“ದ ಕ್ವಿಕ್ ಆಂಡ್ ದ ಡೆಡ್” ಎಂಬ ಇಂಗ್ಲಿಷ್ ಸಿನಿಮಾದ ಕತೆ:

ಅಮೇರಿಕದ ರಿಡೆಂಪ್-ಷನ್ ಎಂಬ ಪಟ್ಟಣವನ್ನು ಜಾನ್ ಹೆರೋಡ್ ಎಂಬ ದಾದಾ ನಿಯಂತ್ರಿಸುತ್ತಿದ್ದ. ಅವನು ಉತ್ತಮ ಕೋವಿ ಗುರಿಕಾರ. ಅವನಿಗೆ ಮಧ್ಯಾಹ್ನ 12 ಗಂಟೆಗೆ ಯಾರೂ ಸವಾಲು ಹಾಕಬಹುದು. 

ಹಾಗೆ ಸವಾಲು ಹಾಕಿದ ವ್ಯಕ್ತಿಗೆ ದಾದಾ ಒಂದು ರಿವಾಲ್ವರ್ ಕೊಡುತ್ತಾನೆ. ಅದರಲ್ಲಿ ಇರೋದು ಒಂದೇ ಒಂದು ಬುಲೆಟ್. ಆ ಬುಲೆಟ್ ಹಾರಿಸಿ ಕೊಲ್ಲಲಿಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನೂ ಸವಾಲು ಹಾಕಿದ ವ್ಯಕ್ತಿಯ ಎದುರು ನಿಲ್ಲಿಸುತ್ತಾನೆ. ಈ ಮುಖಾಮುಖಿಯಿಂದ ಸವಾಲು ಹಾಕಿದ ವ್ಯಕ್ತಿ ಓಡಿ ಹೋದರೂ ಅವನಿಗೆ ಉಳಿಗಾಲವಿಲ್ಲ. ಯಾಕೆಂದರೆ ಅವನನ್ನೇ ಬುಲೆಟ್ ಹಾರಿಸಿ ಕೊಲ್ಲುತ್ತಾನೆ ದಾದಾ!

ಅದೊಂದು ದಿನ ಚೆಲುವೆ ಒಬ್ಬಾಕೆ ಬಂದು ದಾದಾನಿಗೆ ಸವಾಲು ಹಾಕುತ್ತಾಳೆ. ದಾದಾನೊಂದಿಗೆ ಊಟವನ್ನೂ ಮಾಡುತ್ತಾಳೆ. ಅನಂತರ ತನ್ನ ಪುಟ್ಟ ರಿವಾಲ್ವರ್ ಹೊರ ತೆಗೆಯುತ್ತಾಳೆ. ಆದರೆ ಮುಖಾಮುಖಿಯಲ್ಲಿ ಗುರಿ-ವ್ಯಕ್ತಿಗೆ ಬುಲೆಟ್ ಹಾರಿಸಲಾಗದೆ ಅಲ್ಲಿಂದ ಓಡಿ ಹೋಗುತ್ತಾಳೆ. ಆದರೆ ದಾದಾ ಅವಳನ್ನು ಹಿಡಿದು ಮುಖಾಮುಖಿಗೆ ತರುತ್ತಾನೆ. 

ಒಬ್ಬ ಯುವಕನನ್ನು ದಾದಾ ಚೈನ್ ಹಾಕಿ ಬಂಧಿಸಿ ಇಟ್ಟಿದ್ದ. ಆ ಚೈನಿನ ಸೆಳೆತದಿಂದಾಗಿ ಅವನ ಕೈಗಳಲ್ಲಿ ಗಾಯಗಳು ಆಗಿದ್ದವು. 

ಮುನ್ನಾ ದಿನ ರಾತ್ರಿ ದಾದಾನ ಚೇಲನೊಬ್ಬ ಆ ಯುವಕನಿಗೆ ಸಿಕ್ಕಾಬಟ್ಟೆ ಹೊಡೆದಿದ್ದ. ಇದು ಯುವಕನನ್ನು ಅಶಕ್ತನಾಗಿ ಮಾಡಿ, ಅವನನ್ನು ಮುಖಾಮುಖಿಯಲ್ಲಿ ಸೋಲಿಸುವ ನೀಚ ಹುನ್ನಾರ. 

ಆ ಯುವಕ ಇವತ್ತಿನ ಮುಖಾಮುಖಿಯಲ್ಲಿ ಎರಡು ಸುತ್ತಿನಲ್ಲಿ ಹೇಗೋ ಬಚಾವ್ ಆಗುತ್ತಾನೆ. ಈಗ ಆ ಚೆಲುವೆಯನ್ನು ಯುವಕನ ಎದುರು ನಿಲ್ಲಿಸುತ್ತಾನೆ ದಾದಾ. ಯುವಕ ಚೆಲುವೆಯ ಎದೆಗೆ ಬುಲೆಟ್ ಹಾರಿಸುತ್ತಾನೆ. ಅವಳು ನೆಲಕ್ಕೆ ಸತ್ತಂತೆ ಬೀಳುತ್ತಾಳೆ. (ಆದರೆ ಅದು ನಾಟಕ.)

ಅವತ್ತು ರಾತ್ರಿ ಆ ಹಳ್ಳಿಯ ಮುಖ್ಯ ಬೀದಿಯ ಕಟ್ಟಡಗಳಿಗೆಲ್ಲ ಆ ಚೆಲುವೆ ಡೈನಮೈಟ್ ಹಾಕಿ ಸ್ಫೋಟಿಸುತ್ತಾಳೆ. 

