ಆರ್ ಎಸ್ ಎಸ್ 100

ವೃತ್ತಿಯಿಂದ ಶಿಕ್ಷಕರೂ, ಪ್ರವೃತ್ತಿಯಿಂದ ಪತ್ರಕರ್ತರೂ ಆಗಿರುವ ಸಮಾಜಸೇವಾ ಕರ್ತರಾದ ಶಿಕಾರಿಪುರ ಈಶ್ವರ ಭಟ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಗೆ ನೂರು ವರ್ಷ ತುಂಬಿದ ನೆನಪಿಗೆ ಸಂಗ್ರಹ ಯೋಗ್ಯ ಹೊತ್ತಿಗೆಯೊಂದನ್ನು ಹೊರತಂದಿದ್ದಾರೆ. ಸ್ವಯಂ ಸೇವಕ ಶಿಕಾರಿಯ ಸ್ವಗತ… ಎನ್ನುವ ಮುನ್ನುಡಿಯಲ್ಲಿ 

“ಗುಣವಜ್ಜನಸಂಸರ್ಗಾತ್ ಯಾತಿ ನೀಚೋsಪಿ ಗೌರವಮ್ 

ಪುಷ್ಪಮಾಲಾನುಷಂಗೇನ ಸೂತ್ರಂ ಶಿರಸಿ ಧಾರ್ಯತೇ ॥

ಅದೇ ರೀತಿಯಲ್ಲಿ ಕನ್ನಡದಲ್ಲಿ -

ಸಜ್ಜನರ ಸಂಗವದು ಹೆಚ್ಚೇನು ಸವಿದಂತೆ 

ದುರ್ಜನರ ಸಂಗದೊಡನಾಟ 

ಬಚ್ಚಲಾ ರೊಚ್ಚಿನಂತಿಹುದು ಸರ್ವಜ್ಞ।। 

ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ 

ಅಲ್ಲದಹುದೆಂಬ ಅಜ್ಞಾನಿಯೊಡನಾಟ 

ಕಲ್ಲುಹಾಯ್ದಂತೆ ಸರ್ವಜ್ಞ||

ಇವೆಲ್ಲವೂ ಬಾಲ್ಯದಲ್ಲಿ ನನಗೆ ಸಂಘ ಕಲಿಸಿದ ಶ್ಲೋಕ - ಅಮೃತವಚನಗಳು.

ತಾತ್ಪರ್ಯವಿಷ್ಟೆ ಹೂಗಳೊಂದಿಗೆ ಅದನ್ನು ಜೋಡಿಸಿ ಪೋಣಿಸಿ ಮಾಲೆಯನ್ನಾಗಿಸಲು ಬಳಸಿದ ದಾರವೂ ಕೂಡಾ ದೇವರ ತಲೆಯ ಮೇಲೆ ಶೋಭಿಸುವಂತೆ ಗುಣವಂತ ಸಜ್ಜನರ-ಬಲ್ಲವರ ಸಹವಾಸ (ಸಂಗ ಒಡನಾಟ) ಮಾಡಿದ ನಿಕೃಷ್ಟ ವ್ಯಕ್ತಿಯೂ ಕೂಡಾ ಗೌರವಕ್ಕೆ ಪಾತ್ರನಾಗುತ್ತಾನೆ. ನನಗೆ ಅಂತಹ ಗುಣವಂತ ಸಜ್ಜನರ ಸಹವಾಸ ಪ್ರಾಪ್ತವಾದದ್ದು ಸಂಘದ ಶಾಖೆಯಲ್ಲಿ. ಸಂಘದ ಸಂಗ ಮತ್ತು ಗುಣವಂತ ಸಜ್ಜನರ ಸಹವಾಸದ ಫಲಿತ ಫಲವೇ 'ಸ್ವಯಂಸೇವಕತ್ವ'.

