ಹೈದರಾಬಾದ್ ವಿಮೋಚನೆ: ರಜಾಕಾರರ ಕ್ರೌರ್ಯದ ವಿರುದ್ಧ ಸಿಡಿದೆದ್ದ ಸ್ವಾಭಿಮಾನದ ಕಥೆ
ಆಗಸ್ಟ್ 15, 1947ರಂದು ಇಡೀ ಭಾರತ ದಾಸ್ಯದ ಸರಪಳಿ ಕಳಚಿ ತ್ರಿವರ್ಣ ಧ್ವಜದೊಂದಿಗೆ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ, ಅಖಂಡ ಭಾರತದ ಹೃದಯಭಾಗದಲ್ಲಿದ್ದ ಹೈದರಾಬಾದ್ ಸಂಸ್ಥಾನ ಮಾತ್ರ ಗುಲಾಮಗಿರಿಯ ಕೂಪವಾಗಿತ್ತು. ಅಲ್ಲಿ 'ಸ್ವಾತಂತ್ರ್ಯ' ಎಂಬ ಪದವೇ ಮರಣಶಾಸನವಾಗಿತ್ತು. ಇಂದಿನ ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ನಿಜಾಮನ ಬೆಂಬಲಿತ ಖಾಸಿಂ ರಜ್ವಿಯ 'ರಜಾಕಾರರ' ಬಂದೂಕುಗಳು ಮುಗ್ಧರ ಮೇಲೆ ಬೆಂಕಿ ಉಗುಳುತ್ತಿದ್ದವು. ಕನ್ನಡ ಮಾತನಾಡಿದರೆ ಜೈಲು, ತ್ರಿವರ್ಣ ಧ್ವಜ ಹಿಡಿದರೆ ಮರಣದಂಡನೆ, ಬೆತ್ತಲಾದ ಮಹಿಳೆಯರ ರೋದನ, ಸುಟ್ಟ ಹಳ್ಳಿಗಳು ಮತ್ತು 'ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರ' ಕಟ್ಟುವ ನಿಜಾಮನ ಅಟ್ಟಹಾಸ ಅಂದಿನ ಕರಾಳ ವಾಸ್ತವವಾಗಿತ್ತು.
ಆದರೆ ರಜಾಕಾರರ ಅತ್ಯಾಧುನಿಕ ಬಂದೂಕುಗಳ ಎದುರು ಈ ಮಣ್ಣಿನ ಮಕ್ಕಳು ಕತ್ತಿ, ದೊಣ್ಣೆ ಹಿಡಿದು ಸ್ವಾಭಿಮಾನಕ್ಕಾಗಿ ಸಿಡಿದೆದ್ದರು. ಬರೋಬ್ಬರಿ 398 ದಿನಗಳ (13 ತಿಂಗಳು) ಜನರ ರಕ್ತಸಿಕ್ತ ಬಲಿದಾನ ಮತ್ತು ಸರ್ದಾರ್ ಪಟೇಲರ ಉಕ್ಕಿನ ನಿರ್ಧಾರದ ಫಲವೇ ಸೆಪ್ಟೆಂಬರ್ 17, 1948. ಕಲ್ಯಾಣ ಕರ್ನಾಟಕದ ಜನತೆಗೆ ಅಂದೇ ನಿಜವಾದ ಸ್ವಾತಂತ್ರ್ಯದ ಸೂರ್ಯೋದಯ! ಇದು ಕೇವಲ ಒಂದು ಪ್ರಾಂತ್ಯದ ವಿಮೋಚನೆಯಲ್ಲ; ಅಸ್ಮಿತೆಗಾಗಿ ಪ್ರಾಣತೆತ್ತ ಅಸಂಖ್ಯಾತ ಅನಾಮಿಕ ವೀರರ ರೋಮಹರ್ಷಕ ಚರಿತ್ರೆ.
ನಿಜಾಮನ ಭ್ರಮೆ ಮತ್ತು ರಜಾಕಾರರ ಅಟ್ಟಹಾಸ
ಭಾರತವು ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ, ಹೈದರಾಬಾದ್‌ನ ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಮಾತ್ರ 'ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರ' ಕಟ್ಟುವ ಹಗಲುಗನಸು ಕಾಣುತ್ತಿದ್ದನು. ನವೆಂಬರ್ 1947ರಲ್ಲಿ ಭಾರತ ಸರ್ಕಾರದೊಂದಿಗೆ ಆತ 'ಯಥಾಸ್ಥಿತಿ ಒಪ್ಪಂದ'ಕ್ಕೆ ಸಹಿ ಹಾಕಿದನಾದರೂ, ಆತನ ಅಸಲಿ ಉದ್ದೇಶ ಶಾಂತಿ ಕಾಪಾಡುವುದಾಗಿರಲಿಲ್ಲ. ಬದಲಾಗಿ, ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳಲು ಮತ್ತು ಆಸ್ಟ್ರೇಲಿಯಾದ ಪೈಲಟ್ ಸಿಡ್ನಿ ಕಾಟನ್‌ನ ನೆರವಿನೊಂದಿಗೆ ಪಾಕಿಸ್ತಾನದಿಂದ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಆತ ಹೆಣೆದ ಕುತಂತ್ರದ ನಾಟಕವಾಗಿತ್ತು.
ನಿಜಾಮನ ಈ ಅಹಂಕಾರಕ್ಕೆ ಬೆಂಕಿಯಂತೆ ಜೊತೆಯಾದವನೇ ಕುಖ್ಯಾತ ಮತಾಂಧ ಖಾಸಿಂ ರಜ್ವಿ. ಆತ 'ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್' (MIM) ಪಕ್ಷದ ಮುಖವಾಣಿಯಾಗಿ 'ರಜಾಕಾರರು' ಎಂಬ ಬೃಹತ್ ಖಾಸಗಿ ಫ್ಯಾಸಿಸ್ಟ್ ಸೈನ್ಯವನ್ನು ಕಟ್ಟಿದನು. ಉರ್ದುವಿನಲ್ಲಿ ರಜಾಕಾರ್ ಎಂದರೆ 'ಸ್ವಯಂಸೇವಕ', ಆದರೆ ಆಚರಣೆಯಲ್ಲಿ ಇವರು ರಕ್ತಪಿಪಾಸುಗಳಾಗಿದ್ದರು. ಈ ಪಡೆಯ ಸಂಖ್ಯೆ ಬರೋಬ್ಬರಿ 2 ಲಕ್ಷವನ್ನು ದಾಟಿತ್ತು! "ಅನಲ್ ಮಲಿಕ್" (ನಾವೇ ಆಡಳಿತಗಾರರು) ಎಂಬ ಉನ್ಮಾದದ ಘೋಷಣೆಯೊಂದಿಗೆ ಇಡೀ ದಕ್ಷಿಣ ಭಾರತವನ್ನು ಇಸ್ಲಾಮಿಕರಣಗೊಳಿಸುವ ಹುಚ್ಚು ಸಾಹಸಕ್ಕೆ ರಜ್ವಿ ಕೈಹಾಕಿದ್ದನು.
ರಜಾಕಾರರ ಅಟ್ಟಹಾಸ ಶುರುವಾಗಿದ್ದೇ ಸಾಂಸ್ಕೃತಿಕ ದಬ್ಬಾಳಿಕೆಯ ಮೂಲಕ. ಶೇ. 80ರಷ್ಟಿದ್ದ ಕನ್ನಡ, ತೆಲುಗು ಮತ್ತು ಮರಾಠಿ ಭಾಷಿಕರ ಮೇಲೆ ಬಲವಂತವಾಗಿ 'ಉರ್ದು'ಹೇರಲಾಯಿತು. ಕನ್ನಡದ ಶಾಲೆಗಳನ್ನು ಮುಚ್ಚಿಸಲಾಯಿತು. ತಮ್ಮ ಬೃಹತ್ ಸೈನ್ಯವನ್ನು ಸಾಕಲು ರಜಾಕಾರರು ಹಳ್ಳಿಹಳ್ಳಿಗಳಿಗೆ ನುಗ್ಗಿ ಜಮೀನ್ದಾರರು, ವ್ಯಾಪಾರಿಗಳು ಮತ್ತು ಬಡ ರೈತರಿಂದ ಹಣ, ದವಸ-ಧಾನ್ಯಗಳನ್ನು ಸುಲಿಗೆ ಮಾಡತೊಡಗಿದರು. ಇದನ್ನು ಪ್ರಶ್ನಿಸಿದವರ ರುಂಡಗಳು ಕ್ಷಣಾರ್ಧದಲ್ಲಿ ದೇಹದಿಂದ ಬೇರೆಯಾಗುತ್ತಿದ್ದವು. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚುವುದು, ದೇವಸ್ಥಾನಗಳನ್ನು ಧ್ವಂಸ ಮಾಡುವುದು ಮತ್ತು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರವೆಸಗುವಂತಹ ಅಮಾನುಷ ಕೃತ್ಯಗಳು ದೈನಂದಿನ ಸುದ್ದಿಯಾದವು. ಪ್ರಾಣಭೀತಿಯಿಂದಾಗಿ ನೂರಾರು ಮಹಿಳೆಯರು ಬಾವಿಗೆ ಹಾರಿ ಜೀವ ಕಳೆದುಕೊಂಡರು.
ರಜಾಕಾರರ ಈ ಪೈಶಾಚಿಕ ಕ್ರೌರ್ಯಕ್ಕೆ ಕನ್ನಡಿಯಂತಿರುವ ಘಟನೆಯೇ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ 'ಗೋರ್ಟಾ (ಬಿ)' ಗ್ರಾಮದ ಹತ್ಯಾಕಾಂಡ. ಮೇ 1948ರಲ್ಲಿ ಗೋರ್ಟಾ ಗ್ರಾಮದ ಮೇಲೆ ಎರಗಿದ ರಜಾಕಾರರ ಪಡೆ, ತಮ್ಮನ್ನು ವಿರೋಧಿಸಿದ 200ಕ್ಕೂ ಹೆಚ್ಚು ಮುಗ್ಧ ಹಳ್ಳಿಗರನ್ನು ಮರಗಳಿಗೆ ಕಟ್ಟಿಹಾಕಿ ಕಗ್ಗೊಲೆ ಮಾಡಿತು. ಇಡೀ ಊರಿಗೆ ಊರನ್ನೇ ಸುಟ್ಟು ಭಸ್ಮ ಮಾಡಲಾಯಿತು. ಹೆಣಗಳ ರಾಶಿಗಳ ಮೇಲೆ ಹದ್ದುಕಾಗೆಗಳು ಹಾರಾಡುತ್ತಿದ್ದ ಆ ಭೀಕರ ದೃಶ್ಯವನ್ನು ಕಂಡು ಮರುಗಿದ ಅಂದಿನ ಭಾರತದ ಏಜೆಂಟ್ ಜನರಲ್ ಕೆ.ಎಂ. ಮುನ್ಷಿ ಅವರು, ಆ ಊರನ್ನು "ಹೈದರಾಬಾದಿನ ಜಲಿಯನ್ ವಾಲಾಬಾಗ್" ಎಂದು ಕರೆದು ಕಂಬನಿ ಮಿಡಿದರು.
ಸಿಡಿದೆದ್ದ ಜನಸಾಮಾನ್ಯರು
ಸಾವಿನ ನೆರಳು ಇಡೀ ಕಲ್ಯಾಣ ಕರ್ನಾಟಕವನ್ನು ಆವರಿಸಿಕೊಂಡಿತ್ತು. ಆದರೆ, ಎಲ್ಲಿ ದಬ್ಬಾಳಿಕೆ ಇರುತ್ತದೆಯೋ ಅಲ್ಲಿ ಕ್ರಾಂತಿಯ ಕಿಡಿಯೂ ಒಡೆಯುತ್ತದೆ. ರಜಾಕಾರರ ಈ ರಕ್ತದೋಕುಳಿಯ ನಡುವೆಯೂ ಜನಸಾಮಾನ್ಯರು ಸಿಡಿದೆದ್ದರು. ಇದು ಕೇವಲ ಬೆರಳೆಣಿಕೆಯ ನಾಯಕರ ಹೋರಾಟವಾಗಿರದೆ; ರೈತರು, ವಿದ್ಯಾರ್ಥಿಗಳು, ಕಾರ್ಮಿಕರು,ಮಹಿಳೆಯರು ಮತ್ತು ಮಠಮಾನ್ಯರು ಒಗ್ಗೂಡಿ ನಡೆಸಿದ ಅಭೂತಪೂರ್ವ ಜನಪರ ಕ್ರಾಂತಿಯಾಗಿತ್ತು.
