ಮತದಾರನಿಗೆ ಹಣ - ಹೆಂಡ ಸೀರೆ ಪಂಚೆ ಪಡೆದು ಯಾರಿಗೆ ಬೇಕಾದರೂ ಮತ ಹಾಕುವ ಸ್ವಾತಂತ್ರ್ಯ ದೊರೆತಿದೆ. ಹಾಗೆಯೇ ಗೆದ್ದ ಅಭ್ಯರ್ಥಿ ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಅಥವಾ ಮಂತ್ರಿಗಿರಿ ಕೊಡುತ್ತಾರೋ ಅವರ ಪಕ್ಷಕ್ಕೆ ಹಾರುವ ಸ್ವಾತಂತ್ರ್ಯ ಉಳಿಸಿಕೊಂಡಿದ್ದಾರೆ. ಹಾಗೆಯೇ ಮಂತ್ರಿಯಾದವನು ತನ್ನ ಕುಟುಂಬದ ಏಳು ತಲೆಮಾರಿಗಾಗುವಷ್ಟು ಸಂಪತ್ತು ಗಳಿಸುವ ಸ್ವಾತಂತ್ರ್ಯವೂ ಸಿಕ್ಕಿದೆ. ಟಿವಿ, ಫೇಸ್ ಬುಕ್, ಎಕ್ಸ್,  ವಾಟ್ಸ್ ಆಪ್ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲಿ ಯಾರನ್ನು ಬೇಕಾದರೂ ಅವರ ವೈಯಕ್ತಿಕ ನೆಲೆಯಲ್ಲಿಯೂ ಬಾಯಿಗೆ ಬಂದಂತೆ ಮಾತನಾಡುವ ಸ್ವಾತಂತ್ರ್ಯವೂ ದೊರೆತಿದೆ. ಸಾಹಿತಿಗಳು - ಕಲಾವಿದರು - ಹೋರಾಟಗಾರರು - ಮಠಾಧೀಶರು ಮುಂತಾದ ಜನಪ್ರಿಯರೂ ಕೂಡ ತಮ್ಮ ಸ್ಥಾನ ಮತ್ತು ಜವಾಬ್ದಾರಿಯ ಅರಿವಿಲ್ಲದೆ ಜನರ ಮಧ್ಯೆ ಬೆಂಕಿಹಚ್ಚುವ ಸಂಪೂರ್ಣ ಸ್ವಾತಂತ್ರ್ಯ ಗಳಿಸಿಕೊಂಡಿದ್ದಾರೆ. ಸಿಕ್ಕ ಸಿಕ್ಕ ವಿಷಯಗಳಿಗೆ ಇಡೀ ಭಾರತವನ್ನೇ ಬಂದ್ ಮಾಡಿ ಮನಸ್ಸೋ ಇಚ್ಚೆ ಗಲಭೆ ಮಾಡುವ ಮತ್ತು ಮಾಡಿಸುವ ಸ್ವಾತಂತ್ರ್ಯವೂ ನಮಗಿದೆ.

ಕೆಲವು ಕೊಲೆ - ಅತ್ಯಾಚಾರ - ಭ್ರಷ್ಟಾಚಾರ - ವಂಚನೆ - ಕಳ್ಳತನವನ್ನು ಮಾಡಿಯೂ ಪೋಲೀಸರಿಂದಲೋ ತಪ್ಪಿದರೆ ನ್ಯಾಯಾಲಯದಿಂದಲೋ ಬಚಾವ್ ಆಗಿ ಬರುವ ಸ್ವಾತಂತ್ರ್ಯವೂ ಇದೆ. ದಾರಿಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಚುಡಾಯಿಸಿ ಭಾರತ್ ಮಾತಾಕಿ ಜೈ ಎನ್ನುವ ಸ್ವಾತಂತ್ರ್ಯವೂ ನಮಗಿದೆ. ತಾವು ಹುಟ್ಟಿದ ಜಾತಿ ಹೇಳಿಕೊಂಡು ನಮಗೇಗೆಬೇಕೋ ಹಾಗೆ ಅದರ ಲಾಭ ಪಡೆಯುವ ಸ್ವಾತಂತ್ರ್ಯವೂ ನಮಗಿದೆ. ಇದೆಲ್ಲದರ ನಡುವೆ  ಬ್ರಿಟೀಷರ ಕಾಲದಲ್ಲಿ ಇದ್ದ ಆ ಗುಲಾಮಿ ಮನೋಭಾವ ಮಾತ್ರ ಬದಲಾಗಿಲ್ಲ.  ಸ್ವತಂತ್ರ ಚಿಂತನೆ - ಕ್ರಿಯಾತ್ಮಕ ಬೆಳವಣಿಗೆ - ಪ್ರಬುಧ್ಧ ಮನಸ್ಥಿತಿ ಮಾತ್ರ ನಮಗೆ ದಕ್ಕಲಿಲ್ಲ. ಆಧುನಿಕ ಯುವಕರಂತೂ ಯಾವುದೋ ಸಿದ್ಧಾಂತಕ್ಕೋ, ಇಲ್ಲ ಯಥೇಚ್ಛ ಹಣಕ್ಕೋ ಅಥವಾ ತಂತ್ರಜ್ಞಾನಕ್ಕೋ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ, " ಸ್ವಾತಂತ್ರ್ಯವೆಂದರೆ ನಮಗಿಷ್ಟ ಬಂದಂತೆ ಆಡುವ ಸ್ವೇಚ್ಛಾಚಾರ ಅಥವಾ ಸ್ವಾತಂತ್ರ್ಯವೆಂದರೆ ಇನ್ನೊಬ್ಬರಿಗೆ ಮಾರಿಕೊಳ್ಳುವ ಗುಲಾಮಿತನ. "ಗಾಂಧಿಯನ್ನು ಕೊಂದದ್ದು ಗೋಡ್ಸೆ ಮಾತ್ರವಲ್ಲ… ಗಾಂಧಿ ತತ್ವಗಳನ್ನು ಸಮಾಧಿ ಮಾಡಿದ ದೇಶದ ಭವಿಷ್ಯ ! ಪಿಕ್ಚರ್ ಅಭೀ ಬಾಕಿ ಹೈ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