“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ:
ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್ ಚಕ್ರವರ್ತಿಯ ಅರಮನೆ ಸೇರಲಿಕ್ಕಾಗಿ) ಜವಾಬ್ದಾರಿ ಅವನಿಗೆ ವಹಿಸಲಾಯಿತು. ಹಾಗೆ ಹಿಂತಿರುಗುವ ಹಾದಿಯಲ್ಲಿ, ರಾಜಕುಮಾರಿಯನ್ನು ರಕ್ಷಿಸುವ ಸಂದರ್ಭದಲ್ಲಿ ಅವನಿಗೆ ಏಟಾಯಿತು. ಅನಂತರ ಅವರು ಪರಸ್ಪರರನ್ನು ಪ್ರೀತಿಸತೊಡಗಿದರು. ಆದರೆ, ತಮ್ಮ ಸಾಮಾಜಿಕ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡು, ಅರಮನೆ ತಲಪಿದರು.
ಅನಂತರ, ಚಕ್ರವರ್ತಿಗೆ ತೀವ್ರ ಅನಾರೋಗ್ಯ ಬಾಧಿಸಿತು. “ಅಮರತ್ವದ ಔಷಧಿ” ಸೇವನೆ ಮಾತ್ರ ಆತನ ಪ್ರಾಣ ಉಳಿಸಲು ಸಾಧ್ಯ ಎಂದು ತಿಳಿಸಲಾಯಿತು. ಅದನ್ನು ಪತ್ತೆ ಮಾಡಿ ತರಲಿಕ್ಕಾಗಿ ಮೆಂಗ್-ಯಿ ಅನ್ನು ಕಳಿಸಲಾಯಿತು. ಅದನ್ನು ತರಲು ಹೊರಡುವ ಮುನ್ನ ಆತ ರಾಜಕುಮಾರಿ ಓಕ್-ಸೂ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುತ್ತಾನೆ. ಆತ ಹಿಂತಿರುಗಿ ಬರುವ ತನಕ ಆತನಿಗಾಗಿ ಕಾಯುತ್ತೇನೆ ಎಂದು ಓಕ್-ಸೂ ವಾಗ್ದಾನ ಮಾಡುತ್ತಾಳೆ.
ಸೇನಾಧಿಪತಿ ಮೆಂಗ್-ಯಿ ಅಮರತ್ವದ ಔಷಧಿ ಪತ್ತೆ ಮಾಡುತ್ತಾನೆ. ಅಷ್ಟರಲ್ಲಿ ಅವನ ಮೇಲೆ ದಾಳಿಯಾಗುತ್ತದೆ. ಆ
ಔಷಧಿಯನ್ನು ಉಪಸೇನಾಧಿಪತಿ ನಾನ್-ಗೊಂಗ್ ಯಾನ್-ಗೆ ಕೊಟ್ಟು ಅವನು ಪ್ರಾಣ ಬಿಡುತ್ತಾನೆ. ನಾನ್-ಗೊಂಗ್ ಯಾನ್ ಅದನ್ನು ಚಕ್ರವರ್ತಿಗೆ ತಲಪಿಸುತ್ತಾನೆ. ಆಗ ಚಕ್ರವರ್ತಿಯ ಮಗ ಮತ್ತು ಪ್ರಧಾನಿ, ಅಮರತ್ವದ ಔಷಧಿಯ ಸಾಚಾತನ ಸಾಬೀತು ಪಡಿಸಲಿಕ್ಕಾಗಿ ನಾನ್-ಗೊಂಗ್ ಯಾನ್ ಮತ್ತು ರಾಜಕುಮಾರಿ ಓಕ್-ಸೂ ಅದನ್ನು ಸೇವಿಸಬೇಕೆಂದು ತಾಕೀತು ಮಾಡುತ್ತಾರೆ. ಆ ಔಷಧಿ ಸೇವಿಸಿದ ಅವರಿಬ್ಬರೂ ಅಮರತ್ವ ಗಳಿಸುತ್ತಾರೆ. ಆದರೆ ಅವರಿಬ್ಬರನ್ನೂ ಚಕ್ರವರ್ತಿಯ ಸಮಾಧಿಭವನದಲ್ಲಿ ಶಾಶ್ವತ ಸೆರೆಮನೆವಾಸಕ್ಕೆ ತಳ್ಳಲಾಗುತ್ತದೆ.