ನಾನು ಮೂಲತಃ ಶಿಕಾರಿಪುರದ ಓರ್ವ ಸಾಮಾನ್ಯ ಸ್ವಯಂಸೇವಕ. ಸಂಘಕ್ಕೀಗ ಶತಮಾನದ ಸಂಭ್ರಮ. ಸಂಘದಂತಹ ವಿರಾಟ್ ಹಿಂದು ಸಂಘಟನೆಗೆ, ಸನಾತನ ಧರ್ಮ-ಸಂಸ್ಕೃತಿಗಳ ಪ್ರತೀಕವಾದ ಗುರು-ಭಗವಾಧ್ವಜಕ್ಕೆ, ಸಂಘವನ್ನು ಕಟ್ಟಿ ಬೆಳೆಸಿ ಮುನ್ನಡೆಸಿದ 'ಸಾವಿರದ' ಸಾವಿರಾರು ಜೇಷ್ಠ-ಶ್ರೇಷ್ಠ ಪ್ರಚಾರಕ-ಕಾರ್ಯಕರ್ತರಿಗೆ ನಾನೇನು ತಾನೆ ಕೊಡಬಲ್ಲೆ? ಅಂತೆಯೆ-

ದೇಶ-ಸಮಾಜ-ಸಂಘಕ್ಕಾಗಿ ಬದುಕನ್ನು ಗಂಧದ ಕೊರಡಿನಂತೆ ತೇದು ಎಲ್ಲೆಡೆ ಸಂಘದ ಸುಗಂಧವನ್ನು ಪಸರಿಸಿದ. ರಾಷ್ಟ್ರಸೇವಾಯಜ್ಯದಲ್ಲಿ ಪೂರ್ಣಾಹುತಿ ನೀಡಿ ಕೃತಾರ್ಥರಾದ ಜೇಷ್ಠ-ಶ್ರೇಷ್ಠ ಪ್ರಚಾರಕರು, ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಈ 'ಪುಸ್ತಕಪುಷ್ಪ' ಶ್ರದ್ಧಾ-ಭಕ್ತಿಪೂರ್ವಕವಾಗಿ ಸಮರ್ಪಿತವಾಗಿದೆ.

ಒಂದು ರೀತಿಯಲ್ಲಿ ಇದೊಂದು 'ಅಳಿಲು ಸೇವೆ' ಅಷ್ಟೆ, ನನ್ನದು ಐದು ದಶಕಗಳ ಸಂಘಜೀವನಯಾನ. ನಾನು ವೃತ್ತಿಯಿಂದ ಶಿಕ್ಷಕ ಪ್ರವೃತ್ತಿಯಿಂದ ಪತ್ರಕರ್ತ-ಪರಿವಾರದ ಕಾರ್ಯಕರ್ತ. ಈ ಹಿನ್ನೆಲೆಯಲ್ಲಿ ನಾನು ಸಂಘದ ನಾಲ್ವರು ಸರಸಂಘಚಾಲಕರನ್ನು ಪ॥ ಪೂಜ್ಯರಾದ ಬಾಳಾಸಾಹೇಬ್ ದೇವರಸ್‌ ಜೀ, ಪ್ರೊ| ರಾಜೇಂದ್ರ ಸಿಂಗ್, ಕು.ಸೀ ಸುದರ್ಶನ್‌ ಜೀ ಮತ್ತು ಡಾ। ಮೋಹನ್‌ ಜೀ ಭಾಗ್ವತ್ ಅಲ್ಲದೆ ಹತ್ತಾರು ಸಂಘದ ಜೇಷ್ಠ-ಶ್ರೇಷ್ಠ ಪ್ರಚಾರಕರನ್ನು ಜೊತೆಗೇ ಸಂಘಪರಿವಾರದ ನೂರಾರು ಶ್ರೇಷ್ಠ ನಾಯಕರನ್ನೂ ಕಂಡಿದ್ದೇನೆ ಮಾತನಾಡಿದ್ದೇನೆ. ಅವರ ಕಾರ್ಯಕ್ರಮಗಳ ವರದಿಯನ್ನು ಮಾಡಿದ್ದೇನೆ.

