"ಭಾರತವು ಎಂದಿಗೂ ಒಂದಾಗಿರಲಿಲ್ಲ" ಎಂಬ ವಸಾಹತುಶಾಹಿ ಮತ್ತು ಕಮ್ಯುನಿಸ್ಟ್ ವಾದಗಳನ್ನು ನಮ್ಮ ಪ್ರಾಚೀನ ಶಾಸನ ಹಾಗೂ ಸಾಹಿತ್ಯದ ಆಧಾರದ ಮೇಲೆ ನಾವು ಹಿಂದಿನ ಸಂಚಿಕೆಗಳಲ್ಲಿ ತಳ್ಳಿಹಾಕಿದ್ದೆವು. ಆದರೆ ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಇಡೀ ಭೂಭಾಗವನ್ನು ಒಗ್ಗೂಡಿಸಿದ 'ಅಖಂಡ ಭಾರತ'ದ ಕಲ್ಪನೆ ಕೇವಲ ಗ್ರಂಥಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ; ಬದಲಾಗಿ ಅಂದಿನ ದಿನನಿತ್ಯದ ಜನಜೀವನ, ಶರಣರ ಕ್ರಾಂತಿ, ವಿದೇಶಿ ಪ್ರವಾಸಿಗರ ದಾಖಲೆಗಳು ಹಾಗೂ ಪ್ರಾದೇಶಿಕ ರಾಜರ ಆಡಳಿತ ನೀತಿಗಳ ಮೂಲಕ ಈ ಭೌಗೋಳಿಕ ಏಕತೆಯು ಸಾವಿರಾರು ವರ್ಷಗಳ ಕಾಲ ಹೇಗೆ ಜೀವಂತವಾಗಿತ್ತು ಎಂಬುದನ್ನು ಈ ಸಂಚಿಕೆಯಲ್ಲಿ ವಿಸ್ತೃತವಾಗಿ ನೋಡೋಣ.

ಹೊರಗಿನವರ ಕಣ್ಣಲ್ಲಿ ಏಕರೂಪದ 'ಭಾರತ'

ನಮ್ಮವರು ಮಾತ್ರವಲ್ಲ, ಹೊರಗಿನಿಂದ ಬಂದ ವಿದೇಶಿ ಪ್ರವಾಸಿಗರು, ರಾಯಭಾರಿಗಳು ಮತ್ತು ಆಕ್ರಮಣಕಾರರೂ ಸಹ ಈ ಉಪಖಂಡವನ್ನು 'ಅನೇಕ ದೇಶಗಳ ಗುಂಪು' ಎಂದು ಎಂದಿಗೂ ನೋಡಲಿಲ್ಲ; ಬದಲಿಗೆ ಅದೊಂದು ಏಕೈಕ ಭೌಗೋಳಿಕ ಮತ್ತು ಸಾಂಸ್ಕೃತಿಕ ಘಟಕ ಎಂದೇ ಅಚ್ಚರಿಯಿಂದ ದಾಖಲಿಸಿದ್ದಾರೆ.

ಗ್ರೀಕ್ ದಾಖಲೆಗಳಲ್ಲಿ 'ಇಂಡಿಕಾ': ಸಾ.ಶ.ಪೂರ್ವ ೩ನೇ ಶತಮಾನದಲ್ಲಿ ಮೌರ್ಯರ ಆಸ್ಥಾನಕ್ಕೆ ಬಂದಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ತಾನು ಬರೆದ ಕೃತಿಯ ಹೆಸರನ್ನು 'ಇಂಡಿಕಾ' (Indica) ಎಂದು ಇಟ್ಟನು. ರಾಜಕೀಯವಾಗಿ ಸಣ್ಣಪುಟ್ಟ ಪ್ರಾಂತ್ಯಗಳಿದ್ದರೂ, ಇಡೀ ಭಾರತೀಯರ ದಾರ್ಶನಿಕ ಚಿಂತನೆ, ಜೀವನಶೈಲಿ ಮತ್ತು ಪ್ರಾಮಾಣಿಕತೆ ಒಂದೇ ರೀತಿಯದ್ದಾಗಿದೆ ಎಂದು ಆತ ವಿಸ್ತಾರವಾಗಿ ಬರೆದಿದ್ದಾನೆ.

