ಒಲಿಂಪಿಕ್ ಕ್ರೀಡಾಕೂಟವು ಕೇವಲ ಕ್ರೀಡೆಗಳ ಸಂಭ್ರಮವಷ್ಟೇ ಅಲ್ಲ, ಅದು ಪ್ರಾಂತ್ಯ, ದೇಶ, ಜಾತಿ, ಬಣ್ಣ ಇವೆಲ್ಲವುಗಳನ್ನೂ ಮೀರಿದ ಮಾನವ ಸಂಸ್ಕೃತಿ, ಏಕತೆ ಮತ್ತು ಶಾಂತಿಯ ಪ್ರತೀಕ. ಈ ಕುರಿತಾಗಿ ಸುಮನ್ ಪ್ರಿಯಾ ಅವರು ಬರೆದಿರುವ ಮಹತ್ವದ ಕೃತಿ ʻಒಲಿಂಪಿಕ್ಸ್ - 1 ಚರಿತ್ರೆಗೊಂದು ದೀವಿಗೆʼ. ಕೃತಿಗೆ ಅವರು ಬರೆದ ʻಲೇಖಕರ ಮಾತುʼ ನಿಮ್ಮ ಓದಿಗಾಗಿ..
“ಒಲಿಂಪಿಕ್ ಕ್ರೀಡಾಕೂಟವು ಕೇವಲ ಕ್ರೀಡೆಗಳ ಸಂಭ್ರಮವಷ್ಟೇ ಅಲ್ಲ, ಅದು ಪ್ರಾಂತ್ಯ, ದೇಶ, ಜಾತಿ, ಬಣ್ಣ ಇವೆಲ್ಲವುಗಳನ್ನೂ ಮೀರಿದ ಮಾನವ ಸಂಸ್ಕೃತಿ, ಏಕತೆ ಮತ್ತು ಶಾಂತಿಯ ಪ್ರತೀಕ. ಪ್ರಾಚೀನ ಗ್ರೀಸಿನ ಒಲಿಂಪಿಯಾ ಎನ್ನುವ ಹಳ್ಳಿಯಲ್ಲಿ ನಡೆಯುತ್ತಿದ್ದ ಒಲಿಂಪಿಕ್ ಕ್ರೀಡಾಕೂಟವು ಒಂದು ಕಾಲದಲ್ಲಿ ಬಲವಂತವಾಗಿ ನಿಲ್ಲಿಸಲ್ಪಟ್ಟರೂ, ಪ್ರಾಕೃತಿಕ ವಿಕೋಪಗಳಿಂದ ಇಡೀ ಒಲಿಂಪಿಯಾ ಹಳ್ಳಿಯೇ ಕೊಚ್ಚಿ ಹೋಗಿ, ಒಲಿಂಪಿಕ್ಸ್ ನ ಎಲ್ಲಾ ಕುರುಹುಗಳೂ ಭೂಮಿಯ ಒಡಲಲ್ಲಿ ಹೂತುಹೋದರೂ, ಅದರ ಜೀವ ಇನ್ನೂ ಮಿಡಿಯುತ್ತಲೇ ಇತ್ತು ಎಂದೆನಿಸುತ್ತದೆ.
ಬರೋಬ್ಬರಿ ೧೫೦೩ ವರ್ಷಗಳ ನಂತರ ಅದು ಮತ್ತೆ ಆಧುನಿಕ ಒಲಿಂಪಿಕ್ಸ್ ರೂಪದಲ್ಲಿ ೧೮೯೬ರಲ್ಲಿ ಆರಂಭವಾಯಿತು. ಇದು ಆರಂಭವಾಗಲು ಮುಖ್ಯ ಕಾರಣ, ಆಧುನಿಕ ಒಲಿಂಪಿಕ್ಸ್ನ ಪಿತಾಮಹರಾದ ಪಿಯರೆ ಡೆ ಕೂಬರ್ಟಿನ್ ಅವರ 'ಜಾಗತಿಕ ಕ್ರೀಡಾ ಸ್ಫೂರ್ತಿ' ಎನ್ನುವ ಕನಸು. ಕ್ರೀಡೆಯು ಕೇವಲ ಫಲಿತಾಂಶ ಮತ್ತು ಪ್ರಶಸ್ತಿಗೆ ಸೀಮಿತವಾಗಬಾರದು; ಬದಲಿಗೆ ಸೀಮೆಗಳನ್ನು ದಾಟಿ, ಹೊಸ ರೂಪದ ಶಿಕ್ಷಣಕ್ಕೆ ದಾರಿಯಾಗಿ, ದೇಶ-ದೇಶಗಳ ನಡುವೆ. ಕ್ರೀಡಾಪಟುಗಳ ನಡುವೆ ಸ್ನೇಹದ ಸೇತುವೆಯಾಗಿ ಕ್ರೀಡಾಸ್ಫೂರ್ತಿಯನ್ನು ಮೆರೆಯುವಂತಿರಬೇಕು ಎನ್ನುವುದೇ ಕೂಬರ್ಟಿನ್ರವರ ಆಶಯವಾಗಿತ್ತು.
