ದೋಜೋದಲ್ಲಿ ಕರಾಟೆ ಶಿಕ್ಷಣ  

“ದೋಜೋ” (ಕರಾಟೆ ಕಲಿಸುವ ಸ್ಥಳ)ದಲ್ಲಿ ನಿಗದಿತ ದಿನಗಳಲ್ಲಿ ಗುರುವಿಗೆ ನಮಸ್ಕರಿಸುವ ಮೂಲಕ ಕರಾಟೆ ಕಲಿಕೆ ಆರಂಭ. ನಂತರದ ಹಂತಗಳು: 1)ತಕ್ಷಣವೇ ವಿದ್ಯಾರ್ಥಿ ನಿರ್ದಿಷ್ಟ ಭಂಗಿಯಲ್ಲಿ ಕುಳಿತು, ಕಣ್ಣುಚ್ಚಿ, ಏಕಾಗ್ರತೆ ಸಾಧಿಸಬೇಕು. ಇದರಿಂದ, ಕರಾಟೆಗೆ ಅತ್ಯವಶ್ಯವಾದ ಶಾಂತಚಿತ್ತ ಮತ್ತು ಚುರುಕುತನ ಸಾಧಿಸಲು ಸಹಾಯ.

2)ಅನಂತರ ದೀರ್ಘ ಉಸಿರಾಟದ ಮತ್ತು ದೇಹದ ಕಾವು ಹೆಚ್ಚಿಸುವ ವ್ಯಾಯಾಮಗಳ ಅಭ್ಯಾಸ.

3)ಬಳಿಕ ಸ್ವರಕ್ಷಣೆ ಮತ್ತು ಪ್ರತಿ-ಆಕ್ರಮಣದ ಮೂಲ ಚಲನೆಗಳ ಹಾಗೂ “ಕಟಾ” (ನಿಶ್ಚಿತ ಚಲನೆಗಳ ಸರಣಿ)ಗಳ ಅಭ್ಯಾಸ.  

4)ಸ್ಪಾರಿಂಗ್ (ಅಣಕು ಹೋರಾಟ) ತರಬೇತಿಯೊಂದಿಗೆ ತರಗತಿ ಮುಕ್ತಾಯ.

ಕರಾಟೆಕನು ಸಾಧಿಸಿದ ಪರಿಣತಿಗೆ ಅನುಗುಣವಾಗಿ ಆತನಿಗೆ ಬಿಳಿ, ಹಳದಿ, ಹಸುರು ಅಥವಾ ಕಪ್ಪು ಬಣ್ಣಗಳ ಬೆಲ್ಟ್ (ದಪ್ಪ ಬಟ್ಟೆಯ ಪಟ್ಟಿ) ನೀಡುವುದು ವಾಡಿಕೆ. ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಕರಾಟೆ “ಬೆಲ್ಟ್-ಪರೀಕ್ಷೆ” ನಡೆಸಲಾಗುತ್ತದೆ. ಕರಾಟೆಕ ನಿರೀಕ್ಷಿತ ಮಟ್ಟ ಪ್ರದರ್ಶಿಸಿದರೆ ಆತನ ಪರಿಣತಿಯ ಗುರುತಾಗಿ ನಿರ್ದಿಷ್ಟ ಬಣ್ಣದ ಬೆಲ್ಟಿನ ಅನುದಾನ. 

