ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಅದ್ವಿತೀಯವಾದದ್ದು. 1857ರ ಪ್ರಥಮ ಸಶಸ್ತ್ರ ಸಂಗ್ರಾಮದ ನಂತರವೂ ಬ್ರಿಟಿಷರ ವಿರುದ್ಧದ ಹೋರಾಟದ ಕಿಚ್ಚು ಆರಿರಲಿಲ್ಲ. ಪಂಜಾಬ್‌ನ 'ಕೂಕ ಚಳುವಳಿ'ಯಿಂದ ಹಿಡಿದು, ಮಹಾರಾಷ್ಟ್ರದಲ್ಲಿ ವಾಸುದೇವ ಬಲವಂತ ಫಡ್ಕೆಯವರ ಸಶಸ್ತ್ರ ಹೋರಾಟದವರೆಗೆ ಕ್ರಾಂತಿಯ ಜ್ವಾಲೆ ಉರಿಯುತ್ತಲೇ ಇತ್ತು. ಗದರ್ ಚಳುವಳಿ ಹಾಗೂ ಭಗತ್ ಸಿಂಗ್ ನೇತೃತ್ವದ 'ಎಚ್.ಎಸ್.ಆರ್.ಎ' (HSRA) ಸಂಘಟನೆಯ ಹೋರಾಟಗಳು ಯುವಕರಲ್ಲಿ ಕ್ರಾಂತಿಯ ಮನೋಭಾವವನ್ನು ಜೀವಂತವಾಗಿಟ್ಟಿದ್ದವು. ಮುಂದೆ ನೇತಾಜಿ ಸುಭಾಷ್ ಚಂದ್ರ ಬೋಸರ ಐ.ಎನ್.ಎ (INA) ಸಶಸ್ತ್ರ ಹೋರಾಟ ಹಾಗೂ 1946ರ ನೌಕಾ ದಂಗೆಯು ಬ್ರಿಟಿಷರ ಬೆನ್ನೆಲುಬು ಮುರಿದು, ಅವರು ಭಾರತವನ್ನು ಬಿಟ್ಟು ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವು.

ಈ ಕ್ರಾಂತಿಕಾರಿ ಪರಂಪರೆಯ ನಡುವೆ, 1942ರಲ್ಲಿ ಗಾಂಧೀಜಿಯವರು ನೀಡಿದ "ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಕರೆ ಇಡೀ ದೇಶದಲ್ಲಿ ಹೊಸ ಸಂಚಲನ ಮೂಡಿಸಿತು. ಗಾಂಧೀಜಿಯವರ ಕರೆಯಿಂದ ಪ್ರೇರಿತರಾದರೂ, ಕ್ರಾಂತಿಕಾರಿ ಮನೋಭಾವದ ಅನೇಕ ಯುವಕರು ಬ್ರಿಟಿಷರ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನೇರ ಹೋರಾಟಕ್ಕಿಳಿದರು. ನಮ್ಮ ಹಿಂದಿನ ಲೇಖನದಲ್ಲಿ 'ಕರ್ನಾಟಕದ ಭಗತ್ ಸಿಂಗ್' ಎಂದೇ ಖ್ಯಾತರಾದ ಮೈಲಾರ ಮಹದೇವಪ್ಪನವರ ಕೆಚ್ಚೆದೆಯ ಹೋರಾಟದ ಬಗ್ಗೆ ತಿಳಿದಿದ್ದೆವು. ಅದೇ 1942ರ ಸಮಯದಲ್ಲಿ ಕರ್ನಾಟಕದಲ್ಲಿ ನಡೆದ ಮತ್ತೊಂದು ರೋಮಾಂಚಕ ಐತಿಹಾಸಿಕ ಘಟನೆಯೆಂದರೆ ಶಿವಮೊಗ್ಗ ಜಿಲ್ಲೆಯ 'ಈಸೂರು ಬಂಡಾಯ'. ಬ್ರಿಟಿಷರು ದೇಶ ಬಿಟ್ಟು ಹೋಗುವ ಮುನ್ನವೇ, ತಮ್ಮ ಹಳ್ಳಿಯನ್ನು 'ಸ್ವತಂತ್ರ' ಎಂದು ಘೋಷಿಸಿಕೊಂಡು ನಗುನಗುತ್ತಾ ಪ್ರಾಣತ್ಯಾಗ ಮಾಡಿದ ಈಸೂರು ಕ್ರಾಂತಿವೀರರ ರೋಚಕ ಕಥೆ ಇಲ್ಲಿದೆ. 