ಇದೀಗ ಮೆಂಗ್-ಯಿ ಪುನರ್ಜನ್ಮ ಪಡೆದು ಜಾಕ್ ಹೆಸರಿನ ಒಬ್ಬ ಪುರಾತತ್ವ ಸಂಶೋಧಕನಾಗಿದ್ದಾನೆ. ಅವನಿಗೆ ರಾತ್ರಿ ನಿದ್ದೆಯಲ್ಲಿ ಆಗಾಗ ತನ್ನ ಹಿಂದಿನ ಜನ್ಮಕ್ಕೆ ಸಂಬಂಧಿಸಿದ ಕನಸುಗಳು ಬೀಳುತ್ತವೆ. ತನ್ನ ಸಂಶೋಧನೆಯ ಸಲುವಾಗಿ ಅವನು ಗೆಳೆಯ ವಿಲಿಯಮ್ ಜೊತೆ ಭಾರತಕ್ಕೆ ಆಗಮಿಸುತ್ತಾನೆ. ಭಾರತದಲ್ಲಿ ದಸಾರ್ ರಾಜಕುಮಾರನ “ತೇಲುವ ಸಮಾಧಿ”ಗೆ ಭೇಟಿ ನೀಡಿ, “ಶೂನ್ಯ ಗುರುತ್ವಾಕರ್ಷಣೆ”ಯ ವಸ್ತುವೊಂದನ್ನು ಪತ್ತೆ ಮಾಡುವುದು ಅವನ ಉದ್ದೇಶ.
ಆ ಸಮಾಧಿಯಲ್ಲಿ ವಿಲಿಯಮ್ ಮಾಡಿದ ತಪ್ಪಿನಿಂದಾಗಿ ಅದು ಕುಸಿಯ ತೊಡಗುತ್ತದೆ. ಆಗ ಜಾಕ್ ಪಕ್ಕದ ನದಿಗೆ ಬೀಳುತ್ತಾನೆ. ಅವನನ್ನು ಸಮಂತ ಎಂಬಾಕೆ ರಕ್ಷಿಸುತ್ತಾಳೆ. ಅನಂತರ ಅವಳು ಕೇರಳದ ಕದನಕಲೆ ಕಲರಿಪಯಟ್ಟು ಗುರು ಆಗಿರುವ ತನ್ನ ಮಾವನಿಗೆ ಜಾಕ್ ಅನ್ನು ಪರಿಚಯಿಸುತ್ತಾಳೆ. ಆ ಗುರುವಿನ ಒಬ್ಬ ಶಿಷ್ಯನ ಜೊತೆ ಕದನ ಕಲೆ ಅಭ್ಯಾಸ ಮಾಡುವಾಗ ಜಾಕ್-ಗೆ ತನ್ನ ಹಿಂದಿನ ಜನ್ಮದ ಇನ್ನಷ್ಟು ವಿವರಗಳು ನೆನಪಾಗುತ್ತವೆ.
ಅನಂತರ, ಜಾಕ್ ಮತ್ತು ವಿಲಿಯಮ್ ಚೀನಾಕ್ಕೆ ಹಿಂತಿರುಗುತ್ತಾರೆ. ತಾವು ಭಾರತದಿಂದ ತಂದಿದ್ದ ಖಡ್ಗವೊಂದನ್ನು ಚೀನಾದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಇದರಿಂದಾಗಿ, ಜಾಕ್-ನ ಸಂಶೋಧನೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ “ಸಿಂಡಿಕೇಟಿ”ನ ಮುಖ್ಯಸ್ಥ ಪ್ರೊ. ಕೂ ಅವರಿಗೆ ಅಸಮಾಧಾನವಾಗುತ್ತದೆ.
ಆಳವಾದ ಸಂಶೋಧನೆಯ ನಂತರ, ಜಾಕ್ ಮತ್ತು ವಿಲಿಯಮ್ ಒಂದು ನಿರ್ಧಾರಕ್ಕೆ ಬರುತ್ತಾರೆ: ಶೂನ್ಯ ಗುರುತ್ವಾಕರ್ಷಣೆಗೆ ಕಾರಣ ಕ್ವಿನ್ ರಾಜಮನೆತನದ ಆಳ್ವಿಕೆಯ ಸಮಯದಲ್ಲಿ ಭೂಮಿಗೆ ಅಪ್ಪಳಿಸಿದ ಒಂದು ಧೂಮಕೇತುವಿನ ತುಂಡು. ತದನಂತರ ಅವರು ಕ್ವಿನ್ ಚಕ್ರವರ್ತಿಯ ಸಮಾಧಿಭವನದ ಸ್ಥಳವನ್ನು ಪತ್ತೆ ಮಾಡುತ್ತಾರೆ. ಅದು ಒಂದು ಜಲಪಾತದ ಹಿಂಭಾಗದಲ್ಲಿತ್ತು. ಆ ಸಮಾಧಿಭವನದಲ್ಲಿ ಆ ಧೂಮಕೇತುವಿನ ಅತಿ ದೊಡ್ಡ ತುಂಡು ಇತ್ತು. ಅದರಿಂದಾಗಿ ಆ ಸಮಾಧಿಭವನ ಒಂದು ತೇಲುವ ಅರಮನೆಯಾಗಿತ್ತು.
