“100 ಅನೋಸ್ ಡಿ ಪೆರ್ಡಾನ್” (ಸ್ಪ್ಯಾನಿಷ್ ಸಿನಿಮಾ) ಕತೆ: 

ಆರು ಎಡಪಂಥೀಯ ಉಗ್ರಗಾಮಿಗಳು ವೆಲೆನ್ಸಿಯಾದಲ್ಲಿರುವ ದೊಡ್ಡ ಬ್ಯಾಂಕಿನ ಪ್ರಧಾನ ಕಚೇರಿಗೆ ನುಗ್ಗಿ ಅಲ್ಲಿದ್ದ ಸುಮಾರು 25 ಜನರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಡುತ್ತಾರೆ. 

ಆ ಉಗ್ರಗಾಮಿಗಳ ಮುಂದಾಳು ವಿನ್ಸೆಂಟೆ. ಅವನು ಆ ಬ್ಯಾಂಕಿನ ಅಧ್ಯಕ್ಷರ ಸೆಕ್ರೆಟರಿ ಲೂಸಿಯಾ ಎಂಬ ಚೆಲುವೆಯನ್ನು ಅಧ್ಯಕ್ಷರ ಕಚೇರಿಗೆ ಕರೆದೊಯ್ಯುತ್ತಾನೆ. ಅವಳನ್ನು ಬೆದರಿಸಿ, ಬ್ಯಾಂಕಿನ ಹಣವನ್ನೆಲ್ಲಾ ಅಧ್ಯಕ್ಷನು ಯಾವ ದೇಶದ ಯಾವ ಬ್ಯಾಂಕಿನ ಯಾವ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಕಂಪ್ಯೂಟರಿನಲ್ಲಿ ಸರ್ಚ್ ಮಾಡುತ್ತಾನೆ. 

ಆಗ ಅಲ್ಲಿಗೆ ಬಂದ ವಿನ್ಸೆಂಟೆಯ ಒಬ್ಬ ಸಂಗಾತಿಯ ಉದ್ಗಾರ: “ಈ ಬ್ಯಾಂಕಿನ ಅಧ್ಯಕ್ಷ ಎಂತಹ ನೀಚ! ಇಲ್ಲಿ ಗೋಡೆಗೆ ನೇತಾಡಿದ್ದ ಕಲಾಚಿತ್ರಗಳನ್ನು ಕದ್ದು ಒಯ್ದಿದ್ದಾನೆ. ಈ ಜಾಗದಲ್ಲಿ ಪ್ರಸಿದ್ಧ ಕಲಾಕಾರ ರೇರೇ ಚಿತ್ರಿಸಿದ ಒಂದು ಚಿತ್ರವಿತ್ತು.”

ತಕ್ಷಣವೇ ಚುರುಕಾದ ವಿನ್ಸೆಂಟೆ ಕೇಳುತ್ತಾನೆ, “ಅದ್ಯಾವ ಕಲಾಕಾರನ ಹೆಸರು? ಪುನಃ ಹೇಳು.” ಆ ಹೆಸರನ್ನು ವಿದೇಶಿ ಬ್ಯಾಂಕಿನ ಅಕೌಂಟಿಗೆ “ಪಾಸ್-ವರ್ಡ್” ಆಗಿ ಹಾಕಿದಾಗ ಅದು ತೆರೆದುಕೊಂಡಿತು. ತಕ್ಷಣವೇ ವಿನ್ಸೆಂಟೆ 4 ಮಿಲಿಯನ್ ಡಾಲರುಗಳನ್ನು ತನ್ನ ಬ್ಯಾಂಕ್ ಅಕೌಂಟಿಗೆ ವರ್ಗಾಯಿಸುತ್ತಾನೆ. 

ಅಷ್ಟರಲ್ಲಿ ಈ ಸುದ್ದಿ ತಿಳಿದ ಪೊಲೀಸ್ ಇನ್ಸ್-ಪೆಕ್ಟರ್ ಲೋರೆಜ್ ಬ್ಯಾಂಕಿನ ಪ್ರಧಾನ ಕಚೇರಿ ತಲಪಿದ್ದ. ಅವನು ಬ್ಯಾಂಕಿಗೆ ಪೊಲೀಸ್ ತಂಡದಿಂದ ದಾಳಿ ನಡೆಸಲು ತಯಾರಾಗುತ್ತಾನೆ. ಇದನ್ನು ಗಮನಿಸಿದ ವಿನ್ಸೆಂಟೆ ಮಂತ್ರಿಗೆ ಫೋನ್ ಮಾಡಿ ಹೆದರಿಸುತ್ತಾನೆ, “ಈ ಬ್ಯಾಂಕಿನಿಂದ ನಿಮಗೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂದು ನನಗೆ ಗೊತ್ತಿದೆ. ಅದಕ್ಕೆ ಪುರಾವೆಯಾಗಿ ಟೇಪ್ ನನ್ನ ಕೈಯಲ್ಲಿದೆ. ಪೊಲೀಸ್ ಇನ್ಸ್-ಪೆಕ್ಟರಿಗೆ ಸರಿಯಾಗಿ ಆದೇಶ ಮಾಡಿ.” 

