ಯಾರೋ ಮಾತಾಡುತ್ತಿದ್ದರೆ, ಇನ್ಯಾರೋ ಅಳುತ್ತಿದ್ದಾರೆ ನಿಧಾನವಾಗಿ ಕಣ್ಣು ತೆರೆದೆ. ಸುತ್ತಲೂ ನೋಡಿದೆ. ಪಕ್ಕದಲ್ಲಿ ಡಾಕ್ಟರ್ ನಿಂತಿದ್ದಾರೆ. ಅವರ ಜೊತೆ ಅಪ್ಪ ಅಮ್ಮ ಮಾತಾಡುತ್ತಿದ್ದಾರೆ. ಅಮ್ಮ ನಾನು ಕಣ್ಣು ಬಿಟ್ಟಿದ್ದನ್ನು ನೋಡಿ ಡಾಕ್ಟರ್ ಅಲ್ಲಿ ನೋಡಿ ಕಣ್ಣು ಬಿಟ್ಟಿದ್ದಾನೆ ಎಂದು ನನ್ನ ಬಳಿ ಆತುರವಾಗಿ ಬಂದರು. ತಕ್ಷಣ ಡಾಕ್ಟರ್ ನನ್ನ ಬಳಿ ಬಂದು ಅಮ್ಮನ ಕುರಿತು ದಯವಿಟ್ಟು ಒಂದು ಹತ್ತು ನಿಮಿಷ ಆಚೆ ಇರಿ ಈಗ ತಾನೇ ಅವರಿಗೆ ಪ್ರಜ್ಞೆ ಬಂದಿದೆ. ಡಿಸ್ಟರ್ಬ್ ಮಾಡಬೇಡಿ ಎಂದು ಅಪ್ಪ ಅಮ್ಮನನ್ನು ಆಚೆ ಕಳುಹಿಸಿ ನನ್ನ ಬಳಿ ಬಂದು ನನ್ನ ಕೈ ಹಿಡಿದು, ನನ್ನ ಕಣ್ಣನ್ನು ತೆರೆದು ನೋಡಿ ಹೇಗೆ ಅನಿಸುತ್ತಿದೆ ಭಗತ್. ತುಂಬಾ ನೋವಿದೆಯ ಎಂದು ಕೇಳಿದರು. ಮಾತಾಡಲು ಬಾಯಿ ತೆರೆದರೆ ಗಂಟಲೆಲ್ಲ ಒಣಗಿ ಹೋಗಿತ್ತು. ಕಷ್ಟ ಪಟ್ಟು ಪಾವನಿ ಎಂದೆ, ಪಾವನಿ ಇಲ್ಲೇ ಇದಾರೆ ನೀವು ಶ್ರಮ ತೆಗೆದುಕೊಳ್ಳಬೇಡಿ ವಿಶ್ರಾಂತಿ ತೆಗೆದುಕೊಳ್ಳಿ ಎಂದರು. ಡಾಕ್ಟರ್ ದಯವಿಟ್ಟು ನಾನು ಮೊದಲು ಪಾವನಿಯನ್ನು ನೋಡಬೇಕು ನನ್ನನ್ನು ಪಾವನಿಯ ಹತ್ತಿರ ಕರೆದುಕೊಂಡು ಹೋಗಿ ಎಂದೆ. ಬಂದೆ ಇರಿ ಎಂದು ಆಚೆ ಹೋದರು.

