“ಡಿಸ್-ಟರ್-ಬಿಯಾ” ಎಂಬ ಇಂಗ್ಲಿಷ್ ಸಿನಿಮಾದ ಕತೆ:

ಇದು ಆಲ್ಫ್ರೆಡ್ ಹಿಚ್-ಕೋಕ್ ಅವರ “ರೇರ್ ವಿನ್-ಡೋ” ಎಂಬ ಕತೆಯನ್ನು ಆಧರಿಸಿದ ಅಮೆರಿಕನ್ ಥ್ರಿಲ್ಲರ್ ಸಿನಿಮಾ. 

ಒಂದು ದಿನ ಕಾಳೆ ಬ್ರೆಕ್ಟ್ (17 ವರುಷ) ಮತ್ತು ಅವನ ತಂದೆ ಮೀನು ಹಿಡಿಯಲು ಹೋದರು. ಕಾರಿನಲ್ಲಿ ಮನೆಗೆ ಹಿಂತಿರುಗುವಾಗ ಅಪಘಾತವಾಗಿ ತಂದೆಯ ಸಾವು ಸಂಭವಿಸುತ್ತದೆ. ಅದಾಗಿ ಒಂದು ವರುಷದಲ್ಲಿ ತಂದೆಯ ಸಾವಿನ ದುಃಖ ಮತ್ತು ಪಾಪಪ್ರಜ್ಞೆಯಿಂದಾಗಿ ಬ್ರೆಕ್ಟ್ “ಮಾನಸಿಕ ಸಮಸ್ಯೆಯ ವ್ಯಕ್ತಿ”ಯಾಗುತ್ತಾನೆ. 

ಕಾಲೇಜಿನಲ್ಲಿ ಸ್ಪ್ಯಾನಿಷ್ ಭಾಷೆ ಕಲಿಸುವ ಪ್ರಾಧ್ಯಾಪಕ ಬ್ರೆಕ್ಟ್-ನ ವರ್ತನೆಯನ್ನು ಖಂಡಿಸಿ, ಅವನ ತಂದೆಯ ಬಗ್ಗೆ ಸಂವೇದನೆಯಿಲ್ಲದೆ ಪ್ರಸ್ತಾಪಿಸಿದಾಗ ರೊಚ್ಚಿಗೆದ್ದ ಬ್ರೆಕ್ಟ್ ಪ್ರಾಧ್ಯಾಪಕನಿಗೆ ಥಳಿಸುತ್ತಾನೆ. ಬ್ರೆಕ್ಟ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗುತ್ತದೆ. ವಿಚಾರಣೆ ನಡೆದು, ನ್ಯಾಯಾಧೀಶರು ಕಠಿಣ ಶಿಕ್ಷೆ ನೀಡದೆ, ಮೂರು-ತಿಂಗಳ ಗೃಹಬಂಧನ ವಿಧಿಸುತ್ತಾರೆ. ಜೊತೆಗೆ ಅವನ ಚಲನವಲನಗಳನ್ನು ನಿಯಂತ್ರಿಸಲಿಕ್ಕಾಗಿ ಕಾಲಿನ ಮಣಿಕಟ್ಟಿನಲ್ಲಿ “ಆಂಕಲ್ ಮಾನಿಟರ್” ಮತ್ತು “ಪ್ರಾಕ್ಷಿಮಿಟಿ ಸೆನ್ಸರ್” ಧರಿಸಬೇಕೆಂದು ಆದೇಶಿಸುತ್ತಾರೆ. 

