ಹಲವರಿಗೊಂದು ದೊಡ್ಡ ಗೊಂದಲ: ಪರಿಚಿತರು, ನೆರೆಹೊರೆಯವರು, ಬಂಧುಗಳು - ಇವರೊಂದಿಗೆ ನಮ್ಮ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕು? ಇದಕ್ಕೇನಾದರೂ ಸೂತ್ರ ಇದೆಯೇ?

ಈ ಗೊಂದಲ ನಿವಾರಿಸಲು ಒಂದು ಸರಳ ಸೂತ್ರವಿದೆ: ಅವರು ಹೇಗೆಯೋ ನೀವು ಹಾಗೆಯೇ ಇರಬೇಕು (ಇಂಗ್ಲೀಷಿನಲ್ಲಿ Reciprocate).

ಅವರು ನಿಮ್ಮನ್ನು.ನೋಡಿ ಮುಗುಳ್ನಕ್ಕರೆ ನೀವೂ ಮುಗುಳ್ನಗಬೇಕು. ನೀವು ಎದುರಾದಾಗ ಅವರು ನಿಮ್ಮ ಪರಿಚಯ ಇಲ್ಲದವರಂತೆ ದಾಟಿ ಹೋದರೆ, ನೀವು ಹಾಗೆಯೇ ದಾಟಿ ಹೋಗಬೇಕು.

ಅವರು ನಿಮ್ಮ ಮನೆಗೆ ಬಂದರೆ ನೀವೂ ಅವರ ಮನೆಗೆ ಹೋಗಬೇಕು. ಅವರ ಮನೆಗೆ ನೀವು ಹೋದಾಗ, ಪ್ರತಿಯೊಂದು ವರ್ತನೆಯಲ್ಲಿಯೂ ಅವರು ಸಂತೋಷ ವ್ಯಕ್ತಪಡಿಸಿದರೆ, ಅವರು ನಿಮ್ಮನೆಗೆ ಬಂದಾಗ ನೀವೂ ಹಾಗಿರಬೇಕು. ಅವರ ಮನೆಯಿಂದ ನೀವು ಹೊರಟಾಗ ಅವರು ಗೇಟಿನ ವರೆಗೆ ಬಂದು ಬೀಳ್ಗೊಟ್ಟರೆ ನೀವೂ ಅವರನ್ನು ಹಾಗೆಯೇ ಬೀಳ್ಗೊಡಬೇಕು.

ತಮ್ಮ ಮನೆಯ ಪೂಜೆ ಇತ್ಯಾದಿ ಆಚರಣೆಗಳಿಗೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆಯೇ? ಹಾಗಿದ್ದರೆ ನೀವೂ ನಿಮ್ಮನೆಗೆ ಅಂತಹ ಸಮಾರಂಭಗಳಿಗೆ ಅವರನ್ನು ಆಮಂತ್ರಿಸಬೇಕು. ತಮ್ಮ ಮನೆಯ ಮದುವೆ, ನಾಮಕರಣಗಳಿಗೆ ಅವರು ನಿಮ್ಮನ್ನು ಬರಹೇಳಿದ್ದಾರೆಯೇ? ಹಾಗಿದ್ದರೆ ನಿಮ್ಮನೆಯ ಅಂತಹ ಸಮಾರಂಭಗಳಿಗೆ ಅವರನ್ನು ಬರಹೇಳಿ.

ಇಲ್ಲೊಂದು ಸಂದಿಗ್ಧ ಎದುರಾಗುತ್ತದೆ. ನಾವು ಮೊದಲೋ, ಅವರು ಮೊದಲೋ? ಅಂದರೆ, ಅವರ ಪರಿಚಯವಾಗಿ, ನಂತರ ಆಗಾಗ ಭೇಟಿಯಾಗುತ್ತಿದ್ದೀರಿ ಎಂದಿರಲಿ. ಈಗ ನಿಮ್ಮನೆಯಲ್ಲಿ ಒಂದು ಪೂಜೆ ಜರಗಲಿದ್ದರೆ, ಅವರನ್ನು ಆಮಂತ್ರಿಸಿ. ನಿಮ್ಮ ಆಮಂತ್ರಣಕ್ಕೆ ಬೆಲೆ ಕೊಟ್ಟು, ಅವರು ನಿಮ್ಮನೆ ಪೂಜೆಗೆ ಬಂದರೆ, ಮುಂದೊಮ್ಮೆ ನೀವೂ ಅವರ ಮನೆಯ ಪೂಜೆಗೆ ಆಹ್ವಾನಿಸಿದಾಗ ಹೋಗಬೇಕು.

ಕೆಲವರೊಂದಿಗಿನ ಸಂಬಂಧ ಹೇಗಿರುತ್ತದೆ ಎಂದರೆ ನೀವು ಅವರ ಮನೆಯ ಸಮಾರಂಭಗಳಿಗೆ ಹೋಗುತ್ತಲೇ ಇರುತ್ತೀರಿ. ಅವರು ನಿಮ್ಮನೆಗೆ ಬರೋದೇ ಇಲ್ಲ. ಇಂತಹ “ಏಕದಿಕ್ಕಿನ ಸಂಬಂಧಗಳು” ಯಾತಕ್ಕಾಗಿ? ಎಂದು ಯೋಚಿಸಿ. ಆಗ ನಿಮಗೆ ಸಂಬಂಧಗಳನ್ನು ಉಳಿಸಿ ಬೆಳೆಸುವಲ್ಲಿ ಈ ಸೂತ್ರ ಎಷ್ಟು ಪರಿಣಾಮಕಾರಿ ಎಂಬುದು ಅರ್ಥವಾಗುತ್ತದೆ.