- ಗಾಂಧೀವಾದಿ ಹೋರಾಟ: ವಿಜಯಪುರದ ಸಿಂದಗಿ ಮೂಲದ ಕಟ್ಟಾ ಗಾಂಧೀವಾದಿ 'ಸ್ವಾಮಿ ರಮಾನಂದ ತೀರ್ಥ'ರು ಹೈದರಾಬಾದ್ ಸ್ಟೇಟ್ ಕಾಂಗ್ರೆಸ್ ಮೂಲಕ ಹೋರಾಟದ ಚುಕ್ಕಾಣಿ ಹಿಡಿದರು. 'ಭಾರತದ ಒಕ್ಕೂಟ ಸೇರಿ' ಎಂಬ ಅಭಿಯಾನದಡಿ ಅಹಿಂಸಾತ್ಮಕ ಸತ್ಯಾಗ್ರಹಗಳನ್ನು ಮುನ್ನಡೆಸಿದ ಅವರು ನಿಜಾಮನ ಜೈಲಿನಲ್ಲಿ 111 ದಿನಗಳ ಕಠಿಣ ಶಿಕ್ಷೆ ಅನುಭವಿಸಿದರು. ನಾಯಕರ ಬಂಧನದಿಂದ ಜನಾಕ್ರೋಶ ಮತ್ತಷ್ಟು ಭುಗಿಲೆದ್ದಿತು.
- ಆರ್ಯ ಸಮಾಜದ ಪಾತ್ರ: ನಿಜಾಮನ ಉರ್ದು ಹೇರಿಕೆ ಮತ್ತು ಮತಾಂತರ ನೀತಿಯ ವಿರುದ್ಧ ಆರ್ಯ ಸಮಾಜ ಸಿಡಿಗುಂಡಿನಂತೆ ಸಿಡಿಯಿತು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾರ್ಥನೆ ವೇಳೆ 'ವಂದೇ ಮಾತರಂ' ಹಾಡಿದ್ದಕ್ಕಾಗಿ ಹಿಂದೂ ವಿದ್ಯಾರ್ಥಿಗಳನ್ನು ಉಚ್ಚಾಟಿಸಿದಾಗ, ಆ ಗೀತೆಯೇ ಇಡೀ ಸಂಸ್ಥಾನದ ಕ್ರಾಂತಿಗೀತೆಯಾಗಿ ಮೊಳಗಿತು. ಯುವಕರಿಗೆ ಕೇವಲ ಭಾಷಣದ ಬದಲು, ಅಖಾಡಗಳಲ್ಲಿ ಲಾಠಿ, ಕತ್ತಿ ಮತ್ತು ಬಂದೂಕು ತರಬೇತಿ ನೀಡಿ ರಜಾಕಾರರ ವಿರುದ್ಧ ಭೌತಿಕ ಪ್ರತಿರೋಧಕ್ಕೆ ಸಜ್ಜುಗೊಳಿಸಲಾಯಿತು.
- ಮಠಗಳ ತ್ಯಾಗ ಮತ್ತು 'ರಾಯಚೂರಿನ ಸಿಂಹ':ಈ ರಕ್ತಸಿಕ್ತ ಹೋರಾಟದಲ್ಲಿ ಕಲ್ಯಾಣ ಕರ್ನಾಟಕದ ಲಿಂಗಾಯತ ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿ ಉಳಿಯದೆ, ಕ್ರಾಂತಿಕಾರಿಗಳಿಗೆ ಆಶ್ರಯ, ಅನ್ನ ಮತ್ತು ಆರ್ಥಿಕ ನೆರವು ನೀಡುವ ಭದ್ರಕೋಟೆಗಳಾದವು. 'ರಾಯಚೂರಿನ ಸಿಂಹ' ಎಂದೇ ಖ್ಯಾತರಾಗಿದ್ದ ಸರ್ದಾರ್ ಶರಣಗೌಡ ಪಾಟೀಲರು ಯುವಕರನ್ನು ಸಂಘಟಿಸಿ, ಹಳ್ಳಿಗಳಿಗೆ ನುಗ್ಗುತ್ತಿದ್ದ ರಜಾಕಾರರ ಎದೆಯಲ್ಲಿ ನಡುಕ ಹುಟ್ಟಿಸುವ ನೇರ ಸಶಸ್ತ್ರ ಹೋರಾಟಕ್ಕೆ ಇಳಿದರು.
