ಕಾಗೆಯೊಂದು ಕಿರಿಕಿರಿ ಮಾಡಿದಾಗ ಅದನ್ನು ರೋಷದಿಂದ ಓಡಿಸಿದ್ದೀರಾ? ಅದರಿಂದೇನು ತೊಂದರೆಯಾಗದೆಂದು ನೀವು ಭಾವಿಸಿರಬಹುದು. ಆದರೆ ಅಧ್ಯಯನದ ಅನುಸಾರ ಅದು ಭಾರೀ ಅಪಾಯದ ಕೆಲಸ!

ಹಾಗೆ ಮಾಡಿದ್ದಾದರೆ, ದುಷ್ಟ ವೈರಿಯೊಬ್ಬ ನಿಮಗೆ ಗಂಟು ಬಿದ್ದಿರಬಹುದು. ಯಾಕೆಂದರೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಅನುಸಾರ ಕಾಗೆಗಳು ಸುಮಾರು ಎರಡು ದಶಕಗಳ ಕಾಲ ದ್ವೇಷ ಸಾಧಿಸುತ್ತವೆ! ಆದ್ದರಿಂದ ಆ ಕಾಗೆ ಪ್ರತೀ ಸಲ ನೀವು ಮುಖಾಮುಖಿಯಾದಾಗಲೂ ತನ್ನ ಗುಂಪಿನ ಇತರ ಕಾಗೆಗಳೊಂದಿಗೆ ಸೇರಿಕೊಂಡು ಆಕ್ರಮಣಕಾರಿಯಾಗಿ ಕೂಗಿದರೆ ಅಚ್ಚರಿ ಪಡಬೇಡಿ. ಗಮನಿಸಿ: ಆ ಕಾಗೆಯ ಗುಂಪಿನ ಇತರ ಕಾಗೆಗಳೂ ನಿಮ್ಮನ್ನು ಹಾಗೆಯೇ ದ್ವೇಷಿಸುತ್ತವೆ.

ಹಲವು ದೇಶಗಳ ಜಾನಪದ ಕತೆಗಳ ಅನುಸಾರ ಹಕ್ಕಿಗಳಿಗೂ ಬುದ್ಧಿವಂತಿಕೆಯಿದೆ. ಆದರೆ ಈ ಸಂಗತಿಯನ್ನು ಖಚಿತ ಪಡಿಸುವ ಯಾವುದೇ ಅಧ್ಯಯನ ನಡೆದಿರಲಿಲ್ಲ. ಕೊನೆಗೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ದಶಕಗಳ ಅವಧಿಯ ಅಧ್ಯಯನ ಜರಗಿಸಲು ನಿರ್ಧರಿಸಿದರು. ಇದೆಲ್ಲ ಶುರುವಾದದ್ದು 2005ರಲ್ಲಿ ವನ್ಯಜೀವಿ ಜೀವಶಾಸ್ತ್ರಜ್ಞ ಡಾ. ಜಾನ್ ಮಾರ್ಜು-ಲುಫ್ ಮುಂದಾಳುವಾಗಿದ್ದ ಸಂಶೋಧಕರ ತಂಡವು ಅಧ್ಯಯನ ಆರಂಭಿಸಿದಾಗ. ತಮಗೆ ತೊಂದರೆ ಮಾಡಿದವರ ಮುಖಗಳನ್ನು ಕಾಗೆಗಳು ನೆನಪಿಟ್ಟು ಕೊಳ್ಳುತ್ತವೆಯೇ? ಹೌದೆಂದಾದರೆ, ಎಷ್ಟು ಸಮಯ ನೆನಪಿಟ್ಟು ಕೊಳ್ಳುತ್ತವೆ? ಎಂಬುದನ್ನು ಪರೀಕ್ಷಿಸುವುದು ಆ ಅಧ್ಯಯನದ ಉದ್ದೇಶ.

ಆ ಸಂಶೋಧನಾ ತಂಡದ ಕೆಲವರಿಗೆ ಕೆಲವು ಕಾಗೆಗಳನ್ನು ಹಿಡಿದು ಅವಕ್ಕೆ ಬ್ಯಾಂಡ್ (ಪಟ್ಟಿ) ಹಾಕುವ ಕೆಲಸ ನೀಡಲಾಯಿತು. ಇದರಲ್ಲಿ ಮುಖ್ಯ ಸಂಗತಿ ಏನೆಂದರೆ, ಅವರು “ಅಪಾಯ” ಸೂಚಿಸುವ ನಿರ್ದಿಷ್ಟ ವಿನ್ಯಾಸದ ಮುಖವಾಡ ಧರಿಸಿ ಆ ಕೆಲಸ ಮಾಡುತ್ತಿದ್ದರು - ಕಾಗೆಗಳಿಗೆ ಅವರ ಮುಖ ನೆನಪಿಡಲು ಸಹಾಯವಾಗಲಿ ಎಂಬುದು ಇದಕ್ಕೆ ಕಾರಣ. ಆ ತಂಡದ ಇತರ ಸದಸ್ಯರು ಸಾಮಾನ್ಯ ಮುಖವಾಡಗಳನ್ನು ಧರಿಸುತ್ತಿದ್ದರು ಮತ್ತು ಕಾಗೆಗಳ ತಂಟೆಗೆ ಹೋಗುತ್ತಿರಲಿಲ್ಲ.

