ಪುಸ್ತಕ ಮಳಿಗೆಯೊಂದಕ್ಕೆ ಹೋಗಿ, “ಬಣ್ಣ ತುಂಬಲಿಕ್ಕಾಗಿ ಬೇರೆಬೇರೆ ವಿನ್ಯಾಸಗಳಿರುವ ಪುಸ್ತಕ ಕೊಡಿ” ಎಂದರೆ ಅವರು ನೂರಾರು ಪುಸ್ತಕಗಳನ್ನು ನಿಮಗೆ ತೋರಿಸುತ್ತಾರೆ. ಅಬ್ಬಬ್ಬಾ! ಎಷ್ಟೆಲ್ಲಾ ವಿನ್ಯಾಸಗಳಿರುತ್ತವೆ!

ಹಣ್ಣುಗಳು: ಮಾವು, ಪಪ್ಪಾಯಿ, ಸೇಬು, ಸೀಬೆ, ಸಪೋಟ, ದಾಳಿಂಬ, ದ್ರಾಕ್ಷಿ, ಗೇರು, ಹಲಸು, ಅನಾನಸ್

ಹೂಗಳು: ಗುಲಾಬಿ, ದಾಸವಾಳ, ಸೂರ್ಯಕಾಂತಿ, ಕಮಲ, ಬ್ರಹ್ಮಕಮಲ, ಸೇವಂತಿಗೆ, ಮಲ್ಲಿಗೆ, ಡೇಲಿಯಾ

ವಾಹನಗಳು: ಕಾರು, ಬಸ್, ಡಬಲ್-ಡೆಕರ್ ಬಸ್, ಲಾರಿ, ಜೀಪ್, ಆಟೋರಿಕ್ಷಾ, ಸ್ಕೂಟರ್, ಬೈಕ್, ಸೈಕಲ್

ಮನೆಗೆಲಸದ ಸಾಧನಗಳು: ಚೂರಿ, ಕತ್ತಿ, ಕತ್ತರಿ, ಸುತ್ತಿಗೆ, ಸ್ಕ್ರೂಡ್ರೈವರ್, ಉಳಿ, ಅರ, ಪೈಪ್-ರೆಂಚ್, ದಬ್ಬಣ

ಅಡುಗೆ ಪಾತ್ರೆಗಳು: ಸಣ್ಣ ಪಾತ್ರೆಗಳು, ದೊಡ್ಡ ಪಾತ್ರೆಗಳು, ಕಾವಲಿ, ಬಾಣಲೆ, ಸೌಟು, ಪ್ಲೇಟು, ಬಟ್ಟಲು, ಲೋಟ

ಪ್ರಾಣಿಗಳು: ಆನೆ, ಹುಲಿ, ಸಿಂಹ, ಚಿರತೆ, ನರಿ, ತೋಳ, ಕಾಡುಹಂದಿ, ಖಡ್ಗಮೃಗ, ನೀರಾನೆ, ಜಿರಾಫೆ, ಜೀಬ್ರಾ

ಸಾಕುಪ್ರಾಣಿಗಳು: ನಾಯಿ, ಬೆಕ್ಕು, ದನ, ಎತ್ತು, ಎಮ್ಮೆ, ಕೋಣ, ಕೋಳಿ, ಬಾತುಕೋಳಿ, ಹಂದಿ, ಕುದುರೆ, ಕುರಿ

ಪಕ್ಷಿಗಳು: ಕಾಗೆ, ಪಾರಿವಾಳ, ಕೋಗಿಲೆ, ಗಿಡುಗ, ಹದ್ದು, ರಣಹದ್ದು, ಹಂಸ, ಬೆಂಕಿಹಕ್ಕಿ, ಗೂಬೆ, ರಾಬಿನ್

ಆಟಗಳ ಸಲಕರಣೆಗಳು: ಕ್ರಿಕೆಟ್, ಹಾಕಿ, ಫುಟ್-ಬಾಲ್, ವಾಲಿಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್, ಬಾಸ್ಕೆಟ್-ಬಾಲ್

ಪ್ರಕೃತಿಯ ಚಿತ್ರಗಳು: ನದಿಗಳು, ತೊರೆಗಳು, ಕೆರೆಗಳು, ಗುಡ್ಡಬೆಟ್ಟ-ಪರ್ವತಗಳು, ಕಾಡು, ಮಂಜುಗಡ್ಡೆ, ಆಕಾಶ