ಚೀನೀ ಪ್ರವಾಸಿಗರ 'ಯಿನ್-ತು': ಸಾ.ಶ. ೫ನೇ ಮತ್ತು ೭ನೇ ಶತಮಾನದಲ್ಲಿ ಭಾರತಕ್ಕೆ ಬಂದ ಫಾಹಿಯಾನ್ ಮತ್ತು ಹ್ಯುಯೆನ್ ತ್ಸಾಂಗ್ (Xuanzang) ಇಲ್ಲಿದ್ದ ರಾಜಕೀಯ ಗಡಿಗಳನ್ನು ದಾಟಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕಾಂಚೀಪುರದವರೆಗೆ ನಿರ್ಭೀತಿಯಿಂದ ಪ್ರಯಾಣಿಸಿದರು. ಹ್ಯುಯೆನ್ ತ್ಸಾಂಗ್ ಇಡೀ ದೇಶವನ್ನು 'ಯಿನ್-ತು' (Yin-Tu) (ಸಿಂದೂ) ಎಂದು ಕರೆದನು. ಉತ್ತರದ ಹರ್ಷವರ್ಧನ ಮತ್ತು ದಕ್ಷಿಣದ ಇಮ್ಮಡಿ ಪುಲಕೇಶಿ ನಡುವೆ ರಾಜಕೀಯ ಶತ್ರುತ್ವವಿದ್ದರೂ, ಉತ್ತರದ ನಳಂದಾದಿಂದ ದಕ್ಷಿಣದ ಕಾಂಚಿಯವರೆಗಿನ ಶೈಕ್ಷಣಿಕ ವ್ಯವಸ್ಥೆ, ಜನರ ಆತಿಥ್ಯ, ಮತ್ತು ಧಾರ್ಮಿಕ ನಂಬಿಕೆಗಳು ಇಡೀ ಉಪಖಂಡದಲ್ಲಿ ಒಂದೇ ಆಗಿವೆ ಎಂದು ಆತ ಬೆರಗಾಗಿ ಬರೆದಿದ್ದಾನೆ.

ಅಲ್-ಬೆರೂನಿ: ೧೧ನೇ ಶತಮಾನದಲ್ಲಿ ಬಂದ ಅರಬ್ ವಿದ್ವಾಂಸ ಅಲ್-ಬೆರೂನಿ ತನ್ನ 'ಕಿತಾಬ್-ಉಲ್-ಹಿಂದ್' ಕೃತಿಯಲ್ಲಿ, ಸಿಂಧೂ ನದಿಯಿಂದ ದಕ್ಷಿಣದವರೆಗಿನ ಜನರ ಖಗೋಳಶಾಸ್ತ್ರ, ವರ್ಣವ್ಯವಸ್ಥೆ ಮತ್ತು ಆಚರಣೆಗಳ ಒಳಸೂತ್ರ ಒಂದೇ ಎಂದು ದಾಖಲಿಸಿದ್ದಾನೆ.

ಆದಿ ಶಂಕರಾಚಾರ್ಯರು ಬೆಸೆದ 'ಆಧ್ಯಾತ್ಮಿಕ ಭೂಪಟ'

ಬ್ರಿಟಿಷರ ರೈಲ್ವೆ ಬರುವ ಸಾವಿರಾರು ವರ್ಷಗಳ ಮುಂಚೆಯೇ, ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಏಕೀಕರಣ ಮಾಡಿದವರು ೮ನೇ ಶತಮಾನದ ಆದಿ ಶಂಕರಾಚಾರ್ಯರು. ಅವರು ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ವೇದ ಪೀಠಗಳನ್ನು ಸ್ಥಾಪಿಸಿದರು—ಉತ್ತರದಲ್ಲಿ ಬದರಿನಾಥ (ಜ್ಯೋತಿರ್ಮಠ), ದಕ್ಷಿಣದಲ್ಲಿ ಶೃಂಗೇರಿ (ಶಾರದಾಪೀಠ), ಪೂರ್ವದಲ್ಲಿ ಪುರಿ (ಗೋವರ್ಧನ ಪೀಠ) ಮತ್ತು ಪಶ್ಚಿಮದಲ್ಲಿ ದ್ವಾರಕೆ (ಕಾಳಿಕಾ ಪೀಠ). ದಕ್ಷಿಣದ ಕೇರಳದ 'ಕಾಲಡಿ'ಯಲ್ಲಿ ಹುಟ್ಟಿ ಹಿಮಾವೃತ ಕಾಶ್ಮೀರದ 'ಸರ್ವಜ್ಞ ಪೀಠ'ವೇರಿದ ಅವರಿಗೆ ಈ ಇಡೀ ಪ್ರದೇಶ 'ಭಾರತ' ಎಂಬ ಒಂದೇ ಮನೆಯಾಗಿತ್ತು. 'ಅದ್ವೈತ' ಸಿದ್ಧಾಂತದ ಮೂಲಕ ಅವರು ದೇಶವನ್ನು ಆಧ್ಯಾತ್ಮಿಕವಾಗಿ ಬೆಸೆದರು.

