ಜಗದ ತಂದೆ ಮಹಾಶಿವ ಮತ್ತು ತಾಯಿ ಪಾರ್ವತಿ ದೇವಿಗೆ ಸಂಬಂಧಿಸಿದ ವ್ರತವಿದು. ತಂದೆತಾಯಿಯರ ಆರಾಧನೆಯಿಂದ ಲೋಕಕ್ಷೇಮ ಎನುವ ನಂಬಿಕೆ. ತ್ರಯೋದಶಿ ವ್ರತ ಅಂತಲೂ ಹೇಳುವ ವಾಡಿಕೆಯಿದೆ. ಸಕಲ ದು:ಖಗಳ ನಿವಾರಣೆಯನ್ನು, ಈ ವ್ರತಾಚರಣೆಯಿಂದ ಕಡಿಮೆ ಮಾಡಿಕೊಳ್ಳಬಹುದು. ಉತ್ತಮ ಆರೋಗ್ಯ,ದೀರ್ಘಾಯುಷ್ಯ,ಕಷ್ಟಗಳ ಪರಿಹಾರವಾಗುವುದೆಂದು ಪ್ರತೀತಿ.ಈ ವ್ರತದ ಬಗ್ಗೆ ಮಾತೆ ಪಾರ್ವತಿ ದೇವಿಗೆ ಪರಶಿವನು ತಿಳಿಸಿದನೆಂಬ ಉಲ್ಲೇಖ ಶಿವಪುರಾಣದಲ್ಲಿದೆ. ಅಧರ್ಮ ಎಲ್ಲೆಲ್ಲಿ ತಲೆಯೆತ್ತುವುದೋ ಅಲ್ಲೆಲ್ಲ ಭಗವಂತನ ಕೃಪಾಕಟಾಕ್ಷದಿಂದ ಧರ್ಮದ ನೆಲೆಯಾಗುವಲ್ಲಿ ಈ ವ್ರತವು ಪುಷ್ಠಿದಾಯಕವೆನ್ನುವರು. ಒಂದು ತಿಂಗಳಲ್ಲಿ ಎರಡು ಸಲ ಆಚರಿಸಬಹುದು. ಪ್ರದೋಷ ಕಾಲವೆಂದರೆ ಸೂರ್ಯನ ಅಸ್ತದ ಅನಂತರ ರಾತ್ರಿ ಯಾಗುವ ಮುನ್ನದ ಸಮಯ (ಮುಸ್ಸಂಜೆ,ಗೋ ಧೂಳಿ ಸಮಯ).ಶಿವನ ಪೂಜೆಗೆ ಮಹತ್ವವಿಲ್ಲಿ. ಶಿವನ ನೃತ್ಯದ ಸಮಯವಂತೆ ಇದು.ಭಗವಾನ್ ಶಿವನನ್ನು ಪ್ರಸನ್ನೀಕರಿಸಲು ಪ್ರದೋಷ ವ್ರತಾಚರಣೆ ಮಾಡುವರು .ಶಿವನು ಮೆಚ್ಚಿ ಹರಸುವನಂತೆ. ಇಲ್ಲಿ ಮುಖ್ಯವಾಗಿ ಉಪವಾಸವಿರಬೇಕು.ನೇಮನಿಷ್ಠೆಯಿರಬೇಕು.ಸೂರ್ಯನ ಅನುಗ್ರಹ ಸಹ ಲಭಿಸುವುದೆನ್ನುವರು. ಮನುಷ್ಯರ ಜನ್ಮ ಸಮಯದಂತೆ ಕುಜದೋಷವಿದ್ದರೆ ಮಂಗಳವಾರದಂದು ಆಚರಿಸುವ ವ್ರತದಲ್ಲಿ ನಿವಾರಣೆಯಾಗುವುದಂತೆ. ದಾಂಪತ್ಯ ಜೀವನದ ಸುಗಮಹಾದಿ, ಇಷ್ಟಾರ್ಥಗಳ ಈಡೇರಿಕೆ, ಶತ್ರು ಬಾಧೆ ದೂರವಾಗುವಿಕೆ, ಅದೃಷ್ಟವೃದ್ಧಿಯಾಗುವುದೆಂದು ನಂಬಲಾಗಿದೆ.ಶನಿ ಪ್ರದೋಷ ಆಚರಣೆಯಿಂದ ಶನೀಶ್ವರನ ಸಂಬಂಧಿಸಿದ ತೊಂದರೆಗಳ ನಿವಾರಣೆಯಾಗುವುದೆನ್ನುವರು.'ಓಂ ನಮ:ಶಿವಾಯ'ಜಪಿಸುವುದರಿಂದ ಶಿವಕಾರುಣ್ಯ ಒದಗಿ ಬರುವುದು.ಸಕಲರಿಗೂ ಸನ್ಮಂಗಲವುಂಟಾಗಲಿ,ಶಿವ ಪಾರ್ವತಿಯರ ಅಭಯಹಸ್ತ ಸಿಗಲೆಂಬ ಪ್ರಾರ್ಥನೆ.
(ಸಂಗ್ರಹ)
-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!