1965ರ ಭಾರತ - ಪಾಕ್ ರೋಚಕ ಸಮರ

ಸ್ವಾತಂತ್ರ್ಯದ ಬಳಿಕ ನಿರಂತರ ಕಾಲು ಕೆರೆದು ಜಗಳಕ್ಕೆ ಬರುವುದನ್ನೇ ಚಾಳಿ ಮಾಡಿಕೊಂಡಿದ್ದ ಪಾಕಿಸ್ತಾನವು ೧೯೬೫ರಲ್ಲೂ ಈ ಅಭ್ಯಾಸ ಮುಂದುವರೆಸಿತ್ತು. ಆ ಸಮಯದಲ್ಲಿ ನಾವು ಚೀನಾ ಯುದ್ಧದಿಂದ ಬಳಲಿದ್ದೆವು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನಿಧನ ಹೊಂದಿದ್ದರು. ಎರಡನೇ ಪ್ರಧಾನಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಆಗ ತಾನೇ ಅಧಿಕಾರ ವಹಿಸಿಕೊಂಡಿದ್ದರು. ದೈಹಿಕವಾಗಿ ನೋಡಲು ಅಷ್ಟೇನೂ ಬಲವಂತನಂತೆ ಕಾಣಿಸದ ಶಾಸ್ತ್ರೀಜಿಯವರ ಬಗ್ಗೆ ಪಾಕಿಸ್ತಾನ ತಪ್ಪಾಗಿಯೇ ಅರ್ಥ ಮಾಡಿಕೊಂಡಿತ್ತು ಎನ್ನುವುದು ಯುದ್ಧದಲ್ಲಿ ಸೋತ ಬಳಿಕವಷ್ಟೇ ಅದಕ್ಕೆ ಅರಿವಾಯಿತು. ಅಂತಹ ಬಲವಾದ ಏಟು ಕೊಟ್ಟಿದ್ದರು ಶಾಸ್ತ್ರೀಜಿಯವರು. ಪಾಕಿಸ್ತಾನದ ಲಾಹೋರ್ ನಗರದ ತನಕ ಭಾರತದ ಸೈನ್ಯ ನುಗ್ಗಿತ್ತು. ಪಾಕಿಸ್ತಾನ ಭಾರತದ ಭೂಭಾಗವನ್ನು ಪ್ರವೇಶಿಸಿದಾಗ ಶಾಸ್ತ್ರೀಜಿಯವರು ಕೆಲವೇ ನಿಮಿಷದಲ್ಲಿ ಯುದ್ಧದ ಘೋಷಣೆ ಮಾಡಿದ್ದರು. ತಮ್ಮ ಸಚಿವ ಸಂಪುಟದ ಸಮಾಲೋಚನೆಯನ್ನೂ ಮಾಡಿರಲಿಲ್ಲ. ಕೇವಲ ಮೂರು ಸೇನಾ ದಳಗಳ (ಭೂ, ನೌಕೆ, ವಾಯು) ಪ್ರಮುಖರ ಜೊತೆ ಮಾತ್ರ ಸಮಾಲೋಚನೆ ಮಾಡಿದ್ದರು. ಅದಾಗಿತ್ತು ಶಾಸ್ತ್ರೀಜಿಯವರ ನಿಜವಾದ ತಾಕತ್ತು. ಈ ಸಮರದ ಯೋಚಕ ಕಥೆಯನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಖ್ಯಾತ ಲೇಖಕರಾದ ಮ.ಸು.ಮನ್ನಾರ್ ಕೃಷ್ಣ ರಾವ್. 

