1947ರ ಆಗಸ್ಟ್ 15, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮರೆಯಲಾಗದ ದಿನ. ಅಂದು ದೆಹಲಿಯ ಕೆಂಪುಕೋಟೆಯಿಂದ ಹಿಡಿದು ದೇಶದ ಮೂಲೆಮೂಲೆಗಳವರೆಗೂ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿತ್ತು. ಬ್ರಿಟಿಷರ ಎರಡು ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಕಳಚಿ, ಭಾರತಮಾತೆ ಸ್ವತಂತ್ರಳಾಗಿದ್ದಳು. ಬೀದಿಬೀದಿಗಳಲ್ಲಿ ಸ್ವಾತಂತ್ರ್ಯದ ಸಂಭ್ರಮ, ಮನೆಮನೆಗಳಲ್ಲಿ ಸಿಹಿಹಂಚುವ ಸಡಗರ; ಜನರ ಮನಸ್ಸಿನಲ್ಲಿ ಹೊಸ ಭರವಸೆಯ ಹೊನಲು ಹರಿಯುತ್ತಿತ್ತು. ಆದರೆ, ಇತ್ತ ಹಳೆ ಮೈಸೂರು ಸಂಸ್ಥಾನದ ಜನರ ಪಾಲಿಗೆ ಮಾತ್ರ ಸ್ವಾತಂತ್ರ್ಯದ ಕಥೆ ಇನ್ನೂ ಸಂಪೂರ್ಣವಾಗಿರಲಿಲ್ಲ.
ಬ್ರಿಟಿಷರೇನೋ ದೇಶ ಬಿಟ್ಟು ಹೋಗಿದ್ದರು, ಭಾರತ ಒಕ್ಕೂಟಕ್ಕೆ ಮೈಸೂರು ಸಂಸ್ಥಾನ ಸೇರ್ಪಡೆಯಾಗುವ ಪ್ರಕ್ರಿಯೆಯೂ ನಡೆದಿತ್ತು. ಆದರೆ, ಪ್ರಜಾಪ್ರಭುತ್ವದ ನಿಜವಾದ ಅರ್ಥವಾದ 'ಜನರ ನೇರ ಪಾಲ್ಗೊಳ್ಳುವಿಕೆ' ಆಡಳಿತದಲ್ಲಿ ಇನ್ನೂ ಬಂದಿರಲಿಲ್ಲ. ಜನರಿಂದ ಆಯ್ಕೆಯಾದ 'ಜವಾಬ್ದಾರಿಯುತ ಸರ್ಕಾರ'ದ ಬದಲಿಗೆ, ಹಳೆಯ ಆಡಳಿತ ವ್ಯವಸ್ಥೆಯೇ ಮುಂದುವರೆಯುತ್ತಿತ್ತು. "ದೇಶ ಸ್ವತಂತ್ರವಾದ ಮೇಲೆ ರಾಜ್ಯದ ಆಡಳಿತವೂ ಪ್ರಜೆಗಳ ಕೈಗೆ ಬರಬೇಕಲ್ಲವೇ?" ಎಂಬ ಹೊಸ ಹಾಗೂ ನ್ಯಾಯಯುತವಾದ ಪ್ರಶ್ನೆ ಮೈಸೂರು ರಾಜ್ಯದ ಜನರ ಮುಂದೆ ಎದುರಾಯಿತು. ಈ ಪ್ರಶ್ನೆಯೇ ಐತಿಹಾಸಿಕ ‘ಮೈಸೂರು ಚಲೋ’ ಹೋರಾಟಕ್ಕೆ ನಾಂದಿ ಹಾಡಿತು.
ಇದೊಂದು ಬ್ರಿಟಿಷರ ವಿರುದ್ಧದ ಹೋರಾಟವಾಗಿರಲಿಲ್ಲ; ಬದಲಾಗಿ, ತಮ್ಮದೇ ರಾಜ್ಯದಲ್ಲಿ ಪ್ರಜೆಗಳ ಪ್ರತಿನಿಧಿಗಳ ಮೂಲಕವೇ ಆಡಳಿತ ನಡೆಯಬೇಕು ಎಂಬ ಹಕ್ಕಿನ ಆಗ್ರಹವಾಗಿತ್ತು. ಇದೇ ಕಾರಣಕ್ಕೆ ಮೈಸೂರು ಚಲೋವನ್ನು ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಅಂತಿಮ ಅಧ್ಯಾಯವೆಂದು ಮಾತ್ರವಲ್ಲದೆ, ಸ್ವಾತಂತ್ರ್ಯದಿಂದ ಪ್ರಜಾಪ್ರಭುತ್ವದತ್ತ ಇಟ್ಟ ಅತ್ಯಂತ ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗುತ್ತದೆ.