ಬ್ರಿಟಿಷರ ಎದೆನಡುಗಿಸಿದ ಶಿವಮೊಗ್ಗದ ಸಣ್ಣ ಹಳ್ಳಿ

1942ರ ಆಗಸ್ಟ್ 9ರಂದು ಗಾಂಧೀಜಿಯವರು ಬ್ರಿಟಿಷರಿಗೆ "ಭಾರತ ಬಿಟ್ಟು ತೊಲಗಿ" ಎಂದು ಗುಡುಗಿದ ಮರುದಿನವೇ, ದೇಶದ ಎಲ್ಲಾ ಪ್ರಮುಖ ನಾಯಕರನ್ನು ಬ್ರಿಟಿಷ್ ಸರ್ಕಾರ ಜೈಲಿಗೆ ತಳ್ಳಿತು. ನಾಯಕರೇ ಇಲ್ಲದ ಆ ಸಮಯದಲ್ಲಿ ಸಾಮಾನ್ಯ ರೈತರು, ಯುವಕರು ಮತ್ತು ವಿದ್ಯಾರ್ಥಿಗಳೇ ನಾಯಕರಾಗಿ ಬೀದಿಗಿಳಿದರು.

ಇದೇ ಸಮಯದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ 'ಈಸೂರು' ಎಂಬ ಸಣ್ಣ ಗ್ರಾಮವೊಂದು ಇಡೀ ದೇಶವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಹಸವೊಂದಕ್ಕೆ ಕೈಹಾಕಿತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ಸರಿಸುಮಾರು 5 ವರ್ಷಗಳ ಮುಂಚೆಯೇ, "ನಮ್ಮ ಹಳ್ಳಿಗೆ ನಾವೇ ಒಡೆಯರು, ಬ್ರಿಟಿಷರ ಆಡಳಿತ ನಮಗೆ ಅನ್ವಯಿಸುವುದಿಲ್ಲ" ಎಂದು ಘೋಷಿಸಿ ತಮ್ಮ ಹಳ್ಳಿಯನ್ನು 'ಸ್ವತಂತ್ರ' ಎಂದು ಸಾರಿದರು! ಇದು ಭಾರತದ ಇತಿಹಾಸದಲ್ಲಿಯೇ ಬ್ರಿಟಿಷರ ವಿರುದ್ಧ ನಿರ್ಮಾಣವಾದ ಮೊಟ್ಟಮೊದಲ "ಸಮಾನಾಂತರ ಸರ್ಕಾರ".

"ಏಸೂರು ಕೊಟ್ಟರೂ ಈಸೂರು ಬಿಡೆವು": ಕ್ರಾಂತಿಯ ಕಿಚ್ಚು

ಈಸೂರು ಒಂದು ಕೃಷಿ ಪ್ರಧಾನವಾದ, ಆರ್ಥಿಕವಾಗಿ ಸದೃಢವಾಗಿದ್ದ ಹಳ್ಳಿ. ಅಲ್ಲಿನ ಪ್ರಮುಖ ನಾಯಕರಾಗಿದ್ದ ಸಾಹುಕಾರ್ ಬಸವಣ್ಣೆಪ್ಪ ಅವರ ಪ್ರೇರಣೆಯಿಂದ ಇಡೀ ಹಳ್ಳಿಯ ಜನ ಖಾದಿ ಧರಿಸಲಾರಂಭಿಸಿದರು ಮತ್ತು ಬ್ರಿಟಿಷ್ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿದರು.