ಈ ಕೃತಿಯ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ವಿಂಗ್ ಕಮಾಂಡರ್ ಬಿ ಎಸ್ ಸುದರ್ಶನ್. ಅವರು ಮುನ್ನುಡಿಯಲ್ಲಿ ಬರೆಯುತ್ತಾರೆ… “ಶ್ರೀಯುತ ಮನ್ನಾ‌ರ್ ಕೃಷ್ಣರಾವ್ ಅವರ "1965ರ ಭಾರತ-ಪಾಕ್ ರೋಚಕ ಸಮರ" ಪುಸ್ತಕದ ವಿಶೇಷತೆ ಎಂದರೆ ಇದರ ಸ್ಪಷ್ಟತೆ ಮತ್ತು ಒಬ್ಬ ಅನುಭವಿ ಸಾಹಿತಿಯ ಸರಳವಾಗಿ ಓದಿಸಿಕೊಂಡು ಹೋಗುವ ಶೈಲಿಯ ಬರಹ. ಈ ವಿಷಯವಾಗಿ ಹಲವಾರು ಹೆಸರಾಂತ ಸೈನ್ಯಾಧಿಕಾರಿಗಳ ಪುಸ್ತಕಗಳ ಕೆಲವು ಪ್ರಮುಖ ಅಂಶಗಳನ್ನು ಆಧಾರಿತವಾಗಿ ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಾದರೂ ಸಹ ಸಮರ ಸಾಹಿತ್ಯದ ಅಪಾರ ಜ್ಞಾನ ಲೇಖಕರಿಗಿದೆ. ಇಲ್ಲಿ ಕೇವಲ "ಏನಾಯಿತು?" ಎಂಬ ಪ್ರಶ್ನೆಗೆ ಉತ್ತರ ನೀಡುವುದಲ್ಲ; "ಏಕೆ ಹೀಗೆ ನಡೆಯಿತು?", "ಯುದ್ಧದ ನಿರ್ಧಾರಗಳು ಹೇಗೆ ರೂಪುಗೊಂಡವು?" ಎಂಬ ಆಳವಾದ ಪ್ರಶ್ನೆಗಳಿಗೆ ಸಹ ಸಮರ್ಥ ಉತ್ತರ ನೀಡುತ್ತಾರೆ. ಯುದ್ಧತಂತ್ರ, ಕಾರ್ಯಾಚರಣೆಗಳ ವಿನ್ಯಾಸ ಮತ್ತು ಕಮಾಂಡ್ ನಿರ್ಧಾರಗಳ ಬಗ್ಗೆ ಅವರ ವಿವರಣೆಗಳು ಓದುಗರಿಗೆ ಅಪಾರ ತಿಳುವಳಿಕೆಯನ್ನು ನೀಡುತ್ತವೆ. ಈ ಕೃತಿ ಕೇವಲ ಯುದ್ಧಕಥನವಲ್ಲ. ಕಾಶ್ಮೀರದ ಹಿನ್ನೆಲೆ, ರಾಜಕೀಯ ನಾಯಕತ್ವದ ನಿರ್ಧಾರಗಳು, ಅಂತಾರಾಷ್ಟ್ರೀಯ ಒತ್ತಡಗಳು – ಇವೆಲ್ಲವನ್ನೂ ಒಳಗೊಂಡಂತೆ ಯುದ್ಧವನ್ನು ಸೀಮಿತ ಯುದ್ಧ (Limited War) ಮತ್ತು ರಾಜತಾಂತ್ರಿಕತೆಯ ಅಧ್ಯಯನವಾಗಿ ರೂಪಿಸುತ್ತದೆ. ಸೈನಿಕ ವಿಜ್ಞಾನ ವಿದ್ಯಾರ್ಥಿಗಳಿಗೆ, ತಂತ್ರಜ್ಞಾನದ ಅಧ್ಯಯನಕಾರರಿಗೆ ಹಾಗೂ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಅತ್ಯುತ್ತಮ ಪರಿಚಯಾತ್ಮಕ ಕೃತಿ. ವಿಸ್ತಾರದಲ್ಲಿ ದೊಡ್ಡದಾಗಿರದಿದ್ದರೂ, ಇದರ ತಂತ್ರಾತ್ಮಕ ಒಳನೋಟ, ಕ್ರಮಬದ್ಧ ವಿವರಣೆ ಮತ್ತು ಸೈನಿಕ ನೈಜತೆ ಇದನ್ನು ಯಾವುದೇ ಸೈನಿಕ ಇತಿಹಾಸ ಗ್ರಂಥಾಲಯಕ್ಕೆ ಅಮೂಲ್ಯ ಸೇರ್ಪಡೆಯಾಗಿ ಮಾಡುತ್ತದೆ.

ಪುಸ್ತಕವು ಯುದ್ಧದ ಪೂರ್ವಭಾವಿಯಿಂದ ಆರಂಭಿಸಿ, ಆಪರೇಶನ್ ಜಿಬ್ರಾಲ್ಟರ್, ಕಾಶ್ಮೀರ ಮತ್ತು ಪಂಜಾಬ್ ಮುಂಚೂಣಿಗಳ ಯುದ್ಧಗಳು, ಲಾಲ್ ಬಹಾದು‌ರ್ ಶಾಸ್ತ್ರಿಗಳ ಧೃಡವಾದ ರಾಜಕೀಯ ನಾಯಕತ್ವ ಮತ್ತು ಯುದ್ಧ ವಿರಾಮ ಮತ್ತು ಅದರ ಪರಿಣಾಮಗಳು ಎಂಬ ಎಲ್ಲಾ ಹಂತಗಳನ್ನು ಸರಳವಾಗಿ ಹಾಗೂ ಕ್ರಮಬದ್ಧವಾಗಿ ವಿವರಿಸುತ್ತದೆ. ಯುದ್ಧವನ್ನು ಕೇವಲ ಭೂಮಿಯ ಮೇಲಿನ ಸಮರಗಳಾಗಿ ಅಲ್ಲದೆ, ರಾಜಕೀಯ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ವಿವರಿಸುತ್ತದೆ. ೪ನೆಯ ಗ್ರೆನೇರ್ಡಿಯಸ್ ದಳದ ರೋಚಕ ಸಾಹಸ, ಪಾಕಿಸ್ತಾನಿ ಪ್ಯಾಟನ್ ಟ್ಯಾಂಕ್‌ಗಳ ಮೇಲೆ ಹವಾಲ್ದಾರ್ ಅಬ್ದುಲ್ ಹಮೀದ್ ನಡೆಸಿದ ದಾಳಿ ಓದುಗರನ್ನು ಸೀದಾ ಯುದ್ಧಭೂಮಿಯ ನಟ್ಟನಡುವೆ ನಿಲ್ಲಿಸಿಬಿಡುತ್ತವೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದ ಯಶಸ್ವಿ ಕಾರ್ಯಾಚರಣೆಗಳ ರೋಚಕ ಗೆಲವು ನಮ್ಮೆಲ್ಲರಲ್ಲೂ ನಮ್ಮ ಸೈನ್ಯದ ಬಗ್ಗೆ ಅಪಾರ ಹೆಮ್ಮೆ ಮೂಡಿಸಿದೆ. ಹಾಗೆಯೇ ಅರವತ್ತು ವರ್ಷಗಳ ಹಿಂದೆ ನಡೆದ ಈ ಯುದ್ಧದ ಬಗ್ಗೆಯೂ ತಿಳಿದುಕೊಳ್ಳಲು ಇದು ಸೂಕ್ತ ಸಮಯ. ಹಾಗಾಗಿ ಎಲ್ಲಾ ಸಮರ ಸಾಹಿತ್ಯ ಆಸಕ್ತರಿಗೆ “This book is a MUST read.”

