ಶ್ರೀ ಯೋಗಿ ನಾರೇಯಣ ಅಧ್ಯಯನ ಕೇಂದ್ರದ "ಮಲ್ಲಾರ"
ಬೆಂಗಳೂರು ನ್ಯೂ ಬಿಇಎಲ್ ರಸ್ತೆಯಲ್ಲಿರುವ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಕೀರ್ಣದಲ್ಲಿ ಕಾರ್ಯವೆಸಗುತ್ತಿರುವ ಶ್ರೀ ಯೋಗಿ ನಾರೇಯಣ ಅಧ್ಯಯನ ಕೇಂದ್ರ (ಸದ್ಗುರು ಶ್ರೀ ಯೋಗಿ ನಾರೇಯಣ ಮಠ, ಶ್ರೀ ಕ್ಷೇತ್ರ ಕೈವಾರ, ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಇದರ ಅಧೀನ ಸಂಸ್ಥೆ)ವು ಕಳೆದ ಇಪ್ಪತ್ತಾರು ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಮಲ್ಲಾರ".
ಕೈವಾರ ಶ್ರೀ ಮಠದ ಧರ್ಮಾಧಿಕಾರಿಗಳಾದ ಡಾ. ಎಂ.ಆರ್. ಜಯರಾಮ್ ಅವರು ಪ್ರಧಾನ ಸಂಪಾದಕರು, ಪ್ರಕಾಶಕರು, ಮಾಲೀಕರು ಮತ್ತು ಮುದ್ರಕರು. ಸುಧೀರ್ಘ ಕಾಲ ಕನ್ನಡ ಜನಮನದ ಮಾತಾಗಿದ್ದು, ನಂತರ ಸ್ಥಗಿತಗೊಂಡ "ಮಂಗಳ" ವಾರಪತ್ರಿಕೆಯ ಸಂಪಾದಕರಾಗಿದ್ದ ಡಾ. ಬಾಬು ಕೃಷ್ಣಮೂರ್ತಿಯವರು ನಿರ್ವಾಹಕ ಸಂಪಾದಕರು. ೬೪ ಪುಟಗಳೊಂದಿಗೆ ಬಹುವರ್ಣಗಳಲ್ಲಿ ಪುಸ್ತಕ ರೂಪದಲ್ಲಿ (ತರಂಗ ಮಾದರಿಯಲ್ಲಿ) ಪ್ರಕಟವಾಗುತ್ತಿರುವ "ಮಲ್ಲಾರ", ಬೆಂಗಳೂರು ವಿದ್ಯಾಪೀಠದ ಲಾವಣ್ಯ ಮುದ್ರಣದಲ್ಲಿ ಮುದ್ರಣವಾಗುತ್ತದೆ.
"ಮಲ್ಲಾರ"ದ ಬಿಡಿ ಸಂಚಿಕೆಯ ಬೆಲೆ ೧೨ ರೂಪಾಯಿ. ವಾರ್ಷಿಕ ಚಂದಾ ೧೪೦ ರೂಪಾಯಿ. ಐದು ವರ್ಷಗಳ ಚಂದಾ ೫೦೦ ರೂಪಾಯಿ ಮತ್ತು ಆಜೀವ ಚಂದಾ ೧೫೦೦ ರೂಪಾಯಿಗಳಾಗಿದೆ.
ಮುನ್ನೂರು ವರ್ಷಗಳ ಹಿಂದೆ "ಕಾಲಜ್ಞಾನ" ವನ್ನು ರಚಿಸಿದ, "ಅಮರನಾರೇಯಣ ಶತಕ" ಸಹಿತ ಹತ್ತಾರು ಕೃತಿಗಳನ್ನು ಓಲೆಗರಿಗಳ ಮೇಲೆ ಸ್ವತಹಾ ಬರೆದ "ಕೈವಾರ ತಾತಯ್ಯ" ನವರು ಎಂದೇ ಪ್ರಖ್ಯಾತರಾದ, ಸದ್ಗುರು, ಕೈವಾರ ಶ್ರೀ ಯೋಗಿನಾರೇಯಣ ಯತೀಂದ್ರ ಅವರ ವಿಚಾರಗಳ ಪ್ರಚಾರದ ಮೂಲಕ, ತಾತಯ್ಯನವರ ಸೇವೆಯನ್ನೇ ಉದ್ಧೇಶವನ್ನಾಗಿರಿಸಿಕೊಂಡು ವ್ಯಕ್ತಿತ್ವ ವಿಕಸನ, ಅದ್ಯಾತ್ಮ ಮಾಸಪತ್ರಿಕೆಯಾಗಿ "ಮಲ್ಲಾರ" ಪ್ರಕಟವಾಗುತ್ತಿದೆ.