ಕರಾಟೆಯ ಅಂತಿಮ ಬೆಲ್ಟ್ “ಬ್ಲಾಕ್ ಬೆಲ್ಟ್” (ಕಪ್ಪು ಬಣ್ಣದ). ಇದರಲ್ಲೇ ಹತ್ತು “ಡಾನ್” (ಡಿಗ್ರಿ ಅಥವಾ ಹಂತ)ಗಳಿವೆ. ಬ್ಲಾಕ್ ಬೆಲ್ಟ್ ಗಳಿಸಲು ಕರಾಟೆಕನು ಉತ್ತೀರ್ಣನಾಗ ಬೇಕಾದ ಹಂತಗಳ ಸಂಖ್ಯೆ ಆಯಾ ಕರಾಟೆ ಶಿಕ್ಷಣ ಸಂಸ್ಥೆಗೆ ಅನುಸಾರವಾಗಿ ಬೇರೆಬೇರೆ. ಗರಿಷ್ಠ ಅಂತಹ 7 ಹಂತಗಳಿವೆ. ಬ್ಲಾಕ್ ಬೆಲ್ಟ್ ಗಳಿಸಲು ಹಲವು ವರುಷಗಳ (ಐದಕ್ಕಿಂತ ಹೆಚ್ಚಿನ) ಸಾಧನೆ ಅಗತ್ಯ.

ಕರಾಟೆ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ದಿನದಿನವೂ 30-40 ನಿಮಿಷಗಳ ಕ್ರಮವಾದ ಅಭ್ಯಾಸ ಅವಶ್ಯ. ಆದರೆ ಮಿತಿಮೀರಿದ ಅಭ್ಯಾಸ ಒಳಿತಲ್ಲ. ಯಾಕೆಂದರೆ ಅದರಿಂದ ದೇಹಕ್ಕೆ ಘಾಸಿಯಾಗಬಹುದು. ಆರಂಭದ ಹಂತದಲ್ಲಿ ಕರಾಟೆ ಅಭ್ಯಾಸದಿಂದಾಗಿ ವಿಪರೀತ ದಣಿವಾದರೆ ವಿದ್ಯಾರ್ಥಿ ನಿರಾಶನಾಗಬಾರದು. ಅಭ್ಯಾಸ ಮುಂದುವರಿಸಿದಂತೆ, ದಣಿವಿನ ಅನುಭವ ಕಡಿಮೆಯಾಗುತ್ತದೆ. ಅಣಕು ಹೋರಾಟದ ಅಭ್ಯಾಸದಲ್ಲಿ ಅತ್ಯಂತ ಜಾಗರೂಕತೆ ಇರಬೇಕು. ಯಾಕೆಂದರೆ ಎದುರಾಳಿ-ಸಹಪಾಠಿಯ ಅತಿ ಉತ್ಸಾಹದಿಂದಾಗಿ ನಮಗೆ ತೊಂದರೆ ಆದೀತು. 

ಕರಾಟೆ ಹೊಡೆತಗಳ ಬಲ ಮತ್ತು ವೇಗ 

ಬಲ ಮತ್ತು ವೇಗದ ಹೊಂದಾಣಿಕೆ ಕರಾಟೆಯ ವಿಶೇಷತೆ. ಕರಾಟೆಕನ ಹೊಡೆತಗಳ ಘಾತದ ತೀವ್ರತೆ, ಅವನ ಶಾರೀರಿಕ ಬಲವನ್ನು ಪೂರ್ಣವಾಗಿ ಅವಲಂಬಿಸಿಲ್ಲ. ಕರಾಟೆಯ ಬೀಜಮಂತ್ರ “ವೇಗ”. ಅಂದರೆ, ಕರಾಟೆಕನು ಬಲದಲ್ಲಿ ಕಡಿಮೆ ಬಿದ್ದುದನ್ನು ವೇಗದಿಂದ ಸರಿದೂಗಿಸಿಕೊಳ್ಳಬಲ್ಲ. 

