80ನೇ ಸ್ವಾತಂತ್ರ

ದಿನಾಚರಣೆಯ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯ ಮೇಲಿನಿಂದ ಮಾಡಿದ ಭಾಷಣದಲ್ಲಿ 'ದಿಮಾಗಿ ನಕ್ಸಲ್'ಗಳ (ಬೌದ್ಧಿಕ ನಕ್ಸಲರು) ಬಗ್ಗೆ ದೇಶಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ದೇಶದ ಅಧಿಕಾರ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಸಮಿತಿಗಳಲ್ಲಿ ಕುಳಿತು ನೀತಿ-ನಿಯಮಗಳ ಮೇಲೆ ಪ್ರಭಾವ ಬೀರುತ್ತಿದ್ದ ಮಾವೋವಾದಿ ಚಿಂತನೆಯ ಜನರ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅರಣ್ಯಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ಹೋರಾಡುವ ನಕ್ಸಲರನ್ನು ಮಟ್ಟಹಾಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ಈ 'ದಿಮಾಗಿ ನಕ್ಸಲರು' ಈಗಲೂ ಅವಕಾಶಕ್ಕಾಗಿ ಕಾಯುತ್ತಿದ್ದು, ಹಿಂಸೆ ಮತ್ತು ಅರಾಜಕತೆಯ ಮೂಲಕ ಸಮಾಜವನ್ನು ದಾರಿ ತಪ್ಪಿಸಲು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಪ್ರಧಾನಿ ಎಚ್ಚರಿಸಿದ್ದಾರೆ.

ಇಂತಹ ಬೌದ್ಧಿಕ ನಕ್ಸಲರನ್ನು ನಾವು ಗುರುತಿಸಿ, ಅವರನ್ನು ವ್ಯವಸ್ಥೆಯಿಂದ ಪ್ರತ್ಯೇಕಿಸಬೇಕಿದೆ ಹಾಗೂ ಯುವ ಪೀಳಿಗೆಯನ್ನು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಅವರು ಕರೆ ನೀಡಿದ್ದಾರೆ. ಇಂದಿನ ಯುದ್ಧವು ಕೇವಲ ಗಡಿಗಳಲ್ಲಿ ನಡೆಯುತ್ತಿಲ್ಲ, ಬದಲಾಗಿ ಬ್ಯಾಂಕಿಂಗ್ ಸೆಕ್ಟರ್, ಡೇಟಾ ಕೇಂದ್ರಗಳು ಮತ್ತು ರಿಫೈನರಿಗಳಂತಹ ಮೂಲಸೌಕರ್ಯಗಳ ಮೇಲಿನ ದಾಳಿಯಾಗಿ ಯುದ್ಧವು ಹೊಸ ರೂಪ ಪಡೆದುಕೊಂಡಿದೆ ಎಂಬ ಪ್ರಧಾನಿಗಳ ಈ ಗಂಭೀರ ಎಚ್ಚರಿಕೆಯ ಹಿನ್ನೆಲೆಯಲ್ಲಿ, 'ದಿಮಾಗಿ ನಕ್ಸಲಿಸಂ'ನ ಕರಾಳ ಜಾಲ ಮತ್ತು ಅದರ ಕಾರ್ಯತಂತ್ರವನ್ನು ವಿಶ್ಲೇಶಿಸೋಣ.

ಪುನರ್ವಸತಿಯ ಯಶೋಗಾಥೆ ಮತ್ತು ವಾಸ್ತವದ ಎಚ್ಚರಿಕೆ

ಪ್ರಧಾನಿಗಳು ಹೇಳಿದಂತೆ ಭದ್ರತಾ ಪಡೆಗಳ ಸತತ ಕಾರ್ಯಾಚರಣೆಯಿಂದಾಗಿ 2014ರಲ್ಲಿ 126 ಜಿಲ್ಲೆಗಳಲ್ಲಿದ್ದ ನಕ್ಸಲ್ ಪ್ರಭಾವ, 2026ರ ವೇಳೆಗೆ ಬಹುತೇಕ ಶೂನ್ಯಕ್ಕೆ ತಲುಪಿದ್ದು ಐತಿಹಾಸಿಕ ಸಾಧನೆ. ಶರಣಾದ ನಕ್ಸಲರನ್ನು ಶತ್ರುಗಳಂತೆ ಕಾಣದೆ ಮುಖ್ಯವಾಹಿನಿಗೆ ತಂದಾಗ ಅದ್ಭುತ ಬದಲಾವಣೆಗಳಾಗಿವೆ. 

