“ಬ್ರೋಕನ್ ಆರೋ” ಜಾನ್ ವೂ ನಿರ್ದೇಶಿಸಿದ ಇಂಗ್ಲಿಷ್ ಸಿನೆಮಾ. ಜಾನ್ ಟ್ರಾವೊಲ್-ಟಾ ಮತ್ತು ಕ್ರಿಶ್ಚಿಯನ್ ಸ್ಲೇಟರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.  

ಡ್ಯೂಕ್ ಮತ್ತು ಹಾಲೆ ವಿಮಾನದ ಪೈಲೆಟುಗಳು. ಒಂದು ದಿನ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾಗ ಹಾಲೆಗೆ ಡ್ಯೂಕ್ ಹೇಳುವ ಪಾಠ: ಎದುರಾಳಿಗೆ ಒಂದು ರೀತಿ ಹೊಡೆತ ತೋರಿಸಬೇಕು, ಆದರೆ ಇನ್ನೊಂದು ರೀತಿಯ ಹೊಡೆತ ನೀಡಬೇಕು.

ಇವರಿಬ್ಬರಿಗೆ ವಿಮಾನದಲ್ಲಿ ಎರಡು ಅಣುಬಾಂಬು (ಮಿಸೈಲ್)ಗಳನ್ನು ನಿರ್ದಿಷ್ಟ ಸ್ಥಳಕ್ಕೆ ಒಯ್ಯುವ ಜವಾಬ್ದಾರಿ ನೀಡಲಾಗುತ್ತದೆ. ಎರಡು ಅಣುಬಾಂಬುಗಳಿದ್ದ ವಿಮಾನವನ್ನು ಇವರು ಹಾರಿಸುತ್ತಿದ್ದಾಗ ಹಾಲೆಗೆ ಡ್ಯೂಕ್ ಹೊಡೆಯತೊಡಗುತ್ತಾನೆ. ಹಾಗೆ ಹೊಡೆಯುತ್ತಾ ಹಾಲೆಯನ್ನು ಡ್ಯೂಕ್ ವಿಮಾನದಿಂದ ಇಜೆಕ್ಟ್ ಮಾಡುತ್ತಾನೆ (ಹೊರಕ್ಕೆ ಎಸೆಯುತ್ತಾನೆ). ಅನಂತರ ಪ್ಯಾರಾಚೂಟುಗಳ ಸಹಿತ ಎರಡು ಅಣುಬಾಂಬುಗಳನ್ನೂ ಇಜೆಕ್ಟ್ ಮಾಡುತ್ತಾನೆ ಡ್ಯೂಕ್. 

ಬಳಿಕ “ಪ್ಲೇನ್ ಈಸ್ ಔಟ್ ಆಫ್ ಕಂಟ್ರೋಲ್, ಐ ಆಮ್ ಇಜೆಕ್ಟಿಂಗ್” (ವಿಮಾನ ನಿಯಂತ್ರಣ ಕಳೆದುಕೊಂಡಿದೆ, ನಾನು ಇಜೆಕ್ಟ್ ಆಗುತ್ತಿದ್ದೇನೆ) ಎಂಬ ಸಂದೇಶವನ್ನು ಪ್ರಧಾನ ಕಚೇರಿಗೆ ಕಳಿಸಿ ಡ್ಯೂಕ್ ವಿಮಾನದಿಂದ ಇಜೆಕ್ಟ್ ಆಗುತ್ತಾನೆ. ಆ ವಿಮಾನ ಕೆಳಕ್ಕೆ ಬಿದ್ದು ಧ್ವಂಸವಾಗುತ್ತದೆ. 

ಪ್ರಧಾನ ಕಚೇರಿಗೆ ಡ್ಯೂಕ್ ಪಿತೂರಿ ಮಾಡಿರಬೇಕು ಎಂಬ ಅನುಮಾನ ಬಂದಾಗ ಬಹಳ ತಡವಾಗಿರುತ್ತದೆ. ಆದರೂ ಮೇಲಧಿಕಾರಿಗಳು ಅವನ ಬೆನ್ನು ಹತ್ತುತ್ತಾರೆ. 

ಪ್ಯಾರಾಚೂಟಿನಲ್ಲಿ ಸುರಕ್ಷಿತವಾಗಿ ಇಳಿದ ಹಾಲೆಗೆ ಟೆರಿ ಎಂಬ ಮಹಿಳಾ ಅರಣ್ಯ ಕಾವಲುಗಾರಳ ಭೇಟಿ ಆಗುತ್ತದೆ. ಆಗೊಂದು ಹೆಲಿಕಾಪ್ಟರ್ ಧಾವಿಸಿ ಬಂದು, ಇವರಿಬ್ಬರ ಮೇಲೆ ದಾಳಿ ಮಾಡುತ್ತದೆ. ಇವರ ಜೀಪ್ ಗುಂಡೇಟಿನಿಂದ ಧ್ವಂಸ. ಇವರ ಮೇಲಿನ ದಾಳಿ ಮುಂದುವರಿಯುತ್ತದೆ. ಇವರು ಉಪಾಯವಾಗಿ ಆ ಹೆಲಿಕಾಪ್ಟರ್ ಚಾಲಕನಿಗೆ ಬುಲೆಟ್ ಹಾರಿಸಿ, ಹೆಲಿಕಾಪ್ಟರನ್ನು ಪತನ ಮಾಡುತ್ತಾರೆ. 

