“ಬ್ಲೂ ಸ್ಟ್ರೀಕ್” ಎಂಬ ಇಂಗ್ಲಿಷ್ ಸಿನಿಮಾದ ಕತೆ:
ಮೈಲ್ಸ್ ಲೋಗನ್ ಎಂಬಾತ ಆಭರಣಗಳ ಕಳ್ಳ (ಜುವೆಲ್ ಥೀಫ್). ಅವನ ಗ್ಯಾಂಗಿನ ಜೊತೆಗಾರರು: ಆಪ್ತ ಗೆಳೆಯ ಎಡ್ಡಿ, ಕಳವಿನ ನಂತರ ಕಾರು ಓಡಿಸುವ ಚಾಲಕ ಟುಲ್ಲೆ ಮತ್ತು ಇತ್ತೀಚೆಗೆ ಗ್ಯಾಂಗಿಗೆ ಸೇರಿಕೊಂಡ ಡಿಕೋನ್. ಇವರು ಯುಎಸ್-ಎ ದೇಶದ ಲಾಸ್ ಎಂಜಲಿಸ್ ಮಹಾನಗರದಲ್ಲಿ ನಡೆಸಿದ ಕಳ್ಳತನದಲ್ಲಿ 17 ಮಿಲಿಯನ್ ಡಾಲರ್ ಬೆಲೆಯ ಒಂದು ವಜ್ರವನ್ನು ಕದಿಯುತ್ತಾರೆ.
ಅಲ್ಲಿಂದ ಪರಾರಿ ಆಗುವಾಗ ಡಿಕೋನ್ ದ್ರೋಹ ಮಾಡುತ್ತಾನೆ - ಎಡ್ಡಿಯನ್ನು ಕೊಂದು ವಜ್ರದೊಂದಿಗೆ ಓಡಿ ಹೋಗಲು ಪ್ರಯತ್ನಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಪೊಲೀಸರು ಬರುತ್ತಾರೆ. ಆಗ ಲೋಗನ್ ಆ ವಜ್ರವನ್ನು ನಿರ್ಮಾಣ ಹಂತದ ಒಂದು ಕಟ್ಟಡದ “ಗಾಳಿ ಕೊಳವೆ” (ಏರ್ ಡಕ್ಟ್)ಯಲ್ಲಿ ಬಚ್ಚಿಡುತ್ತಾನೆ.
ಅನಂತರ ತನಿಖೆ ಜರಗಿ, ಲೋಗನ್ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುತ್ತಾನೆ. ಎರಡು ವರುಷಗಳ ಜೈಲು ವಾಸದ ನಂತರ ಲೋಗನ್ ಬಿಡುಗಡೆ ಆಗುತ್ತಾನೆ. ಆ ಬೆಲೆಬಾಳುವ ವಜ್ರವನ್ನು ಪತ್ತೆ ಮಾಡಬೇಕೆಂಬುದು ಅವನ ಸಂಕಲ್ಪ. ಆಗೊಮ್ಮೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡವು ಈಗ ಪೊಲೀಸ್ ಠಾಣೆ ಆಗಿದೆಯೆಂದು ಪತ್ತೆ ಮಾಡುತ್ತಾನೆ.
ತನ್ನ ಗುರುತು ಮರೆಸಿಕೊಂಡು, ತಾನೀಗ ಪತ್ತೇದಾರ ಮಲೋನ್ ಎಂಬುದಾಗಿ “ಗುರುತಿನ ದಾಖಲೆ”ಗಳನ್ನು ಮಾಡಿಕೊಳ್ಳುತ್ತಾನೆ. ಈತನನ್ನು ಅದೇ ಪೊಲೀಸ್ ಠಾಣೆಯಲ್ಲಿ “ಕಳ್ಳತನಗಳ ತನಿಖಾ ವಿಭಾಗಕ್ಕೆ ನಿಯೋಜಿಸಲಾಗುತ್ತದೆ.