ಕರಾಟೆ ಪರಿಣತನ ಹೊಡೆತಗಳ ಬಲ ಮತ್ತು ವೇಗ ದಿಗ್ಭ್ರಮೆ ಹುಟ್ಟಿಸುತ್ತವೆ. ಪರಿಣತನ ಕೈಯ ಗುದ್ದು (ಪಂಚ್) ಏಟು ತಗಲುವ ಜಾಗದ ಚದರ ಸೆಂಟಿ ಮೀಟರಿಗೆ 700 ಕಿಗ್ರಾ ಘಾತ ನೀಡುತ್ತದೆ! ಆತ “ನನ್-ಚಾಕು” ಬಳಸಿ ಏಟು ನೀಡಿದರೆ, ಏಟು ಬಡಿಯುವ ಜಾಗದಲ್ಲಿ ಅದರ ಘಾತ 725 ಕಿಗ್ರಾ! (ನನ್-ಚಾಕು ಒಂದು ಸರಳ ಆಯುಧ. ಮರದ 2 ಕಿರು ದೊಣ್ಣೆಗಳನ್ನು ಅಥವಾ ಲೋಹದ ಪೈಪಿನ 2 ತುಂಡುಗಳನ್ನು ಹಗ್ಗ ಅಥವಾ ಸರಪಳಿಯಿಂದ ಜೋಡಿಸಿದ ಸಾಧನ).

ಕರಾಟೆ ಹೊಡೆತಗಳ ಪ್ರಚಂಡ ಬಲದ ಅಂದಾಜು ಆಗಬೇಕಾದರೆ, ಈ ಮೇಲಿನ ಘಾತಗಳನ್ನು ಈ ಕೆಳಗಿನ ಎರಡು ಘಾತಗಳಿಗೆ ಹೋಲಿಸಬೇಕು: 

ಅ)ಮನುಷ್ಯನ ಭುಜದ ಮುಂಭಾಗದ ಎಲುಬು (ಕೊಲ್ಲಾರ್ ಬೋನ್) ಮುರಿಯಲು ಅಗತ್ಯವಾದ ಘಾತ: 2.2 ಕಿಗ್ರಾ 

ಆ)ಮನುಷ್ಯನ ತಲೆಬುರುಡೆ ಒಡೆಯಲು ಅಗತ್ಯವಾದ ಘಾತ: 3.9 ಕಿಗ್ರಾ 

ಕರಾಟೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಕರಾಟೆ ಕ್ಲಬ್-ಗಳು ಈ ಕದನಕಲೆಯ ಪ್ರದರ್ಶನಗಳನ್ನು ಜರಗಿಸುತ್ತವೆ. ಅಲ್ಲಿ “ಬ್ರೇಕಿಂಗ್ ಟೆಕ್ನಿಕ್” (ಮುರಿಯುವ ತಂತ್ರ) ತೋರಿಸಲಾಗುತ್ತದೆ. ಉದಾಹರಣೆಗೆ (ಫೋಟೋಗಳನ್ನು ನೋಡಿ): 

-7ರಿಂದ 10 ಮಣ್ಣಿನ ಹಂಚುಗಳನ್ನು ಒಂದರ ಮೇಲೊಂದು ಪೇರಿಸಿಟ್ಟು ಮುಂಗೈ/ ಹಿಮ್ಮಡಿಯ ಒಂದೇಟಿನಿಂದ ಮುರಿಯುವುದು  

-ಒಂದಿಂಚು ದಪ್ಪದ ಮೂರು ಮರದ ಹಲಗೆತುಂಡುಗಳನ್ನು ಪೇರಿಸಿಟ್ಟು, ಮೊಣಕೈಯ ಒಂದೇಟಿನಿಂದ ಮುರಿಯುವುದು.

-ಬಿಯರ್ ಬಾಟ್ಲಿಯೊಂದರ ಮೇಲ್ಭಾಗವನ್ನು ಬರಿಗೈಯಿಂದ ತುಂಡರಿಸುವುದು. 

ಇವುಗಳ ನಿಜವಾದ ಉದ್ದೇಶ ಕರಾಟೆಕನ ಬಲ ಮತ್ತು ಆತ್ಮವಿಶ್ವಾಸದ ಪ್ರದರ್ಶನ. 

