ವಿಶ್ವ ಮಹಿಳಾ ದಿನವಿದ್ದಂತೆ, ವಿಶ್ವ ಪುರುಷರ ದಿನವೂ ತಾ ೧೯-೧೧-೨೫ರಂದು ಆಚರಿಸಲ್ಪಡುತ್ತದೆ. ಪುರುಷರ ಸಮಸ್ಯೆಗಳ ಬಗ್ಗೆ ಅವಲೋಕನ, ಜಾಗೃತಿ ಹಾಗು ಜಾಗ್ರತೆ ಮೂಡಿಸುವ, ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅವರ ಆರೋಗ್ಯದ ಬಗ್ಗೆ,ಮಾನಸಿಕ ನೆಮ್ಮದಿಯ ಬಗ್ಗೆ ಅರಿವು, ಕುಟುಂಬಕ್ಕೆ,ಸಮಾಜಕ್ಕೆ ಕೊಡುಗೆಗಳ ಕುರಿತು ಚರ್ಚೆ, ಗೌರವ ಸಲ್ಲಿಸುವಿಕೆ. "ಯಶಸ್ವಿ ಪುರುಷನ ಹಿಂದೆ ಮಹಿಳೆ" ಇದ್ದಂತೆ ಯಶಸ್ವಿ ಮಹಿಳೆಯ ಹಿಂದೆ ಪುರುಷ"ನಿರುತ್ತಾನೆಂಬುದನ್ನು ಮರೆಯಬಾರದು.

ಇತ್ತೀಚೆಗೆ ನಾವು ಮಾಧ್ಯಮಗಳಲ್ಲಿ ಓದಿದಂತೆ ಪುರುಷರಿಗೂ ತೊಂದರೆಯಾಗುವುದು, ಸುಖಾಸುಮ್ಮನೆ ತನ್ನದಲ್ಲದ ತಪ್ಪಿಗೆ ತಪ್ಪಿತಸ್ಥನನ್ನಾಗಿ ಮಾಡುವುದು, ಕೊನೆಗೆ ಉಸಿರು ಚೆಲ್ಲುವುದನ್ನು ಕಾಣ್ತಿದ್ದೇವೆ. ಇದೆಲ್ಲ ಬೇಕೇ? ಅನ್ನಿಸುವುದಿದೆ. ಗಂಡಸರ ಮಾನಸಿಕ ತುಮುಲ, ಕಷ್ಟ, ಬದುಕಿಗಾಗಿ ಹೋರಾಟ, ಸರಿಯಾದ ವಯಸ್ಸಿಗೆ ವಿವಾಹ ಆಗರಿರುವುದು, ಕೆಲಸ ಸಿಗದಿರುವುದು, ಅಪವಾದಗಳನ್ನು ತಲೆಗೆ ಕಟ್ಟುವುದು, ಪದೇಪದೇ ಚುಚ್ಚಿ ಮಾತನಾಡುವುದು, ಇತರರ ಎದುರೇ ಅವಮಾನ ಮಾಡುವುದು ಇದರಿಂದ ಪುರುಷರು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುವರು. ಅರಿತು-ಕಲೆತು-ಬೆರೆತು ಬಾಳಿದರೆ ಚಂದ. ಕಷ್ಟವೋ ಸುಖವೋ ಹೊಂದಾಣಿಕೆಯ ಬದುಕಿರಲಿ. ಆಕಾಶವೇ ತಲೆಮೇಲೆ ಬಿದ್ದ ಹಾಗಿನ ಮನಸ್ಥಿತಿ ಬೇಡ. 'ಹುಟ್ಟಿಸಿದ ದೇವನಿಗೆ ಹುಲ್ಲು ಮೇಯಿಸಲೂ ಗೊತ್ತಿದೆ.' ಈ ಅರಿವಿರಲಿ ಸಹೋದರರೇ. ಕಷ್ಟ-ನಷ್ಟ-ಮಾನಸಿಕ ವೇದನೆಗಳನ್ನು ಆಪ್ತರಲ್ಲಿ ಮನಬಿಚ್ಚಿ ಹಂಚಿಕೊಳ್ಳಿ, ಪರಿಹಾರವೋ, ಮನಸ್ಸಿಗೆ ನೆಮ್ಮದಿಯೋ ಸಿಗಬಹುದು. ಮನುಷ್ಯ ಜನ್ಮ ನೂರಾರು ವರ್ಷಗಳ ಪುಣ್ಯದ ಫಲವಂತೆ, ಅರ್ಥ ಮಾಡಿಕೊಳ್ಳಿ. ಗಂಡು-ಹೆಣ್ಣು ಒಂದು ಮನೆಯಲ್ಲಿ ರಥದ ಎರಡು ಚಕ್ರಗಳಿದ್ದಂತೆ. ಯಾರು ಮೇಲೂ ಅಲ್ಲ, ಯಾರು ಕೀಳೂ ಅಲ್ಲ. ಮರ್ಯಾದೆ, ಆತ್ಮಾಭಿಮಾನ ಎಲ್ಲರಿಗೂ ಒಂದೇ. ಅರ್ಥೈಸಿ ಜೀವಿಸೋಣ. ಎಲ್ಲವೂ ಸರಿಯಾಗಿದ್ದರೆ ಮಾತ್ರ ದಿನಾಚರಣೆಗಳಿಗೂ ಒಂದು ತೂಕ, ಮೌಲ್ಯ ಇರುವುದು. ಎಲ್ಲಾ ಸಹೋದರರಿಗೂ ಶುಭಾಶಯಗಳು

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