1942ರ ಆಗಸ್ಟ್ ತಿಂಗಳಲ್ಲಿ ಈಸೂರಿನ ಗ್ರಾಮಸ್ಥರು ಒಂದೆಡೆ ಸೇರಿ ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಕಟ್ಟದಿರಲು ತೀರ್ಮಾನಿಸಿದರು. ಊರಿನ ಗೌಡರು ಮತ್ತು ಶಾನುಭೋಗರಿಂದ ಕಂದಾಯದ ಪುಸ್ತಕಗಳನ್ನು ಕಸಿದುಕೊಂಡರು. ಊರಿನ ಪ್ರವೇಶ ದ್ವಾರದಲ್ಲಿ "ಸ್ವರಾಜ್ ಸರ್ಕಾರ - ಬ್ರಿಟಿಷ್ ಅಧಿಕಾರಿಗಳಿಗೆ ಪ್ರವೇಶವಿಲ್ಲ" ಎಂಬ ಬೋರ್ಡ್ ತೂಗುಹಾಕಿದರು.

ಬ್ರಿಟಿಷ್ ಸರ್ಕಾರವನ್ನು ಅಣಕಿಸಲು ಮತ್ತು ಕಾನೂನಿನಿಂದ ತಪ್ಪಿಸಿಕೊಳ್ಳಲು ಊರಿನ ಚಿಕ್ಕ ಮಕ್ಕಳನ್ನೇ ಅಧಿಕಾರಿಗಳನ್ನಾಗಿ ನೇಮಿಸಲಾಯಿತು.

  • 16 ವರ್ಷದ ಜಯಣ್ಣನನ್ನು ಊರಿನ 'ಅಮಲ್ದಾರ' (ತಹಸೀಲ್ದಾರ್) ಆಗಿ ನೇಮಿಸಲಾಯಿತು.
  • ಮಲ್ಲಪ್ಪನನ್ನು 'ಪೊಲೀಸ್ ಇನ್ಸ್‌ಪೆಕ್ಟರ್' ಆಗಿ ನೇಮಿಸಿ, ಅವರಿಗೆ ಖಾದಿ ಬಟ್ಟೆ ತೊಡಿಸಿ ಆಡಳಿತ ನಡೆಸಲು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಮೂಲೆಮೂಲೆಗಳಲ್ಲಿ ಮೊಳಗಿದ ಬಂಡಾಯದ ಘೋಷಣೆಯೇ—"ಏಸೂರು ಕೊಟ್ಟರೂ, ನಮ್ಮ ಈಸೂರು ಬಿಡೆವು!"

ಸೆಪ್ಟೆಂಬರ್ 28, 1942: ರಕ್ತಪಾತದ ಕರಾಳ ದಿನ

ಈಸೂರಿನ ಈ ದಂಗೆಯ ಸುದ್ದಿ ಬ್ರಿಟಿಷ್ ಸರ್ಕಾರವನ್ನು ಕೆರಳಿಸಿತು. ಬಲವಂತವಾಗಿ ಕಂದಾಯ ವಸೂಲಿ ಮಾಡಲು ಸೆಪ್ಟೆಂಬರ್ 28ರಂದು ಶಿಕಾರಿಪುರದ ಅಮಲ್ದಾರ ಚೆನ್ನಪ್ಪ ಕೃಷ್ಣಪ್ಪ ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಕೆಂಚಪ್ಪ ಗೌಡ ತಮ್ಮ ಪಡೆಯೊಂದಿಗೆ ಈಸೂರಿಗೆ ಆಗಮಿಸಿದರು.

ಅಧಿಕಾರಿಗಳನ್ನು ಊರ ಬಾಗಿಲಲ್ಲೇ ತಡೆದ ಬಾಲ ಅಧಿಕಾರಿಗಳು, "ಗಾಂಧಿ ಟೋಪಿ ಧರಿಸಿ, ಕಂದಾಯ ಪುಸ್ತಕಗಳನ್ನು ನಮಗೆ ಒಪ್ಪಿಸಿ" ಎಂದು ಆದೇಶಿಸಿದರು. ಅಪ್ರಾಪ್ತ ಬಾಲಕರು ತಮಗೆ ಆದೇಶ ನೀಡಿದ್ದನ್ನು ಕಂಡು ಕೆರಳಿದ ಸಬ್-ಇನ್ಸ್‌ಪೆಕ್ಟರ್ ಕೆಂಚಪ್ಪ ಗೌಡ ಮಕ್ಕಳ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡು ಹಾರಿಸಲು ಮುಂದಾದನು. ಮಕ್ಕಳ ಮೇಲಿನ ಹಲ್ಲೆಯನ್ನು ಕಂಡು ರೊಚ್ಚಿಗೆದ್ದ ಈಸೂರಿನ ರೈತರು ಅಧಿಕಾರಿಗಳ ಮೇಲೆ ಭೀಕರ ದಾಳಿ ನಡೆಸಿದರು; ಈ ರಕ್ತದೋಕುಳಿಯಲ್ಲಿ ಅಮಲ್ದಾರ ಮತ್ತು ಸಬ್-ಇನ್ಸ್‌ಪೆಕ್ಟರ್ ಇಬ್ಬರೂ ಸ್ಥಳದಲ್ಲೇ ಹತರಾದರು.