ನನಗೆ ಏನಾಗುತ್ತಿದೆ ಎಂದೆ ಗೊತ್ತಾಗುತ್ತಿಲ್ಲ ಸುತ್ತಲೂ ನೋಡಿದೆ ಅಲ್ಲಿದ್ದ ಡಿಜಿಟಲ್ ಕ್ಯಾಲೆಂಡರ್ ನಲ್ಲಿ ದಿನಾಂಕ ಸೆಪ್ ೧೮ ಎಂದು ತೋರಿಸುತ್ತಿತ್ತು. ಅರೆ ಇವತ್ತು ನನ್ನ ಪಾವನಿ ಮದುವೆ ಇದೆ ನಾವ್ಯಾಕೆ ಇನ್ನೂ ಇಲ್ಲೇ ಇದ್ದೀವಿ ಎಂದುಕೊಂಡು ಅಮ್ಮ ಅಮ್ಮ ಎಂದು ಕೂಗಲು ಶುರು ಮಾಡಿದೆ. ನನ್ನ ಕೂಗು ಕೇಳಿ ಅಪ್ಪ ಒಳಗೆ ಬಂದರು. ಭಗತ್ ನಿಧಾನ ನಿಧಾನ ಯಾಕೆ ಏನು ಬೇಕು ಅಂದರು. ಅಪ್ಪ ಇವತ್ತು ನನ್ನ ಮದುವೆ ಅಲ್ವ ನಾವಿನ್ನೂ ಯಾಕೆ ಇಲ್ಲೇ ಇದೀವಿ. ಅಸಲಿಗೆ ನಾವು ಇಲ್ಲಿಗೆ ಯಾಕೆ ಬಂದಿದ್ದೇವೆ? ಪಾವಿ ಎಲ್ಲಿ? ಪ್ಲೀಸ್ ಹೇಳಿ ಅಪ್ಪ. ಅಪ್ಪ ನನ್ನ ತಲೆ ಮೇಲೆ ಕೈ ಇಟ್ಟು ಭಗತ್ ಸಮಾಧಾನ ಮಾಡಿಕೊ. ೧೩ನೆ ತಾರೀಖು ನೀನು ವಾಚ್ ತಗೊಂಡು ಬರಲು ಪಾವನಿ ಮನೆಗೆ ಹೋದೆ ಗೊತ್ತ? ಆಗ ನನಗೆ ನೆನಪಾಯಿತು. ಹಾ ಹೌದು ನಾನು ಪಾವಿ ಇಬ್ಬರೂ ಹೋಗಿ ವಾಚ್ ತೆಗೆದುಕೊಂಡು ಅವಳ ಸ್ನೇಹಿತರಿಗೆ ಕಾರ್ಡ್ ಕೊಟ್ಟು ವಾಪಸ್ ಬರಬೇಕಾದರೆ....ನನ್ನ ಕಣ್ಣುಗಳು ದೊಡ್ದದಾದವು ಅಪ್ಪ ಕಾರೊಂದು ಸ್ಪೀಡಾಗಿ ಬಂದು ನನ್ನ ಗಾಡಿಗೆ ಗುದ್ದಿತು. ಆಮೇಲೆ ಏನಾಯ್ತು ಅಂತ ನನಗೆ ಗೊತ್ತಿಲ್ಲ. ಹೌದು ನನಗೆ ಆಕ್ಸಿಡೆಂಟ್ ಆಗಿದ್ದು ೧೩ನೆ ತಾರೀಖು ಇವತ್ತು ೧೮ ಅಂದರೆ ಐದು ದಿನ ನನಗೆ ಪ್ರಜ್ಞೆ ಇರಲಿಲ್ಲವ? ಅಪ್ಪ ನನಗೇನೂ ಅರ್ಥ ಆಗುತ್ತಿಲ್ಲ ಸ್ವಲ್ಪ ಬಿಡಿಸಿ ಹೇಳಪ್ಪ ಎಂದೆ.

ಹೌದು ಭಗತ್ ಅಂದು ಆಕ್ಸಿಡೆಂಟ್ ಆದ ಮೇಲೆ ನಿನಗೆ ತಲೆಗೆ ಬಲವಾದ ಪೆಟ್ಟು ಬಿದ್ದು ನಿನಗೆ ಪ್ರಜ್ಞೆ ಇರಲಿಲ್ಲ. ನಾಲ್ಕು ದಿನ ಆದ ಮೇಲೆ ಇವತ್ತೇ ನೀನು ಕಣ್ಣು ಬಿಟ್ಟಿರುವುದು. ದೇವರು ದೊಡ್ಡವನು ನಿನಗೆ ಹೆಚ್ಚೇನೂ ತೊಂದರೆ ಇಲ್ಲ. ಸಣ್ಣದೊಂದು ಆಪರೇಷನ್ ಮಾಡಬೇಕಿತ್ತು. ಅದು ನೆನ್ನೆ ಮಾಡಿದ್ದಾರೆ. ಇನ್ನು ಒಂದು ವಾರ ಆದಮೇಲೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಅಪ್ಪ ನನ್ನನ್ನು ನೋಡಿ ನಕ್ಕರು. ಅಪ್ಪ ಅದೆಲ್ಲ ಸರಿ ಪಾವಿ ಎಲ್ಲಿ ನಾನು ಅರ್ಜೆಂಟಾಗಿ ಪಾವಿ ನ ನೋಡಬೇಕು ಎಂದೆ.