ಮರುದಿನ, ತನ್ನೊಂದಿಗೆ ಮುಖಾಮುಖಿಗಾಗಿ ದಾದಾ ಯುವಕನನ್ನು ನಿಲ್ಲಿಸುತ್ತಾನೆ. ಆ ಕ್ಷಣದಲ್ಲಿ ಅಲ್ಲಿ ಸ್ಫೋಟವಾಗುತ್ತದೆ. ತಕ್ಷಣವೇ ಅಲ್ಲಿ ಆ ಚೆಲುವೆ ದಾದಾನ ಎದುರು ಬರುತ್ತಾಳೆ. ಅವಳನ್ನು ಕಂಡು ದಾದಾ ಬೆಚ್ಚಿ ಬೀಳುತ್ತಾನೆ. ಒಡನೆಯೇ ಅವನಿಗೂ, ಅವನ ಚೇಲಾಗಳಿಗೂ ಗುಂಡೇಟುಗಳು ಬೀಳುತ್ತವೆ.

“ಯಾರು ನೀನು” ಎಂದು ಕೇಳುತ್ತಾನೆ ದಾದಾ. ಆ ಚೆಲುವೆ ತನ್ನ ಅಪ್ಪನ ಮೆಡಲ್ ಅನ್ನು ಅವನತ್ತ ಎಸೆಯುತ್ತಾಳೆ. 

ಆಗ ದಾದಾನಿಗೆ ನೆನಪಾಗುತ್ತದೆ. ಇವಳು 4 - 5 ವರುಷದ ಬಾಲಕಿ ಆಗಿದ್ದಾಗ ಒಂದು ದಿನ ಇವಳ ತಂದೆಯನ್ನು ಸ್ಟೂಲಿನ ಮೇಲೆ ನಿಲ್ಲಿಸಿ, ಅವನ ಕುತ್ತಿಗೆಗೆ ನೇಣು ಬಿಗಿದಿದ್ದ ದಾದಾ. ಆ ಸ್ಟೂಲಿನ ಕಾಲಿಗೆ ಬುಲೆಟ್ ಹೊಡೆಯುತ್ತಾನೆ ದಾದಾ. ಆಗ ಅಲ್ಲಿಗೆ ಬರುತ್ತಾಳೆ ಈ ಬಾಲಕಿ. ಇವಳ ಕೈಗೆ ರಿವಾಲ್ವರ್ ಕೊಟ್ಟು, “ನಿನ್ನ ಅಪ್ಪನ ಕುತ್ತಿಗೆಯ ಕುಣಿಕೆಗೆ ಬುಲೆಟ್ ಹೊಡಿ” ಎನ್ನುತ್ತಾನೆ ದಾದಾ. ಬಾಲಕಿ ಅಳುತ್ತಾ “I can’t” (ನನ್ನಿಂದ ಆಗದು) ಎಂದು ಹಲುಬುತ್ತಾಳೆ. ಆದರೆ ದಾದಾ “You can” (ನಿನ್ನಿಂದ ಆಗುತ್ತದೆ) ಎಂದು ಹುರಿದುಂಬಿಸುತ್ತಾನೆ. ಕೊನೆಗೂ ಬಾಲಕಿ ಟ್ರಿಗರ್ ಒತ್ತುತ್ತಾಳೆ. ಆದರೆ ಗುರಿ ತಪ್ಪಿ ಬುಲೆಟ್ ಅವಳ ಅಪ್ಪನ ಎದೆಯನ್ನೇ ಸೀಳಿ ಪ್ರಾಣ ತೆಗೆಯುತ್ತದೆ! 

ಆಗ ದಾದಾ ಗಹಗಹಿಸಿ ನಗುತ್ತಾ, ಕುದುರೆ ಮೇಲೇರಿ ಅಲ್ಲಿಂದ ದೌಡಾಯಿಸಿಕೊಂಡು ಹೋಗುತ್ತಾನೆ. 

ಈಗ ದಾದಾನಿಗೆ ಬುಲೆಟ್ ಹಾರಿಸಿ ಅವನನ್ನು ಕೊಂದ ಚೆಲುವೆ ನೆರೆದಿದ್ದ ಜನರಿಗೆ ಘೋಷಿಸುತ್ತಾಳೆ: “The rule of law returned” (ಕಾನೂನು ಸುವ್ಯವಸ್ಥೆ ಪುನಃ ಸ್ಥಾಪಿತವಾಯಿತು.)

ಮರು ಕ್ಷಣವೇ ಅವಳು ಆ ಪಟ್ಟಣ ತೊರೆದು ಹೋಗುತ್ತಾಳೆ. 

(15 ವರುಷಗಳ ಮುಂಚೆ, ಬ್ಯಾಂಕಿನ ಸಿಬ್ಬಂದಿಗೆ ತರಬೇತಿ ನೀಡಲಿಕ್ಕಾಗಿ ಅಹಮದಾಬಾದಿಗೆ ಹೋಗಿದ್ದಾಗ, 07-02-2011ರ ಸೋಮವಾರ ನೋಡಿದ್ದ ಈ ಸಿನಿಮಾದ ನೋಟ್ಸಿನ ಆಧಾರದಿಂದ ಬರೆದ ಕಥಾಸಾರಾಂಶ.)