ಆ ವಜ್ರವನ್ನು ಬಚ್ಚಿಟ್ಟಿದ್ದ ಏರ್ ಡಕ್ಟ್ ಹತ್ತಿರ ರಹಸ್ಯವಾಗಿ ಹೋಗುವಾಗ, ಆಕಸ್ಮಿಕವಾಗಿ ಜೈಲು ಬಂಧಿಗಳು ಜೈಲಿನಿಂದ ಪರಾರಿಯಾಗಲು ನಡೆಸಿದ್ದ ಗುಪ್ತ ಕಾರ್ಯಾಚರಣೆಯನ್ನು ಮಲೋನ್ ತಪ್ಪಿಸುತ್ತಾನೆ. ಇದರಿಂದಾಗಿ ಇವನಿಗೆ ಪೊಲೀಸ್ ಇಲಾಖೆಯಲ್ಲಿ ಭಾರೀ ಪ್ರಶಂಸೆ. ಅದಲ್ಲದೆ, ಕಾರ್ಲ್-ಸನ್ ಎಂಬ ಪತ್ತೆದಾರಿಯ ಸಖ್ಯ ಲಭಿಸುತ್ತದೆ. ಮಲೋನ್-ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಅಪರಾಧಗಳ ಬಗೆಗಿನ ತನ್ನ “ಜ್ಞಾನ” ಉಪಯೋಗಿಸಿ, ಹಲವು ಅಪರಾಧಗಳ ಪತ್ತೆಗೆ ಸಹಾಯ ಮಾಡುತ್ತಾನೆ ಮಲೋನ್.
ಆತ ಮತ್ತು ಕಾರ್ಲ್-ಸನ್ ಒಂದು ಸುಳ್ಳು-ಕಳ್ಳತನದ ಪ್ರಕರಣ ಪರಿಹರಿಸುತ್ತಾರೆ. ಅಲ್ಲಿಂದ ಹಿಂತಿರುಗುವಾಗ, ಅಚಾನಕ್ ಆಗಿ ಶಸ್ತ್ರಸಜ್ಜಿತ ದರೋಡೆ ತಡೆಯುತ್ತಾರೆ. ಇದನ್ನು ಮಾಡಿದಾತ ಟುಲ್ಲೆ. ಈಗ ಮಲೋನ್ ಟುಲ್ಲೆಯನ್ನು ಬಂಧಿಸುತ್ತಾನೆ. ಆದರೆ, ಟುಲ್ಲೆ ಇವನ ಮಾರುವೇಷದ ಗುಟ್ಟು ರಟ್ಟು ಮಾಡುತ್ತೇನೆಂದು ಹೆದರಿಸುತ್ತಾನೆ. ತಾನು ಸುಮ್ಮನಿರಬೇಕಾದರೆ ತನಗೆ 50,000 ಡಾಲರ್ ಪಾವತಿಸಬೇಕು ಎನ್ನುತ್ತಾನೆ.
ಅನಂತರ ಮಲೋನ್ - ಕಾರ್ಲ್-ಸನ್ ಜೋಡಿ, ಕಳ್ಳಸಾಗಣೆ ಆಗುತ್ತಿದ್ದ ಮಾದಕದ್ರವ್ಯದ ಮೂಟೆಗಳನ್ನು ವಶ ಪಡಿಸಿಕೊಂಡು, ಅವನ್ನು ಪೊಲೀಸ್ ಠಾಣೆಯ ಸಾಕ್ಷ್ಯಾಧಾರಗಳ ಕೋಣೆಯಲ್ಲಿ ಇಡುತ್ತಾರೆ. ತನಿಖಾ ಇಲಾಖೆ (ಎಫ್.ಬಿ.ಐ.) ಅದನ್ನು ತಮ್ಮ ವಶಕ್ಕೆ ನೀಡಬೇಕೆಂದಾಗ, ಮಾದಕದ್ರವ್ಯ ಕಳ್ಳಸಾಗಣೆದಾರರನ್ನು ಪತ್ತೆ ಮಾಡಲು ಅದು ಅಗತ್ಯ ಎಂದು ವಿವರಿಸುತ್ತಾನೆ ಮಲೋನ್. ಜೈಲಿನಲ್ಲಿ ಬಂಧಿಯಾಗಿದ್ದ ಟುಲ್ಲೆಯನ್ನು ಈ ಕಾರ್ಯಾಚರಣೆಯಲ್ಲಿ ಸಹಕರಿಸಿಲಿಕ್ಕಾಗಿ ರಹಸ್ಯವಾಗಿ ಬಿಡುಗಡೆ ಮಾಡುತ್ತಾನೆ.