ಶರೀರ ಮತ್ತು ಉಸಿರಿನ ನಿಯಂತ್ರಣವನ್ನು ಅವಲಂಬಿಸಿದ ಅಪ್ರತಿಮ ಕದನಕಲೆ ಕರಾಟೆ. ಇದು ಆತ್ಮರಕ್ಷಣೆಗೆ ನಮ್ಮನ್ನು ಸಜ್ಜಾಗಿಸುತ್ತದೆ. ಜೊತೆಗೆ, ಮನಸ್ಸು ಮತ್ತು ದೇಹವನ್ನು ಚುರುಕಾಗಿ ಹಾಗೂ ಜಾಗೃತವಾಗಿ ಇರಿಸಲು ಸಹಕರಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ, ಸಾಧಕರಲ್ಲಿ ತಲೆಯೆತ್ತಿ ಬದುಕಲು ಅಗತ್ಯವಾದ ಆತ್ಮವಿಶ್ವಾಸವನ್ನು ಕರಾಟೆ ಮೂಡಿಸುತ್ತದೆ. 

ಫೋಟೋ 3: ಕರಾಟೆ ಪ್ರದರ್ಶನದಲ್ಲಿ “ಕೀ..” ಕೂಗಿನೊಂದಿಗೆ ಹಿಮ್ಮಡಿಯ ಒಂದೇಟಿಗೆ 7 ಹಂಚುಗಳು ಭಗ್ನ 

ಫೋಟೋ 4: ನೆಲದಿಂದ ಜಿಗಿದು “ಫ್ಲೈಯಿಂಗ್ ಕಿಕ್” (ಹಾರು ಒದೆತ) ಮೂಲಕ ಎದುರಾಳಿಗೆ ಅನಿರೀಕ್ಷಿತ ಹೊಡೆತ  

(ನನ್ನ ಕರಾಟೆ ಕಲಿಕೆ ಮತ್ತು ಕಲಿಸುವಿಕೆಯ ಮಾಹಿತಿ:

ನಾನು ಬೆಂಗಳೂರಿನ ಹೆಬ್ಬಾಳದಲ್ಲಿ ನಾಲ್ಕು ವರುಷಗಳ ಬಿ.ಎಸ್ಸಿ. (ಕೃಷಿ) ಪದವಿ ಶಿಕ್ಷಣ ಪಡೆಯುತ್ತಿದ್ದೆ (1973 -77). ಆಗ, ಹೆಬ್ಬಾಳದಿಂದ ಶಿವಾಜಿನಗರಕ್ಕೆ ವಾರಕ್ಕೆ ಎರಡು ದಿನ ಸೈಕಲಿನಲ್ಲಿ ಹೋಗಿ ಕರಾಟೆ ಕಲಿತೆ: ಸೌತ್ ಇಂಡಿಯನ್ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆಯ ದೋಜೋದಲ್ಲಿ. ಗ್ರಾಂಡ್ ಮಾಸ್ಟರ್ ಬಿ.ಎಂ. ನರಸಿಂಹನ್ ನನ್ನ ಕರಾಟೆ ಗುರುಗಳು. 

ಪದವಿ ಶಿಕ್ಷಣದ ನಂತರ, ಮಂಗಳೂರು ಮತ್ತು ಉಡುಪಿಯಲ್ಲಿ ನಾನು ಕಲಿತ ಕರಾಟೆ ಸಂಸ್ಥೆಯ ತರಬೇತಿ ಕೇಂದ್ರ ಸ್ಥಾಪಿಸಿ, ನೂರಾರು ಆಸಕ್ತರಿಗೆ ಕರಾಟೆ ತರಬೇತಿ ನೀಡಿದ್ದೆ.

ಆಗ, ಕರಾಟೆ ಬಗ್ಗೆ ನನ್ನ ಅಧ್ಯಯನ ಮತ್ತು ಅನುಭವ ಆಧರಿಸಿ ಬರೆದ ಲೇಖನ ಮಂಗಳೂರಿನ “ಇಂಚರ” ಮಾಸಪತ್ರಿಕೆಯ ಫೆಬ್ರವರಿ 1983ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದು, 43 ವರುಷಗಳ ನಂತರ, ಅದರ ಪರಿಷ್ಕರಿಸಿದ ಬರಹ.)