ಕಲ್ಯಾಣದ ಅನುಭವ ಮಂಟಪ: ಅಖಂಡ ಭಾರತದ ಸಾಂಸ್ಕೃತಿಕ ಸಂಸತ್ತು

೧೨ನೇ ಶತಮಾನದಲ್ಲಿ ಕರ್ನಾಟಕದ ಬಸವಾದಿ ಶರಣರು ಸ್ಥಾಪಿಸಿದ 'ಅನುಭವ ಮಂಟಪ' ಸಾಂಸ್ಕೃತಿಕ ಏಕತೆಗೆ ಪ್ರಬಲ ಸಾಕ್ಷಿ. ಭಾರತ ಬೇರೆ ಬೇರೆ ದೇಶಗಳಾಗಿದ್ದರೆ ಅನ್ಯ ಪ್ರಾಂತ್ಯದವರು ಕಲ್ಯಾಣಕ್ಕೆ ಏಕೆ ಬರುತ್ತಿದ್ದರು? ಆದರೆ ಬಸವಣ್ಣನವರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಯ ವಿಚಾರಗಳು ಇಡೀ ಭರತಖಂಡದಾದ್ಯಂತ ಹೇಗೆ ಸಂಚಲನ ಮೂಡಿಸಿತ್ತು ಎಂದರೆ, ದೇಶದ ಮೂಲೆ ಮೂಲೆಗಳಿಂದ ಶರಣರು ಕಲ್ಯಾಣದತ್ತ ಹರಿದು ಬಂದರು. ರಾಜಕೀಯವಾಗಿ ಬೇರೆ ರಾಜ್ಯಗಳಿದ್ದರೂ, ಇದು ಇಡೀ ಅಖಂಡ ಭಾರತದ ಮೊದಲ 'ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಸತ್ತು'. ಭಾಷೆ-ಪ್ರಾದೇಶಿಕತೆ ಮೀರಿ ಭಾರತೀಯರ ಚಿಂತನೆ ಒಂದೇ ಆಗಿತ್ತೆನ್ನಲು ಇದೇ ಅತೀ ದೊಡ್ಡ ನಿದರ್ಶನ.

ಆಡಳಿತಾತ್ಮಕ ನೀತಿಯಾಗಿದ್ದ ಸಾಂಸ್ಕೃತಿಕ ಏಕತೆ

ಭಾರತೀಯರ ಈ ಸಾಂಸ್ಕೃತಿಕ ಏಕತೆಯು ಕೇವಲ ವೈಯಕ್ತಿಕ ಭಕ್ತಿಯ ವಿಚಾರವಾಗಿರದೆ, ಪ್ರಾದೇಶಿಕ ರಾಜಮನೆತನಗಳ ಅಧಿಕೃತ ಆಡಳಿತ ನೀತಿಯೂ ಆಗಿತ್ತು ಎಂಬುದಕ್ಕೆ ನಮ್ಮ ಇತಿಹಾಸದಲ್ಲಿ ಪ್ರಬಲವಾದ ಸಾಕ್ಷ್ಯಗಳಿವೆ. ದಕ್ಷಿಣದ ಪ್ರಾದೇಶಿಕ ಸರ್ಕಾರಗಳು ಉತ್ತರದ ನಗರಗಳನ್ನು ತಮ್ಮದೇ ದೇಶದ ಅವಿಭಾಜ್ಯ ಅಂಗವೆಂದು ಭಾವಿಸಿದ್ದವು.

ಹೊಯ್ಸಳರ ಕಂದಾಯ ಮೀಸಲು: ಸಾ.ಶ. ೧೨ನೇ ಶತಮಾನದ ಹೊಯ್ಸಳ ರಾಜರು ತಮ್ಮ ರಾಜ್ಯದ ಕೆಲವು ಹಳ್ಳಿಗಳ ಸಂಪೂರ್ಣ ಕಂದಾಯವನ್ನು ಕಾಶಿಯಾತ್ರೆಗೆ ಹೋಗುವ ಯಾತ್ರಿಕರ 'ಅನ್ನಸತ್ರ' (ಉಚಿತ ಊಟ-ವಸತಿ) ನಡೆಸಲೆಂದೇ ದತ್ತಿಯಾಗಿ ಮೀಸಲಿಡುತ್ತಿದ್ದರು. ಕಾಶಿಗೆ ಹೋಗುವ ಯಾತ್ರಿಕರಿಗೆ ರಾಜ್ಯದ ಗಡಿಗಳಲ್ಲಿ ಸುಂಕ ವಿನಾಯಿತಿಯ ರಾಜಾಜ್ಞೆಗಳಿದ್ದವು.