- ಗಡಿ ಶಿಬಿರಗಳ ಸಾಹಸ: ರಜಾಕಾರರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು, ಆದರೆ ನಮ್ಮವರ ಬಳಿ ಬರಿಗೈಗಳಿದ್ದವು. ಇದನ್ನು ಅರಿತ ನಾಯಕರು ಹೈದರಾಬಾದ್ ಗಡಿಯಾಚೆಗೆ ರಹಸ್ಯ 'ಗಡಿ ಶಿಬಿರ'ಗಳನ್ನು ಸ್ಥಾಪಿಸಿದರು. ಗಡಿನಾಡ ಕನ್ನಡಿಗರ ನೆರವಿನಿಂದ ಮುಂಬೈನಿಂದ ಶಸ್ತ್ರಾಸ್ತ್ರಗಳನ್ನು ತಂದು, ಈ ಶಿಬಿರಗಳಲ್ಲಿ ಯುವಕರಿಗೆ ಗೆರಿಲ್ಲಾ ಯುದ್ಧ ತರಬೇತಿ ನೀಡಿ, ಮರಳಿ ನಿಜಾಮನ ಗಡಿಯೊಳಗೆ ನುಸುಳಿ ಮಿಂಚಿನ ದಾಳಿ ನಡೆಸುವ ವ್ಯವಸ್ಥಿತ ಜಾಲವನ್ನು ಹೆಣೆಯಲಾಯಿತು.
- ರಾಷ್ಟ್ರೀಯವಾದಿ ಮುಸಲ್ಮಾನರ ಹೋರಾಟ: ಈ ಹೋರಾಟ ಕೇವಲ ಎರಡು ಧರ್ಮಗಳ ನಡುವಿನ ಸಂಘರ್ಷವಾಗಿರಲಿಲ್ಲ ಎಂಬುದಕ್ಕೆ ರಾಷ್ಟ್ರೀಯವಾದಿ ಮುಸ್ಲಿಮರ ತ್ಯಾಗವೇ ಸಾಕ್ಷಿ. ನಿಜಾಮನ ದುರಾಡಳಿತ ಮತ್ತು ರಜಾಕಾರರ ಕ್ರೌರ್ಯವನ್ನು ಕಟುವಾಗಿ ಟೀಕಿಸಿ, ಭಾರತದ ಒಕ್ಕೂಟ ಸೇರುವಂತೆ ಆಗ್ರಹಿಸಿ ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದ ನಿರ್ಭೀತ ಪತ್ರಕರ್ತ 'ಶೋಯೆಬುಲ್ಲಾ ಖಾನ್' ಅವರನ್ನು ರಜಾಕಾರರು ನಡುರಸ್ತೆಯಲ್ಲಿ ಕೈ ಕತ್ತರಿಸಿ, ಬರ್ಬರವಾಗಿ ಹತ್ಯೆ ಮಾಡಿದರು.
ಉಕ್ಕಿನ ಮನುಷ್ಯನ ದಿಟ್ಟ ಹೆಜ್ಜೆ - 'ಆಪರೇಷನ್ ಪೋಲೊ'
ರಜಾಕಾರರ ಅಟ್ಟಹಾಸ ಮಿತಿಮೀರಿದಾಗ ಹೈದರಾಬಾದ್ ಅನ್ನು "ಭಾರತದ ಹೊಟ್ಟೆಯಲ್ಲಿರುವ ಕ್ಯಾನ್ಸರ್" ಎಂದು ಬಣ್ಣಿಸಿದ ಸರ್ದಾರ್ ಪಟೇಲರು ಸೇನಾ ದಾಳಿಗೆ ಅಖಾಡಕ್ಕಿಳಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಯುದ್ಧ ಎಂದು ಬಿಂಬಿತವಾಗಬಾರದು ಎಂಬ ಕಾರಣಕ್ಕೆ 'ಪೊಲೀಸ್ ಕಾರ್ಯಾಚರಣೆ'ಯ ಹೆಸರಿನಲ್ಲಿ, 'ಆಪರೇಷನ್ ಪೋಲೊ' ಕಾರ್ಯಾಚರಣೆಗೆ ಆದೇಶಿಸಿದರು.
