ಹಲವರಿಗೆ ಇದೊಂದು ದೊಡ್ಡ ಸವಾಲು. ಉಲ್ಲಾಸದಿಂದಿರಲು ಒಂದೇ ದಾರಿ: ಉಲ್ಲಾಸದಿಂದಿರಲು ಕಲಿಯುವುದು.

ಅದು ಹೇಗೆಂದು ಕೇಳುತ್ತೀರಾ? ನೀವು ಯಾವುದೋ ಕೆಲಸಕ್ಕೆ ಹೊರಟಾಗ ಮಳೆ ಸುರಿಯಲು ಶುರುವಾದರೆ ... ಆಗ, ಮಳೆಯನ್ನು ಶಪಿಸುತ್ತಾ ಕೂತರೆ ಪ್ರಯೋಜನ ಇದೆಯೇ? ಇಲ್ಲ. ಬದಲಾಗಿ, ಕೊಡೆ ಬಿಡಿಸಿ ಅಥವಾ ರೈನ್-ಕೋಟ್ ಹಾಕ್ಕೊಂಡು ಆ ಕೆಲಸಕ್ಕೆ ಹೊರಟರಾಯಿತು.

ಪ್ರತಿಯೊಂದು ಸಂಗತಿಗೂ ಸಂತೋಷದ ಮಗ್ಗುಲು ಇರುತ್ತದೆ ಹಾಗೆಯೇ ಸಂಕಟದ ಮಗ್ಗುಲೂ ಇರುತ್ತದೆ. ಮೂರನೇ ಕ್ಲಾಸಿನ ಮಗುವೊಂದಕ್ಕೆ ಶಾಲೆಯ ವಾರ್ಷಿಕ ಕಾರ್ಯಕ್ರಮದ ನೃತ್ಯ ತಂಡಕ್ಕೆ ಆಯ್ಕೆ ಆಗಬೇಕೆಂಬ ಆಶೆ. ಒಂದು ತಿಂಗಳು ನೃತ್ಯದ ತಾಲೀಮಿಗೆ ಹೋಯಿತು ಆ ಮಗು. ನೃತ್ಯ ತಂಡದ ಆಯ್ಕೆಯ ದಿನ ಸಂಜೆ ಶಾಲೆಯಿಂದ ಮರಳಿದ ಮಗುವಿನ ಬಳಿ ಅಮ್ಮ ಕೇಳುತ್ತಾಳೆ, “ಏನಾಯಿತು? ನಿನ್ನನ್ನು ನೃತ್ಯ ತಂಡಕ್ಕೆ ಆಯ್ಕೆ ಮಾಡಿದ್ದಾರಾ?” ಆ ಮಗು ಗೆಲುವಿನಿಂದ ಉತ್ತರಿಸಿತು, “ಹೌದಮ್ಮಾ, ನನ್ನನ್ನು ಆಯ್ಕೆ ಮಾಡಿದ್ದಾರೆ … ನೃತ್ಯ ತಂಡಕ್ಕೆ ಚಪ್ಪಾಳೆ ತಟ್ಟಲಿಕ್ಕಾಗಿ.” “ನನ್ನ ಚಿನ್ನಾ, ನೀನೇ ನಿಜವಾದ ಹೀರೋ” ಎನ್ನುತ್ತಾ ಅಮ್ಮ ಮಗುವನ್ನು ಅಪ್ಪಿಕೊಂಡಳು.

ಸಂತೋಷದ ಬೆನ್ನತ್ತಿ ಹೋದರೆ ಅದು ನಿಮಗೆ ಸಿಗೋದಿಲ್ಲ. ಬದಲಾಗಿ, ಪ್ರತಿಯೊಂದು ಸಂಗತಿಯ ಸಂತೋಷದ ಮಗ್ಗುಲು ನೋಡಲು ಕಲಿತರೆ ನಿಮಗೆ ದಿನದಿನವೂ ಕೈತುಂಬ ಸಂತೋಷ ದಕ್ಕುತ್ತದೆ. ನಮ್ಮ ತೋಟದಲ್ಲಿ ಕೆಲಸ ಮಾಡಿ ದಣಿವಾದಾಗ ಕೂತು ವಿರಮಿಸುತ್ತಿದ್ದೆ. ಚಿಟ್ಟೆಯೊಂದು ನನ್ನ ಪಕ್ಕ ಹಾರಿಕೊಂಡು ಬಂತು. ಅದರ ಬೆನ್ನತ್ತಿ ಹೋದರೆ ಅದು ನನಗೆ ಸಿಕ್ಕೀತೇ? ಇಲ್ಲ. ಬದಲಾಗಿ, ಮಿಸುಕಾಡದೆ ಕುಳಿತಿದ್ದರೆ, ಆ ಚಿಟ್ಟೆ ಹಾರುತ್ತಾ ಬಂದು ನನ್ನ ಕೈಯಲ್ಲೇ ಕೂರಬಹುದು.

ಇಂತಹ ಹಲವಾರು ಸೂತ್ರಗಳನ್ನೂ ಸಂಗತಿಗಳನ್ನು ನಾನು ಬರೆಯುತ್ತಾ ಹೋದೆ. ಎರಡು ವರುಷಗಳಲ್ಲಿ ಅದು “ಉಲ್ಲಾಸಕ್ಕೆ ದಾರಿ ನೂರಾರು” ಎಂಬ ಪುಸ್ತಕವಾಗಿ ಪ್ರಕಟವಾಯಿತು! (“ಪುಸ್ತಕ ಸಂಪದ”ದಲ್ಲಿ ಲಭ್ಯ.)