ಭಗತ್ ಸಮಾಧಾನ ಮಾಡಿಕೊ ಅವತ್ತು ನಡೆದ ಆಕ್ಸಿಡೆಂಟ್ ನಲ್ಲಿ ಪಾವನಿ ಸ್ಥಳದಲ್ಲೇ ಹೋಗಿಬಿಟ್ಟಳು. ಗಾಡಿ ಗುದ್ದಿದ ತಕ್ಷಣ ಅವಳು ಕೆಳಗೆ ಬಿದ್ದು ಅವಳ ತಲೆ ಫೂಟ್ ಪಾತ್ ಗೆ ಬಡಿದು ಅವಳು ಅಲ್ಲೇ ಹೋಗಿ ಬಿಟ್ಟಳು. ಎಂದು ಕಣ್ಣು ಮುಚ್ಚಿಕೊಂಡು ಬಿಟ್ಟರು. ನನಗೆ ಕಣ್ಣು ಕತ್ತಲಾದಂತಾಗಿ ಮತ್ತೆ ಪ್ರಜ್ಞೆ ತಪ್ಪಿ ಬಿಟ್ಟೆ. ಸ್ವಲ್ಪ ಹೊತ್ತಿನ ನಂತರ ಮತ್ತೆ ಎಚ್ಚರವಾದಾಗ ಸುತ್ತ ಅಪ್ಪ, ಅಮ್ಮ, ಪೂಜಾ, ಹಾಗೂ ಪಾವನಿಯ ಅಪ್ಪ ಅಮ್ಮ ನಿಂತಿದ್ದರು. ಅತ್ತೆ...ಅತ್ತೆ...ಹೃದಯ ವಿದ್ರಾವಕವಾಗಿ ಅತ್ತೆ. ಅಮ್ಮ ನಾನು ಪಾವಿ ನ ನೋಡಬೇಕು ದಯವಿಟ್ಟು ಪಾವಿನ ನೋಡಬೇಕು ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ ಎಂದು ಕಿರುಚುತ್ತಿದ್ದೆ. ಪಾವಿಯ ಅಪ್ಪ ಬಂದು ಸಮಾಧಾನ ಮಾಡಿಕೊಳ್ಳಿ, ಅಂದೆ ಪಾವಿಯ ಅಂತ್ಯಕ್ರಿಯೆ ಮುಗಿಸಿದೆವು. ಇನ್ನು ಪಾವನಿ ಬರೀ ನೆನಪು ಎಂದು ಅಳಲು ಶುರು ಮಾಡಿದರು. ಪೂಜಾ ಅಮ್ಮನನ್ನು ಹಿಡಿದುಕೊಂಡು ಅಳುತ್ತಿದ್ದಳು. ಅತ್ತೂ ಅತ್ತೂ ಅಮ್ಮನ ಕಣ್ಣುಗಳು ಕೆಂಪಾಗಿ ಹೋಗಿದ್ದವು. ಅಮ್ಮ ನಾನು ಇರುವುದಿಲ್ಲ, ನನ್ನನ್ನೇಕೆ ಬದುಕಿಸಿದಿರಿ ಪಾವನಿ ಇಲ್ಲದೆ ನಾನು ಬದುಕುವುದಿಲ್ಲ. ನಾನು ಸಾಯಬೇಕು ನನಗೆ ಈ ಬದುಕು ಬೇಡ...ಬೇಡ...ಎಂದು ಕಿರುಚುತ್ತಿದ್ದೆ