ಆ ಸಮಯದಲ್ಲಿ ಮೈಸೂರು ಸಂಸ್ಥಾನವನ್ನು ಆಳುತ್ತಿದ್ದವರು ಪ್ರಗತಿಪರ ಚಿಂತನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್. ಶಿಕ್ಷಣ, ಕೈಗಾರಿಕೆ, ವಿದ್ಯುತ್, ನೀರಾವರಿಯಂತಹ ಕ್ಷೇತ್ರಗಳಲ್ಲಿ ಮೈಸೂರನ್ನು ದೇಶದ ಮುಂಚೂಣಿಗೆ ತಂದ ಕೀರ್ತಿ ಅವರದ್ದಾಗಿತ್ತು. ಆದರೂ, ರಾಜಕೀಯವಾಗಿ ಜನಸಾಮಾನ್ಯರಿಗೆ ಬೇಕಾದಷ್ಟು ಅಧಿಕಾರವಿರಲಿಲ್ಲ. ದಿವಾನರಾಗಿದ್ದ ಸರ್ ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ ಅವರ ನೇತೃತ್ವದಲ್ಲಿಯೇ ಆಡಳಿತ ಮುಂದುವರೆಯುತ್ತಿತ್ತು.
ಭಾರತ ಸ್ವತಂತ್ರವಾದ ಬೆನ್ನಲ್ಲೇ ಪರಿಸ್ಥಿತಿ ಬದಲಾಯಿತು. ಬ್ರಿಟಿಷರ ವಿರುದ್ಧ ಹೋರಾಡಿ ಪಳಗಿದ್ದ ಜನರಿಗೆ, ಈಗ ತಮ್ಮದೇ ಆಡಳಿತದಲ್ಲಿ ಪ್ರತಿನಿಧಿಗಳ ಮೂಲಕ ಅಧಿಕಾರ ಬೇಕೆಂಬ ಹಂಬಲ ತೀವ್ರವಾಯಿತು. ಈ ಬೇಡಿಕೆಯನ್ನು ಮುಂದಿಟ್ಟ ಮೈಸೂರು ರಾಜ್ಯ ಕಾಂಗ್ರೆಸ್, ‘ಜವಾಬ್ದಾರಿಯುತ ಸರ್ಕಾರ’ ಸ್ಥಾಪನೆಯಾಗಬೇಕು ಎಂದು ಬಲವಾಗಿ ಆಗ್ರಹಿಸಿತು. ಈ ಹೋರಾಟಕ್ಕೆ ಕೆ.ಸಿ. ರೆಡ್ಡಿ, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕ ದಿಗ್ಗಜ ನಾಯಕರು ಮುನ್ನಡೆ ನೀಡಿದರು.
ನಾಯಕರ ಕರೆಯೊಂದಿಗೆ ಆರಂಭವಾದ ಈ ಹೋರಾಟ, ನಿಧಾನವಾಗಿ ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿತು. 1947ರ ಸೆಪ್ಟೆಂಬರ್ 1ರಂದು ‘ಮೈಸೂರು ಚಲೋ’ಗೆ ಅಧಿಕೃತವಾಗಿ ರಣಕಹಳೆ ಮೊಳಗಿತು. ರಾಜ್ಯದ ಮೂಲೆಮೂಲೆಗಳಿಂದ ಜನರು ಸಾಗರೋಪಾದಿಯಲ್ಲಿ ಮೈಸೂರಿನತ್ತ ಹರಿದುಬಂದರು. ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದರೆ, ಕಾರ್ಮಿಕರು ಕೆಲಸ ತೊರೆದು ಮುಷ್ಕರ ಹೂಡಿದರು. ವ್ಯಾಪಾರಿಗಳು, ವಕೀಲರು, ಮಹಿಳೆಯರು ಹಾಗೂ ಸಾಮಾನ್ಯ ನಾಗರಿಕರು ಭಾರಿ ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮೈಸೂರಿನ ಬೀದಿಗಳೆಲ್ಲ ತ್ರಿವರ್ಣ ಧ್ವಜಗಳಿಂದ ಕಂಗೊಳಿಸಿದರೆ, "ಜನರ ಪ್ರತಿನಿಧಿಗಳಿಂದ ನಡೆಯುವ ಜವಾಬ್ದಾರಿಯುತ ಸರ್ಕಾರ ಬೇಕು" ಎಂಬ ಘೋಷಣೆಗಳು ಮುಗಿಲುಮುಟ್ಟಿದವು.
