“ಡಿಸ್ಟ್ರಿಕ್ಟ್ 13, ಅಲ್ಟಿಮೇಟಮ್” ಇಂಗ್ಲಿಷ್ ಸಿನಿಮಾದ ಕತೆ:

ಮೂಲ ಸಿನಿಮಾ “ಡಿಸ್ಟ್ರಿಕ್ಟ್ 13” (ಬಿಡುಗಡೆಯಾದದ್ದು 2005ರಲ್ಲಿ) ಅದರ ಮುಂದುವರಿದ ಕತೆ (ಸೀಕ್ವೆಲ್) 2009ರ ಈ ಸಿನಿಮಾ. ಮೂಲ ಸಿನಿಮಾದಲ್ಲಿ ಮಾಫಿಯಾ ಗ್ಯಾಂಗುಗಳ ಹಾವಳಿಯಿಂದಾಗಿ ಪ್ಯಾರಿಸ್ ಮಹಾನಗರದ     “ಜಿಲ್ಲೆ 13”ರ ಕಾನೂನು ವ್ಯವಸ್ಥೆ ಹದಗೆಟ್ಟಿತ್ತು. ತದನಂತರ ಅದನ್ನು ಸರಿ ಪಡಿಸುವ ಅಧಿಕಾರಿಗಳ ಪ್ರಯತ್ನಗಳು ಯಶಸ್ವಿ ಆಗಲಿಲ್ಲ. ತಹಾ ಬೆನ್ ಮೊಹಮದ್ ಎಂಬ ಗ್ಯಾಂಗ್ ಲೀಡರನ ಮರಣದ ನಂತರ ಅವನ ಸ್ಥಾನಕ್ಕೆ ಏರಲು ಇತರ ಗ್ಯಾಂಗ್ ಲೀಡರುಗಳು ಪ್ರಯತ್ನಿಸುತ್ತಿದ್ದರು. 

ಮೊದಲ ಹಂತದಲ್ಲಿ (ಮೂಲ ಸಿನಿಮಾದಲ್ಲಿ) ಜನಸಾಮಾನ್ಯರ ಮುಂದಾಳುತನ ವಹಿಸಿದ್ದ ಡಾಮಿಯಾನ್ ಮತ್ತು ಲೀಟೊ ಈಗಲೂ ಆ ಜಿಲ್ಲೆಯಲ್ಲಿ ಜನಹಿತಕ್ಕಾಗಿ ಕಾರ್ಯಪ್ರವೃತ್ತರಾಗುತ್ತಾರೆ. ಒಬ್ಬ ಮುಖ್ಯ ಡ್ರಗ್ ಡೀಲರ್-ನನ್ನು  (ಮಾದಕದ್ರವ್ಯ ಒದಗಿಸುವವನು) ಕೊಂದು ಹಾಕಿದ ಡಾಮಿಯಾನ್. ಆದರೆ, ಅವನನ್ನೇ ಪೋಲಿಸಲು ಬಂಧಿಸುತ್ತಾರೆ - ಅವನ ಬಳಿ ಮಾದಕದ್ರವ್ಯ ಇತ್ತು ಎಂಬ ಸುಳ್ಳು ಆರೋಪ ಹಾಕುತ್ತಾರೆ. ಬಂಧನಕ್ಕೆ ಒಳಗಾಗುವ ಮುಂಚೆ ಲೀಟೊಗೆ ಫೋನ್ ಮಾಡಿ, ತನ್ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಡಾಮಿಯಾನ್ ತಿಳಿಸುತ್ತಾನೆ. 

ಈ ನಡುವೆ ವಾಲ್ಟರ್ ಗಾಸ್-ಮಾನ್ ಎಂಬ ಮೇಲಾಧಿಕಾರಿಯ ಮುಂದಾಳುತನದಲ್ಲಿ ಡಿ.ಐ.ಎಸ್.ಎಸ್. (ಡಿಪಾರ್ಟ್ಮೆಂಟ್ ಆಫ್ ಇಂಟರ್ನಲ್ ಸ್ಟೇಟ್ ಸೆಕ್ಯೂರಿಟಿ) ಇಲಾಖೆಯ ಭ್ರಷ್ಟ ಸರಕಾರಿ ಅಧಿಕಾರಿಗಳು ಜಿಲ್ಲೆ 13ರ ಐದು ಬಹುಮಹಡಿ ಕಟ್ಟಡಗಳನ್ನು ಕ್ಷಿಪಣಿ ಬಾಂಬುಗಳ ಮೂಲಕ ಧ್ವಂಸ ಮಾಡಲು ಯೋಜನೆ ಸಿದ್ಧ ಪಡಿಸುತ್ತಾರೆ. ಆ ದುಬಾರಿ ಜಮೀನಿನಲ್ಲಿ ವಿಲಾಸಿ ಫ್ಲಾಟುಗಳನ್ನು ನಿರ್ಮಿಸಿ, ಮಾರಾಟ ಮಾಡಿ, ಲಾಭದ ಕೊಳ್ಳೆ ಹೊಡೆಯುವುದು ಅವರ ಹುನ್ನಾರ. 

