ವಿವರಣೆ.

ಎಡ ಮತ್ತು ಬಲ ಪಂಥಗಳ ಬಗ್ಗೆ...

ದೇಶ ಮುಖ್ಯ - ಬಲಪಂಥೀಯರು, ವ್ಯಕ್ತಿ ಮುಖ್ಯ -   ಎಡಪಂಥೀಯರು.

ಸಾಮರ್ಥ್ಯ ಉಳ್ಳವರು ಶ್ರೇಷ್ಠರು  - ಬಲಪಂಥೀಯರು, ಎಲ್ಲರೂ ಸಮಾನರು - ಎಡಪಂಥೀಯರು.

ಸಮಾಜಕ್ಕೆ ಧರ್ಮವೇ ಸಂಜೀವಿನಿ - ಬಲಪಂಥೀಯರು, ಸಮಾಜಕ್ಕೆ ಧರ್ಮವೇ ಅಫೀಮು - ಎಡಪಂಥೀಯರು.

ಸಂಪತ್ತಿನ ವೃಧ್ಧಿಗೆ ಶ್ರೀಮಂತರ ಚಾಣಕ್ಷತೆಯೇ  ಕಾರಣ - ಬಲಪಂಥೀಯರು, ಸಂಪತ್ತಿನ ವೃಧ್ಧಿಗೆ ಕಾರ್ಮಿಕರ ಶ್ರಮವೇ ಕಾರಣ - ಎಡಪಂಥೀಯರು.

ಮಹಲು ಕಟ್ಟಿರುವುದು ನಮ್ಮ ಸ್ವಂತ ದುಡಿಮೆಯಿಂದ - ಬಲಪಂಥೀಯರು, ಮಹಲು ಕಟ್ಟಿರುವುದು ನಮ್ಮ ಬೆವರ ಹಣದಿಂದ - ಎಡಪಂಥೀಯರು.

ಶಿಸ್ತು ಮತ್ತು ತಂತ್ರಜ್ಞಾನ ನಮ್ಮ ಬಂಡವಾಳ - ಬಲಪಂಥೀಯರು, ಸಂಘಟನೆ ಮತ್ತು ಹೋರಾಟ ನಮ್ಮ ಬಂಡವಾಳ - ಎಡಪಂಥೀಯರು.

ಸ್ಪರ್ಧೆ, ಸಾಮರ್ಥ್ಯ, ಪ್ರತಿಭೆಯೇ ನಮ್ಮ ಆದ್ಯತೆ - ಬಲಪಂಥೀಯರು, ಶೋಷಣೆ, ದೌರ್ಜನ್ಯದ ವಿರುದ್ಧ ಹೋರಾಟ ನಮ್ಮ ಆದ್ಯತೆ -ಎಡಪಂಥೀಯರು.

ಬುದ್ದಿಯೇ ನಮ್ಮ ಶಕ್ತಿ - ಬಲಪಂಥೀಯರು, ಶ್ರಮವೇ ನಮ್ಮ ಶಕ್ತಿ - ಎಡಪಂಥೀಯರು. ಬಲಿಷ್ಠರ ಉಳಿವು ದುರ್ಬಲರ ಅಳಿವೇ ಇತಿಹಾಸ - ಬಲಪಂಥೀಯರು, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ಇತಿಹಾಸ - ಎಡಪಂಥೀಯರು.

ಸಾಹಿತ್ಯ, ಸಂಗೀತ, ಸಂಸ್ಕೃತಿ, ಲಲಿತಕಲೆಗಳ ಬೀಡು ನಮ್ಮ ದೇಶ - ಬಲಪಂಥೀಯರು, ಬಡವರ, ರೋಗರುಜಿನಗಳ, ಜಾತಿ ಅಸ್ಪೃಷ್ಯತೆಯ ನೆಲ ನಮ್ಮ ದೇಶ - ಎಡಪಂಥೀಯರು. ವಾಸ್ತಶಿಲ್ಪದ ಭವ್ಯತೆಯ ಸುಂದರ ಕಟ್ಟಡ ವಿಧಾನಸೌದ - ಬಲಪಂಥೀಯರು, ಕೂಲಿಕಾರ್ಮಿಕರ ನೋವಿನ ನರಳಾಟದ ಸ್ಮಶಾನ ವಿಧಾನಸೌಧ - ಎಡಪಂಥೀಯರು. ಕಣ್ಣ ಹನಿ ಮುತ್ತಾಗಿ ಕಂಡರೆ - ಬಲಪಂಥೀಯರು, ಕಣ್ಣ ಹನಿ ರಕ್ತವಾಗಿ ಕಂಡರೆ - ಎಡಪಂಥೀಯರು.