ಇತ್ತ ಸರ್ಕಾರವೂ ಸುಮ್ಮನೆ ಕೂರಲಿಲ್ಲ. ಪ್ರತಿಭಟನಾಕಾರರನ್ನು ಬಂಧಿಸಿ, ನಾಯಕರನ್ನು ಜೈಲಿಗೆ ತಳ್ಳಲಾಯಿತು; ಸಭೆ, ಮೆರವಣಿಗೆಗಳ ಮೇಲೆ ನಿರ್ಬಂಧ ಹೇರಲಾಯಿತು. ಆದರೆ, ಜೈಲುಗಳು ತುಂಬಿದಷ್ಟೂ ಹೋರಾಟದ ಕಾವು ಮತ್ತಷ್ಟು ತೀವ್ರವಾಯಿತೇ ಹೊರತು ಕಿಂಚಿತ್ತೂ ಕಡಿಮೆಯಾಗಲಿಲ್ಲ.
ಈ ಚಳವಳಿಯಲ್ಲಿ ವಿದ್ಯಾರ್ಥಿಗಳ ಪಾತ್ರ ರೋಮಾಂಚಕವಾಗಿತ್ತು. ಅವರ ಕೈಯಲ್ಲಿ ಪುಸ್ತಕಗಳ ಬದಲಿಗೆ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಹೋರಾಟದ ಸಂದರ್ಭದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಬಾಣಾವರದ ರಾಮಸ್ವಾಮಿ ಎಂಬ ಯುವ ವಿದ್ಯಾರ್ಥಿ ಬಲಿಯಾದರು. ಈ ಘಟನೆಯು ಮೈಸೂರು ಚಲೋದ ಅತ್ಯಂತ ನೋವಿನ ಹಾಗೂ ಕೆಚ್ಚೆದೆಯ ಅಧ್ಯಾಯವಾಯಿತು. ಅವರು ಹುತಾತ್ಮರಾದ ಆ ಸ್ಥಳವೇ ಮುಂದೆ 'ರಾಮಸ್ವಾಮಿ ವೃತ್ತ' ಎಂದು ಹೆಸರುಪಡೆಯಿತು. ಇಂದು ಆ ವೃತ್ತದ ಮೂಲಕ ನೂರಾರು ವಾಹನಗಳು ಸಾಗುತ್ತವೆ, ನಗರ ಬದಲಾಗಿದೆ; ಆದರೆ ಆ ಹೆಸರಿನ ಹಿಂದೆ ಯುವಕನೊಬ್ಬನ ಅಪ್ರತಿಮ ತ್ಯಾಗದ ಕಥೆ ಸದಾ ಜೀವಂತವಾಗಿದೆ.
ಯುವಕರ ಧೈರ್ಯಕ್ಕೆ ಮತ್ತೊಂದು ಉದಾಹರಣೆಯಾಗಿ, ಚಂದ್ರಶೇಖರ್ ಎಂಬ ವಿದ್ಯಾರ್ಥಿ ಅರಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾದದ್ದು. ಅದು ಕೇವಲ ಧ್ವಜಾರೋಹಣವಾಗಿರದೆ, ಜನರ ರಾಜಕೀಯ ಜಾಗೃತಿಯ ಅಪ್ರತಿಮ ಸಂಕೇತವಾಗಿತ್ತು.
ಮೈಸೂರು ಚಲೋ ತೀವ್ರಗೊಳ್ಳುತ್ತಿದ್ದಂತೆ, ರಾಜ್ಯದಾದ್ಯಂತ ಪ್ರತಿಭಟನೆ, ಮುಷ್ಕರ, ಜೈಲುಭರ್ತಿ ಚಳುವಳಿಗಳು ಸರ್ಕಾರದ ಮೇಲೆ ವಿಪರೀತ ಒತ್ತಡ ಹೇರಿದವು. ಈ ಹೋರಾಟದ ಬಗ್ಗೆ 1947ರ ಅಕ್ಟೋಬರ್ 16ರಂದು ಮಾತನಾಡಿದ್ದ ಮಹಾತ್ಮ ಗಾಂಧಿಯವರು, ಮೈಸೂರು ಭಾರತಕ್ಕೆ ಸೇರಿರುವುದರ ಜೊತೆಗೆ ಜನರಿಗೆ ಆಡಳಿತದಲ್ಲಿ ಸಮರ್ಪಕ ಪಾಲು ದೊರೆಯಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಮೈಸೂರು ಜನರ ಬೇಡಿಕೆಯ ಮೂಲದಲ್ಲಿದ್ದದ್ದೂ ಇದೇ — ರಾಜಪ್ರಭುತ್ವವನ್ನು ಸಂಪೂರ್ಣವಾಗಿ ಅಳಿಸುವುದಕ್ಕಿಂತ, ಜನರ ಸಮ್ಮತಿಯೊಂದಿಗೆ ನಡೆಯುವ ಜವಾಬ್ದಾರಿಯುತ ಆಡಳಿತ.