ಹೀಗೆ ಶುರುವಾದ ಬೆನ್ನಟ್ಟುವಿಕೆ ಮತ್ತು ದಾಳಿ ಮುಂದುವರಿಯುತ್ತದೆ. ಎರಡೂ ಅಣುಬಾಂಬುಗಳನ್ನು ಕದ್ದು ಸಾಗಿಸಲು ಡ್ಯೂಕ್ ಮುಂಚಿತವಾಗಿ ಯೋಜಿಸಿದ್ದ. ಅವನೂ ಪ್ಯಾರಾಚೂಟಿನಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದ. ಆ 2 ಅಣುಬಾಂಬುಗಳನ್ನು ಪತ್ತೆ ಮಾಡಿ ಸಂದೇಶ ರವಾನಿಸುತ್ತಿದ್ದ ಇಬ್ಬರು ಸೈನಿಕರನ್ನು ಕೊಂದು ಹಾಕಿದ.  

 

ಅನಂತರ ಎರಡು ಅಣುಬಾಂಬುಗಳನ್ನು ಎರಡು ಜೀಪುಗಳಲ್ಲಿ ಹೇರಿಕೊಂಡು, ಗುಪ್ತ ಸ್ಥಳಕ್ಕೆ ಸಾಗುತ್ತಾನೆ ಡ್ಯೂಕ್. ಇದನ್ನು ಪತ್ತೆ ಮಾಡಿದ ಹಾಲೆ ಮತ್ತು ಟೆರಿ ಧಾವಿಸಿ ಬಂದು ಮೊದಲ ಜೀಪಿಗೆ ಏರುತ್ತಾರೆ. ಅದರ ಚಾಲಕನಿಗೆ ಬುಲೆಟ್ ಹಾರಿಸಿ ಕೊಂದು, ಜೀಪನ್ನು ತಾಮ್ರದ ಗಣಿಗೆ ಚಲಾಯಿಸುತ್ತಾರೆ. ಆ ಗಣಿಯ ಭೂಗತ ಮೂರನೇ ಹಂತಕ್ಕೆ ಜೀಪ್ ಒಯ್ಯುತ್ತಾರೆ. 

ಆ ತಾಮ್ರದ ಗಣಿಗೆ ಡ್ಯೂಕ್ ಮುಂಚೆಯೇ ತಲಪಿದ್ದ. ಅಲ್ಲೀಗ ಇವರಿಬ್ಬರು ಅವನೊಂದಿಗೆ ಕಾದಾಟ ನಡೆಸುತ್ತಾರೆ. ಆಗ ಡ್ಯೂಕ್ ಒಂದು ಅಣುಬಾಂಬನ್ನು ಸೆಟ್ ಮಾಡಿ ಉಡಾಯಿಸುತ್ತಾನೆ. ಅದರ ಆಘಾತದಿಂದಾಗಿ ತಾಮ್ರದ ಗಣಿ ಕುಸಿಯುತ್ತದೆ. ಅಲ್ಲಿ ಸಿಕ್ಕಿ ಬಿದ್ದ ಹಾಲೆ ಮತ್ತು ಟೆರಿ ಕೆಳಗಿನ, ಅಂದರೆ ನಾಲ್ಕನೇ ಹಂತಕ್ಕೆ, ಧಾವಿಸಿ ಅಲ್ಲಿಂದ ನದಿಗೆ ಹಾರಿ ಪಾರಾಗುತ್ತಾರೆ. 

ಇನ್ನೊಂದು ಅಣುಬಾಂಬನ್ನು ರಬ್ಬರ್ ಬೋಟಿಗೆ ಹಾಕಿ ಸಾಗಿಸುತ್ತಾನೆ ಡ್ಯೂಕ್. ಅನಂತರ ಅದನ್ನು ರೈಲಿನಲ್ಲಿ ಒಯ್ಯುತ್ತಾನೆ. ಅವನ ಬೆನ್ನು ಹತ್ತಿದ ಹಾಲೆ ಮತ್ತು ಟೆರಿ, ಅವನನ್ನು ತಡೆಯಲಿಕ್ಕಾಗಿ ಸಾಹಸದಿಂದ ಕಾದಾಡುತ್ತಾರೆ. 

ಅಂತಿಮವಾಗಿ, ಆ ರೈಲಿನಲ್ಲಿ ಅಣುಬಾಂಬ್ ಇದ್ದ ವ್ಯಾಗನನ್ನು ರೈಲಿನಿಂದ ಕಳಚುತ್ತಾಳೆ ಟೆರಿ. ಆಗ, ಬೆಂಕಿ ಹತ್ತಿಕೊಂಡು, ಅಣುಬಾಂಬಿನ ಕವಚ ಸುಟ್ಟುಹೋಗುತ್ತದೆ. ಆ ಬೆಂಕಿಯಿಂದ ಡ್ಯೂಕ್ ಸಾಯುತ್ತಾನೆ. ಹಾಲೆ ಮತ್ತು ಟೆರಿ ಬದುಕಿ ಉಳಿಯುತ್ತಾರೆ. 

(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ನವದೆಹಲಿಗೆ ಹೋಗಿದ್ದಾಗ, 05-02-2011ರ ಶನಿವಾರ ನೋಡಿದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾಸಾರಾಂಶ.)