ನಮಗೆ ಗೆಳೆಯರು ಬೇಕೇ ಬೇಕು. ಬಾಲ್ಯದಲ್ಲಿ ಹಲವರ ಜೊತೆ ಗೆಳೆತನ ಬೆಳೆಸಿಕೊಳ್ಳುತ್ತೇವೆ. ಆಗಿನದು ಮುಗ್ದ ಮನಸ್ಸು. ಆ ಗೆಳೆತನಗಳಲ್ಲಿ ಲೆಕ್ಕಾಚಾರಗಳು ಇರೋದಿಲ್ಲ. ಇತರರನ್ನು ತೂಗಿ ನೋಡುವ ಪ್ರಬುದ್ಧತೆಯೂ ನಮ್ಮಲ್ಲಿ ಬೆಳೆದಿರೋದಿಲ್ಲ.

ವಯಸ್ಸಾದಂತೆ ಗೆಳೆತನ ಬೆಳೆಸಿಕೊಳ್ಳುವಾಗ ಜಾಗ್ರತೆ ವಹಿಸುತ್ತೇವೆ. ಯಾಕೆಂದರೆ ಎಲ್ಲರನ್ನೂ ತೂಗಿ ನೋಡಲು ಕಲಿತಿರುತ್ತೇವೆ. ಈ ವ್ಯಕ್ತಿಯ ಜೊತೆ ಸ್ನೇಹ ಮಾಡಿಕೊಂಡರೆ ಈಗ ಏನು ಲಾಭ ಆದೀತು? ಮುಂದೇನು ಲಾಭವಾದೀತು? ಎಂಬ ಪ್ರಶ್ನೆಗಳೇ ಮುಖ್ಯವಾಗುತ್ತವೆ.

ಈ ಎರಡು ಪ್ರಶ್ನೆಗಳ ಆಧಾರದಿಂದ ಶುರು ಮಾಡಿದ ಗೆಳೆತನ ದೀರ್ಘ ಕಾಲ ಉಳಿಯೋದಿಲ್ಲ. ಆದರೆ, ಇನ್ನೊಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಂಡು, ಪರಸ್ಪರ ಗೌರವ, ಮೆಚ್ಚುಗೆ, ಪ್ರೀತಿಯ ಅಡಿಗಟ್ಟಿನ ಮೇಲೆ ಕಟ್ಟಿದ ಸ್ನೇಹಸೌಧ ದೀರ್ಘ ಕಾಲ ಉಳಿಯುತ್ತದೆ.

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಾಚಾ ಗೆಳೆಯರು ಕೆಲವೇ ಕೆಲವರು. ಉಳಿದವರೆಲ್ಲ ಕೇವಲ ಪರಿಚಿತರು ಅಥವಾ ಯಾವುದೋ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಪರ್ಕ ಉಳಿಸಿಕೊಂಡವರು, ಅಲ್ಲವೇ?

ಈ ಸಂಪರ್ಕ ಉಳಿಸಿಕೊಂಡ ವ್ಯಕ್ತಿಗಳು ಮತ್ತು ಸಾಚಾ ಗೆಳೆಯರ ನಡುವೆ ದೊಡ್ಡ ವ್ಯತ್ಯಾಸ ಇರುತ್ತದೆ. ಮೊದಲ ವರ್ಗದ ವ್ಯಕ್ತಿಗಳೊಡನೆ ಮನಸ್ಸು ಬಿಚ್ಚಿ ಮಾತನಾಡಲಾಗದು. ಎರಡನೇ ವರ್ಗದವರೊಡನೆ ಮುಚ್ಚುಮರೆಯಿಲ್ಲದೆ ಮಾತುಕತೆ ಸಾಧ್ಯ. ನಿಮಗೆ ನಿಮ್ಮೂರಿನಲ್ಲಿ ಇಂತಹ ಎಷ್ಟು ಗೆಳೆಯರಿದ್ದಾರೆ ಲೆಕ್ಕ ಮಾಡಿ. ಇಂತಹ ಐದಾರು ಗೆಳೆಯರಿದ್ದರೆ ನೀವು ಪುಣ್ಯವಂತರು.

ವಯಸ್ಸು ಅರುವತ್ತು ದಾಟಿದಾಗ ಸಾಚಾ ಗೆಳೆಯರೇ ನಮ್ಮ ನಿಜವಾದ ಸಂಪತ್ತು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಸಾಚಾ ಗೆಳೆಯರನ್ನು ಕೊನೆಯ ವರೆಗೂ ಉಳಿಸಿಕೊಳ್ಳಲು ಎಚ್ಚರದಿಂದಿರಿ. ಏನೇ ಭಿನ್ನಾಭಿಪ್ರಾಯ ಮೂಡಿದರೂ ಆಗಾಗಲೇ ಪರಿಹರಿಸಿಕೊಳ್ಳಿರಿ. ಇಲ್ಲವಾದರೆ ಗೆಳೆಯರೇ ಇಲ್ಲವಾಗಿ ನಂತರ ಒಬ್ಬಂಟಿತನ ಕಾಡುತ್ತದೆ. ಹಾಗಾಗಬಾರದು ಎಂದಾದರೆ, ಬದುಕು ಕ್ಷಣಿಕವೆಂಬ ಎಚ್ಚರ ಯಾವಾಗಲೂ ಜಾಗೃತವಾಗಿರಲಿ.

ಫೋಟೋ: ಯುವ ಗೆಳೆಯಗೆಳತಿಯರ ಗುಂಪು