ಮೈಸೂರು ಒಡೆಯರ್ ಛತ್ರಗಳು: ನೂರಾರು ವರ್ಷಗಳ ನಂತರ ಮೈಸೂರು ಒಡೆಯರ್ ಸಂಸ್ಥಾನವೂ ಇದೇ ಪರಂಪರೆಯನ್ನು ಮುಂದುವರಿಸಿತು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಾರಣಾಸಿಯಲ್ಲಿ 'ಮೈಸೂರು ಛತ್ರ'ಗಳನ್ನು ಸ್ಥಾಪಿಸಿ, ಮುಜರಾಯಿ ಇಲಾಖೆಯ ಮೂಲಕ ಯಾತ್ರಿಕರಿಗೆ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತಿತ್ತು.

ಅಹಲ್ಯಾಬಾಯಿ ಹೋಳ್ಕರ್: ೧೮ನೇ ಶತಮಾನದ ಈಕೆಯ ಆಡಳಿತ ಕೇವಲ ಮಾಳವಕ್ಕೆ (ಇಂದೋರ್) ಸೀಮಿತವಾಗಿದ್ದರೂ, ತನ್ನ ರಾಜ್ಯದ ಬೊಕ್ಕಸದ ಹಣದಿಂದ ಉತ್ತರದ ಕೇದಾರನಾಥ, ಕಾಶಿ, ಪಶ್ಚಿಮದ ಸೋಮನಾಥ, ದ್ವಾರಕೆಯಿಂದ ಹಿಡಿದು ದಕ್ಷಿಣದ ರಾಮೇಶ್ವರಂ, ಶ್ರೀಶೈಲ, ಗೋಕರ್ಣ, ಉಡುಪಿವರೆಗೂ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಧರ್ಮಶಾಲೆ ಕಟ್ಟಿಸಿದರು. ಮಧ್ಯಭಾರತದ ರಾಣಿಯೊಬ್ಬಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರಿಗಾಗಿ ಹಣ ಖರ್ಚು ಮಾಡಿದ್ದು ಕೃತಕ ಏಕತೆಯಲ್ಲ, ಬದಲಾಗಿ ಸಾವಿರಾರು ವರ್ಷಗಳ ರಕ್ತಸಂಬಂಧದ ಸಾಂಸ್ಕೃತಿಕ ಬೆಸುಗೆ.

ತೀರ್ಥಯಾತ್ರೆ ಮತ್ತು ಮಂತ್ರಗಳಲ್ಲಿ ಭಾರತದ ಸ್ಮರಣೆ

ಯಾವುದೇ ಪಾಸ್‌ಪೋರ್ಟ್, ಸಂವಿಧಾನಗಳಿಲ್ಲದ ಕಾಲದಲ್ಲಿ ಪಾಕಿಸ್ತಾನದ 'ಹಿಂಗ್ಲಾಜ್ ಮಾತಾ'ದಿಂದ ಅಸ್ಸಾಂನ ಕಾಮಾಕ್ಯದವರೆಗಿನ ೫೧ ಶಕ್ತಿಪೀಠಗಳು ಹಾಗೂ ೧೨ ಜ್ಯೋತಿರ್ಲಿಂಗಗಳು ದೇಶವನ್ನು ಅಗೋಚರ ಜಾಲದಲ್ಲಿ ಒಗ್ಗೂಡಿಸಿದ್ದವು. ಕನ್ನಡಿಗನೊಬ್ಬ ಕಾಶಿಗೆ ಹೋಗಿ ಗಂಗಾಜಲ ತಂದು ರಾಮೇಶ್ವರಂ ಶಿವನಿಗೆ ಅರ್ಪಿಸುವುದು ಅತ್ಯುನ್ನತ ಸಾಂಸ್ಕೃತಿಕ ಪ್ರವಾಸೋದ್ಯಮವಾಗಿತ್ತು.