ತಿನಿಸುಗಳು: ಇಡ್ಲಿ, ದೋಸೆ, ವಡೆ, ಅಂಬಡೆ, ಉಪ್ಪಿಟ್ಟು, ಶ್ಯಾವಿಗೆ, ಕ್ಷೀರ, ಗುಲಾಬ್-ಜಾಮೂನ್, ಉಂಡೆ, ನಿಪ್ಪಟ್ಟು

ಕಟ್ಟಡಗಳು: ಮನೆಗಳು, ಬಂಗಲೆಗಳು, ಕಚೇರಿಗಳು, ಬಹುಮಹಡಿ ಕಟ್ಟಡಗಳು, ಶಾಲೆಗಳು, ಆಸ್ಪತ್ರೆಗಳು

ಪೀಠೋಪಕರಣಗಳು: ಕುರ್ಚಿ, ಮೇಜು, ದುಂಡುಮೇಜು, ಊಟದ ಮೇಜು, ಆರಾಮಕುರ್ಚಿ, ಕಪಾಟು, ಸ್ಟೂಲು

ಉಡುಪುಗಳು: ಅಂಗಿ, ಚಡ್ಡಿ, ಪ್ಯಾಂಟು, ಲಂಗ, ಸೀರೆ, ದಾವಣಿ, ಮೇಲಂಗಿ, ಕೋಟು, ಪಂಚೆ, ಬನಿಯನ್, ರವಕೆ

ಧಾನ್ಯಗಳು: ಅಕ್ಕಿ, ಗೋಧಿ, ಜೋಳ, ರಾಗಿ, ಸಜ್ಜೆ, ಬಾರ್ಲಿ, ತೊಗರಿಬೇಳೆ, ಉದ್ದಿನಬೇಳೆ, ಉದ್ದು, ಸಿರಿಧಾನ್ಯಗಳು

ತರಕಾರಿಗಳು: ಸೌತೆ, ಬೆಂಡೆ, ತೊಂಡೆ, ಬದನೆ, ಟೊಮೆಟೊ, ಚೀನಿ, ಕುಂಬಳ, ಪಡುವಲ, ಹೂಕೋಸು, ಕ್ಯಾರೆಟ್

ಇಂತಹ ತರತರದ ವಿನ್ಯಾಸಗಳಿರುವ ರಾಶಿರಾಶಿ ಪುಸ್ತಕಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ದು ತಂದರಾಯಿತು. ಜೊತೆಗೆ ಬಣ್ಣದ ಪೆನ್ಸಿಲುಗಳು, ಪೆನ್ನುಗಳು, ಸ್ಕೆಚ್ ಪೆನ್ನುಗಳು, ವಾಟರ್ ಕಲರ್ ಪೆಟ್ಟಿಗೆ ತನ್ನಿ. ಕೆಲವರು 30 - 50 ಬಣ್ಣಗಳ ಪೆನ್ಸಿಲುಗಳು ಅಥವಾ ಪೆನ್ನುಗಳನ್ನು ತರುತ್ತಾರೆ. ಖುಷಿಗಾಗಿ ವಿನ್ಯಾಸಗಳಿಗೆ ಬಣ್ಣ ತುಂಬುವ ಚಟುವಟಿಕೆಗೆ ಅಷ್ಟೆಲ್ಲ ಪೆನ್ಸಿಲು ಅಥವಾ ಪೆನ್ನುಗಳ ಅಗತ್ಯವಿಲ್ಲ. 5 - 6 ಪೆನ್ಸಿಲ್/ ಪೆನ್ ಇದ್ದರೂ ಸಾಕು.

ಈ ಚಟುವಟಿಕೆಯಲ್ಲಿ ಸೋಲು ಎಂಬುದು ಇಲ್ಲವೇ ಇಲ್ಲ. ಯಾಕೆಂದರೆ, ಯಾವುದೇ ವಿನ್ಯಾಸಕ್ಕೆ ನೀವು ನಿಮಗೆ ಇಷ್ಟ ಬಂದ ಬಣ್ಣ ತುಂಬಬಹುದು. ಉದಾಹರಣೆಗೆ, ಕಾಗೆಗೆ ಕಪ್ಪು ಬಣ್ಣವನ್ನೇ ಹಾಕಬೇಕೆಂದಿಲ್ಲ. ನೀಲಿ ಬಣ್ಣವನ್ನೂ ಹಾಕಬಹುದು. ಪ್ರಕೃತಿಯನ್ನೇ ಗಮನಿಸಿ: ಹೂಗಳಲ್ಲಿ, ಸಸ್ಯಗಳಲ್ಲಿ, ಪಕ್ಷಿಗಳಲ್ಲಿ, ಹಾವುಗಳಲ್ಲಿ ಅದೆಷ್ಟು ಬಣ್ಣಗಳು!

