ನಾವು ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಬಹಳ ಆಲೋಚಿಸಬೇಕು. ಒಬ್ಬರತ್ತ ಬೆರಳು ತೋರಿಸಿ ಮಾತನಾಡುವುದು ಕಷ್ಟವಲ್ಲ, ಅದರ ಪರಿಣಾಮವನ್ನು ಊಹಿಸಿದರೆ ಬಲು ಘೋರ. ಸತ್ಯವಾದರೆ ಸರಿ. ಸುಳ್ಳಾದರೆ ಉಸಿರಿಗೆ ಕುತ್ತು ಬರಬಹುದು. ಅಪವಾದ ಸಲ್ಲದು. ಬಹು ಎಚ್ಚರಿಕೆಯಿಂದ ಹೆಜ್ಜೆಯೂರಬೇಕು.
ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಜಲಂ ಪಿಬೇತ್/
ಸತ್ಯಪೂತಾಂ ವದೇದ್ವಾಚಂ ಮನ:ಪೂತಂ ಸಮಾಚರೇತ್//
ನೀರನ್ನು ಹಾಗೆಯೇ ಕುಡಿದರೆ ಇಲ್ಲ ಸಲ್ಲದ ರೋಗ ಬರಬಹುದು. ವಸ್ತ್ರದಿಂದಲೋ ಜಾಲರಿಯಿಂದಲೋ ಶೋಧಿಸಿ ಕುಡಿಯಬೇಕು. ಸತ್ಯ, ಶುದ್ಧವಾದ ಮಾತುಗಳನ್ನಾಡಬೇಕು. ಪರಾಮರ್ಶೆ ಬೇಕು, ಚಿಂತನ-ಮಂಥನವಿರಬೇಕು. ಅಂತರಂಗದಿಂದ ಕೆಲಸಮಾಡಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದು ಮನುಷ್ಯ ಧರ್ಮ. ಅನ್ಯಾಯದ್ದು ಬೇಡವೇ ಬೇಡ. ಧರ್ಮ ಮತ್ತು ಕೀರ್ತಿ, ಕೈಗೊಳ್ಳುವ ಉತ್ತಮ ಕೆಲಸಕಾರ್ಯಗಳು ಮಾತ್ರ ಶಾಶ್ವತ ಎನ್ನುವ ಅರಿವು ನಮ್ಮಲ್ಲಿರಲಿ. ಪ್ರತಿಯೊಂದು ವನದಲ್ಲೂ ಪರಿಮಳ ಭರಿತವಾದ ಮರಗಳಿರಲು ಸಾಧ್ಯವೇ? ಹಾಗೆಯೇ ಒಳ್ಳೆಯ ಸಾಧು ಸಜ್ಜನರಾದ ಮನುಷ್ಯರು ಎಲ್ಲಾ ಕಡೆಯಲ್ಲಿ ಕಾಣಸಿಗರು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ಭಗವಂತ ಎಂದು ಕೇಳಿಕೊಳ್ಳೋಣ.
(ಶ್ಲೋಕ: ಸರಳ ಸುಭಾಷಿತ)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!