ಕಷ್ಟ ಸುಖಗಳನ್ನು ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ಆದರೆ ಅಧಿಕಾರ, ಹಣ, ಆಸ್ತಿ, ಕೌಟುಂಬಿಕ ಪರಿಸರ, ಆರೋಗ್ಯ, ವಾಸಿಸುವ ಸ್ಥಳ, ಉದ್ಯೋಗ ಮುಂತಾದ ಕೆಲವು ಮಾನದಂಡಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೆಲವರು ಹೆಚ್ಚು ಯಶಸ್ವಿ ಎಂತಲೂ ಮತ್ತು ಮೇಲೆ ಹೇಳಿದ ವಿಷಯಗಳು ಸರಿಯಾಗಿ ದೊರೆಯದೆ ಮೂಲಭೂತ ಅವಶ್ಯಕತೆಗಳಿಗೇ ತಮ್ಮ ಜೀವನವನ್ನು ಸವೆಸುತ್ತಿರುವ ಜನರನ್ನು ಬಡವರು, ಯಶಸ್ವಿಯಾಗದವರು, ನತದೃಷ್ಟರು ಎಂದೂ ಕರೆಯಲಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈ ಆರ್ಥಿಕ ಸಾಮ್ರಾಜ್ಯ ಕಟ್ಟಿದವರು ಸಮಾಜದಲ್ಲಿ ಬಹುದೊಡ್ಡ ಯಶಸ್ಸನ್ನು, ಜೀವನದ ಹೆಚ್ಚು ಕಾಲವನ್ನು ಸುಖ ಸಂತೋಷದ ದಿನಗಳನ್ನು ಅನುಭವಿಸಿದವರು.
ಒಮ್ಮೆ ಅವರು ನಮ್ಮ ಸಮಾಜದ ಅತ್ಯಂತ ಕೆಳಗಿನ ಜನರನ್ನು ನೋಡಿದರೆ ಸಾಕು ಅವರು ಹಿಮಾಲಯದಷ್ಟು ಎತ್ತರದಲ್ಲಿ ಇರುವುದು ತಿಳಿದುಕೊಂಡು ಮನಸ್ಸಿಗೆ ಖಂಡಿತ ಸಮಾಧಾನ ಮಾಡಿಕೊಳ್ಳಬಹುದು. ತಮಗೆ ಈ ಕ್ಷಣದಲ್ಲಿ ಬಂದಿರುವುದು ಒಂದು ಸಣ್ಣ ಪ್ರಮಾಣದ ಕಷ್ಟ. ಮುಂದೆ ಇನ್ನೇನೋ ದೊಡ್ಡ ಸ್ಥಾನ ಗಳಿಸಲು ಇದರಿಂದ ತೊಂದರೆಯಾಗಬಹುದೇ ಹೊರತು ಬದುಕಿನ ಸಾಮಾನ್ಯ ಸೌಕರ್ಯಗಳಲ್ಲಿ ಅವರು ಎಷ್ಟೋ ಜನರಿಗಿಂತ ಈಗಾಗಲೇ ಮುಂದಿದ್ದಾರೆ ಎಂದು ಅರ್ಥಮಾಡಿಕೊಂಡರೆ ಅವರ ಕಷ್ಟಗಳು ಯಾವ ಲೆಕ್ಕಕ್ಕೂ ಇಲ್ಲ ಎಂದೇ ಅನಿಸುತ್ತದೆ. ಅವರ ಸಹಾಯಕ್ಕೆ ಬಹಳಷ್ಟು ಹಾದಿಗಳು ಇರುತ್ತದೆ. ಆದರೆ ಅನೇಕ ಬಡವರಿಗೆ ಎಲ್ಲಾ ರೀತಿಯ ಮಾರ್ಗಗಳು ಮುಚ್ಚಿ ಬಿಡುತ್ತದೆ. ಬದುಕಿನ ಒಂದು ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಂಡರೆ ಜೀವನ ಸ್ವಲ್ಪ ಸರಳ, ಸುಲಭ ಮತ್ತು ನೆಮ್ಮದಿಯಾಗಬಹುದು.