ಒಂದು ವಿನ್ಯಾಸವನ್ನು ಬಣ್ಣ ತುಂಬಲಿಕ್ಕಾಗಿ ಆಯ್ದು ಕೊಂಡಾಗ, ಅದರಲ್ಲಿ ಯಾವ ಭಾಗಕ್ಕೆ ಎದ್ದು ಕಾಣುವ ಬಣ್ಣ ಹಾಕಬೇಕು, ಎಲ್ಲಿ ತೆಳು ಬಣ್ಣ ಹಾಕಬೇಕು ಎಂಬುದು ನಿಮ್ಮ ಇಷ್ಟ. ಒಂದೇ ವಿನ್ಯಾಸವನ್ನು ಇಬ್ಬರು ವ್ಯಕ್ತಿಗಳಿಗೆ ಬಣ್ಣ ಹಾಕಲಿಕ್ಕಾಗಿ ಕೊಟ್ಟರೆ, ಅವರಿಬ್ಬರೂ ಯಾವತ್ತೂ ಒಂದೇ ವಿಧದಲ್ಲಿ ಅದಕ್ಕೆ ಬಣ್ಣ ತುಂಬುವುದಿಲ್ಲ. ಅಂತಿಮ ಬಣ್ಣ ತುಂಬಿದ ವಿನ್ಯಾಸ, ಅವರು ಹಾಕಿದ ಬಣ್ಣಗಳು ಮತ್ತು ಅವರು ಬಣ್ಣ ತುಂಬಿದ ವಿಧಾನ ಇವೆಲ್ಲ ಬೇರೆಬೇರೆ ಆಗಿರುತ್ತವೆ. ಯಾವ ವಿನ್ಯಾಸಕ್ಕೆ ಯಾವೆಲ್ಲ ಬಣ್ಣ ತುಂಬಬೇಕು ಎಂಬ ಬಗ್ಗೆ ನಿಮಗೆ ಸೂಚನೆಗಳು ಬೇಕೆಂದಾದರೆ, ಅಂತಹ ಸೂಚನಾ ಕಿರುಚಿತ್ರ ಪುಟಗಳ ಮೂಲೆಯಲ್ಲಿ ಮುದ್ರಣವಾಗಿರುವ ಪುಸ್ತಕಗಳನ್ನೇ ಖರೀದಿಸಬಹುದು.

ಅತ್ಯುತ್ತಮ ಒತ್ತಡ ನಿವಾರಕ ಚಟುವಟಿಕೆ:

ನೀವು ವಿನ್ಯಾಸಗಳಿಗೆ ಬಣ್ಣ ತುಂಬುವಾಗ ಅದರಲ್ಲೇ ಮುಳುಗಿರುತ್ತೀರಿ. ಬೇರೆ ಯಾವುದೇ ಸಂಗತಿಗೆ ಗಮನ ಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅಂದರೆ, ನಿಮ್ಮ ಮೆದುಳಿನಲ್ಲಿ ಆ ವರೆಗೆ ಸುತ್ತುತ್ತಿದ್ದ ಯೋಚನಾ ಸರಣಿಯನ್ನು ಈ ಸರಳ ಕೆಲಸ ತುಂಡರಿಸುತ್ತದೆ. ಆದ್ದರಿಂದಲೇ ಇದು ಅತ್ಯುತ್ತಮ ಒತ್ತಡ-ನಿವಾರಕ ಚಟುವಟಿಕೆ.

