ಯಾರೇ ಆಗಲಿ 'ಹೆಣ, ಶವ' ಎಂದು ಹೇಳುವ ಮೊದಲೆ ಏನನ್ನಾದರೂ ಸಾಧಿಸುವುದು ಅಗತ್ಯ. ಆಗ ಮನುಷ್ಯ ಜನ್ಮಕ್ಕೊಂದು ಅರ್ಥ. ಪುಣ್ಯ ಕಾರ್ಯಗಳನ್ನು ಉಸಿರಿರುವಾಗಲೇ ಮಾಡಿ ಮುಗಿಸಬೇಕು. ಆ ಮೇಲೆ ಸಾಧ್ಯವೇ? ಸಾಧನೆಗಳನ್ನು ಮಾಡಲು ಸತತ ಪ್ರಯತ್ನ ಬೇಕು. ಶಕ್ತಿಯಿಂದ ಏನೂ ಸಾಧಿಸಲಾಗದು. ಶಕ್ತಿ ತೋರಿಸಲು ಹೊರಟವ ಜನರ ಬಾಯಿಗೆ ಆಹಾರವಾಗಬಹುದು. ಯೋಚಿಸಿ ಪಾದವೂರಬೇಕು, ಜಾರದಂತೆ ಜೋಪಾನ ಮಾಡಬೇಕು. ಒಮ್ಮೆ ಜಾರಿದರೆ ಮತ್ತೆ ಮೇಲೇಳಲು ಕಷ್ಟವಿದೆ. ಶರೀರವನ್ನು ದಂಡಿಸಿ ತಪಸ್ಸು ಮಾಡಲು ಕುಳಿತ ಋಷಿಮುನಿಗಳೇ ಜಾರಿದ ಉದಾಹರಣೆಯಿದೆ (ಅದಕ್ಕೆ ಕಾರಣ ವಿಧಿ ಲಿಖಿತವೂ ಇರಬಹುದು ಅಥವಾ ಏನೋ ಒಂದು ಹೊಸದರ ಸೃಷ್ಟಿಗಿರಬಹುದು) ಮನದೊಳಗಿನ ಚೇಷ್ಟೆ, ಚಂಚಲತೆಯ ಅರಿತವರಾರಿಲ್ಲ. ಪ್ರವಾಹಕ್ಕೆ ಸಿಕ್ಕು ತೊಯ್ದಾಡುವ ಈ ಮನಸ್ಸನ್ನು ಕಟ್ಟಿ ಹಾಕುವಷ್ಟು ದೃಢತೆ ನಮ್ಮಲ್ಲಿರಬೇಕು. ಪ್ರವಾಹದ ಸುಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸೋಣವೇ? ದೇವರನ್ನು ಮರೆಯದೆ ದಿನನಿತ್ಯದ ಸತ್ಕಾರ್ಯದಲ್ಲಿ ತೊಡಗೋಣ, ಆಗ ಯಾವುದಕ್ಕೂ ಹೆದರುವ ಅಗತ್ಯವಿಲ್ಲ.

ನುಡಿದಂತೆ ನಡೆವವರ, ಸಜ್ಜನರ, ಜ್ಞಾನಿಗಳ ಸಹವಾಸವಿರಲಿ. ಕೆಟ್ಟ ಅಭ್ಯಾಸಗಳ ದಾಸನಾಗದಿರಲು ಪ್ರಯತ್ನಿಸಿ, ಆಗ ಗುರಿ ತಲುಪಬಹುದು. ಹೂವಿನಲ್ಲಿ ಘಮಲು, ಹಸುವಿನಲ್ಲಿ ಹಾಲು ಇರುವಂತೆ, ನಮ್ಮ ದೇಹದೊಳಗಿನ ಆತ್ಮದ ಬಗ್ಗೆ ಅರಿಯಲು ಪ್ರಯತ್ನಿಸಿದರೆ ಎಲ್ಲವೂ ಸುಗಮವಾಗಬಹುದು. ಉಡದೆ, ಉಣ್ಣದೆ, ಅನುಭವಿಸದೆ, ದಾನಧರ್ಮ ಮಾಡದೆ ಧನವನ್ನು ಕಟ್ಟಿಟ್ಟು ಜೀವಮಾನವಿಡೀ ಕಳ್ಳಕಾಕರ ಭಯದಲ್ಲಿದ್ದವ, ಚಿಂತಿಸಿ ಚಿಂತಿಸಿ ಕಡೆಗೊಂದು ದಿನ ಚಿತೆಯತ್ತ ಹೋಗಬೇಕಷ್ಟೆ. ಅದನ್ನು ಬಿಟ್ಟು ಉತ್ತಮ ಕೆಲಸಕಾರ್ಯಗಳಿಗೆ ನೀಡುತ್ತಿದ್ದರೆ ಪುಣ್ಯವಾದರೂ ಬರುತಿತ್ತು. ಇತರರೊಂದಿಗೆ ನಮ್ಮನ್ನು ನಾವೇ ಹೋಲಿಸದೆ, ನಾವು ನಾವಾಗಿಯೇ ಇದ್ದು, ಒಳ್ಳೆಯ ನಡೆನುಡಿಯಿಂದ ಬದುಕಲು ಪ್ರಯತ್ನಿಸೋಣ. ಅವರಿವರ ಹೋಲಿಕೆ ಬೇಡ.ನಾವು ನಮ್ಮ ಕೆಲಸ.'ಅಪೇಕ್ಷೆ ಎಂಬುದು ಬೀಜದಂತೆ, ಅದರ ಫಲ ದು:ಖ ಹೊರತು ಬೇರೇನಿದೆ ? ಇರುವಷ್ಟೇ ಕಾಲುಚಾಚಿದರೆ ಅಪೇಕ್ಷೆಯೇ ಇಲ್ಲ. ಮಣ್ಣು, ಹಣ, ಹೆಣ್ಣು, ಗಂಡು, ಕೀರ್ತಿ, ಸುಖ, ಭೋಗದ ಹಿಂದೆ ಸಾಗದೆ, ಆಯಾಯ ವಯಸ್ಸಿಗೆ ತಕ್ಕಂತೆ ವ್ಯವಹರಿಸಿದರೆ ಕೊನೆಗಾಲದಲ್ಲಿ ನೆಮ್ಮದಿ ಸಿಗಬಹುದು. ಉತ್ತಮ ಜೀವನವೇ ಇತರರಿಗೆ ಆದರ್ಶ. ಮನೆಯ ಸದಸ್ಯರಿಗೆ ನೆಮ್ಮದಿ. ಒಳಗಣ್ಣಿನಿಂದ ಎಲ್ಲವನ್ನೂ ಅವಲೋಕಿಸಿ ತೀರ್ಮಾನ ತೆಗೆದುಕೊಂಡರೆ ಬದುಕಿನ ಹಾದಿ ಸುಗಮ, ಸ್ವಚ್ಛ.ಅಂತರಂಗದ ಕದವ ತೆರೆದು ಜೀವಿಸೋಣ.

-ರತ್ನಾ ಕೆ ಭಟ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