ಇದಕ್ಕೆ ಪೂರ್ವಭಾವಿಯಾಗಿ, ಆ ಇಲಾಖೆಯ ಏಜೆಂಟರು  ಇಬ್ಬರು ಪೊಲೀಸರನ್ನು ಕೊಂದು, ಅವರ ಶವಗಳಿದ್ದ ಕಾರನ್ನು ಜಿಲ್ಲೆ 13ರಲ್ಲಿ ಒಂದು ಕಡೆ ಅಪಘಾತವೆಂದು ಕಾಣುವಂತೆ ಧ್ವಂಸ ಮಾಡುತ್ತಾರೆ. ಆ ಜಿಲ್ಲೆಯಲ್ಲಿ ಮಾಫಿಯಾ ಗ್ಯಾಂಗುಗಳ ಜೊತೆ ಹೊಡೆದಾಟ ಶುರು ಹಚ್ಚಲಿಕ್ಕಾಗಿ, ಆ ಪೊಲೀಸರನ್ನು ಮಾಫಿಯಾ ಗ್ಯಾಂಗಿನವರು ಕೊಂದದ್ದು ಎಂಬ ವದಂತಿ ಹಬ್ಬಿಸುತ್ತಾರೆ. ಇದರ ದೃಶ್ಯಗಳ ವಿಡಿಯೋಗಳನ್ನು ಫ್ರಾನ್ಸಿನ ಅಧ್ಯಕ್ಷರಿಗೆ ತೋರಿಸಲಾಗುತ್ತದೆ. ಐದು ಬಹುಮಹಡಿ ಕಟ್ಟಡಗಳನ್ನು ಕ್ಷಿಪಣಿ ಬಾಂಬ್ ದಾಳಿಯಿಂದ ಧ್ವಂಸ ಮಾಡಲು ಆ ವರೆಗೆ ಅನುಮತಿ ನೀಡದಿದ್ದ ಅಧ್ಯಕ್ಷರು, ಆ ವಿಡಿಯೋಗಳನ್ನು ನೋಡಿ ವಿಚಲಿತರಾಗುತ್ತಾರೆ. 

ಆದರೆ, ಸಮೀರ್ ಮತ್ತು ಅವನ ಗೆಳೆಯರು ಡಿ.ಐ.ಎಸ್.ಎಸ್. ಇಲಾಖೆಯ ಏಜೆಂಟರು ಆ ಇಬ್ಬರು ಪೊಲೀಸರ ಕೊಲೆ ಮಾಡುವುದನ್ನು ನೋಡಿರುತ್ತಾರೆ ಮಾತ್ರವಲ್ಲ ಆ ಘಟನಾವಳಿಗಳನ್ನು ವಿಡಿಯೋ ಮಾಡಿರುತ್ತಾರೆ. ಇದನ್ನು ತಿಳಿದ ಇಲಾಖೆಯ ಏಜೆಂಟರು ಸಮೀರನ ಬೆನ್ನು ಹತ್ತಿ, ಅವನನ್ನು ಬಂಧಿಸುತ್ತಾರೆ. ತನ್ನ ಬಂಧನದ ಮುಂಚೆ, ತನ್ನ ಬಳಿಯಿದ್ದ ಆ ವಿಡಿಯೋದ ಮೆಮರಿ ಕಾರ್ಡನ್ನು ಸಮೀರ ಲೀಟೊಗೆ ಕೊಡುತ್ತಾನೆ. 

ಅನಂತರ ಲೀಟೊ ಪೊಲೀಸರಿಂದ ಬಂಧನಕ್ಕೆ ಒಳಗಾಗುತ್ತಾನೆ - ಆ ಮೂಲಕ ಜೈಲು ಸೇರುತ್ತಾನೆ. ಅಲ್ಲಿ, ಕಾವಲು ಪೊಲೀಸರ ಕಣ್ಣು ತಪ್ಪಿಸಿ, ಡಾಮಿಯಾನ್ ಅನ್ನು ಜೈಲಿನಿಂದ ಪಾರು ಮಾಡುತ್ತಾನೆ. ಅವರಿಬ್ಬರೂ ಆ ವರೆಗಿನ ಘಟನೆಗಳನ್ನು ಮತ್ತು ಮುಂದಿನ ಯೋಜನೆಗಳನ್ನು ಚರ್ಚಿಸುತ್ತಾರೆ. ಆ ಇಲಾಖೆಯ ಏಜೆಂಟರುಗಳ ಹುನ್ನಾರ ಬಹಿರಂಗ ಪಡಿಸಲು ಅಗತ್ಯವಾದ ಪುರಾವೆ ಸಂಗ್ರಹಿಸಲು ನಿರ್ಧರಿಸುತ್ತಾರೆ. 