ಅಂದರೆ ಒಲಿಂಪಿಕ್ಸ್ ಎಲ್ಲಾ ರೀತಿಯಲ್ಲೂ ಪರ್ಫೆಕ್ಟ್ ಆಗಿತ್ತು ಎಂದಲ್ಲ. ಅಲ್ಲೂ ಮಹಿಳೆಯರಿಗೆ ಅವಕಾಶವಿರಲಿಲ್ಲ. ಪ್ರಾರಂಭವಾದಾಗ ಇದ್ದ ನಿಯಮಗಳಿಂದ ಇದು ಕೇವಲ 'ಎಲೀಟ್ ಕ್ಲಾಸ್' ಗಾಗಿ ಮಾಡಿದ ಕ್ರೀಡಾಕೂಟ ಎನ್ನುವಂತೆಯೂ ಅನಿಸುತ್ತಿತ್ತು. ಆದರೆ ಕ್ರೀಡಾಕೂಟವು ಜನಪ್ರಿಯವಾದಂತೆ ಇಲ್ಲೂ ಸಮಾನತೆಗಾಗಿ ನಡೆದ ಹೋರಾಟ, ಪ್ರತಿಭಟನೆ ಮತ್ತು ಹೊಸ ಆಲೋಚನೆಗಳ ಫಲವಾಗಿ ಬದಲಾವಣೆಯ ಗಾಳಿ ಬೀಸಿ, ಹೊಸ ಕ್ರೀಡೆಗಳ ಸೇರ್ಪಡೆ, ಮಹಿಳೆಯರ ಭಾಗವಹಿಸುವಿಕೆ ಮತ್ತು ತಾಂತ್ರಿಕ ಅಭಿವೃದ್ಧಿಗಳಿಂದ ಒಲಿಂಪಿಕ್ಸ್ ಸಮೃದ್ಧಗೊಳ್ಳುತ್ತಾ ಹೋಯಿತು.
20ನೇ ಶತಮಾನದಲ್ಲಿ ನಡೆದ ಯುದ್ಧಗಳು ಮತ್ತು ರಾಜಕೀಯ ಉದ್ವಿಗ್ನತೆಗಳು ಒಲಿಂಪಿಕ್ಸ್ ಮೇಲೆ ಖಂಡಿತವಾಗಿಯೂ ಪರಿಣಾಮಗಳನ್ನು ಬೀರಿದವು. ಆದರೆ ಈ ಕ್ರೀಡಾಕೂಟವು ಯುದ್ಧದ ಸವಾಲುಗಳನ್ನೂ ಮೀರಿ, ಅದರ ಪರಿಣಾಮಗಳನ್ನು ಮೆಟ್ಟಿ ನಿಂತು ಜಾಗತಿಕ ಶಾಂತಿ ಸಂದೇಶವನ್ನು ಸಾರುವ ಒಂದು ಬಹುಮುಖ್ಯ ವೇದಿಕೆಯಾಯಿತು. ಇದರೊಂದಿಗೆ ಚಳಿಗಾಲದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ಗಳ ಆರಂಭವು ಕ್ರೀಡಾಕೂಟಕ್ಕೆ ಹೊಸ ಅರ್ಥವನ್ನು ಕೊಟ್ಟವು. ೨೧ನೆಯ ಶತಮಾನದಲ್ಲಿ ಆದ ತಾಂತ್ರಿಕ ಬದಲಾವಣೆಗಳು ಒಲಿಂಪಿಕ್ಸ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿವೆ.
ಹೊಸ ಮೈಲುಗಲ್ಲುಗಳನ್ನು ಸೃಷ್ಟಿಸಿ, ಸಾಧನೆಗಳನ್ನು ಮಾಡಿದ ಭಾರತವ ಕ್ರೀಡಾಪಟುಗಳು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಅವರು ಬರೆದ ಪ್ರತಿಯೊಂದು ದಾಖಲೆಯೂ ಭಾರತೀಯರ ಪಾಲಿಗೆ ಅತ್ಯಮೂಲ್ಯ ಕಾಣಿಕೆಯಾಗಿದೆ.
ಬಹಳ ವೇಗವಾಗಿ ಬದಲಾಗುತ್ತಿರುವ ಸಂದರ್ಭಗಳಲ್ಲಿ ಆರ್ಥಿಕ ಸಮಸ್ಯೆಗಳು ಮತ್ತು ಪರಿಸರದ ಸಂರಕ್ಷಣೆಯು ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜಕರಿಗೆ ಮಹತ್ತರದ ಸವಾಲುಗಳಾಗಿವೆ. ಇಂದಿನ ದಿನಗಳಲ್ಲಿ ಇ-ಸ್ಪೋರ್ಟ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನಗಳಂತಹ ಹೊಸ ಆಯಾಮಗಳು ಒಲಿಂಪಿಕ್ಸ್ ಭವಿಷ್ಯವನ್ನು ರೂಪಿಸುತ್ತಿವೆ.
ಪ್ರಾಚೀನ ಗ್ರೀಸಿನ ಒರಟಾದ ನಿಯಮಗಳ ಕ್ರೀಡಾಕೂಟಗಳಿಂದ ಆರಂಭವಾಗಿ ಹಲವು ಹಂತಗಳನ್ನು ದಾಟಿ, ರೂಪಾಂತರಗೊಂಡು, ಈಗ ಭವಿಷ್ಯದ ಬದಲಾವಣೆಗಳತ್ತ ಸಾಗುತ್ತಿರುವ ಮಹಾಸಾಗರದಂತಹ ಒಲಿಂಪಿಕ್ಸ್ ಕ್ರೀಡಾಕೂಟವು ಇಲ್ಲಿಯವರೆಗೆ ಅನಾವರಣಗೊಳಿಸಿದ ಹಾಗೂ ಇನ್ನೂ ಅನಾವರಣಗೊಳಿಸಬೇಕಾದ ಕ್ರೀಡಾಲೋಕದ ಅದ್ಭುತಗಳ ಸಂಗ್ರಹವೇ ಒಲಿಂಪಿಕ್ಸ್ ಚರಿತ್ರೆಗೊಂದು ದೀವಿಗೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!