ಛತ್ತೀಸ್‌ಗಢದ 'ರಾಷ್ಟ್ರೀಯ ಕೈಮಗ್ಗ ದಿನ'ದಂದು ಮಾಜಿ ನಕ್ಸಲರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಹಾಗೂ ನಕ್ಸಲ್ ನಿಗ್ರಹ ಪಡೆಯಾದ DRG ಯಲ್ಲಿ ಶೇ. 40ರಷ್ಟು ಮಾಜಿ ನಕ್ಸಲರೇ ಸೇವೆ ಸಲ್ಲಿಸುತ್ತಿರುವುದು ಇದಕ್ಕೆ ಸಾಕ್ಷಿ.

ಆದರೆ, ಮುಖ್ಯವಾಹಿನಿಗೆ ಮರಳಿದ ಎಲ್ಲರೂ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗದು. ಕೆಲವರು ನಗರ ನಕ್ಸಲರಾಗಿ ತಮ್ಮ ಅಜೆಂಡಾ ಮುಂದುವರೆಸಲು ಬಂದಿರಬಹುದು. ಉದಾಹರಣೆಗೆ, ಮಾಜಿ ನಕ್ಸಲ ನೂರ್ ಶ್ರೀಧರ್ ಸಂದರ್ಶನವೊಂದರಲ್ಲಿ 'ಬುಲೆಟ್ ಅಥವಾ ಬ್ಯಾಲೆಟ್?' ಎಂಬ ಪ್ರಶ್ನೆಗೆ 'ಮೂವ್ಮೆಂಟ್' (ಚಳವಳಿ) ಎಂದು ಉತ್ತರಿಸಿದ್ದ. ಪ್ರಜಾಪ್ರಭುತ್ವ ಒಪ್ಪಿದವನಿಗೆ 'ಬ್ಯಾಲೆಟ್' (ಮತದಾನ) ಮೇಲೆ ನಂಬಿಕೆ ಇರಬೇಕಿತ್ತು. ಆದರೆ ಆತನ ಉತ್ತರ, ಆತ ಕಾಡಿನಿಂದ ನಾಡಿಗೆ ಬಂದು 'ನಗರ ನಕ್ಸಲ'ನಾಗಿ ಬದಲಾಗಿದ್ದಾನೆಂಬುದರ ಸಂದೇಶವಷ್ಟೆ. ಇಂತಹವರನ್ನು ಎಡಪಂಥೀಯರು ಆದರ್ಶವೆಂದು ಬಿಂಬಿಸಿ, ವೇದಿಕೆ ಒದಗಿಸಿ ವರ್ಗ ಸಂಘರ್ಷದ ಕಟ್ಟುಕಥೆಗಳನ್ನು ಪೋಷಿಸುತ್ತಿರುವುದು ನಿಜಕ್ಕೂ ವಿಪರ್ಯಾಸ.

'ದಿಮಾಗಿ ನಕ್ಸಲಿಸಂ': ಬೌದ್ಧಿಕ ಕಾರ್ಯತಂತ್ರ ಮತ್ತು ಟೂಲ್-ಕಿಟ್ ಕಾರ್ಯಾಚರಣೆಯ ಸ್ವರೂಪ

'ದಿಮಾಗಿ ನಕ್ಸಲಿಸಂ' ಅಥವಾ 'ಅರ್ಬನ್ ನಕ್ಸಲಿಸಂ' ಎಂಬುದು ಕೇವಲ ಒಂದು ರಾಜಕೀಯ ಭಿನ್ನಾಭಿಪ್ರಾಯವಲ್ಲ. ಬದಲಾಗಿ, ಇದು ಸಾಂಸ್ಕೃತಿಕ ಪ್ರಾಬಲ್ಯ ಸಾಧಿಸುವ ಮೂಲಕ ಸಾರ್ವಜನಿಕ ಮನಸ್ಥಿತಿಯನ್ನು ಸಿದ್ಧಪಡಿಸಿ, ಸಾಂವಿಧಾನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಒಳಗಿಂದಲೇ ಶಿಥಿಲಗೊಳಿಸುವ ಒಂದು ಬೌದ್ಧಿಕ ಯುದ್ಧ ತಂತ್ರವಾಗಿದೆ. ಕಾಡಿನಲ್ಲಿ ಶಸ್ತ್ರ ಹಿಡಿದು ಹೋರಾಡುವ ಗೆರಿಲ್ಲಾ ಗುಂಪುಗಳಿಗೆ, ನಾಡಿನಲ್ಲಿ ಕುಳಿತು ಬೌದ್ಧಿಕ, ಆರ್ಥಿಕ ಹಾಗೂ ಕಾನೂನು ಕವಚವನ್ನು ಒದಗಿಸುವ ಜಾಲವಿದು.

ಇದೊಂದು ನಿರಂತರ ಹೋರಾಟ ಎಂದು ನಂಬಿಕೊಂಡಿರುವ ಈ ಬೌದ್ಧಿಕ ನಕ್ಸಲರು, ಸಮಾಜದ ವಿವಿಧ ರಂಗಗಳನ್ನು (ಶಿಕ್ಷಣ, ಕಾನೂನು, ಮಾಧ್ಯಮ, ಸಾಂಸ್ಕೃತಿಕ) ಅಸ್ತ್ರವನ್ನಾಗಿ ಮಾಡಿಕೊಂಡು, ಅತ್ಯಂತ ಅಪಾಯಕಾರಿ 'ಟೂಲ್-ಕಿಟ್' ಮೂಲಕ ವ್ಯವಸ್ಥಿತವಾದ ವ್ಯೂಹ ರಚಿಸುತ್ತಾರೆ. ಸಮಾಜದಲ್ಲಿ ಸಾಮಾನ್ಯವಾಗಿಯೇ ನಡೆಯುವ ನೈಜ ಪ್ರತಿಭಟನೆ ಅಥವಾ ಅಸಮಾಧಾನದ ಪ್ರದರ್ಶನಗಳಿದ್ದರೆ ಮೆತ್ತಗೆ ಅದರ ಒಳಗೆ ನುಸುಳುವ ಇವರು, ಆಡಳಿತ ಯಂತ್ರವನ್ನು ಬುಡಮೇಲು ಮಾಡಲು ಈ ಕೆಳಗಿನ 5 ಹಂತಗಳ ಟೂಲ್-ಕಿಟ್ ಅನ್ನು ಕಾರ್ಯಾಚರಿಸುತ್ತಾರೆ:

1. ಸೂಕ್ಷ್ಮ ಸಮಸ್ಯೆಯ ಶೋಧನೆ ಮತ್ತು ಲಾಜಿಸ್ಟಿಕ್ಸ್:

ಭೂಸ್ವಾಧೀನ, ಅರಣ್ಯ ಹಕ್ಕು ಅಥವಾ ಸರ್ಕಾರದ ಯಾವುದೋ ಹೊಸ ಕಾಯ್ದೆಯಂತಹ ಸೂಕ್ಷ್ಮ ವಿಚಾರವನ್ನು ಗುರುತಿಸಿ ಅದನ್ನು ತಮ್ಮ ಕಾರ್ಯಸೂಚಿಗೆ ಬಳಸಿಕೊಳ್ಳುವುದು ಇವರ ಮೊದಲ ಹೆಜ್ಜೆ. ಸಾಮಾನ್ಯ ಜನರಿಂದ ಈಗಾಗಲೇ ಯಾವುದೇ ಹೋರಾಟ ನಡೆಯುತ್ತಿದ್ದರೆ ಅದನ್ನೇ ಹೈಜಾಕ್ ಮಾಡಿಕೊಳ್ಳುತ್ತಾರೆ. ಈ ಹಂತದಲ್ಲಿ ಕಾಡಿನಿಂದ ನಗರಕ್ಕೆ ಬರುವ ಉನ್ನತ ನಾಯಕರಿಗೆ ಸುರಕ್ಷಿತ ಆಶ್ರಯ, ರಹಸ್ಯ ಚಿಕಿತ್ಸೆ ಹಾಗೂ ಸುಧಾರಿತ ಸಂವಹನ ಉಪಕರಣಗಳನ್ನು ಒದಗಿಸುವ ಕೆಲಸವೂ ನಡೆಯುತ್ತದೆ.