ಅದರ ಅನುಸಾರ, ಲೀಟೊ ಕಾವಲು ಪೊಲೀಸರ ಗಮನ ಬೇರೆಡೆ ಸೆಳೆಯುತ್ತಾನೆ. ಆ ಸಮಯದಲ್ಲಿ ಡಾಮಿಯಾನ್  ದುರುಳ ಅಧಿಕಾರಿ ಗಾಸ್-ಮಾನ್ ಅವನ ಕಚೇರಿಗೆ ನುಗ್ಗಿ ಅಲ್ಲಿನ ಕಂಪ್ಯೂಟರಿನ ಹಾರ್ಡ್-ಡಿಸ್ಕ್ ಕದಿಯುತ್ತಾನೆ. ಯಾಕೆಂದರೆ, ಆ ಭ್ರಷ್ಟ ಇಲಾಖೆಯ ಹುನ್ನಾರದ ಪುರಾವೆಗಳು ಅದರಲ್ಲಿದ್ದವು. ಲೀಟೊ ಮತ್ತು ಡಾಮಿಯಾನ್ ಜಿಲ್ಲೆ-13ಕ್ಕೆ ಹಿಂತಿರುಗುತ್ತಾರೆ. ಅಲ್ಲಿನ ಐದು ಮಾಫಿಯಾ ಗ್ಯಾಂಗುಗಳ ಮುಂದಾಳುಗಳಿಗೆ ಎಲ್ಲ ಸಂಗತಿ ತಿಳಿಸಿ, ಐದು ಕಟ್ಟಡಗಳ ಧ್ವಂಸ ಯೋಜನೆಯ ವಿರುದ್ಧ ಅವರು ಒಟ್ಟಾಗಿ ಕಾರ್ಯಾಚರಣೆಗೆ ಇಳಿಯುವಂತೆ ಮಾಡುತ್ತಾರೆ. 

ಅಷ್ಟರಲ್ಲಿ, ಕ್ಷಿಪಣಿ ನಿಯಂತ್ರಣ ಕೇಂದ್ರಕ್ಕೆ ಅಧ್ಯಕ್ಷರನ್ನು ಬಲವಂತದಿಂದ ಕರೆದು ತರುತ್ತಾನೆ ದುರುಳ ಅಧಿಕಾರಿ ಗಾಸ್-ಮಾನ್. ಆತ, ನಿಯಂತ್ರಣ ಪ್ಯಾನೆಲಿಗೆ “ಕೀ” ಹಾಕಿ, “ನೀವು ಇದನ್ನು ತಿರುಗಿಸಿ. ಆಕಾಶದಲ್ಲಿರುವ ವಿಮಾನದಲ್ಲಿ ಕ್ಷಿಪಣಿಗಳು ತಯಾರಾಗಿವೆ. ಎರಡೇ ನಿಮಿಷದಲ್ಲಿ ಕ್ಷಿಪಣಿಗಳು ಬಂದು ನೆಲಕ್ಕೆ ಅಪ್ಪಳಿಸುತ್ತವೆ” ಎಂದು ಒತ್ತಾಯಿಸುತ್ತಾನೆ. 

ಇದಕ್ಕೆ ಸಮ್ಮತಿಸದ ಅಧ್ಯಕ್ಷ ಕೊನೆಯ ಕ್ಷಣದಲ್ಲಿ, “ಆ ಪ್ರದೇಶದಲ್ಲಿ ಯಾರೊಬ್ಬರೂ ಇಲ್ಲ ಎಂದು ಹೇಗೆ ಹೇಳುತ್ತಿ? ಅಲ್ಲಿಂದ ಎಲ್ಲರನ್ನೂ ಸ್ಥಳಾಂತರ ಮಾಡಲಾಗಿದೆ ಎಂದು ನನಗೆ ಖಚಿತ ಪಡಿಸು” ಎನ್ನುತ್ತಾನೆ. 

