“ಮೇಡ್ ಆಫ್ ಹಾನರ್” (Made of Honor) ಎಂಬ 2008ರ ಇಂಗ್ಲಿಷ್ ಸಿನಿಮಾದ ಕತೆ:

ಸುಮಾರು ಹತ್ತು ವರುಷಗಳಿಂದ ಟಾಮ್ ಮತ್ತು ಹಾನಾ ಇವರದು ಗೆಳೆಯ-ಗೆಳತಿಯ ಆತ್ಮೀಯ ಸಂಬಂಧ. ನ್ಯೂಯಾರ್ಕ್ ಮಹಾನಗರದಲ್ಲಿ “ಕಾಫಿ ಕಾಲರ್” ಎಂಬ ತನ್ನ ಅನ್ವೇಷಣೆಯಿಂದ ಚೆನ್ನಾಗಿ ಹಣ ಗಳಿಸುತ್ತಿದ್ದ ಟಾಮ್ ಶ್ರೀಮಂತನಾಗಿದ್ದ. ಆತ ಪ್ರತಿಯೊಂದು ವಾರ ಒಬ್ಬೊಬ್ಬ ಜೊತೆಗಾತಿಯೊಂದಿಗೆ ಕಾಲ ಕಳೆಯುತ್ತಿದ್ದ. ಆದರೆ ಒಬ್ಬಂಟಿಯಾಗಿದ್ದ ಹಾನಾ ಮೆಟ್ರೋ-ಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ - ಇಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಳು. 

ಆಗೊಮ್ಮೆ ಟಾಮ್ ಮತ್ತು ಹಾನಾ ಜೊತೆಯಾಗಿ ಡ್ಯಾನ್ಸ್ ಮಾಡುತ್ತಾ ಆಪ್ತ ಕ್ಷಣಗಳನ್ನು ಕಳೆಯುತ್ತಾರೆ. ಅನಂತರ, ತಾನು ಆರು  ವಾರಗಳ ಅವಧಿ ತನ್ನ ಉದ್ಯೋಗಕ್ಕೆ ಸಂಬಂಧಿಸಿದ ಪ್ರವಾಸಕ್ಕೆ ಸ್ಕಾಟ್-ಲ್ಯಾಂಡಿಗೆ ಹೋಗುತ್ತಿರುವುದಾಗಿ ತಿಳಿಸುತ್ತಾಳೆ. ಹಾನಾ ಪ್ರವಾಸದಿಂದ ಹಿಂತಿರುಗಿದಾಗ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡಬೇಕೆಂದು ಟಾಮ್ ನಿರ್ಧರಿಸುತ್ತಾನೆ. 

ಆದರೆ, ಸ್ಕಾಟ್ಲೆಂಡಿನಿಂದ ಹಿಂತಿರುಗುವಾಗ ಅಲ್ಲಿನ ರಾಜ ಮನೆತನದವನಾದ ಕೊಲಿನ್ ಜೊತೆಗೆ ಬರುತ್ತಾಳೆ ಹಾನಾ. ಕೊಲಿನ್ ಜೊತೆ ಮದುವೆ ಆಗುವುದಾಗಿ ಟಾಮ್-ಗೆ ತಿಳಿಸುತ್ತಾಳೆ ಹಾನಾ. ತನ್ನ ಮದುವೆಯಲ್ಲಿ ಟಾಮ್ “ಸಹಾಯಕ” (ಮೆಯಿಡ್ ಆಫ್ ಹಾನರ್) ಆಗಬೇಕೆಂದು ವಿನಂತಿಸುತ್ತಾಳೆ. ಇದಕ್ಕೆ ಟಾಮ್ ಒಪ್ಪಿಕೊಳ್ಳುತ್ತಾನೆ - ಹಾನಾ ಜೊತೆ ಇನ್ನಷ್ಟು ಸಮಯ ಕಳೆಯಬಹುದು ಎಂಬ ಯೋಚನೆಯಿಂದ. ಈ ನಡುವೆ ಒಂದು ಎಡವಟ್ಟಿನಿಂದಾಗಿ ಟಾಮ್ ಬಗ್ಗೆ ಹಾನಾ ಸಿಟ್ಟಾಗುತ್ತಾಳೆ.  

ಆದರೆ “”ಹೌ-ಟು-ಬಿ-ಎ ಫರ್-ಫೆಕ್ಟ್ ಮೆಯಿಡ್ ಆಫ್ ಹಾನರ್” ಎಂಬ ಕೋರ್ಸಿಗೆ ಹಾಜರಾಗಿ, ಕೆಲವು ತಂತ್ರಗಳನ್ನು ಕಲಿತ ಟಾಮ್, ಅವುಗಳ ಸಹಾಯದಿಂದ ಮತ್ತೆ ಹಾನಾಳ ಮನ ಗೆಲ್ಲುತ್ತಾನೆ. 