ಅಂತೂ ಜಾಕ್ ಮತ್ತು ವಿಲಿಯಮ್ ಆ ಸಮಾಧಿಭವನ ತಲಪುತ್ತಾರೆ. ಅಲ್ಲಿ ಜಾಕ್ (ಅಮರರಾಗಿದ್ದ) ರಾಜಕುಮಾರಿ ಓಕ್-ಸೂ ಮತ್ತು ನಾನ್-ಗೊಂಗ್ ಯಾನ್ ಅವರನ್ನು ಭೇಟಿಯಾಗುತ್ತಾನೆ. ಅವರು ಜಾಕ್ ಅವನೇ ಮೆಂಗ್-ಯಿ ಎಂದು ಭಾವಿಸುತ್ತಾರೆ.
ಜಾಕ್ ಮತ್ತು ವಿಲಿಯಮ್ ಇವರನ್ನು ಹಿಂಬಾಲಿಸಿ ಬಂದಿದ್ದ ಪ್ರೊ. ಕೂ ಮತ್ತು ಅವರ ಗ್ಯಾಂಗಿನವರು ಇವರಿಬ್ಬರಿಂದ ಅಮರತ್ವದ ಔಷಧಿ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಲ್ಲಿ (ಕದನ ಕಲೆಯ) ಹೋರಾಟ ನಡೆಯುತ್ತದೆ. ಆಕಸ್ಮಿಕವಾಗಿ ವಿಲಿಯಮ್ ಧೂಮಕೇತುವಿನ ಒಂದು ತುಂಡನ್ನು ಕಿತ್ತು ತೆಗೆದಾಗ, ಆ ಸಮಾಧಿಭವನದ ಸಮತೋಲನ ಏರುಪೇರಾಗಿ ಅದು ಕುಸಿಯ ತೊಡಗುತ್ತದೆ. ಆಗ ವಿಲಿಯಮ್ ಅಲ್ಲಿದ್ದ ಪಾದರಸದಲ್ಲಿ ಮುಳುಗಿ ಸಾಯುತ್ತಾನೆ. ಅಲ್ಲಿಂದ ಪಾರಾಗುವ ಧಾವಂತದಲ್ಲಿ ತನ್ನ ಜೊತೆ ಬರಬೇಕೆಂದು ರಾಜಕುಮಾರಿ ಓಕ್-ಸೂ ಅನ್ನು ಜಾಕ್ ಕೇಳಿಕೊಳ್ಳುತ್ತಾನೆ. ಆದರೆ, ಈ ವ್ಯಕ್ತಿ ಸೇನಾಧಿಪತಿಯಾಗಿದ್ದ ಮೆಂಗ್-ಯಿ ಅಲ್ಲವೆಂದು ತಿಳಿದುಕೊಂಡ ಆಕೆ ನಿರಾಕರಿಸುತ್ತಾಳೆ. ಅಷ್ಟರಲ್ಲಿ, ಅಮರತ್ವದ ಔಷಧಿಗೆ ಕೈಹಾಕಿದ ಪ್ರೊ. ಕೂ ಅನ್ನು ನಾನ್-ಗೊಂಗ್ ಯಾನ್ ಎಳೆದಾಗ ಇಬ್ಬರೂ ಬಿದ್ದು ಸಾಯುತ್ತಾರೆ.
ಕೊನೆಯ ದೃಶ್ಯದಲ್ಲಿ, ತನ್ನ ಮನೆಯಲ್ಲಿ “ದ ಮಿಥ್” ಎಂಬ ಪ್ರಕಟಿತ ಪುಸ್ತಕ ನೋಡುತ್ತಿರುವ ಜಾಕ್, ಅದನ್ನು ತನ್ನ ಗೆಳೆಯ ವಿಲಿಯಮ್-ಗೆ ಅರ್ಪಿಸಿದ್ದು ಕಾಣಿಸುತ್ತದೆ. ಅದು ಜಾಕ್-ನ ಸಾಹಸಗಳ ಪುಸ್ತಕ.
(15 ವರುಷಗಳ ಹಿಂದೆ ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ 16-02-2011ರ ಬುಧವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾ ಸಾರಾಂಶ.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!