ಈ ಪುಸ್ತಕದಲ್ಲಿರುವುದು ನನ್ನ ಅನುಭವ ಕಥನ ಮತ್ತು ಆ ಎಲ್ಲಾ ಹಿರಿಯರೊಂದಿಗಿನ ಸಂವಾದ-ಸಂದರ್ಶನಗಳ ಸಂಕಥನ. ಹಾಗೂ ನಾನು ಇದುವರೆಗೆ ಕಂಡದ್ದು, ಕೇಳಿದ್ದು, ಓದಿದ್ದು, ಮಾಡಿದ್ದು ಮತ್ತು ಅನುಭವಿಸಿದ್ದರ ಸಂಕಲನ ಅಷ್ಟೆ. ಸಂಘದಂತಹ ವಿರಾಟ್ ಸಂಘಟನೆಯ ಶತಮಾನದ ಸಂಚಲನವನ್ನು ದಾಖಲಿಸುವುದು ಹೇಳಿದಷ್ಟು ಸರಳವಲ್ಲ. ಸುಲಭವೂ ಅಲ್ಲ. ಆದರೂ ಒಂದು ಪ್ರಯತ್ನ ನನ್ನದು.

ಕೃತಿಯಲ್ಲಿರುವುದು ಓರ್ವ ಸಾಮಾನ್ಯ ಸ್ವಯಂಸೇವಕನ ದೃಷ್ಟಿಕೋನ ಮಾತ್ರ ಕೃತಿ ರಚನೆಯ ಸಂದರ್ಭದಲ್ಲಿ ನನಗೆ ಮತ್ತೆ ಮತ್ತೆ ನೆನಪಾಗುತ್ತಿದ್ದುದು 'ಆನೆ ಮತ್ತು ಕುರುಡರು' ದೃಷ್ಟಾಂತ ಕಥೆ. ಈ ಪುಸ್ತಕ ಸಂಪೂರ್ಣ ಅಲ್ಲ. ಇದು ಸಂಘದ ಸಂಚಲನದ ಕಥನ. ಅದೊಂದು ನಿತ್ಯನಿರಂತರ ಪಯಣ. ಅದಕ್ಕೆ ಆರಂಭವಿದೆ. ಅಂತ್ಯವಿಲ್ಲ!” ಎಂದಿದ್ದಾರೆ.

ಪುಸ್ತಕದ ಕೊನೆಯ ಪುಟದಲ್ಲಿ 'ರಾಷ್ಟ್ರರಥ' ಸಂಚಾಲನೆ : ರಾಷ್ಟ್ರಭಕ್ತರಿಗೊಂದು ಕಳಕಳಿಯ ಕರೆ ಎಂಬ ಅಧ್ಯಾಯದಲ್ಲಿ

“ದೇಶಭಕ್ತ, ಪ್ರಜ್ಞಾವಂತ, ಪ್ರಾಮಾಣಿಕ ಸಜ್ಜನರು ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚಿಂತನ-ಮಂಥನ ಮಾಡಬೇಕು. ಅವುಗಳ ಗಂಭೀರತೆಯನ್ನು ಮನನ ಮಾಡಿಕೊಳ್ಳಬೇಕು. ಮಾತ್ರವಲ್ಲ ಅವುಗಳ ಮೂಲೋತ್ಪಾಟನೆಗಾಗಿ ಸಕ್ರಿಯರಾಗಿ ಕಾರ್ಯೋನ್ಮುಖರಾಗಬೇಕು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನದುದ್ದಕ್ಕೂ ಮಾಡಿರುವುದು ಮತ್ತು ಮಾಡುತ್ತಾ ಬಂದಿರುವುದು ಹಾಗೂ ಮುಂದೆ ಮಾಡಲಿರುವುದು ಅದನ್ನೇ. ಅಷ್ಟಕ್ಕೂ ಸಂಘದ ಗುರಿಯಾದರೂ ಏನು? ದಾರಿ ಯಾವುದು? ರಾಷ್ಟ್ರವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯಬೇಕು ಎನ್ನುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂತಿಮ ಗುರಿ. ಅದಕ್ಕೆ ಶಾಖೆಯೇ ರಹದಾರಿ.