ಬ್ರೆಕ್ಟ್ ಮನೆಯಲ್ಲಿ ಕುಳಿತು ದಿನವೆಲ್ಲ ಸಿನಿಮಾ ನೋಡುತ್ತಾ, ಸಂಗೀತ ಕೇಳುತ್ತಾ ಕಾಲ ಕಳೆಯುತ್ತಾನೆ. ಇದರಿಂದಾಗಿ ಅವನ ತಾಯಿ ಜೂಲಿ ರೋಸಿ ಹೋಗಿ, ಅವನ ಸಿನೆಮಾ ಚಾನೆಲ್ ಮತ್ತು ಸಂಗೀತ ಚಾನೆಲಿನ ಚಂದಾ ರದ್ದು ಪಡಿಸುತ್ತಾಳೆ; ಟಿವಿಯ ವಯರನ್ನು ಕತ್ತರಿಸುತ್ತಾಳೆ. ಅದಾದ ನಂತರ, ತನ್ನ ಅಕ್ಕಪಕ್ಕದ ಮನೆಯವರ ಚಟುವಟಿಕೆಗಳನ್ನು ಬೈನಾಕುಲರಿನಲ್ಲಿ ನೋಡಲು ಶುರು ಮಾಡುತ್ತಾನೆ ಬ್ರೆಕ್ಟ್. ಅವರಲ್ಲಿ ಒಬ್ಬಾತ ರಾಬರ್ಟ್ ಟರ್ನರ್ ಮತ್ತು ಇನ್ನೊಬ್ಬಳು ಪಕ್ಕದ ಮನೆಯ ಚಂದದ ಯುವತಿ ಆಶ್ಲೆ. ಅದೊಮ್ಮೆ, ತನ್ನನ್ನು ಗೇಲಿ ಮಾಡುತ್ತಿದ್ದ ಅಕ್ಕಪಕ್ಕದ ಯುವಕರನ್ನು ಬ್ರೆಕ್ಟ್ ಅಟ್ಟಿಸಿಕೊಂಡು ಹೋಗುವಾಗ “ಪ್ರಾಕ್ಸಿಮಿಟಿ ಸೆನ್ಸರ್” ಅದರ ಮಿತಿ ಮೀರುತ್ತಾನೆ. ಹಾಗಾಗಿ, ಪೊಲೀಸ್ ಠಾಣೆಗೆ ಸಂದೇಶ ರವಾನೆ ಆಗುತ್ತದೆ. ಪೊಲೀಸ್ ಅಧಿಕಾರಿ ಗುಟೆರೆಜ್ ಧಾವಿಸಿ ಬಂದು ಬ್ರೆಕ್ಟನಿಗೆ ಕೈಕೋಳ ಹಾಕುತ್ತಾನೆ. ತದನಂತರ ಬ್ರೆಕ್ಟ್ ಇನ್ನಷ್ಟು ಎಚ್ಚರಿಕೆಯಿಂದ ಇರುತ್ತಾನೆ. 

ಒಂದು ದಿನ ತಡ ರಾತ್ರಿ ಟರ್ನರ್ ತನ್ನ ಕಾರಿನಲ್ಲಿ ಮನೆಗೆ ಮರಳಿದಾಗ ಅವನ ಫೋರ್ಡ್ ಕಾರಿಗೆ ಘಾಸಿ ಆಗಿರುವುದನ್ನು 

ಬ್ರೆಕ್ಟ್ ಗಮನಿಸುತ್ತಾನೆ. ವಾರ್ತಾ ಚಾನೆಲಿನಲ್ಲಿ ಪ್ರಸಾರವಾದ “ಪರಾರಿಯಾದ ಒಬ್ಬ ಸರಣಿ ಕೊಲೆಗಾರ”ನ ಕಾರಿನಂತೆಯೇ ಟರ್ನರನ ಕಾರು ಕಾಣಿಸುತ್ತದೆ. ಇದರಿಂದಾಗಿ ಆತನೇ ಸರಣಿ ಕೊಲೆಗಾರ ಎಂದು ಬ್ರೆಕ್ಟ್ ಅನುಮಾನ ಪಡುತ್ತಾನೆ. ಅನಂತರ ಆಶ್ಲೆ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತಾನೆ ಬ್ರೆಕ್ಟ್. ಅವಳ ಮತ್ತು ತನ್ನ ಆಪ್ತ ಗೆಳೆಯ ರೊನ್ನಿ - ಇವರ ಸಹಾಯದಿಂದ ಟರ್ನರ್ ಅವನ ಚಲನವಲನಗಳ ಮೇಲೆ “ಹದ್ದಿನ ಕಣ್ಣಿನ ಪಹರೆ” ಮುಂದುವರಿಸುತ್ತಾನೆ. 