ಮೊದಲಿಗೆ, ನಾವು ಇಲ್ಲಿಯವರೆಗೆ ಬದುಕಿರುವುದೇ ಒಂದು ಸಾಧನೆ ಮತ್ತು ನೆಮ್ಮದಿಗೆ ಕಾರಣವಾಗಬೇಕು. ಎಷ್ಟೋ ಜನ ಇದರಿಂದಲೇ ವಂಚಿತರಾಗಿರುವುದನ್ನು ನೆನಪಿಸಿಕೊಳ್ಳಿ.
ಎರಡನೆಯದಾಗಿ, ನಮ್ಮ ಊಟ ಬಟ್ಟೆ ವಸತಿಗಳು ನಮ್ಮ ಅವಶ್ಯಕತೆ ತಕ್ಕಂತೆ ಇದ್ದರೆ ಅದು ಮತ್ತೊಂದು ಸಾಧನೆ - ತೃಪ್ತಿಯ ಕಾರಣ ಎಂದೇ ಭಾವಿಸಿ.
ಮೂರನೆಯದಾಗಿ, ನಮ್ಮ ರಕ್ತ ಸಂಬಂಧಗಳು, ಸಂಸಾರ, ಬಂಧು ಬಳಗಗಳು ಸ್ನೇಹಿತರು ಹೆಚ್ಚು ಘರ್ಷಣೆಗಳಿಲ್ಲದೆ ( ಸಣ್ಣ ಪುಟ್ಟ ವಿರಸಗಳನ್ನು ಹೊರತುಪಡಿಸಿ ) ಒಂದು ತಕ್ಕಮಟ್ಟಿನ ಸೌಹಾರ್ದ ಸಂಬಂಧ ಉಳಿದಿದ್ದರೆ ಅದು ಮಗದೊಂದು ಸಾಧನೆ ಮತ್ತು ಅದೃಷ್ಟ ಎಂದೇ ಪರಿಗಣಿಸಿ.
ನಾಲ್ಕನೆಯದಾಗಿ, ಇರುವ ಅವಕಾಶದಲ್ಲಿ ನಮ್ಮ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ದೊರೆತು ಅದರಿಂದ ಹಣ, ಅಧಿಕಾರ, ಜನಪ್ರಿಯತೆ ದೊರೆತರೆ ಅದು ಬದುಕಿನ ಬಹುದೊಡ್ಡ ಸಾಧನೆ ಸಾರ್ಥಕತೆ ಮತ್ತು ಬೋನಸ್ ಎಂದು ಪರಿಗಣಿಸಿ.
ಐದನೆಯದಾಗಿ, ನೀವು ನಿರೀಕ್ಷಿಸದ ಅನೇಕ ಉತ್ತಮ ಗುಣಮಟ್ಟದ ಎಲ್ಲವೂ ದೊರೆತರೆ ( ಇದು ತೀರಾ ಅಪರೂಪ ) ನಿಮ್ಮನ್ನು ನೀವು ಅತ್ಯಂತ ಸುಖಿ ಎಂದೇ ಭಾವಿಸಿ.
ಆರನೆಯದಾಗಿ, ಒಂದು ವೇಳೆ ನೀವು ಎಲ್ಲಾ ಯಶಸ್ಸುಗಳನ್ನು ಗಳಿಸಿ ಯಾವುದೋ ಕಾರಣದಿಂದ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿ ಬಂದಾಗ ಅಥವಾ ಕಳೆದುಕೊಂಡರೆ ಆಗಲೂ ಸದ್ಯದ ಪರಿಸ್ಥಿತಿಯನ್ನು ನೆನೆದು ಧೃತಿಗೆಡಬೇಡಿ. ಮತ್ತೆ ಬದುಕಿರುವುದೇ ಒಂದು ಸಾಧನೆ ಎಂಬ ತೀರ್ಮಾನಕ್ಕೆ ಬನ್ನಿ. ಹೊರ ಪ್ರಪಂಚದ ಅನೇಕರ ಕುಹುಕದ ಮಾತುಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ ಸೃಷ್ಟಿಯ ಜೀವಿ ಎಂದು ಭಾವಿಸಿ ಅಂತರ್ಮುಖಿಯಾಗಿ ನಿಮ್ಮನ್ನು ನೀವು ಸಂತೈಸಿಕೊಳ್ಳಿ.
