War is an act of God, ಮಂದಿರ, ಮಸೀದಿ, ಚರ್ಚು, ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೀಗೆ ಮಾತನಾಡುವುದನ್ನು ಕೇಳುತ್ತಿದ್ದೇವೆ. ದೇವರ ಆಟ ಬಲ್ಲವರಾರು? ದೇವರಿಗೆ ಯುದ್ಧ ಬೇಕಾಗಿದೆಯೇ ? ಈ ಜಗತ್ತೇ ದೇವರ ಸೃಷ್ಟಿ ಎಂದು ನಂಬಿರುವವರ ಪಾಲಿಗೆ ಈ ಯುದ್ಧ ಸಹ ಆತನ ಸೃಷ್ಟಿಯೇ ಎಂದು ಭಾವಿಸಬೇಕಾಗುತ್ತದೆ. ಏಕೆಂದರೆ ಆತ ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ. ಆದ್ದರಿಂದಲೇ ಯುದ್ಧದ ದುಷ್ಪರಿಣಾಮ ಎಲ್ಲಾ ಧರ್ಮ, ದೇಶಗಳಿಗೂ ವ್ಯಾಪಿಸಿದೆ.

ಈ ಧರ್ಮಗಳ ದೇವರುಗಳು ಮನಸ್ಸು ಮಾಡಿದ್ದರೆ ಒಂದೇ ಕ್ಷಣದಲ್ಲಿ ಯುದ್ಧ  ನಿಲ್ಲಿಸಬಹುದಿತ್ತು. ದೇವರಿಗೆ ಅಸಾಧ್ಯವಾದುದು ಯಾವುದಿದೆ. ಆದರೆ ದೇವರು ಪರೀಕ್ಷೆ ಮಾಡುತ್ತಿದ್ದಾನೆ. ಅವನಿಗೆ ಇಷ್ಟವಿದ್ದವರು ಉಳಿಯುತ್ತಾರೆ ಇಲ್ಲದಿದ್ದವರು ಸಾಯುತ್ತಾರೆ. ಅದು ದೈವೇಚ್ಚೆ ಎಂದು ಅರ್ಥ. ಜನ ಭಯ ಪಡುವ ಅವಶ್ಯಕತೆ ಇಲ್ಲ ! ವಿಷಯ ಇಷ್ಟು ಸರಳವಿದ್ದರು ಎಲ್ಲರೂ ಯುದ್ಧದ ಬಗ್ಗೆ ಎಚ್ಚರಿಕೆಯ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂದರೆ ದೇವರ ಶಕ್ತಿಯನ್ನೇ ಅನುಮಾನಿಸುತ್ತಿದ್ದಾರೆ. ದೇವರಿಗೇ ಪ್ರತಿರೋಧ ಒಡ್ಡುತ್ತಿದ್ದಾರೆ. ಯುದ್ಧ ನಿಲ್ಲಿಸಲು ಸರ್ಕಸ್ ಮಾಡುತ್ತಿದ್ದಾರೆ.

ದೇವರಿಗೇನು ಬುದ್ದಿ ಇಲ್ಲವೇ,  ಯಾರನ್ನು ಸಾಯಿಸಬೇಕು, ಯಾರನ್ನು ಉಳಿಸಬೇಕು, ಯಾವಾಗ ಯುದ್ಧ ನಿಲ್ಲಿಸಬೇಕು ಎಂದು ಆತನಿಗೆ ತಿಳಿದಿದೆಯಲ್ಲವೇ ? ಮತ್ತೆ ನಮ್ಮ ಪ್ರಯತ್ನ ಏಕೆ. ಅಲ್ಲಾ, ಬ್ರಹ್ಮ, ಜೀಸಸ್… ಅಬ್ಬಾ, ಒಬ್ಬರಿಗಿಂತ ಒಬ್ಬರು ಬಲಶಾಲಿಗಳು.‌ ಅಂತಹವರ ಸೃಷ್ಟಿಯಲ್ಲಿ  ಒಂದು ದೇಶದ ಅಧ್ಯಕ್ಷನೆಂಬ ಮನುಷ್ಯ ಪ್ರಾಣಿ ಯುದ್ಧ ಮಾಡಿ ಎಲ್ಲರನ್ನೂ ನಾಶ ಮಾಡಲು   ಪ್ರಯತ್ನಿಸುತ್ತಿದ್ದಾನೆ ಎಂದರೆ ನಗು ಬರುತ್ತದೆಯಲ್ಲವೇ? ನೋಡಿ, ಆಗಲೇ ಒಬ್ಬರು ಹೇಳುತ್ತಿದ್ದಾರೆ, ಅಯ್ಯೋ ಮನುಷ್ಯ ತನ್ನ ಚೇಷ್ಟೆಗಳಿಂದ ಯುದ್ಧ ಸೃಷ್ಟಿಗೆ ಕಾರಣವಾದರೆ ದೇವರು ಏನು ಮಾಡಲು ಸಾಧ್ಯ. ಅವನನ್ನೇಕೆ ದೂರುವಿರಿ ಎಂದು. ಎಲ್ಲಕ್ಕೂ ದೇವರನ್ನೇ ಹೊಣೆ ಮಾಡುವುದು ಮೂರ್ಖತನ.