ತನ್ನ ಕೆಲವು ಸಹಪಾಠಿಗಳು ಆಶ್ಲೆ ಜೊತೆ ಸಲ್ಲಾಪ ಮಾಡುವುದನ್ನು ನೋಡಿದ ಬ್ರೆಕ್ಟನಿಗೆ ಮತ್ಸರ. ಆಕೆ ಬಂದಾಗ ಅವಳ ಬಗ್ಗೆ ತನ್ನ ಆಕರ್ಷಣೆಯನ್ನು ತಿಳಿಸುತ್ತಾನೆ ಬ್ರೆಕ್ಟ್. ಅನಂತರ ಟರ್ನರ್ ಅವನ ಬೆನ್ನು ಹತ್ತಲು ಸೂಪರ್ ಮಾರ್ಕೆಟಿಗೆ ಆಶ್ಲೆಯನ್ನು ಕಳಿಸುತ್ತಾನೆ. ಆದರೆ ಅಲ್ಲಿ ಆಕೆಗೆ ಟರ್ನರ್ ಎಚ್ಚರಿಕೆ ನೀಡುತ್ತಾನೆ. ಹೆದರಿದ ಆಶ್ಲೆ ಬ್ರೆಕ್ಟನಿಗೆ ಪತ್ತೇದಾರಿ ಕೆಲಸಕ್ಕೆ ಸಹಾಯ ಮಾಡುವುದನ್ನು ನಿಲ್ಲಿಸುತ್ತಾಳೆ. 

ಆ ಸಮಯದಲ್ಲಿ ಟರ್ನರನ ಕಾರು ಗೆರೇಜಿಗೆ ನುಸುಳಿದ ರೊನ್ನಿ (ಗೆಳೆಯ) ಅದರ ಗೇಟ್ ಮುಚ್ಚಿದ ಕಾರಣ ಅಲ್ಲಿ ಸಿಕ್ಕಿ ಬೀಳುತ್ತಾನೆ. ಅಲ್ಲಿಂದ ಪಾರಾಗಲು ರೊನ್ನಿಗೆ ಬ್ರೆಕ್ಟ್ ಸಹಾಯ ಮಾಡುವಾಗ, “ಆಂಕಲ್ ಮಾನಿಟರ್” ಟ್ರಿಪ್ ಆಗುತ್ತದೆ; ತಕ್ಷಣವೇ ಪೊಲೀಸರು ಅಲ್ಲಿಗೆ ಬರುತ್ತಾರೆ. ಆಗ, “ಟರ್ನರ್ ಸರಣಿ ಕೊಲೆಗಾರ” ಎಂದು ಬ್ರೆಕ್ಟ್ ಆಪಾದನೆ ಮಾಡುತ್ತಾನೆ. ಅಲ್ಲಿದ್ದ ಒಂದು ಚೀಲವನ್ನು ತೆರೆದು ನೋಡಲು ಹೇಳುತ್ತಾನೆ. ಆದರೆ ಅದರಲ್ಲಿದ್ದದ್ದು ಒಂದು ಜಿಂಕೆಯ ಹೆಣ. 

ಆ ದಿನ ರಾತ್ರಿ ಬ್ರೆಕ್ಟನ ಅಮ್ಮ ಟರ್ನರ್-ನ ಮನೆಗೆ ಹೋಗಿ ವಿನಂತಿಸುತ್ತಾಳೆ - ತನ್ನ ಮಗನ ವಿರುದ್ಧ ಪೊಲೀಸರಿಗೆ ದೂರು ಕೊಡಬೇಡ ಎಂದು. ಆದರೆ ಟರ್ನರ್ ಅವಳಿಗೆ ಹೊಡೆದು ಅವಳನ್ನು ಕಟ್ಟಿ ಹಾಕುತ್ತಾನೆ. ಅನಂತರ ಬ್ರೆಕ್ಟನ ಮನೆಗೆ ಹೋದ ಟರ್ನರ್ ಅಲ್ಲಿದ್ದ ರೊನ್ನಿಗೆ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಅವನನ್ನು ನೆಲಕ್ಕೆ ಬೀಳಿಸುತ್ತಾನೆ. ಬ್ರೆಕ್ಟನನ್ನು ಹಗ್ಗದಿಂದ ಬಿಗಿದು, ಅವನ ಬಾಯಿಗೆ (ಮಾತನಾಡಲು ಆಗದಂತೆ) ಟೇಪ್ ಅಂಟಿಸುತ್ತಾನೆ ಟರ್ನರ್. ಅದಲ್ಲದೆ, ಹೀಗೆಂದು ಬೆದರಿಸುತ್ತಾನೆ: “ರೊನ್ನಿ ಮತ್ತು ಜೂಲಿಯನ್ನು ನೀನೇ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಿ ಎಂದು ಪೊಲೀಸರಿಗೆ ತಿಳಿಸುತ್ತೇನೆ.” 