ಇದನ್ನು ಕೇಳಿದ ಆ ಮಂತ್ರಿ ಹೆದರುತ್ತಾನೆ. ಉಗ್ರಗಾಮಿಗಳ ಮುಂದಾಳು ವಿನ್ಸೆಂಟೆ ಜೊತೆ ಸಂಧಾನ ನಡೆಸಲು ಪೊಲೀಸ್ ಇನ್ಸ್-ಪೆಕ್ಟರಿಗೆ ಆದೇಶ ನೀಡುತ್ತಾನೆ. ನಂತರ ಪೊಲೀಸ್ ಇನ್ಸ್-ಪೆಕ್ಟರ್ ಜುವಾನ್ ಕಾರ್-ಲೋಸ್ ಎಂಬ ಪತ್ರಕರ್ತನನ್ನು ಸಂಧಾನಕ್ಕಾಗಿ ವಿನ್ಸೆಂಟೆ ಬಳಿಗೆ ಕಳಿಸುತ್ತಾನೆ. 

ಕೊನೆಗೂ ಈ ಎರಡು ಷರತ್ತುಗಳ ಸಹಿತ ಸಂಧಾನಕ್ಕೆ ವಿನ್ಸೆಂಟೆ ಒಪ್ಪುತ್ತಾನೆ: (1) ಆ ಮಂತ್ರಿಗೆ ಬ್ಯಾಂಕಿನಿಂದ ವರ್ಗಾಯಿಸಲ್ಪಟ್ಟ ಹಣದ ಯಾವುದೇ ವಿವರ ಬಹಿರಂಗ ಪಡಿಸಬಾರದು. (2) ವಿನ್ಸೆಂಟೆ ಮತ್ತು ಅವನ ತಂಡದ ಎಲ್ಲ ಸದಸ್ಯರಿಗೂ ಸುರಕ್ಷಿತವಾಗಿ ದೇಶ ತೊರೆದು ಹೋಗಲು ವ್ಯವಸ್ಥೆ ಮಾಡಬೇಕು.

ಅಂತೂ ವಿನ್ಸೆಂಟ್ ತನ್ನ ಸಂಗಾತಿಗಳ ಜೊತೆ ಬಸ್ಸಿನಲ್ಲಿ ಪಾರಾಗಿ, ನಂತರ ವಿಮಾನ ಏರಿ ದೇಶ ತೊರೆದು ಹೋಗುತ್ತಾನೆ. ಲೂಸಿಯಾಳನ್ನು ಒತ್ತೆಯಾಳಾಗಿ ಒಯ್ಯುತ್ತಾನೆ. (ಅದು ಜನರ ಕಣ್ಣಿಗೆ ಮಣ್ಣೆರಚುವ ನಾಟಕ.)

ಅಂತಿಮವಾಗಿ ಬ್ಯಾಂಕಿನ ಅಧ್ಯಕ್ಷನು ತನ್ನ ಪ್ರೇಯಸಿ ಜೊತೆಗೆ ದೇಶ ತೊರೆಯುತ್ತಾನೆ. ಲೂಟಿ ಮಾಡಿದ ಹಣದಿಂದ  ಅವನೊಂದು ಕ್ಯಾಸಿನೋ ಶುರು ಮಾಡುತ್ತಾನೆ. ವಿನ್ಸೆಂಟ್ ಮತ್ತು ಲೂಸಿಯಾ ಹಾಗೂ ಆ ಉಗ್ರಗಾಮಿ ತಂಡದ ಸದಸ್ಯರು ವಿದೇಶದಲ್ಲಿ ಮಜವಾಗಿ ಜೀವನ ಸಾಗಿಸುತ್ತಾರೆ. 

ವಿಪರ್ಯಾಸ ಏನೆಂದರೆ, ಇದನ್ನೆಲ್ಲ ವಿನ್ಸೆಂಟ್ ತಮ್ಮ ಉದ್ಧಾರಕ್ಕಾಗಿ ಮಾಡಿದ್ದಂತ ಆ ಊರಿನ ಜನರು ಭಾವಿಸುತ್ತಾರೆ. 

(ಗಮನಿಸಿ: ಇದು ಮೊದಲು ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ. ಶೀರ್ಷಿಕೆಯ (ಸ್ಪ್ಯಾನಿಷ್ ನುಡಿಗಟ್ಟು) ಅರ್ಥ: ಕ್ರಿಮಿನಲ್ ಒಬ್ಬನ ಸಂಪತ್ತು ಕದಿಯುವವನಿಗೆ ಕ್ಷಮೆಯಿದೆ. ಅನಂತರ 2016ರಲ್ಲಿ ಇಂಗ್ಲಿಷಿನಲ್ಲಿ ‘ಟು ಸ್ಟೀಲ್ ಫ್ರಮ್ ಎ ಥೀಫ್” ಹೆಸರಿನ ಸಿನಿಮಾವಾಗಿ ಬಿಡುಗಡೆಯಾಯಿತು.)  

(15 ವರುಷಗಳ ಹಿಂದೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ನವದೆಹಲಿಗೆ ಹೋಗಿದ್ದಾಗ, 04-02-2011ರ ಶುಕ್ರವಾರ ನೋಡಿದ್ದ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾಸಾರಾಂಶ.)