ನಿಮ್ಮೆದುರು ಇರುವಾತ/ ಇರುವಾಕೆ ಪರಿಚಿತ ವ್ಯಕ್ತ ಎಂದಿರಲಿ. ಅವನ/ ಅವಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನೆಲ್ಲ ಯೋಚನೆಗಳು ಮೂಡುತ್ತವೆ?
ಇವನು ಅಯೋಗ್ಯ. ನನ್ನೆದುರು ಚೆನ್ನಾಗಿ ಮಾತಾಡುತ್ತಾನೆ. (ಪುರುಷನಿಗೆ ಅನ್ವಯಿಸೋದು ಮಹಿಳೆಗೂ ಅನ್ವಯ.) ಆ ಕಡೆ ಹೋಗಿ ನನ್ನ ಕುರಿತಾಗಿ ಇಲ್ಲಸಲ್ಲದ್ದನ್ನು ಒದರುತ್ತಾನೆ. ಇವನು ಮಾಡುವ ಇಂತಹ ನಾಟಕಗಳು ನನಗೆ ಚೆನ್ನಾಗಿ ಗೊತ್ತಿವೆ. ಇವನು ಹಲವು ಜನರಿಂದ ತುರ್ತಾಗಿ ಹಣ ಬೇಕಾಗಿದೆ, ಸಾಲ ಕೊಡಿ ಎಂದು ಹಣ ಪಡೆದು ಅನಂತರ ಅದನ್ನು ಹಿಂತಿರುಗಿಸಿಲ್ಲ; ಅಂತಹ ಮೋಸಗಾರ ಇವನು.
ಈ ಎಲ್ಲ ಮಾತುಗಳನ್ನು ಆತನಿಗೆ/ ಆಕೆಗೆ ನೇರಾನೇರ ಹೇಳಿ, ಅವನ/ ಅವಳ ಬೆವರಿಳಿಸಲು ಸಾಧ್ಯವೇ?
ಸಾಧ್ಯವಿಲ್ಲ. ಯಾಕೆಂದರೆ, ಇವನ್ನೆಲ್ಲ ಬಾಯಿ ಬಿಟ್ಟು ಹೇಳಿದರೆ ಆ ಸಂಬಂಧ ಅಲ್ಲಿಗೆ ಮುಗಿದು ಹೋಗುತ್ತದೆ. ಮಾತ್ರವಲ್ಲ, ಆತನೂ/ ಆಕೆಯೂ ನಿಮ್ಮ ಬಗ್ಗೆ ಬಾಯಿಗೆ ಬಂದಂತೆ ಎಗರಾಡಬಹುದು. ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು. ಜೊತೆಗೆ, ಅವನು/ ಅವಳು ನಿಮ್ಮ ಜೀವಮಾನದ ಶತ್ರು ಆಗಬಹುದು, ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಹುನ್ನಾರಗಳನ್ನು ಹೆಣೆಯಬಹುದು.
ಹಾಗಾದರೆ, ಇಂತಹ ವ್ಯಕ್ತಿಗಳೊಡನೆ ನಿಮ್ಮ ಸಂಬಂಧವನ್ನು ಹೇಗೆ ನಿಭಾಯಿಸಬೇಕು? ಮೊದಲನೆಯದಾಗಿ, ಅವನ/ ಅವಳ ಬಗ್ಗೆ ನೀವು ತಿಳಿದುಕೊಂಡಿರುವುದು ವಾಸ್ತವ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಯಾರೋ ಹೇಳಿದರು ಎಂಬ ಕಾರಣಕ್ಕಾಗಿ ಪರರ ಬಗ್ಗೆ ನಿಮ್ಮ ಅಭಿಪ್ರಾಯ ಅಂತಿಮಗೊಳಿಸಬೇಡಿ. ನಿಮ್ಮ ಮತ್ತು ಇನ್ನೊಬ್ಬರ ಸಂಬಂಧಗಳಿಗೆ ಹುಳಿ ಹಿಂಡಲು ಕಾದಿರುವವರೂ ಇರುತ್ತಾರೆ.
ಒಬ್ಬ ವ್ಯಕ್ತಿಯ ದುರ್ವರ್ತನೆಗಳ ಬಗ್ಗೆ ನೀವು ತಿಳಿದುಕೊಂಡದ್ದು ಸತ್ಯಸಂಗತಿ ಎಂದಾದರೆ ಆ ವ್ಯಕ್ತಿಯಿಂದ ದೂರವಾಗಿ. ಯಾಕೆಂದರೆ ದುರ್ಜನರ ಸಂಗ ಅಭಿಮಾನ ಭಂಗ. ಹತ್ತಾರು ದುರ್ಜನರೊಂದಿಗಿನ ಸಂಬಂಧಗಳ ಬದಲಾಗಿ ಕೆಲವೇ ಸಜ್ಜನರ ಜೊತೆಗಿನ ಸಂಬಂಧ ಉತ್ತಮ.
ಫೋಟೋ ಕೃಪೆ: ಗೆಟ್ಟಿ ಇಮೇಜಸ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!