ಬಡವರನ್ನು ಶೋಷಿಸಿಯಾದರೂ ಸಂಪತ್ತನ್ನು ಗಳಿಸೋಣ - ಬಲಪಂಥೀಯರು, ಶ್ರೀಮಂತರನ್ನು ಕೊಂದಾದರೂ ಸಂಪತ್ತನ್ನು ಹಂಚೋಣ - ಎಡಪಂಥೀಯರು. ನನ್ನದೆಲ್ಲವೂ ನನ್ನದೇ - ಬಲಪಂಥೀಯರು, ನನ್ನದೆಲ್ಲವೂ ಇತರರದೇ - ಎಡಪಂಥೀಯರು. ಸೂಟುಬೂಟಿನಲ್ಲಿ ಪ್ರತಿಭೆ ಮತ್ತು ಸೌಂದರ್ಯ ಕಂಡರೆ - ಬಲಪಂಥೀಯರು, ಹರಿದ ಬಟ್ಟೆಯಲ್ಲಿ ನೋವು ಮತ್ತು ಸೌಂದರ್ಯ ಕಂಡರೆ - ಎಡಪಂಥೀಯರು.

ಆಧ್ಯಾತ್ಮಿಕ ಭಕ್ತಿಯ ತವರೂರು ಭಾರತ - ಬಲಪಂಥೀಯರು, ಸಂಘರ್ಷ, ಅಸಮಾನತೆ, ಅಸಹಿಷ್ಣತೆಯ ತವರೂರು ಭಾರತ - ಎಡಪಂಥೀಯರು. ಹೌದು, ಎರಡೂ ಪಂಥದವರು ಇದನ್ನು ಒಪ್ಪುವುದಿಲ್ಲ. ನಮ್ಮದು ಇದಕ್ಕಿಂತ ಉತ್ತಮ ಆದರ್ಶ ಹೊಂದಿದ ಸಿದ್ಧಾಂತ ಎಂದೇ ವಾದಿಸುತ್ತಾರೆ. ಮೂಲ ಸಿದ್ಧಾಂತ ಏನಾದರೂ ಇರಲಿ. ವಾಸ್ತವದ ಆಚರಣೆಯಲ್ಲಿರುವುದು ಬಹುತೇಕ ಇದೇ.

ಹಾಗಾದರೆ ಇದರಲ್ಲಿ ನಿಜವಾದ ದೇಶದ್ರೋಹಿಗಳಾರು  ? ನಿಜವಾದ ದೇಶಭಕ್ತರಾರು ? ನಮ್ಮ ಭಾರತಾಂಬೆಯ ಬುಡಕ್ಕೆ ಕೊಡಲಿ ಹಾಕುತ್ತಿರುವವರು ಯಾರು ? ಮಾನವೀಯತೆಯ ಕಗ್ಗೋಲೆ ಮಾಡುತ್ತಿರುವವರು ಯಾರು ? ಬಹಳ ಜನರಿಗೆ ಕಹಿಯಾದ - ಒಂದಷ್ಟು ಸ್ನೇಹವಲಯದ ಅಸಮಾಧಾನಕ್ಕೂ ಒಳಗಾಗಬಹುದಾದ ಸತ್ಯ ಮತ್ತು ವಾಸ್ತವದ ಹುಡುಕಾಟದ ಒಂದು ಪ್ರಯತ್ನ.

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