ತಮ್ಮ ಕೃತಿಯ ಬಗ್ಗೆ ಮನ್ನಾರ್ ಕೃಷ್ಣ ರಾವ್ ಅವರು “೧೯೬೫ರ ಈ ಸಮರ ನಡೆದು ೬೦ ವರ್ಷಗಳಾದುವು. ಅದರಿಂದ ಈಗಿನ ಯುವಕರಿಗೆ ಅದರ ಬಗ್ಗೆ ಅಷ್ಟಾಗಿ ತಿಳಿದಿರಲಾರದು. ಆ ಸಮರದಲ್ಲಿ ಪ್ರಧಾನಿ ಶಾಸ್ತ್ರಿಯವರು ತೋರಿದ ದಿಟ್ಟತನ ಮತ್ತು ನಮ್ಮ ಸೈನ್ಯ ತೋರಿದ ಶೌರ್ಯ ರೋಚಕವಾದುದು. ಅದನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇ ಬೇಕು. ನಾನು ೨೦೨೩ರಲ್ಲಿ ಲಾಲ್ ಬಹಾದುರ್ ಶಾಸ್ತ್ರಿಯವರ ಬೃಹತ್ ಜೀವನ ಚರಿತ್ರೆಯನ್ನು ರಚಿಸಿದ್ದೆನು. ಅದರ ಭಾಗವಾಗಿದ್ದ ೧೯೬೫ರ ಯುದ್ಧದ ವಿವರಣೆಯನ್ನು ಪ್ರತ್ಯೇಕಿಸಿ ಈ ಕೃತಿಯನ್ನು ತಂದಿದ್ದೇನೆ. ಈ ಕೃತಿ ಹಿರಿಯರಿಗೆ ಆ ಯುದ್ಧದ ನೆನಪನ್ನು ಮತ್ತು ಕಿರಿಯರಿಗೆ ಆ ಯುದ್ಧದ ರೋಚಕತೆಯ ಅನುಭವವನ್ನು ತರುತ್ತದೆ ಎಂದು ನಂಬಿದ್ದೇನೆ.” ಎಂದು ತಮ್ಮ ಮಾತಿನಲ್ಲಿ ಹೇಳಿದ್ದಾರೆ.

೧೯೬೫ರ ಯುದ್ಧದ ಬಗ್ಗೆ ಸವಿವರವಾದ ಮಾಹಿತಿ ಮತ್ತು ಯುದ್ಧ ಮುಗಿದ ಬಳಿಕ ನಡೆದ ಘಟನೆಗಳ ಬಗ್ಗೆ ಈ ಕೃತಿ ಹೇಳುತ್ತದೆ. ಸುಮಾರು ೧೦೮ ಪುಟಗಳ ಈ ಕೃತಿಯನ್ನು ಲೇಖಕರು “೧೯೬೫ರ ಇಂಡೋ ಪಾಕ್ ಸಮರದಲ್ಲಿ ತಮ್ಮ ದಿಟ್ಟ ನಿಲುವು, ನಿರ್ಧಾರ ಮತ್ತು ಕಾರ್ಯಾಚರಣೆಯ ಮೂಲಕ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಹರಡಿದ ಮತ್ತು ಭಾರತೀಯರಲ್ಲಿ ಕೆಚ್ಚನ್ನು ಮೂಡಿಸಿದ ಎರಡನೇ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರಿಯವರ ಮತ್ತು ಆ ಸಮರದಲ್ಲಿ ಹುತಾತ್ಮರಾದ ವೀರಯೋಧರ ನೆನಪಿಗೆ ಕೃತಜ್ಞತಾಪೂರ್ವಕವಾಗಿ ಈ ಕೃತಿ ಕುಸುಮ” ವನ್ನು ಅರ್ಪಣೆ ಮಾಡಿದ್ದಾರೆ.