ವಿನ್ಯಾಸಗಳಿಗೆ ಬಣ್ಣ ತುಂಬುವ ಚಟುವಟಿಕೆ ಕೇವಲ ಮಕ್ಕಳಿಗೆ ಮೀಸಲಾಗಿದೆ ಎಂದುಕೊಳ್ಳಬೇಡಿ. ವಯಸ್ಕರಿಗಾಗಿಯೇ ಮುದ್ರಿಸಲಾಗಿರುವ ಇಂತಹ ಸಾವಿರಾರು ಪುಸ್ತಕಗಳಿವೆ. ಇಂತಹ ಪ್ರಪ್ರಥಮ ಪುಸ್ತಕ ಪ್ರಕಟಿಸಿದಾಗ “ಇದು ಮಾರಾಟವಾದಿತೇ?” ಎಂಬ ಸಂದೇಶ ಪ್ರಕಾಶಕರಿಗೂ ಇತ್ತು. ಆದರೆ, ಆರಂಭದ ಪುಸ್ತಕಗಳು ಬಹು ಬೇಗನೆ ಜನಪ್ರಿಯವಾದವು. ಈಗಂತೂ ಒತ್ತಡ ನಿವಾರಣೆಗಾಗಿ ಇವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಒಂದು ಅಧ್ಯಯನದಲ್ಲಿ ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುವವರನ್ನು “ಬಣ್ಣ ತುಂಬುವ” ಚಟುವಟಿಕೆಯಲ್ಲಿ ತೊಡಗಿಸಲಾಯಿತು. 45 ನಿಮಿಷಗಳು ಬಣ್ಣ ತುಂಬಿದ ನಂತರ ಅವರನ್ನು ಪರೀಕ್ಷಿಸಿದಾಗ ಅವರು ನಿರಾಳವಾಗಿ ಶಾಂತಿಯಿಂದ ಇದ್ದರು. ಕೇವಲ 15 ನಿಮಿಷ ಬಣ್ಣ ತುಂಬಿದರೂ ಸಾಕು, ಮನಸ್ಸು ಹಗುರಾಗುತ್ತದೆ.

ಈಗ ಮೊಬೈಲ್ ಫೋನಿನ ಗೀಳು ಹಿಡಿಸಿಕೊಂಡಿರುವ ಹಲವಾರು ಪ್ರಕರಣಗಳು ವರದಿಯಾಗುತ್ತಿವೆ. ಆ ಚಟದಿಂದ ಪಾರಾಗಲು ಬಣ್ಣ ತುಂಬುವುದು ಅತ್ಯಂತ ಪರಿಣಾಮಕಾರಿ ವಿಧಾನ. ಯಾಕೆಂದರೆ, ನೀವು ಮೊಬೈಲ್ ಫೋನ್ ಹಿಡಿದುಕೊಂಡು ಬಣ್ಣ ತುಂಬಲು ಸಾಧ್ಯವಿಲ್ಲ. ಒಮ್ಮೆ ಬಣ್ಣ ತುಂಬುವುದರ ರುಚಿ ಹತ್ತಿದರೆ, ಅನಂತರ ಸ್ವಲ್ಪ ಬಿಡುವು ಇದ್ದಾಗೆಲ್ಲ ಯಾವುದಾದರೂ ವಿನ್ಯಾಸಕ್ಕೆ ಬಣ್ಣ ತುಂಬೋಣ ಅನಿಸುತ್ತದೆ.

ವಿನ್ಯಾಸಗಳಿಗೆ ಬಣ್ಣ ತುಂಬಿದ ನಂತರ ಅವನ್ನು ಎಲ್ಲೋ ಎಸೆದು ಬಿಡಬೇಡಿ. ಅವನ್ನು ನಿಮ್ಮ ಆಪ್ತರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ತೋರಿಸಿ. ನಿಮ್ಮ ಸೃಜನಶೀಲತೆಯನ್ನು ಅವರು ಮೆಚ್ಚಿದಾಗ ಖಂಡಿತ ಸಂತೋಷ ಪಡುತ್ತೀರಿ. ಅವಕ್ಕೆ ಚೌಕಟ್ಟು ಹಾಕಿಸಿ, ನಿಮ್ಮ ಮನೆಯ ಗೋಡೆಯಲ್ಲಿ ನೇತು ಹಾಕಬಹುದು. ಸಾಮಾಜಿಕ ಮಾಧ್ಯಮಗಳಲ್ಲಿಯೂ ನಿಮ್ಮ ಚಂದದ ಬಣ್ಣ ತುಂಬಿದ ವಿನ್ಯಾಸಗಳನ್ನು ಪ್ರಕಟಿಸಬಹುದು. ಅವು ವೈರಲ್ ಆಗಲೂ ಬಹುದು!

ಈ ಸರಳ ಚಟುವಟಿಕೆಗೆ ಯಾವುದೇ ತರಬೇತಿ ಅಗತ್ಯವಿಲ್ಲ ಎಂಬುದೇ ಇದರ ವಿಶೇಷತೆ. ಇನ್ಯಾಕೆ ತಡ? ವಿನ್ಯಾಸ ಪುಸ್ತಕದ ಪುಟ ತೆರೆದು, ಪೆನ್ಸಿಲ್/ ಪೆನ್ನಿನಿಂದ ಬಣ್ಣ ತುಂಬಲು ಶುರು ಮಾಡಿ.