ಕೊನೆಗೂ ಜನರ ಸತತ ಒತ್ತಡಕ್ಕೆ ಜಯ ಸಿಕ್ಕಿತು. 1947ರ ಅಕ್ಟೋಬರ್ 24ರಂದು ಜವಾಬ್ದಾರಿಯುತ ಸರ್ಕಾರ ರಚನೆಗೆ ಮಹಾರಾಜರು ಐತಿಹಾಸಿಕ ಒಪ್ಪಿಗೆ ನೀಡಿದರು. ಹೋರಾಟದ ಪ್ರಮುಖ ಬೇಡಿಕೆ ಈಡೇರಿತ್ತು. ಅದರ ಬೆನ್ನಲ್ಲೇ ಇತಿಹಾಸದ ಮತ್ತೊಂದು ಮಹತ್ವದ ಪುಟ ತೆರೆದುಕೊಂಡಿತು. 1947ರ ಅಕ್ಟೋಬರ್ 25ರಂದು ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ ಮೈಸೂರು ರಾಜ್ಯದ ಮೊಟ್ಟಮೊದಲ ಜನಪ್ರತಿನಿಧಿ ಸರ್ಕಾರ ಅಧಿಕಾರಕ್ಕೆ ಬಂದಿತು.
ಬೀದಿಯಲ್ಲಿ ಸತ್ಯಾಗ್ರಹ ನಡೆಸಿದ್ದ ಜನರ ಬೇಡಿಕೆ ಈಗ ಸರ್ಕಾರದ ರೂಪ ಪಡೆದಿತ್ತು. ಆದರೆ, ಈ ಹೋರಾಟದ ಬೆಲೆ ಸಣ್ಣದಿರಲಿಲ್ಲ. ಅನೇಕರು ಜೈಲು ಸೇರಿದರು. ಕರ್ನಾಟಕ ರಾಜ್ಯ ಗೆಜೆಟಿಯರ್ ದಾಖಲೆಗಳ ಪ್ರಕಾರ, ಈ ಹೋರಾಟದಲ್ಲಿ 69 ಮಂದಿ ಪ್ರಾಣತೆತ್ತರೆ, 229 ಮಂದಿ ಗಾಯಗೊಂಡಿದ್ದರು. ಈ 69 ಎಂಬುದು ಕೇವಲ ಅಂಕಿಯಲ್ಲ; ಅದರ ಹಿಂದೆ 69 ಕುಟುಂಬಗಳ ಕಣ್ಣೀರಿನ ಕಥೆಯಿದೆ, 229 ಗಾಯಾಳುಗಳ ಹಿಂದೆ 229 ಕುಟುಂಬಗಳ ಆತಂಕವಿದೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಎಂಬ ಪದಗಳ ಹಿಂದೆ ಅಡಗಿರುವ ನಿಜವಾದ ತ್ಯಾಗದ ಬೆಲೆ ಇದು.
ಮೈಸೂರು ಚಲೋವನ್ನು ಕೇವಲ ಒಂದು ರಾಜಕೀಯ ಚಳವಳಿಯೆಂದು ನೋಡಿದರೆ ಅದರ ಮಹತ್ವವನ್ನು ಕುಗ್ಗಿಸಿದಂತಾಗುತ್ತದೆ. ಅದು ಒಂದು ಕಾಲದ ಜನರ ದಿಟ್ಟ ಪ್ರಶ್ನೆ: ‘ಬ್ರಿಟಿಷರು ಹೋದರು, ಈಗ ನಮ್ಮನ್ನು ಯಾರು ಆಳಬೇಕು?’. ಅದಕ್ಕೆ ಮೈಸೂರು ಜನರು ನೀಡಿದ ಉತ್ತರ ಬಹಳ ಸ್ಪಷ್ಟವಾಗಿತ್ತು: ‘ನಮ್ಮ ಪರವಾಗಿ, ನಮ್ಮ ಪ್ರತಿನಿಧಿಗಳೇ ಆಳಬೇಕು!’.
✍🏼ಕಿರಣ್ ಬಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!