ಯಶಸ್ಸಿನ ಇಮೇಜ್ ಒಂದು ಭ್ರಮೆ ಎಂಬುದನ್ನು ಜೀವನಪರ್ಯಂತ ಮರೆಯದಿರಿ. ಮೇಲೆ ಏರಿದವರು ಮತ್ತೆ ಕೆಳಗೆ ಇಳಿಯುವ ಸಾಧ್ಯತೆಯನ್ನು ಮೊದಲೇ ನಿರೀಕ್ಷಿಸಿ. ಅದು ಬದುಕಿನ ಭಾಗವೇ ಆಗಿರುತ್ತದೆ ಎಂದು ತಿಳಿದುಕೊಳ್ಳಿ. ನೀವು ಈಗಾಗಲೇ ಯಶಸ್ಸಿನ ಹಾದಿಯಲ್ಲಿದ್ದು ಬದುಕಿನ ಬಗ್ಗೆ ಒಂದು ನಿರ್ಧಿಷ್ಟ ಮತ್ತು ಸ್ಪಷ್ಟ ಅಭಿಪ್ರಾಯ ಹೊಂದಿದ್ದರೆ ಈ ನನ್ನ ಅಭಿಪ್ರಾಯ ನಿರ್ಲಕ್ಷಿಸಿ.
ತುಂಬಾ ಅತೃಪ್ತಿ, ಅಸಮಾಧಾನ, ಅಸಹನೆ, ಕಷ್ಟ, ಬಡತನ ಇರುವವರಾದರೆ ದಯವಿಟ್ಟು ಸ್ವಲ್ಪ ಯೋಚಿಸಿ. ಬೆತ್ತಲೆಯೊಂದಿಗೆ ಭೂ ಪ್ರವೇಶಿಸುವ ನಾವು ಮತ್ತೆ ಬೆತ್ತಲಾಗಲು ಹೆದರುವುದೇಕೆ? ಬೆಳೆಯುತ್ತಾ ದೇಹ ಬಲಿಯುತ್ತದೆ. ಅಂಗಾಗಗಳು ದಪ್ಪವಾಗುತ್ತವೆ. ಉಡುಗೆ ತೊಡುಗೆಗಳು ಮೈ ಅಲಂಕರಿಸುತ್ತವೆ. ಮನಸ್ಸಿನಲ್ಲಿ ಹಲವಾರು ಭಾವನೆಗಳು ಮೂಡುತ್ತವೆ. ಬೇರೆ ಬೇರೆ ಸಂಬಂಧಗಳು ಜೊತೆಯಾಗುತ್ತವೆ. ಆದರೆ ಅವೆಲ್ಲವೂ ತಾತ್ಕಾಲಿಕವಲ್ಲವೇ. ಜೀವನದ ಎಲ್ಲಾ ದಿನಗಳು ಹಿತಕರವಾಗಿಯೇ ಇರಬೇಕು ಎಂದರೆ ಹೇಗೆ ? ಒಂದಷ್ಟು ಕಹಿ ದಿನಗಳು ಸಹ ಸಹಿಸಬೇಕಲ್ಲವೇ ?