ಹೌದಲ್ಲವೇ, ಈ ವಿಷಯದಲ್ಲಿ ದೇವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾದರೆ ದೇವರು ಮಾಡುವುದಾದರೂ ಏನು ?  ಯುದ್ಧ ಮನುಷ್ಯನ ಸೃಷ್ಟಿ ಎನ್ನುವುದಾದರೆ ದೇವರೂ ಸಹ ಮನುಷ್ಯನ ಸೃಷ್ಟಿಯೇ ಆಗಿರಬೇಕು. ಯುದ್ಧವನ್ನು  ನಿಯಂತ್ರಿಸಲಾಗದ ದೇವರು ಇನ್ನು ಇಡೀ ಜಗತ್ತನ್ನು ಹೇಗೆ ನಿಯಂತ್ರಿಸುತ್ತಾನೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆಯಲ್ಲವೇ? ಕಷ್ಟ ಕಾಲದಲ್ಲಿ ದೇವರು ರಕ್ಷಣೆಗೆ ಬರಲಿಲ್ಲವೆಂದರೆ ಆತ ಇರುವುದಾದರೂ ಏತಕ್ಕೆ. ಹಿಂದಿನ ಜನ್ಮ, ಮುಂದಿನ ಜನ್ಮ, ಪಾಪ ಪುಣ್ಯ, ಕರ್ಮ ಹೀಗೆ ಕಾಲ್ಪನಿಕವಾಗಿ ಸಮರ್ಥಿಸಿಕೊಳ್ಳುತ್ತಾ ಇರುವುದು ಇನ್ನೂ ಎಷ್ಟು ದಿನ. ನೀವು ಯಾವುದೇ ಕೋನದಿಂದ ಯೋಚಿಸಿದರೂ ಸಾಮಾನ್ಯ ಜನರ ನಂಬಿಕೆಯ ದೇವರು ಎಂಬ ವ್ಯಕ್ತಿ ಅಥವಾ ಶಕ್ತಿ ಇರುವ‌ ಸಾಧ್ಯತೆ ತುಂಬಾ ಕಡಿಮೆ.

ಪ್ರಕೃತಿ ಎಂಬುದು ಮಾತ್ರ ಅಸ್ತಿತ್ವದಲ್ಲಿ ಇದೆ. ಅದೇ ವಾಸ್ತವ. ಇಲ್ಲಿ ಯಾವುದನ್ನು ಸೃಷ್ಟಿಸಲು ಸಾಧ್ಯವಿಲ್ಲ ಮತ್ತು ಯಾವುದನ್ನು ನಾಶ ಮಾಡಲು ಸಾಧ್ಯವಿಲ್ಲ. ಕೇವಲ ರೂಪ ಬದಲಾಗುತ್ತದೆ. ಎಷ್ಟೊಂದು ನಿಜವಲ್ಲವೇ? ಯುದ್ಧ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದರ ರೂಪ ಮಾತ್ರ ಬದಲಾಗುತ್ತಿರುತ್ತದೆ. ಪ್ರಕೃತಿ ಹೇಗೆ ಸೃಷ್ಟಿಯಾಯಿತು ಎಂಬುದನ್ನು ಸ್ವಲ್ಪ ಮಟ್ಟಿಗೆ ವಿಜ್ಞಾನಿಗಳು ಹೇಳುತ್ತಾರೆ. ದೇವರೇ ಪ್ರಕೃತಿಯನ್ನು ಸೃಷ್ಟಿ ಮಾಡಿದ್ದು ಎಂದರೆ ದೇವರನ್ನು ಸೃಷ್ಟಿ ಮಾಡಿದ್ದು ಯಾರು ಎಂಬ ಪ್ರಶ್ನೆಯೂ ಕಾಡುತ್ತದೆ.

ಪ್ರಕೃತಿ ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ದೇವರು. ಅದು ಒಂದು ನಂಬಿಕೆ. ಇಷ್ಟಪಡುವವರು ನಂಬುತ್ತಲೇ ಇರಬಹುದು. ಯಾವುದೇ ಅಡ್ಡಿ ಇಲ್ಲ. ನಂಬದವರು ಪ್ರಶ್ನಿಸುತ್ತಲೇ ಇರಬಹುದು. ಅದಕ್ಕೂ ಅಡ್ಡಿ ಮಾಡಬಾರದು. ದೇವರೇ ನೇರವಾಗಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರೆಗೂ… ಅವನ ಪರವಾಗಿ ಯಾವುದೇ ಧರ್ಮದ ಯಾರೇ ಉತ್ತರಿಸಿದರೂ ನಾನಂತೂ ನಂಬುವುದಿಲ್ಲ. ಎಲ್ಲಿಯೋ ಯುದ್ಧ ನಡೆದರೆ ಅಡುಗೆ ಮಾಡುವ ಗ್ಯಾಸ್ ಗಾಗಿ ನಾವು ಇಲ್ಲಿ ಪರದಾಡುತ್ತಿದ್ದೇವೆ ಎಂದರೆ ಯುದ್ಧದ ಭಯಂಕರ ದುಷ್ಪರಿಣಾಮ ಯೋಚಿಸಿ. ಯುದ್ಧ ಬೇಕೆ ಯುದ್ಧ? ನಗು ಅಥವಾ ದು:ಖ, ಮನೆ ಅಥವಾ ಸ್ಮಶಾನ, ಹೂವು ಅಥವಾ ಬಂದೂಕು, ಶಾಂತಿ ಅಥವಾ ಸರ್ವನಾಶ, ನಮ್ಮ ಆಯ್ಕೆ ಯಾವುದು?

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