2. ಕಥನ ಹೆಣೆಯುವುದು ಮತ್ತು ಬ್ರೈನ್-ವಾಶ್:

ಶೈಕ್ಷಣಿಕ ಕ್ಷೇತ್ರ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಯುವಜನರ ತಲೆಕೆಡಿಸುವುದು ಈ ಹಂತದ ಗುರಿ. ಸೋಷಿಯಲ್ ಮೀಡಿಯಾ ಮೂಲಕ "ಸರ್ಕಾರ ಬಡವರ ವಿರೋಧಿ" ಎಂಬ ಸುಳ್ಳು ಅಥವಾ ಅರ್ಧ-ಸತ್ಯದ ಆಕ್ರೋಶದ ಕಥನ (Narrative) ಸೃಷ್ಟಿಸಲಾಗುತ್ತದೆ. ವರ್ಗ ಸಂಘರ್ಷದ ಕಥೆಗಳನ್ನ ಕಟ್ಟಿ ಸ್ವಾರ್ಥ ಲಾಭಕ್ಕೆ ಕೆಲಸ ಮಾಡುವ ಬೌದ್ದಿಕ ನಕ್ಸಲರೂ ಇದ್ದಾರೆ. 

(ಉದಾಹರಣೆಗೆ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಸರ್ಕಾರದ ವಿರುದ್ಧ "ಎದ್ದೇಳು ಕರ್ನಾಟಕ" ಎಂಬ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ಹುಟ್ಟುಹಾಕಿದ ಪ್ರೊ. ಪುರುಷೋತ್ತಮ ಬಿಳಿಮಲೆಯವರು, ಪ್ರತಿಫಲವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡರು). 

3. ಮುಖವಾಡ ಸಂಘಟನೆಗಳ ಮೂಲಕ ಪ್ರತಿಭಟನೆ:

ಮಾನವ ಹಕ್ಕು, ಕಲೆ ಅಥವಾ ಪರಿಸರ ಸಂಘಟನೆಗಳ ಮುಖವಾಡ ಧರಿಸಿ ಇವರು ಸಮಾಜದಲ್ಲಿ ಕಾರ್ಯಾಚರಿಸುತ್ತಾರೆ. ಕ್ರಾಂತಿಕಾರಿ ಕಲೆ, ನಾಟಕಗಳ ಮೂಲಕ ಹಿಂಸೆಯನ್ನು ವೈಭವೀಕರಿಸುತ್ತಾ, ಮುಷ್ಕರ ಹಾಗೂ ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸಿ ಸ್ಥಳೀಯ ಸಮಸ್ಯೆಯನ್ನು ರಾಷ್ಟ್ರೀಯ ವಿವಾದವನ್ನಾಗಿ ಮಾಡುತ್ತಾರೆ. ಕನ್ನಡ ಭಾಷೆ ವಿಷಯ ಇರಬಹುದು, ರಾಜ್ಯದ ವಿಷಯವಿರಬಹುದು ಇವರುಗಳು ಒಳಗೆ ನುಸುಳಿ ತಮ್ಮ ಪ್ರಭಾವ ಬೀರುವ ಎಲ್ಲ ಪ್ರಯತ್ನ ಮಾಡುತ್ತಾರೆ.

(ಉದಾಹರಣೆಗೆ: ನಕಲಿ ಪದವೀಧರರು ಮತ್ತು ವಂಚಕರನ್ನು 'ಜಿರಲೆಗಳು' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಜರಿದಿದ್ದರು. ಆ ಒಂದು ನಿರ್ದಿಷ್ಟ ಹೇಳಿಕೆಯನ್ನು ಇಡಿಯಾಗಿ ತಿರುಚಿದ ಈ ಜಾಲವು, "ನ್ಯಾಯಾಂಗವು ನಿರುದ್ಯೋಗಿ ಯುವಕರನ್ನು ಕೀಳಾಗಿ ಕಂಡಿದೆ" ಎಂದು ಬಿಂಬಿಸಿ, ವಾಸ್ತವವನ್ನು ಮರೆಮಾಚಿ ಸಾರ್ವಜನಿಕ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿದ್ದು ಇವರ ತಿರುಚುವ ತಂತ್ರದ ಅತ್ಯುತ್ತಮ ಉದಾಹರಣೆ).

4. ಕಾನೂನು ಯುದ್ಧ ಮತ್ತು ರಕ್ಷಣಾ ಕವಚ:

ಪ್ರಜಾಪ್ರಭುತ್ವವನ್ನು ಅಮಾನ್ಯ ಮಾಡುವ ಇವರೇ, ಭದ್ರತಾ ಸಂಸ್ಥೆಗಳಿಂದ ಅಪಾಯ ಎದುರಾದಾಗ ಅದೇ ಸಂವಿಧಾನದ ಮೂಲಭೂತ ಹಕ್ಕುಗಳ ಮೊರೆ ಹೋಗುತ್ತಾರೆ. ತಮ್ಮ ವಕೀಲರ ಪಡೆಯ ಮೂಲಕ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಕಿ ತಡೆಯಾಜ್ಞೆ ತರುವುದು, ಪೊಲೀಸರ ಮೇಲೆ ದೂರು ನೀಡುವುದು ಮತ್ತು ಇಡೀ ಆಡಳಿತ ಯಂತ್ರವನ್ನು ಸ್ತಬ್ಧಗೊಳಿಸುತ್ತಾರೆ. ಭಯೋತ್ಪಾದಕರು ಮತ್ತು ಸಮಾಜಘಾತಕರ ರಕ್ಷಣೆಗೆ ಇವರು ಹತ್ತಾರು ಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದನ್ನು ಭಾರತೀಯರು ನೋಡಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ಸಂಸ್ಕೃತಿಗೆ ದಕ್ಕೆ ತರುವ ಯಾವುದೇ ಕೆಲಸವಿದ್ದರೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.

(ಉದಾಹರಣೆಗೆ: 2025 ರಲ್ಲಿ ಧರ್ಮಸ್ಥಳದ ವಿರುದ್ದ ನಡೆದ ಷಡ್ಯಂತ್ರದಲ್ಲಿ SIT ರಚನೆ ಮಾಡುವ ವಿಷಯದಲ್ಲಿ ಎಸ್ ಬಾಲನ್ ರಂತ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು.)

5. ಜಾಗತಿಕ ನಿರೂಪಣೆ ಮತ್ತು ಅಂತರರಾಷ್ಟ್ರೀಯ ಲಾಬಿ:

ಡಿಜಿಟಲ್ ಸುದ್ದಿ ತಾಣಗಳು ಮತ್ತು ಜಾಗತಿಕ ಪತ್ರಿಕೆಗಳ ಮೂಲಕ ಭಾರತದ ಆಡಳಿತ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಳನಾಯಕನಂತೆ ಚಿತ್ರಿಸುವುದು ಇವರ ಅಂತಿಮ ತಂತ್ರ. ವಿದೇಶಿ ಸಂಸ್ಥೆಗಳಿಗೆ ಮತ್ತು ವಿಶ್ವಸಂಸ್ಥೆಗೆ ಪತ್ರ ಬರೆದು 'ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ' ಎಂದು ಬಿಂಬಿಸಿ, ದೇಶದ ವರ್ಚಸ್ಸಿಗೆ ಮಸಿ ಬಳಿಯುತ್ತಾರೆ. ಇದೇ ಹೊತ್ತಿನಲ್ಲಿ ತಮ್ಮ ಎನ್‌ಜಿಒಗಳ ಮೂಲಕ ಅಕ್ರಮ ಲೆವಿ ಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ.