ರಾಷ್ಟ್ರದ ಪುನರ್ ನಿರ್ಮಾಣದಂತಹ ಮಹಾನ್ ಕಾರ್ಯ ಸಜ್ಜನರ ಸಕ್ರಿಯ ಸಹಭಾಗಿತ್ವವಿಲ್ಲದೆ ಸಫಲವಾಗದು. ಜನಸಾಮಾನ್ಯರು, ಸಂಘದ ಹಿತೈಷಿಗಳು, ಅಭಿಮಾನಿಗಳು, ದೇಶಪ್ರೇಮಿ ಸಜ್ಜನರೆಲ್ಲರೂ ಸಂಘ ಕೈಗೆತ್ತಿಕೊಂಡಿರುವ 'ರಾಷ್ಟ್ರ ಸೇವಾಕಾರ್ಯ'ದಲ್ಲಿ ತಮ್ಮ ತಮ್ಮ 'ಅಳಿಲುಸೇವೆ'ಯನ್ನು ಸಲ್ಲಿಸುವಂತಾಗಬೇಕು.

'ರಾಷ್ಟ್ರರಥ'ವನ್ನು ಮುಂದಕ್ಕೆ ಎಳೆಯುವಾಗ

ಎಲ್ಲ 'ರಾಷ್ಟ್ರಭಕ್ತ'ರೂ ಒಟ್ಟಾಗಿ, ಒಂದಾಗಿ, ಒಮ್ಮನಿಸ್ಸಿನಿಂದ

'ರಾಷ್ಟ್ರ ದೇವೋ ಭವ' ಎಂದೆನ್ನುತ್ತಾ

ರಾಷ್ಟ್ರರಥವನೆಳೆದರೆ ರಾಷ್ಟ್ರ 'ಪ್ರಗತಿಪಥ'ದಲ್ಲಿ ಸಾಗುವುದು ನಿಶ್ಚಿತ.

ಈ ಮಹಾನ್‌ಕಾರ್ಯದಲ್ಲಿ ಕೈಜೋಡಿಸಬೇಕಾದ್ದು

ಪ್ರತಿಯೊಬ್ಬ 'ರಾಷ್ಟ್ರಪ್ರೇಮಿ'ಯ ಆದ್ಯ ಕರ್ತವ್ಯ.

ಅದೊಂದು 'ರಾಷ್ಟ್ರೀಯ ಕರ್ತವ್ಯ'. ಅದುವೇ 'ರಾಷ್ಟ್ರಧರ್ಮ'”

ಎನ್ನುತ್ತಾ ಪ್ರತಿಯೊಬ್ಬ ಭಾರತೀಯನಿಗೆ ಆತನ ಕರ್ತವ್ಯವನ್ನು ನೆನಪಿಸಿಕೊಟ್ಟಿದ್ದಾರೆ. 

ಆರ್ ಎಸ್ ಎಸ್ ೧೦೦ ಶತ ಪಥ ಸಂಚಲನದ ಹೆಜ್ಜೆ ಗುರುತುಗಳನ್ನು. ೧೮ ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಸುಮಾರು ೨೫೦ ಪುಟಗಳ ಈ ಕೃತಿ ಸಂಗ್ರಹ ಯೋಗ್ಯ ಎನ್ನುವುದರಲ್ಲಿ ಅನುಮಾನವಿಲ್ಲ.