ಬ್ರಿಟಿಷರ ಕ್ರೂರ ಸೇಡು ಮತ್ತು ಐವರು ಕ್ರಾಂತಿವೀರರ ಬಲಿದಾನ

ತಮ್ಮ ಅಧಿಕಾರಿಗಳ ಹತ್ಯೆಯ ಸೇಡು ತೀರಿಸಿಕೊಳ್ಳಲು ಮರುದಿನವೇ ಬ್ರಿಟಿಷ್ ಸೇನೆ ಇಡೀ ಊರಿನ ಮೇಲೆ ಎರಗಿ, ಸಿಕ್ಕಸಿಕ್ಕವರನ್ನು ಬಂಧಿಸಿ, ಮನೆಗಳಿಗೆ ಬೆಂಕಿ ಹಚ್ಚಿ ಕ್ರೂರವಾಗಿ ದಮನ ಮಾಡಿತು.

ಬಂಧಿತರಾದವರ ಮೇಲೆ ದೇಶದ್ರೋಹ ಮತ್ತು ಕೊಲೆಯ ಮೊಕದ್ದಮೆ ಹೂಡಲಾಯಿತು. ವಿಚಾರಣೆಯ ನಂತರ ಬ್ರಿಟಿಷ್ ಸರ್ಕಾರವು ಹಳ್ಳಿಯ 5 ಜನ ಪ್ರಮುಖ ಯುವಕರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಆ ಐವರು ಮರೆಯಲಾಗದ ವೀರರೆಂದರೆ:

  • ಗುರಪ್ಪ
  • ಮಲ್ಲಪ್ಪ
  • ಸೂರ್ಯನಾರಾಯಣಾಚಾರ್
  • ಹಾಲಪ್ಪ
  • ಶಂಕರಪ್ಪ ಗೌಡ

1943ರ ಮಾರ್ಚ್ 8, 9 ಮತ್ತು 10ರಂದು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಈ ಐವರನ್ನೂ ಹಂತ ಹಂತವಾಗಿ ನೇಣಿಗೇರಿಸಲಾಯಿತು. "ವಂದೇ ಮಾತರಂ", "ಮಹಾತ್ಮಾ ಗಾಂಧೀ ಕೀ ಜೈ", "ಸ್ವತಂತ್ರ ಈಸೂರು ಚಿರಾಯುವಾಗಲಿ" ಎಂದು ಅಬ್ಬರದ ಘೋಷಣೆ ಕೂಗುತ್ತಾ, ನಗುನಗುತ್ತಲೇ ಅವರು ತಾಯ್ನಾಡಿಗೆ ಪ್ರಾಣ ಅರ್ಪಿಸಿದರು. ಸ್ವತಃ ಸುಭಾಷ್ ಚಂದ್ರ ಬೋಸ್ ಅವರು ತಮ್ಮ 'ಆಜಾದ್ ಹಿಂದ್ ರೇಡಿಯೋ' ಭಾಷಣದಲ್ಲಿ ಈಸೂರಿನ ರೈತರ ಕೆಚ್ಚೆದೆಯ ಹೋರಾಟವನ್ನು ಶ್ಲಾಘಿಸಿದ್ದರು. ಅಂದು ಗಲ್ಲಿಗೇರಿದ ಆ ಐವರು ಯುವಕರ ಬಲಿದಾನ ಇಂದಿಗೂ ಸ್ವಾಭಿಮಾನದ ಗೀತೆಯಾಗಿ ಮೊಳಗುತ್ತಿದೆ.

✍🏼 ಕಿರಣ್ ಬಿ