ಆಗ ಅಲ್ಲಿಗೆ ಆಶ್ಲೆ ಬರುತ್ತಾಳೆ. ಆ ಕ್ಷಣದಲ್ಲಿ ಟರ್ನರನ ಮುಖಕ್ಕೆ ಜೋರಾಗಿ ಏಟು ನೀಡುತ್ತಾನೆ ಬ್ರೆಕ್ಟ್. ಇವನ ಕೈಗಳಿಗೆ ಕಟ್ಟಿದ್ದ ಹಗ್ಗ ಮತ್ತು ಮುಖಕ್ಕೆ ಹಾಕಿದ್ದ ಟೇಪನ್ನು ಬಿಡಿಸುತ್ತಾಳೆ ಆಶ್ಲೆ. ತಕ್ಷಣವೇ ಇವರಿಬ್ಬರೂ ಆ ಕೋಣೆಯ ಕಿಟಕಿಯಿಂದ ಆಶ್ಲೆಯ ಮನೆಯ ಈಜುಗೊಳಕ್ಕೆ ಹಾರುತ್ತಾರೆ. ಆಗ ಬ್ರೆಕ್ಟನ ಆಂಕಲ್ ಮಾನಿಟರ್ ಪೊಲೀಸ್ ಠಾಣೆಗೆ ಸಂದೇಶ ರವಾನಿಸುತ್ತದೆ. 

ಅಲ್ಲಿಂದ ಟರ್ನರನ ಮನೆಗೆ ಧಾವಿಸಿದ ಬ್ರೆಕ್ಟ್ ಎಲ್ಲ ಕಡೆ ತಾಯಿ ಜೂಲಿಗಾಗಿ ಹುಡುಕುತ್ತಾನೆ. ಆಗ ಅವನಿಗೆ ಟರ್ನರ್ ಕೊಲೆ ಮಾಡಿದ್ದ ವ್ಯಕ್ತಿಗಳ ಹೆಣಗಳು ಕಾಣಿಸುತ್ತವೆ. ಪೊಲೀಸ್ ಅಧಿಕಾರಿ ಗುಟೆರೆಜ್ ಅಲ್ಲಿಗೆ ಬರುತ್ತಾನೆ. ಅವನನ್ನು ಟರ್ನರ್ ಕೊಂದು ಹಾಕುತ್ತಾನೆ. ಅಷ್ಟರಲ್ಲಿ ತಾಯಿ ಜೂಲಿ ನೆಲಮಾಳಿಗೆಯಲ್ಲಿ ಇದ್ದಾಳೆಂದು ಬ್ರೆಕ್ಟ್ ಪತ್ತೆ ಮಾಡುತ್ತಾನೆ. ಅಲ್ಲಿಗೆ ನುಗ್ಗಿ ಬಂದ ಟರ್ನರ್, ಬ್ರೆಕ್ಟನ ಬೆನ್ನಿಗೆ ಗಾಯ ಮಾಡಿ, ಅವನನ್ನು ಗೋಡೆಗೆ ಒತ್ತಿ ಹಿಡಿಯುತ್ತಾನೆ. ಅವನು ಬ್ರೆಕ್ಟನನ್ನು ಕೊಲ್ಲುವ ಮುನ್ನ, ಅವನ ಕಾಲಿಗೆ ಜೂಲಿ ಸ್ಕ್ರೂ-ಡ್ರೈವರಿನಿಂದ ಚುಚ್ಚುತ್ತಾಳೆ. ಆಗ, ಅಲ್ಲಿದ್ದ ಹಾರೆಯಿಂದ ಟರ್ನರನನ್ನು ಹೊಡೆದು ಉರುಳಿಸುತ್ತಾನೆ ಬ್ರೆಕ್ಟ್. 

ಇಷ್ಟೆಲ್ಲ ಅವಾಂತರಗಳ ನಂತರ “ಉತ್ತಮ ನಡತೆ”ಗಾಗಿ ಬ್ರೆಕ್ಟನ ಆಂಕಲ್ ಮಾನಿಟರನ್ನು ತೆಗೆಯಬೇಕೆಂದು ನ್ಯಾಯಾಲಯ ಆದೇಶಿಸುತ್ತದೆ. 

(15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 15-02-2011ರ ಮಂಗಳವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)