ಗಣ್ಯ ವ್ಯಕ್ತಿ ಆದ ಕಾರಣಕ್ಕೆ ಕಷ್ಟಗಳು, ನೋವುಗಳು, ದುಃಖಗಳು, ಅವಮಾನಗಳು ಸಹ ಗಣ್ಯವಾಗುವುದಿಲ್ಲ. ಅದು ಪ್ರತಿ ಮನುಷ್ಯನಿಗೂ ಸಹಜ ಮತ್ತು ಸಾಮಾನ್ಯ. ಆದರೆ ನಮ್ಮ ಭ್ರಮೆ ಮತ್ತು ಕೃತಕ ಮನಸ್ಥಿತಿಯ ಪರಿಸರ ಹಾಗು ಜನಪ್ರಿಯತೆ ನಮ್ಮ ಮಾನ ಅವಮಾನಗಳು ದೊಡ್ಡದು ಎಂಬಂತೆ ನಮ್ಮೊಳಗೆ ಬಿಂಬಿತವಾಗಿ ನಮ್ಮನ್ನು ಚಿಕ್ಕವರನ್ನಾಗಿಸುತ್ತದೆ. "ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡ ಮೇಲೆಯೇ ನಮ್ಮನ್ನು ನಾವು ಪಡೆಯುವುದು” ಅದಕ್ಕಿಂತ ದೊಡ್ಡ ಸ್ವಾತಂತ್ರ್ಯ ಸೃಷ್ಟಿಯ ಜೀವಿಗೆ ಇನ್ನೇನಿದೆ?
ಇದು ಒಣ ವೇದಾಂತವಲ್ಲ ವಾಸ್ತವ.
ಇರಬಹುದು,
ನಿಮಗೆ ಆರ್ಥಿಕ ಸಂಕಷ್ಟ,
ತೆರಿಗೆ ಕಿರುಕುಳ,
ಸಾಲಗಾರರ ಒತ್ತಡ,
ಸ್ವಾಭಿಮಾನಕ್ಕೆ ಧಕ್ಕೆ,
ಸೋಲಿನ ಹತಾಶೆ,
ವಿಫಲತೆಯ ನಿರಾಶೆ,
ಅದು ಬದುಕಲು ಕಾರಣಗಳಾಗಬೇಕೇ ಹೊರತು ಸಾಯಲು ಅಲ್ಲ. ಸಾವು ಬಂದೇ ಬರುತ್ತದೆ. ಅದನ್ನು ಹುಡುಕಲು ಪ್ರಯತ್ನಿಸಬಾರದು. ನಾವು ನಮ್ಮನ್ನು ಮಾತ್ರ ನಿಯಂತ್ರಿಸಿಕೊಳ್ಳಬಹುದು. ಇತರರು ನಮ್ಮ ನಿಯಂತ್ರಣಕ್ಕೆ ಸಿಗುವುದು ಮತ್ತು ನಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುವುದು ಬಹುದೊಡ್ಡ ತಪ್ಪಾಗಬಹುದು. ಎಷ್ಟೇ ಸಾಲ ಆಗಲಿ, ಎಷ್ಟೇ ಅವಮಾನ ಆಗಲಿ, ಯಾವೊನೇ ಕೈಕೊಡಲಿ, ಯಾವೊಳೇ ಕೈಬಿಡಲಿ, ಎಷ್ಟೇ ಸೋಲಾಗಲಿ, ಯಾರು ಏನೇ ಅಂದುಕೊಳ್ಳಲಿ, ಹೊಟ್ಟೆ ತುಂಬ ಊಟ ಮಾಡಿ, ಕಣ್ಣು ತುಂಬ ನಿದ್ದೆ ಮಾಡಿ, ಒಂದು ಕಾಫಿ ಕುಡಿದು, ಸಿನಿಮಾಗೆ ಹೋಗಿ ಬಿಡಿ. ಆತ್ಮಹತ್ಯೆ, ಗೀತ್ಮಹತ್ಯೆ ಎಲ್ಲಾ ಹೇಡಿಗಳ ಸರಕು. ಸಾವು ಅಂದರೆ ತುಂಬಾ ಹೆದರಿಕೆ. ಅದಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಡಿ, ಬದುಕು ಮುಖ್ಯ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!