ದೈನಂದಿನ ಆಚರಣೆಯಲ್ಲೂ ಭೂಗೋಳ ಅಡಗಿದೆ:

"ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ..." ಎನ್ನುತ್ತಾ ದಕ್ಷಿಣ-ಉತ್ತರದ ನದಿಗಳನ್ನು ಒಟ್ಟಾಗಿ ಸ್ಮರಿಸಲಾಗುತ್ತದೆ.

"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ..." ಶ್ಲೋಕವು ಅಯೋಧ್ಯೆಯಿಂದ ಕಾಂಚೀಪುರದವರೆಗಿನ ಮೋಕ್ಷದಾಯಕ ನಗರಗಳನ್ನು ಒಂದೇ ದಾರದಲ್ಲಿ ಪೋಣಿಸುತ್ತದೆ. ಪೂಜೆಯ ಸಂಕಲ್ಪದಲ್ಲಿ ಇಂದಿಗೂ ಪುರೋಹಿತರು "ಜಂಬೂದ್ವೀಪೇ, ಭರತವರ್ಷೇ, ಭರತಖಂಡೇ..." ಎಂದು ಹೇಳಿಸಿಯೇ ಸಂಕಲ್ಪ ಮಾಡಿಸುತ್ತಾರೆ.

ಉಪಸಂಹಾರ

ಪಾಶ್ಚಾತ್ಯರಿಗೆ 'ನೇಷನ್' ಅಥವಾ 'ರಾಷ್ಟ್ರ' ಎಂದರೆ ಕೇವಲ ಭೌಗೋಳಿಕ ಗಡಿ ಮತ್ತು ರಾಜಕೀಯ ಒಪ್ಪಂದ. ಈ ಸಂಕುಚಿತ ಮಾನದಂಡದಿಂದಲೇ ಭಾರತವನ್ನು ಅಳೆಯಲು ಹೋಗಿ ವಸಾಹತುಶಾಹಿ ಹಾಗೂ ಕಮ್ಯುನಿಸ್ಟ್ ಚಿಂತಕರು ಎಡವಿದರು. ಆದರೆ ಭಾರತೀಯರಿಗೆ ರಾಷ್ಟ್ರವೆಂದರೆ 'ನಾಗರಿಕತೆಯ ರಾಷ್ಟ್ರ' (Civilizational State)—ಅದೊಂದು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅನುಭೂತಿ.

ಬ್ರಿಟಿಷರು ಭಾರತಕ್ಕೆ ಕೇವಲ ಆಡಳಿತಾತ್ಮಕ ಏಕರೂಪತೆಯನ್ನು ತಂದರೇ ಹೊರತು, ಅವರೆಂದೂ 'ಭಾರತ' ಎಂಬ ದೇಶವನ್ನು ಸೃಷ್ಟಿಸಲಿಲ್ಲ. ಭಾರತದ ಆತ್ಮ ಸಿಂಧೂ-ಸರಸ್ವತಿ ನಾಗರೀಕತೆ ಹಾಗೂ ವೇದಗಳ ಕಾಲದಿಂದಲೇ ಒಂದಾಗಿತ್ತು ಮತ್ತು ಅದು ಭಕ್ತಿ, ಯಾತ್ರೆ, ಶರಣರ ಕ್ರಾಂತಿ, ದೈನಂದಿನ ಮಂತ್ರಗಳು, ಶಾಸನಗಳು, ಸಾಹಿತ್ಯ ಹಾಗೂ ಅಹಲ್ಯಾಬಾಯಿಯಂತಹವರ ನೀತಿಗಳ ಮೂಲಕ ನಿರಂತರವಾಗಿ ಹರಿಯುತ್ತಲೇ ಇತ್ತು. ಇಂತಹ ಆಂತರಿಕ ಸಾಂಸ್ಕೃತಿಕ ಬೆಸುಗೆ ಇಲ್ಲದಿದ್ದರೆ, ಕೇವಲ ರೈಲ್ವೆ ಲೈನ್‌ಗಳು ಮತ್ತು ಏಕರೂಪ ಕಾನೂನುಗಳು ಇಷ್ಟೊಂದು ವೈವಿಧ್ಯಮಯ ಜನರನ್ನು ಒಂದಾಗಿಸಲು ಸಾಧ್ಯವಿರಲಿಲ್ಲ. ಎಷ್ಟೇ ರಾಜಕೀಯ ವಿಭಜನೆಗಳಿದ್ದರೂ, 'ಭಾರತ' ನಾಗರಿಕತೆಯ ದೃಷ್ಟಿಯಿಂದ ಸದಾ ಒಂದೇ ಅಖಂಡ ರಾಷ್ಟ್ರ.

✍️ಕಿರಣ್ ಬಿ.