ನಿಮಗೆ ಯಾರಿಂದಲೋ ಫೋನ್ ಕರೆ ಬರುತ್ತದೆ. ಅವರು ಆಗಾಗ ಫೋನ್ ಕರೆ ಮಾಡುವವರಾದರೆ, ತಕ್ಷಣವೇ ಅವರು ಯಾರೆಂದು ತಿಳಿಯುತ್ತದೆ.

ಆದರೆ, ಫೋನ್ ಕರೆ ಮಾಡಿದವರು ಹಲವಾರು ವರುಷಗಳ ನಂತರ ಸಂಪರ್ಕಿಸಿದ್ದರೆ, ನಿಮಗೆ ಅವರ ಧ್ವನಿಯ ಗುರುತು ಹತ್ತದಿರಬಹುದು. ಆಗ, “ನೀವು ಯಾರು? ನನಗೆ ಗೊತ್ತಾಗಲಿಲ್ಲ” ಎಂದು ನೀವು ಕೇಳಬೇಕಾಗುತ್ತದೆ. ಬಹುಪಾಲು ಜನರು ತಮ್ಮ ಹೆಸರು, ಊರು ಹೇಳಿ ಪರಿಚಯ ಮಾಡಿಕೊಳ್ಳುತ್ತಾರೆ.

ಇನ್ನು ಕೆಲವರಿರುತ್ತಾರೆ. “ನಾನು ಯಾರಂತ ಗೊತ್ತಾಗಲಿಲ್ವಾ? ಕಳೆದ ವರುಷ ನಿಮಗೆ ಸಿಕ್ಕಿದ್ದೆ. ಇನ್ನೂ ನಿಮಗೆ ಗೊತ್ತಾಗಲಿಲ್ವಾ?” ಎಂದೆಲ್ಲ ಕಿರಿಕಿರಿ ಶುರು ಮಾಡುತ್ತಾರೆ. “ಇಲ್ಲ ಮಾರಾಯರೇ, ಗೊತ್ತಾಗಲಿಲ್ಲ” ಎಂದರೂ ಅರ್ಥ ಮಾಡಿಕೊಳ್ಳೋದಿಲ್ಲ. “ಏನು? ನನ್ನನ್ನು ಮರೆತೆ ಬಿಟ್ಟಿರಾ? ನಿಮಗೆ ಅಷ್ಟು ನೆನಪಿಲ್ಲವೇ? ಅದು ಹೇಗೆ ಸಾಧ್ಯ?” ಎಂದೆಲ್ಲ ಅನಾವಶ್ಯಕ ಮಾತು ಮುಂದುವರಿಸುತ್ತಾರೆ.

ಅಂಥವರಿಗೆ ಇದೊಂದು ಚಟ. ಇತರರನ್ನು ಹೀಗೆ ಗೋಳು ಹೊಯ್ದುಕೊಳ್ಳೋದರಲ್ಲಿ ಅವರಿಗೊಂದು ಮಜಾ. ಅಂಥವರಿಗೆ ಬಿಸಿ ಮುಟ್ಟಿಸದಿದ್ದರೆ ನಮ್ಮ ಸಮಯ ಹಾಳು.

“ನೋಡಿ, ನನಗೆ ಕೈತುಂಬ ಕೆಲಸಗಳಿವೆ. ನೀವು ಯಾರಂತ ಹೇಳಿ. ನನಗೆ ಯಾಕೆ ಫೋನ್ ಮಾಡಿದ್ದು ಅಂತಲೂ ಹೇಳಿ” ಎಂದು ಫೋನಿನಲ್ಲಿ ನೇರ ಮಾತಾಡುವುದು ಅಗತ್ಯ. ಆಗಲೂ ಅವರು ತಮ್ಮ ಪರಿಚಯ, ಫೋನ್ ಕರೆಯ ಉದ್ದೇಶ ತಿಳಿಸದಿದ್ದರೆ, ಆ ಫೋನ್ ಕರೆಯನ್ನು ಮುಗಿಸೋದು (ಕಟ್ ಮಾಡುವುದು) ಉತ್ತಮ.

ಯಾಕೆಂದರೆ, “ಅಷ್ಟು ನೆನಪಿಲ್ಲವೇ?” ಎಂಬ ಪ್ರಶ್ನೆ ಅವರ ಧೋರಣೆಯನ್ನು ತೋರಿಸುತ್ತದೆ. ಈಗಿನ ಕಾಲದಲ್ಲಿ ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ; ಅದು ಅಗತ್ಯವೂ ಇಲ್ಲ. ವರುಷದ ಹಿಂದೆ ಎಲ್ಲೋ ಭೇಟಿಯಾದವರ ಧ್ವನಿ-ಹೆಸರು ನೆನಪಿಟ್ಟುಕೊಳ್ಳೋದು ಸುಲಭವಲ್ಲ. ಕರೆ ಮಾಡಿದ ವ್ಯಕ್ತಿಗೆ ಇದು ತಿಳಿದಿರಬೇಕು. ನಿಮ್ಮ ಸ್ಮರಣಶಕ್ತಿಯ ಬಗ್ಗೆ ಟೀಕೆ ಮಾಡೋದು ಸಭ್ಯತನವಲ್ಲ. ಅಂತಹ ವ್ಯಕ್ತಿಯ ಜೊತೆ ಸಂಪರ್ಕವೇ ಬೇಕಾಗಿಲ್ಲ, ಅಲ್ಲವೇ?