ಸೆಪ್ಟೆಂಬರ್ 13, 1948ರ ಬೆಳಗಿನ ಜಾವ ಮೇಜರ್ ಜನರಲ್ ಜೆ.ಎನ್. ಚೌಧರಿ ನೇತೃತ್ವದಲ್ಲಿ ಭಾರತೀಯ ಸೇನೆ ದ್ವಿಮುಖ ದಾಳಿ ಆರಂಭಿಸಿತು. ಭಾರತದ ಟ್ಯಾಂಕರ್‌ಗಳ ಭೀಕರ ಮುನ್ನಡೆ ಕಂಡು ರಜಾಕಾರರು ದಿಕ್ಕೆಟ್ಟರು. ಪಾಕಿಸ್ತಾನದ ಸೇನಾ ನೆರವಿನ ಭ್ರಮೆಯಲ್ಲಿದ್ದ ನಿಜಾಮ ಹಾಗೂ ರಜ್ವಿಗೆ, ಜಿನ್ನಾ ಆಗಷ್ಟೇ ಮರಣಹೊಂದಿದ್ದರಿಂದ ಯಾವುದೇ ಸಹಾಯ ಸಿಗದೆ ಕೇವಲ 109 ಗಂಟೆಗಳಲ್ಲಿ ರಜಾಕಾರರ ಭದ್ರಕೋಟೆಗಳು ಪತನವಾದವು.
ಸೆಪ್ಟೆಂಬರ್ 17, 1948ರ ಸಂಜೆ 5 ಗಂಟೆಗೆ ನಿಜಾಮ ಶರಣಾಗುವುದರೊಂದಿಗೆ ಅಖಂಡ ಭಾರತದ ಕನಸು ನನಸಾಯಿತು. ಭಾರತ ಸರ್ಕಾರ ಸೇಡು ತೀರಿಸಿಕೊಳ್ಳದೆ ನಿಜಾಮನನ್ನು 'ರಾಜಪ್ರಮುಖ'ನಾಗಿ ನೇಮಿಸಿತು. ಆದರೆ ರಕ್ತದೋಕುಳಿ ಹರಿಸಿದ್ದ ಖಾಸಿಂ ರಜ್ವಿಯನ್ನು 7 ವರ್ಷ ಜೈಲಿಗಟ್ಟಿ ಪಾಕಿಸ್ತಾನಕ್ಕೆ ಗಡಿಪಾರು ಮಾಡಿತು; ಅಲ್ಲಿ ಆತ ಅನಾಥನಾಗಿ ಸತ್ತ.
ಸೆಪ್ಟೆಂಬರ್ 17ರ 'ಕಲ್ಯಾಣ ಕರ್ನಾಟಕ ಉತ್ಸವ' ಕೇವಲ ವಿಜಯದ ದಿನವಲ್ಲ; ಅದು ಭಾಷಿಕ ದಬ್ಬಾಳಿಕೆಯ ವಿರುದ್ಧದ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆದ ಧರ್ಮಯುದ್ಧ. ಇಂದಿನ ಜನರ ನೆಮ್ಮದಿಯ ಉಸಿರಿನ ಹಿಂದೆ ಅಸಂಖ್ಯಾತ ಅನಾಮಿಕರ ಬಲಿದಾನವಿದೆ. ಆ ಸ್ವಾಭಿಮಾನದ ಕಿಚ್ಚು ಸದಾ ಜಾಗೃತವಾಗಿರಲಿ.
✍🏼 ಕಿರಣ್ ಬಿ.
ಪ್ರತಿಕ್ರಿಯೆ (1)
ಇಂಥ ವಿಸ್ತೃತ ಲೇಖನಕ್ಕೆ ತುಂಬು ಧನ್ಯವಾದಗಳು. ಪ್ರತಿ ಸಲ ಸ್ವತಂತ್ರ ಉತ್ಸವ ಎಲ್ಲರೂ ಮಾಡುತ್ತಾರೆ ಆದರೆ ಯಾಕೋ ಏನೋ ಕಲ್ಯಾಣ ಕರ್ನಾಟಕದ ಈ ಇತಿಹಾಸ ಇಂದಿಗೂ ಅಷ್ಟು ಪ್ರಸಿದ್ಧಿ ಪಡೆದಿಲ್ಲ. ನಿಮ್ಮಂಥವರು ಹೀಗೆ ಬರೆಯಬೇಕು ಅಂದರೆ ಈ ಇತಿಹಾಸವನ್ನು ಜೀವಂತ ಇಡಬಹುದು.
ಧನ್ಯವಾದಗಳು 🙏 ಹೌದು ನೀವು ಹೇಳೋದು ನಿಜ ಇದನ್ನು ವಿವರವಾಗಿ ಮಾತಾಡುತ್ತಲೆ ಇರಬೇಕು...