ಅಷ್ಟರಲ್ಲಿ ಡಾಮಿಯಾನ್ ಮತ್ತು ಲೀಟೊ ಐದು ಮಾಫಿಯಾ ತಂಡಗಳ ಸುಮಾರು 30 ಸದಸ್ಯರೊಂದಿಗೆ ಕ್ಷಿಪಣಿ ನಿಯಂತ್ರಣ ಕೇಂದ್ರಕ್ಕೆ ಲಗ್ಗೆ ಹಾಕುತ್ತಾರೆ. ಯಾವುದೇ ಸಂದರ್ಭದಲ್ಲಿ ಯಾರೂ ಬಂದೂಕು ಬಳಸಬಾರದು ಎಂದು ಅವರೆಲ್ಲರಿಗೂ ತಾಕೀತು ಮಾಡಲಾಗಿತ್ತು. ಅವರೆಲ್ಲರೂ ಅಧ್ಯಕ್ಷರು ಇದ್ದ ಕೋಣೆಗೆ ಬಂದು ತಲಪುತ್ತಾರೆ. ಅಧ್ಯಕ್ಷರಿಗೆ ಭ್ರಷ್ಟ ಇಲಾಖೆಯ ಹುನ್ನಾರದ ಪುರಾವೆಗಳನ್ನು ತೋರಿಸಿ, ಗಾಸ್-ಮಾನ್ ಒಬ್ಬ ಭ್ರಷ್ಟ ಡಿ.ಐ.ಎಸ್.ಎಸ್. ಏಜೆಂಟ್ ಎಂದು ಸಾಬೀತು ಪಡಿಸುತ್ತಾರೆ. 

ಆಗ ಗಾಸ್-ಮಾನ್ ಅಧ್ಯಕ್ಷರಿಗೆ ಆ ಪ್ರದೇಶದಿಂದ ಎಲ್ಲ ಜನರನ್ನೂ ಸ್ಥಳಾಂತರಿಸಲಾಗಿದೆ ಎಂದು ಖಚಿತ ಪಡಿಸುತ್ತಾನೆ. ಆದರೂ ಅಧ್ಯಕ್ಷರು “ಕೀ” ತಿರುಗಿಸಲು ಹಿಂಜರಿಯುತ್ತಾನೆ. ಡಾಮಿಯಾನ್ ಆ ಪ್ಯಾನೆಲನ್ನೇ ಧ್ವಂಸ ಮಾಡಲು ತಯಾರಾಗುತ್ತಾನೆ. ಆಗ, ರಿವಾಲ್ವರನ್ನು ಅಧ್ಯಕ್ಷರ ತಲೆಗೇ ಒತ್ತಿ ಹಿಡಿದು, ಗಾಸ್-ಮಾನ್ “ಈಗಲೇ ಕೀ ತಿರುಗಿಸು” ಎಂದು ಬೆದರಿಸುತ್ತಾನೆ. 

ಈ ಸನ್ನಿವೇಶದಲ್ಲಿ, ಲೀಟೊ, ಡಾಮಿಯಾನ್ ಮತ್ತು ಐದು ಮಾಫಿಯಾ ಗ್ಯಾಂಗುಗಳ ಸದಸ್ಯರು ಉಪಾಯದಿಂದ ಅಧ್ಯಕ್ಷರನ್ನು ಅಲ್ಲಿಂದ ಪಾರು ಮಾಡುತ್ತಾರೆ ಮತ್ತು ದುರುಳ ಅಧಿಕಾರಿ ಗಾಸ್-ಮಾನ್ ಅನ್ನು ನಿಷ್ಕ್ರಿಯಗೊಳಿಸುತ್ತಾರೆ. ಇದಕ್ಕಾಗಿ ಅಧ್ಯಕ್ಷರು ಅವರೆಲ್ಲರಿಗೂ ಧನ್ಯವಾದ ಆರ್ಪಿಸುತ್ತಾರೆ ಮತ್ತು ಜಿಲ್ಲೆ 13ರ ಅಭಿವೃದ್ಧಿಗೆ ಸರಕಾರದ ಅನುದಾನ ನೀಡಲಾಗುವುದು ಎಂದು ವಾಗ್ದಾನ ಮಾಡುತ್ತಾರೆ. 

ಅದೇನಿದ್ದರೂ, ಇಷ್ಟೆಲ್ಲ ಆದ ನಂತರ ಮಾಫಿಯಾ ಗ್ಯಾಂಗುಗಳ ಮುಂದಾಳುಗಳು, ಜಿಲ್ಲೆ 13ರ ಬಹುಮಹಡಿ ಕಟ್ಟಡಗಳನ್ನು ರಿಪೇರಿ ಮಾಡುವ ಬದಲಾಗಿ ಅವನ್ನು ಧ್ವಂಸ ಮಾಡಿ, ಹೊಸದಾಗಿ ನಿರ್ಮಿಸುವುದೇ ಉತ್ತಮವೆಂದು ನಿರ್ಧರಿಸುತ್ತಾರೆ. ಅಧ್ಯಕ್ಷರು ಈ ಯೋಜನೆಗೆ ಒಪ್ಪಿಗೆ ನೀಡುತ್ತಿದ್ದಂತೆ, ಅಲ್ಲಿನ ಬಹುಮಹಡಿ ಕಟ್ಟಡಗಳು ಧ್ವಂಸವಾಗುವ ದೃಶ್ಯಗಳೊಂದಿಗೆ ಸಿನಿಮಾ ಮುಗಿಯುತ್ತದೆ.