ಆದರೆ, ತನ್ನ ಮದುವೆಯ ನಂತರ ತಾನು ಸ್ಕಾಟ್ಲೆಂಡಿಗೆ ಹೋಗಿ ನೆಲೆಸುವುದಾಗಿ ಹಾನಾ ತಿಳಿಸಿದಾಗ ಟಾಮ್ ಹತಾಶನಾಗುತ್ತಾನೆ. ಆದರೂ, ತನ್ನ “ಸಹಾಯಕ”ನ ಜವಾಬ್ದಾರಿ ನಿರ್ವಹಣೆಗಾಗಿ ಹಾನಾ ಜೊತೆ ಟಾಮ್ ಸ್ಕಾಟ್ಲೆಂಡಿಗೆ ಪ್ರಯಾಣಿಸುತ್ತಾನೆ. ಅಲ್ಲಿನ ಸಂಪ್ರದಾಯದಂತೆ, ಮದುವೆಯ ಮುಂಚೆ, ತಾನು ಮದುಮಗಳಿಗೆ ಸೂಕ್ತ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸಲಿಕ್ಕಾಗಿ ಕೆಲವು ಆಟಗಳಲ್ಲಿ ಮದುಮಗ ಭಾಗವಹಿಸುತ್ತಾನೆ. ಅವೆಲ್ಲ ಆಟಗಳಲ್ಲಿ ಟಾಮ್ ಕೂಡ ಭಾಗವಹಿಸುತ್ತಾನೆ. ಆದರೆ, ಕೊನೆಯ ಹಂತದಲ್ಲಿ ಕೊಲಿನ್ ವಿರುದ್ಧ ಟಾಮ್ ಸೋಲುತ್ತಾನೆ. 

ಅನಂತರ ಒಂದು ಸಾಂಪ್ರದಾಯಿಕ ಆಚರಣೆಯಲ್ಲಿ, ಹಾನಾಳಿಗೆ ಟಾಮ್ ತನ್ಮಯತೆಯಿಂದ ಮುತ್ತು ಕೊಡುತ್ತಾನೆ. ಆ ರಾತ್ರಿ ಟಾಮ್-ನ ಕೋಣೆಗೆ ಆ ಬಗ್ಗೆ ಮಾತಾಡಲಿಕ್ಕಾಗಿ ಹಾನಾ ಬಂದಾಗ, ಅಲ್ಲಿ ಕುಡಿದ ಅಮಲಿನಲ್ಲಿದ್ದ ಮೆಲಿಸ್ಸಾ ಎಂಬಾಕೆಯನ್ನು ಕಂಡು ನಿರಾಶಳಾಗುತ್ತಾಳೆ; ಮರುದಿನ ತಾನು ಮತ್ತು ಕೊಲಿನ್ ಮದುವೆ ಆಗುತ್ತೇವೆ ಎಂದು ಟಾಮ್-ಗೆ ತಿಳಿಸಿ, ಹಾನಾ ತನ್ನ ಕೋಣೆಗೆ ಮರಳುತ್ತಾಳೆ.

ಕಂಗಾಲಾದ ಟಾಮ್, ತನ್ನ “ಸಹಾಯಕ” ಜವಾಬ್ದಾರಿ ತೊರೆದು ನ್ಯೂಯಾರ್ಕಿಗೆ ಹಿಂತಿರುಗಲಿಕ್ಕಾಗಿ ಮರುದಿನ ಮುಂಜಾನೆ ಹೊರಡುತ್ತಾನೆ. ಸ್ವಲ್ಪ ದೂರ ಹೋದಾಗ ಹಾನಾಳ ಮದುವೆಯನ್ನು ನಿಲ್ಲಿಸಲೇ ಬೇಕೆಂದು ನಿರ್ಧರಿಸುತ್ತಾನೆ. ಮದುವೆಯ ಚರ್ಚಿಗೆ ಹಿಂತಿರುಗಲು ಅವನಿಗೆ ಫೆರ್ರಿ ಸಿಗುವುದಿಲ್ಲ. ಕೊನೆಗೆ ಒಂದು ಕುದುರೆಯ ಮೇಲೇರಿ ಆ ಚರ್ಚಿಗೆ ದೌಡಾಯಿಸುತ್ತಾನೆ. ಚರ್ಚಿನ ಹೆಬ್ಬಾಗಿಲಿನ ಎದುರು ತಲಪಿದ ಕುದುರೆ ಒಮ್ಮೆಲೇ ಓಟ ನಿಲ್ಲಿಸಿದಾಗ ಟಾಮ್ ಕುದುರೆಯಿಂದ ಹಾರಿ ಬೀಳುತ್ತಾನೆ. ಇದನ್ನು ಕಂಡ ಹಾನಾ ಟಾಮ್ ಬಳಿಗೆ ಧಾವಿಸಿ ಬರುತ್ತಾಳೆ. 

ಆಗ ಹಾನಾಳಿಗೆ ತನ್ನ ಪ್ರೇಮ ನಿವೇದನೆ ಮಾಡುತ್ತಾನೆ ಟಾಮ್. ಇಬ್ಬರೂ ತಬ್ಬಿಕೊಂಡು ಚುಂಬಿಸುತ್ತಾರೆ. ಮದುವೆ ಮುರಿಯಿತೆಂದು ಘೋಷಿಸಿದ ಹಾನಾ ಕೊಲಿನ್-ಗೆ “ಕ್ಷಮಿಸು” ಎನ್ನುತ್ತಾಳೆ. ಆಗ ಟಾಮ್-ನ ಮುಖಕ್ಕೆ ಕೈಯಿಂದ ಗುದ್ದು ಕೊಡುತ್ತಾನೆ ಕೊಲಿನ್.

ಅನಂತರ, ನ್ಯೂಯಾರ್ಕಿಗೆ ಹಿಂತಿರುಗಿದ ಟಾಮ್ ಮತ್ತು ಹಾನಾ ನಕ್ಷತ್ರಗಳ ಬೆಳಕಿನಲ್ಲಿ ಮದುವೆಯಾಗಿ ಸುಖವಾಗಿ ಬಾಳುತ್ತಾರೆ. 

 

(15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 14-02-2011ರ ಸೋಮವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)