ಆನಂತರ, ಕಾಗೆಗಳ ಪ್ರತಿಕ್ರಿಯೆ ಏನೆಂದು ತಿಳಿಯಲಿಕ್ಕಾಗಿ ಸಂಶೋಧಕರು ತಮ್ಮತಮ್ಮ ಮುಖವಾಡಗಳನ್ನು ಧರಿಸಿ, ತಾವಿದ್ದ ಕಟ್ಟಡಗಳಿಂದ ಹೊರಗೆ ಬರುತ್ತಿದ್ದರು. ಕಾಗೆಗಳ ಪ್ರತಿಕ್ರಿಯೆ ಸ್ಪಷ್ಟವಾಗಿತ್ತು. ಅವು ಆಕ್ರಮಣಕಾರಿಯಾಗಿ “ಕಾಕಾ” ಎಂದು ಕೂಗುತ್ತಿದ್ದವು ಹಾಗೂ ಜೋರಾಗಿ ಕಿರಿಚಾಡುತ್ತಿದ್ದವು, ನಿರ್ದಿಷ್ಟ ಮುಖವಾಡ ಧರಿಸಿದವರ ತಲೆಗಳಿಗೆ ಕೆಲವೇ ಅಡಿಗಳ ಅಂತರಕ್ಕೆ ಆಕಾಶದಿಂದ ಧುಮುಕುತ್ತಿದ್ದವು, ಅದು ತಮ್ಮ ಜಾಗವೆಂದು ತೋರಿಸಲಿಕ್ಕಾಗಿ ಮೈಮೇಲೆ ಎರಗುತ್ತಿದ್ದವು. ಮಾತ್ರವಲ್ಲ, ಆ ಮುಖವಾಡ ಧರಿಸಿದವರನ್ನು ಕ್ಯಾಂಪಸ್ಸಿನ ಉದ್ದಗಲದಲ್ಲಿ ಬೆನ್ನಟ್ಟುತ್ತಿದ್ದವು. ಆದರೆ, ಸಾಮಾನ್ಯ ಮುಖವಾಡ ಧರಿಸಿದವರು ಬಂದಾಗ ಇಂತಹ ಯಾವುದೇ ವರ್ತನೆಗಳನ್ನು ಕಾಗೆಗಳು ಪ್ರದರ್ಶಿಸುತ್ತಿರಲಿಲ್ಲ.

ಆಸಕ್ತಿದಾಯಕ ಸಂಗತಿಯೆಂದರೆ, ಸ್ವಲ್ಪ ಸಮಯದ ನಂತರ, ಸಂಶೋಧಕರು ಹಿಡಿದು, ಬ್ಯಾಂಡ್ ಹಾಕದ ಕಾಗೆಗಳೂ ಇಂತಹ ಆಕ್ರಮಣಕಾರಿ ವರ್ತನೆ ಪ್ರದರ್ಶಿಸಿದವು. ಕಾಗೆಗಳ ಈ ವರ್ತನೆ ಹಲವು ವರುಷಗಳ ತನಕ ಮುಂದುವರಿಯಿತು. ಇದಕ್ಕೆ ಒಂದೇ ಒಂದು ತಾರ್ಕಿಕ ವಿವರಣೆ ಹೀಗಿದೆ: ಕಾಗೆಗಳು ತಮ್ಮ ಸಮುದಾಯದ ಇತರ ಎಲ್ಲ ಕಾಗೆಗಳಿಗೂ ತಮ್ಮ ಜ್ಞಾನ ಮತ್ತು ದ್ವೇಷವನ್ನು ದಾಟಿಸಬಲ್ಲವು.

ಈ ಅಧ್ಯಯನ 17 ವರುಷಗಳ ತನಕ ಮುಂದುವರಿಯಿತು. ಆ ಎಲ್ಲ ವರುಷಗಳಲ್ಲಿಯೂ ಕಾಗೆಗಳು ನಿರ್ದಿಷ್ಟ ಮುಖವಾಡ ಧರಿಸಿದವರ ಬಗ್ಗೆ ವೈರತ್ವ ಮುಂದುವರಿಸಿದವು ಮತ್ತು ಅವರಿಗೆ ಕಾಟ ಕೊಟ್ಟವು.