ಡಾ. ಬಾಬು ಕೃಷ್ಣಮೂರ್ತಿಯವರ ಸಂಪಾದಕೀಯ "ನಿಮ್ಮೊಡನೆ..." ಮತ್ತು "ಹೀಗೊಂದು ಅನಿಸಿಕೆ", ಡಾ. ಎಂ. ಆರ್. ಜಯರಾಮ್ ಅವರ " ಧರ್ಮ ಚಿಂತನ", ಡಾ. ಎಸ್. ಹೇಮಲತಾರವರ "ಪ್ರಾಚೀನ ಭಾರತದ ಮಹರ್ಷಿಗಳು", ಶ್ರೀಮತಿ ನಂ. ನಾಗಲಕ್ಷ್ಮಿಯವರ " ತೊರವೆ ರಾಮಾಯಣ", ಮೇಪ್ಪತ್ತೂರು ನಾರಾಯಣ ಭಟ್ಟತ್ತಿರಿಯವರ "ನಾರಾಯಣೀಯಮ್", ಡಾ. ಎಸ್. ಆರ್. ಲೀಲಾರವರ " ಕಥಾಸರಿತ್ಸಾಗರದಿಂದಾಯ್ದ ಕಥಾಮಾಲಿಕೆ", ಎನ್. ಎಸ್. ಶ್ರೀಧರಮೂರ್ತಿಗಳ "ಭಾಗವತದ ಕತೆಗಳು", ದಿ. ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ " ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ", ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳ "ಸತ್ಸಂಗ", ಗಿರಿಮನೆ ಶ್ಯಾಮರಾವ್ ಅವರ " ಪಂಚತಂತ್ರ", ಡಾ. ಧಾರಿಣಿಯವರ "ಮಹಾಭಾರತದ ನೂರು ಕಥೆಗಳು" ಮತ್ತು ಓದುಗರ ಪತ್ರಗಳ "ಪ್ರತಿಸ್ಪಂದನ" ಪ್ರಸ್ತುತ "ಮಲ್ಲಾರ" ದಲ್ಲಿ ಪ್ರಕಟವಾಗುತ್ತಿರುವ ಖಾಯಂ ಅಂಕಣಗಳಾಗಿವೆ.
ಬೆಂಗಳೂರಿನ ಕೆ. ಭೀಮ ರಾವ್, ಕಾ. ಶ್ರೀ ನಾಗರಾಜ, ಯತಿರಾಜ್ ವೀರಾಂಬುಧಿ, ಬಿಂಡಿಗನವಿಲೆ ನಾರಾಯಣಸ್ವಾಮಿ, ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಚಿಕ್ಕಮಗಳೂರಿನ ಡಾ. ಬೆಳವಾಡಿ ಮಂಜುನಾಥ, ಬಿ. ಆರ್. ರವೀಂದ್ರ, ಹೆಚ್. ವಿ. ಶ್ರೀನಿವಾಸ, ಶ್ರೀಮತಿ ಅಂಬಿಕಾ ಅನಂತ್, ವಿನಯ್ ವಾರಣಾಸಿ ಮೊದಲಾದವರ ಅಧ್ಯಾತ್ಮಿಕ, ವ್ಯಕ್ತಿತ್ವ ವಿಕಸನ ಸಂಬಂಧಿ ಬರೆಹಗಳು "ಮಲ್ಲಾರ" ದಲ್ಲಿ ಪ್ರಕಟವಾಗುತ್ತಿರುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!