ಪುಸ್ತಕವ ಓದುತಲಿ ಜ್ಞಾನವನು ಗಳಿಸಯ್ಯಾ
ಮಸ್ತಕದಿ ಇರಿಸುತಲಿ ಬದುಕನ್ನು ನಡೆಸಯ್ಯಾ
ಓದು-ಬರೆಹ ಜೀವನದ ಮೆಟ್ಟಿಲುಗಳಯ್ಯಾ
ಹೆತ್ತವರ ಗುರು ಹಿರಿಯರ ಸದಾ ಗೌರವಿಸಯ್ಯಾ
ಈ ಜೀವ ಭಗವಂತನ ಭಿಕ್ಷೆ ತಿಳಿಯಯ್ಯಾ
ನಾಡು ನುಡಿ ರಾಷ್ಟ್ರಭಕ್ತಿಯದು ದೊಡ್ಡದಯ್ಯಾ
ಬದುಕಿನ ಮೌಲ್ಯಂಗಳ ಅಳವಡಿಸಿಕೊಂಡರೆ ಒಲಿವಳು 'ಶ್ರೀದುರ್ಗೆ'
ಪುಸ್ತಕವನ್ನೋದಿ ಅದರಲ್ಲಿರುವ ಉತ್ತಮ ಅಂಶಗಳನ್ನು ಮಸ್ತಕದಲ್ಲಿರಿಸಬೇಕಂತೆ. ಆ ಸಾರವನ್ನು ಸಮಯ, ಸಂದರ್ಭಕ್ಕೆ ಅಳವಡಿಸಿಕೊಳ್ಳುವವರೇ ಜಾಣರು, ಬುದ್ಧಿವಂತರು. ಅಷ್ಟು ಪುಸ್ತಕ ಓದಿದೆ, ಇಷ್ಟು ಓದಿದೆ ಎಂದು ಹೇಳಿಕೊಳ್ಳವವರ ನಡುವೆ ನಾವಿದ್ದೇವೆ. ಎಷ್ಟು ಪ್ರಯೋಜನವಾಗಿದೆ ಅದು ಮುಖ್ಯವಲ್ಲವೇ? ನಮ್ಮ ತಾಪತ್ರಯಗಳು, ನೋವುಗಳು, ಬೇನೆ-ಬೇಸರಿಕೆ ನಿವಾರಿಸುವ ಅಸ್ತ್ರ ಪುಸ್ತಕ ಓದುವುದರಿಂದ ಸಿಗುತ್ತದೆ. ಓದು-ಬರೆಹ ಬದುಕಿನ ಮೆಟ್ಟಿಲುಗಳು. ಮೆಟ್ಟಿಲು ಜಾರದಂತೆ ಏರುವುದು ನಮ್ಮ ಕರ್ತವ್ಯ. ಮಗುವಿನ ಸುಪ್ತ ಪ್ರತಿಭೆ ಅರಳಲು ಪುಸ್ತಕಗಳ ಓದುವಿಕೆಯೊಂದಿಗೆ, ಶಿಕ್ಷಣ ಸಹಕಾರಿ. ಒಂದು ಮಾತಿದೆ'ಮೃಷ್ಟಾನ್ನದ ನೆನಪು ಮೂರು ದಿನ, ಶ್ರೇಷ್ಠ ಗ್ರಂಥದ ನೆನಪು ಮಸಣದವರೆಗೆ' ಸತ್ಯವಿದು. ಓದಿನೊಂದಿಗೆ ಭಗವತ್ ಚಿಂತನೆಯೂ ಬೇಕು. ಅದಕ್ಕಾಗಿ ಮಕ್ಕಳಿಗೆ ಪುರಾಣದ ಸಣ್ಣ ಸಣ್ಣಕಥೆಗಳ ಪುಸ್ತಕ, ಬಾಲಪ್ರಪಂಚದ ಅರಿವಿನ ಪುಸ್ತಕಗಳನ್ನು ನೀಡಿ ಓದಲು ಪ್ರೋತ್ಸಾಹಿಸಬೇಕು. ಭೂತದೊಂದಿಗೆ ವರ್ತಮಾನದ ಅರಿವಿನ ಕೃತಿಗಳೂ ಬೇಕು. 'ಪುಸ್ತಕಗಳು ಬದುಕನ್ನು ಬದಲಾಯಿಸುವ, ಉತ್ತಮ ಜೀವನ ಶೈಲಿಯತ್ತ ಕೊಂಡೊಯ್ಯುವ ಸಂಜೀವಿನಿ' ಇದ್ದಂತೆ. ನೀತಿಯನ್ನು ಸಾರುವ, ಮಾನವೀಯ ಮೌಲ್ಯಗಳನ್ನು ಬಿತ್ತುವ ಅನೇಕ ಪುಸ್ತಕಗಳಿವೆ. ಓದಲು ಮನಸ್ಸಿರಬೇಕು, ಸ್ವತಃ ಆಸಕ್ತಿ ಬೇಕು. ಒತ್ತಾಯ ಸಲ್ಲದು. ಜೀವನಕ್ಕೆ ಉಪಯೋಗವಿಲ್ಲದ ಪುಸ್ತಕಗಳನ್ನು ಓದಿ ಸಮಯ, ಆಯುಷ್ಯ ಹಾಳುಮಾಡಿಕೊಳ್ಳಬಾರದು. ಹೊಸ ಹೊಸ ಚಿಂತನೆಗಳು ಹುಟ್ಟಿಕೊಳ್ಳುವುದೇ ಉತ್ತಮ ಗ್ರಂಥಗಳ ಓದಿನಿಂದ. ಸತ್ಯ-ಅಸತ್ಯಗಳ ಅರಿವು ನಮಗೆ ಪುಸ್ತಕಗಳಿಂದ, ಜೀವನಾನುಭವಗಳಿಂದ ಸಿಗುವುದು. ಓದೋಣ- ಬರೆಯೋಣ- ಕಲಿಯೋಣ- ಕಲಿಸೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!