ಮುಂದಿನ ದಾರಿ ಮತ್ತು ಸುಸ್ಥಿರ ಪರಿಹಾರ

ಭೌತಿಕವಾಗಿ ನಕ್ಸಲ್ ಶಕ್ತಿ ಕುಗ್ಗಿದ್ದರೂ, ಸೈಬರ್ ಸ್ಪೇಸ್ ಹಾಗೂ ಕೃತಕ ಬುದ್ಧಿಮತ್ತೆ (AI) ಮೂಲಕ ಅವರ ಬೌದ್ಧಿಕ ಜಾಲ ಈಗಲೂ ಸಕ್ರಿಯವಾಗಿದೆ. ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಕೇವಲ ಭದ್ರತಾ ಕಾರ್ಯಾಚರಣೆಗಳಷ್ಟೇ ಸಾಲದು, 'ಅಭಿವೃದ್ಧಿ'ಯೇ ಇದಕ್ಕೆ ಮೂಲ ಮದ್ದಾಗಬೇಕು. 2015ರ ನಂತರ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರ್ಮಿಸಲಾದ 15,000 ಕಿ.ಮೀ ರಸ್ತೆ, ಸಾವಿರಾರು ಬ್ಯಾಂಕ್, ಅಂಚೆ ಕಚೇರಿ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳು ಈಗಾಗಲೇ ಜನರ ಬದುಕನ್ನು ಸಕಾರಾತ್ಮಕವಾಗಿ ಬದಲಿಸುತ್ತಿವೆ. ಈ ಅಭಿವೃದ್ಧಿ ಕ್ರಾಂತಿಯ ಜೊತೆಗೆ, ನೈಜ ಪ್ರಜಾಸತ್ತಾತ್ಮಕ ಭಿನ್ನಮತ ಮತ್ತು ದೇಶವನ್ನು ಒಡೆಯುವ ಬೌದ್ಧಿಕ ತೀವ್ರವಾದದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸಿ ನಿಷ್ಪಕ್ಷಪಾತವಾಗಿ ಕಾನೂನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಭಿನ್ನಮತಗಳಿಗೆ ಸದಾ ಗೌರವವಿದೆ. ಆದರೆ, ಸಾಮಾಜಿಕ ನ್ಯಾಯದ ಮುಖವಾಡ ಧರಿಸಿ ಹಿಂಸೆಗೆ ಪ್ರಚೋದನೆ ನೀಡುವ 'ದಿಮಾಗಿ ನಕ್ಸಲ್' ಜಾಲಗಳನ್ನು ಬೇರುಸಹಿತ ಕಿತ್ತುಹಾಕಲೇಬೇಕಿದೆ. ನಕ್ಸಲಿಸಂ ಅನ್ನು ಕೇವಲ ಭದ್ರತಾ ಸಮಸ್ಯೆಯಾಗಿ ನೋಡದೆ, ಅದನ್ನೊಂದು ವ್ಯವಸ್ಥೆಯ ವೈಫಲ್ಯವಾಗಿ ಪರಿಗಣಿಸಬೇಕು. ಅರಣ್ಯವಾಸಿಗಳನ್ನು ಕೇವಲ 'ಸಮಸ್ಯೆ'ಯಾಗಿ ನೋಡದೆ, ಅವರನ್ನು ದೇಶದ ಅಭಿವೃದ್ಧಿಯ 'ಸಮಾನ ಪಾಲುದಾರರಂತೆ' ಒಪ್ಪಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಮೇಲಿನ ಈ ಸೈದ್ಧಾಂತಿಕ ಆಕ್ರಮಣವನ್ನು ಶಾಶ್ವತವಾಗಿ ಕೊನೆಗಾಣಿಸಲು ಸಾಧ್ಯ.

✍🏼 ಕಿರಣ್ ಬಿ.