ಆದರೆ, ಈ ಸಂದರ್ಭದಲ್ಲಿ ಅಲ್ಲಿ ಡಿಕೋನ್ ಕಾಣಿಸಿಕೊಳ್ಳುತ್ತಾನೆ. ಆತ ಮಲೋನ್ ಪೊಲೀಸ್ ಪತ್ತೇದಾರನ ಮಾರುವೇಷದಲ್ಲಿರುವ ಅಪರಾಧಿ ಎಂಬುದನ್ನು ಬಹಿರಂಗ ಪಡಿಸುತ್ತಾನೆ. ಪೊಲೀಸ್ ಇಲಾಖೆ ಮತ್ತು ಎಫ್.ಬಿ.ಐ. ಅಧಿಕಾರಿಗಳು ಅಲ್ಲಿಗೆ ಆಗಮಿಸಿದಾಗ ಆ ವಜ್ರದೊಂದಿಗೆ ಡಿಕೋನ್ ಒಂದು ಶಸ್ತ್ರಸಜ್ಜಿತ ಟ್ರಕ್ ಏರಿ ಮೆಕ್ಸಿಕೋ ದೇಶದ ಗಡಿಯತ್ತ ಧಾವಿಸುತ್ತಾನೆ.
ಯು.ಎಸ್. ಎ. ಅಧಿಕಾರಿಗಳು ಡಿಕೋನ್ ಬೆನ್ನಟ್ಟಿದರೂ ದೇಶದ ಗಡಿಯಲ್ಲಿ ಕೈಚೆಲ್ಲಿ ನಿಲ್ಲಬೇಕಾಗುತ್ತದೆ. ಆದರೆ, ಮೈಲ್ಸ್ (ಮಲೋನ್) ಒಂದು ಗಸ್ತು ಕಾರಿನಲ್ಲಿ ಡಿಕೋನನ ಬೆನ್ನಟ್ಟಿ ಮೆಕ್ಸಿಕೋ ದೇಶದೊಳಗೆ ನುಗ್ಗುತ್ತಾನೆ. ಡಿಕೋನನ ಟ್ರಕ್ ಅಪಘಾತಕ್ಕೆ ಈಡಾಗುವಂತೆ ಮಾಡಿದ ಮೈಲ್ಸ್, ಕೊನೆಗೂ ಅವನಿಂದ ವಜ್ರವನ್ನು ಪಡೆಯುತ್ತಾನೆ. ಆದರೆ, ಮರುಕ್ಷಣವೇ ಅವನನ್ನು ಬಂಧಿಸಿ ಕೈಗೆ ಕೋಳ ಹಾಕುತ್ತಾನೆ. ಆಗ ಡಿಕೋನ್ ತನಗೆ ಬುಲೆಟ್ ಹಾರಿಸಲು ಪ್ರಯತ್ನಿಸಿದಾಗ ಮೈಲ್ಸ್ ಅವನನ್ನು ಕೊಲ್ಲುತ್ತಾನೆ. ಆ ಮೂಲಕ ತನ್ನ ಆಪ್ತ ಗೆಳೆಯ ಎಡ್ಡಿಯ ಕೊಲೆಯ ಸೇಡು ತೀರಿಸಿಕೊಳ್ಳುತ್ತಾನೆ.
ಇವೆಲ್ಲ ಬೆಳವಣಿಗೆಗಳ ಬಗ್ಗೆ ಪೊಲೀಸ್ ಮತ್ತು ಎಫ್.ಬಿ.ಐ. ಅಧಿಕಾರಿಗಳು ವಿವರಣೆ ಕೇಳಿದಾಗ, ತಾನು ಮಾರುವೇಷದಲ್ಲಿದ್ದ ಮೆಕ್ಸಿಕೋ ದೇಶದ ಅಧಿಕಾರಿ ಎಂದು ಮೈಲ್ಸ್ ಸುಳ್ಳು ಹೇಳುತ್ತಾನೆ. ಅನಂತರ, ಗಡಿ ದಾಟಿ, ಮೆಕ್ಸಿಕೋದ ನೆಲದಲ್ಲಿ ಕಾಲಿಟ್ಟು ಜೊತೆಗಾರನಾಗಿದ್ದ ಕಾರ್ಲ್-ಸನ್-ಗೆ ವಿದಾಯ ನುಡಿದು ಹೊಸ ಬದುಕಿನತ್ತ ಸಾಗುತ್ತಾನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!