ಒಂದು ಸಮುದಾಯದ ಕಾಗೆಗಳ ನಡುವಣ ಸಂವಹನ ಕೇವಲ ತಮಗೆ ಅಪಾಯ ಮಾಡಬಹುದಾದದ್ದರ ಬಗ್ಗೆ ಸೀಮಿತವಾಗಿಲ್ಲ. ಅವು ಆಹಾರದ ಸಹಿತ ಇತರ ಸಂಗತಿಗಳ ಬಗ್ಗೆಯೂ ಸಂವಹನ ನಡೆಸುತ್ತವೆ.

ಈ ಬುದ್ಧಿವಂತ ಪಕ್ಷಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತವೆ. ಉದಾಹರಣೆಗೆ ಯಾವುದೇ ಕಾಗೆಯು ಇನ್ನೊಂದು ಕಾಗೆಯ ದೈಹಿಕ ಭಾಷೆ (ಬಾಡಿ ಲ್ಯಾಂಗ್ವೇಜ್)ಯನ್ನು ಅನುಕರಿಸಬಲ್ಲದು. ಕಾಗೆಗಳು ಒಟ್ಟಾಗಿ ಕುಟುಂಬಗಳಲ್ಲಿ ವಾಸಿಸುತ್ತವೆ. ಮನುಷ್ಯರು ಸತ್ತವರ ಅಂತ್ಯಸಂಸ್ಕಾರ ಮಾಡುವಂತೆ, ಒಂದು ಕಾಗೆ ಸತ್ತರೆ ಆ ಕುಟುಂಬದ ಇತರ ಕಾಗೆಗಳೆಲ್ಲ ಒಟ್ಟು ಸೇರಿ, ಮೌನವಾಗಿ ತಮ್ಮ ಜೊತೆಗಾರನಿಗೆ ಅಂತಿಮ ನಮನ ಸಲ್ಲಿಸುತ್ತವೆ.

ಕಾಗೆಗಳು ಮಾತ್ರ ಅಪಾಯಕಾರಿ ವ್ಯಕ್ತಿಗಳ ವಿರುದ್ಧ ಆಕ್ರಮಣಕಾರಿ ವರ್ತನೆ ಪ್ರದರ್ಶಿಸುವ ಹಕ್ಕಿಗಳಲ್ಲ. ಆಸ್ಟ್ರೇಲಿಯನ್ ಮ್ಯಾಗ್-ಪೈ, ನಾರ್ದನ್ ಮೋಕಿಂಗ್ ಹಕ್ಕಿಗಳು, ಕೆನಡಾ ಗೀಸ್, ಸೀಗಲ್, ರೆಡ್ ವಿಂಗ್ಡ್ ಬ್ಲಾಕ್ ಹಕ್ಕಿಗಳು, ಜೇ - ಈ ಹಕ್ಕಿಗಳೂ ತಮ್ಮ ಉಳಿವಿಗಾಗಿ ಇಂತಹದೇ ಕಾರ್ಯತಂತ್ರಗಳನ್ನು ಬಳಸುತ್ತವೆ.

ಈ ಆಕ್ರಮಣಕಾರಿ ಕಾರ್ಯತಂತ್ರಗಳನ್ನು “ಮೊಬ್ಬಿಂಗ್” ಎಂದು ಕರೆಯಲಾಗುತ್ತದೆ. ಇದರಲ್ಲಿ ಹಕ್ಕಿಗಳ ಇಡೀ ಗುಂಪು ಜೋರಾಗಿ ಕೂಗುವುದು, ಆಕಾಶದಿಂದ ಧುಮುಕುವುದು, ಶತ್ರುವಿನ ಮೇಲೆ ಎರಗುವುದು, ಹೆದರಿಸುವುದು ಇವನ್ನೆಲ್ಲ ಮಾಡುತ್ತದೆ. ಇವೆಲ್ಲದರ ಉದ್ದೇಶ ಶತ್ರುವನ್ನು ಬೆದರಿಸುವುದು ಮತ್ತು ಶತ್ರುವಿಗೆ ದಾಳಿ ಮಾಡಲು ಕಷ್ಟವಾಗುವಂತೆ ಮಾಡುವುದು.

ಅದೇನಿದ್ದರೂ ಈ ದ್ವೇಷ ಸಾಧಿಸುವ ವರ್ತನೆ ಪ್ರದರ್ಶಿಸುವ ಹಕ್ಕಿಗಳ ಸಂಖ್ಯೆ ಬಹಳ ಸಣ್ಣದು. ಕೊನೆಯದಾಗಿ, ನೀವು ಯಾವುದೇ ಕಾಗೆಗೆ ಕಿರುಕುಳ ನೀಡಿದರೆ, ಅದರ ಗುಂಪಿನ ಎಲ್ಲ ಕಾಗೆಗಳ ಸತಾಯಿಸುವಿಕೆಯನ್ನು ಹಲವಾರು ವರುಷಗಳ ವರೆಗೆ ಎದುರಿಸಲು ಸಿದ್ಧರಾಗಿ!

ಫೋಟೋ ಕೃಪೆ: ಅನ್-ಫ್ಲಾಶ್ ಜಾಲತಾಣ